6
ದಾನಧರ್ಮ ಮಾಡುವುದು
“ಜನರು ನೋಡಲಿ ಎಂದು ಅವರ ಮುಂದೆ, ನಿಮ್ಮ ದಾನಧರ್ಮಗಳನ್ನು ಮಾಡದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ಸಿಕ್ಕುವುದಿಲ್ಲ.
“ಆದ್ದರಿಂದ ನೀನು ದಾನಧರ್ಮ ಮಾಡುವಾಗ, ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳ ಹಾಗೆ ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ತುತೂರಿಯನ್ನು ಊದಿಸಬೇಡ. ಅವರು ತಮ್ಮ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ದಾನಧರ್ಮ ಮಾಡುವಾಗ, ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೆ ತಿಳಿಯದಿರಲಿ. ಹೀಗೆ ನಿನ್ನ ದಾನಧರ್ಮವು ಗುಟ್ಟಾಗಿರುವಾಗ, ಅಂತರಂಗದಲ್ಲಿ ಮಾಡುವುದನ್ನು ಕಾಣುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು.
ಪ್ರಾರ್ಥನೆ
“ನೀವು ಪ್ರಾರ್ಥನೆ ಮಾಡುವಾಗ, ಕಪಟಿಗಳಂತೆ ಮಾಡಬೇಡಿರಿ. ಅವರು ಜನರಿಗೆ ಕಾಣುವಂತೆ ಸಭಾಮಂದಿರಗಳಲ್ಲಿಯೂ ಬೀದಿಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವುದಕ್ಕೆ ಇಷ್ಟಪಡುತ್ತಾರೆ. ಅವರು ತಮ್ಮ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ಪ್ರಾರ್ಥನೆ ಮಾಡುವಾಗ, ನಿನ್ನ ಕೋಣೆಯೊಳಗೆ ಹೋಗಿ, ಬಾಗಿಲನ್ನು ಮುಚ್ಚಿ ಅದೃಶ್ಯವಾಗಿರುವ ನಿನ್ನ ತಂದೆಗೆ ಪ್ರಾರ್ಥನೆ ಸಲ್ಲಿಸು. ಆಗ ರಹಸ್ಯದಲ್ಲಿ ನಡೆಯುವುದನ್ನು ಕಾಣುವ ನಿನ್ನ ತಂದೆ ನಿನಗೆ ಪ್ರತಿಫಲ ಕೊಡುವರು. ಆದರೆ ನೀವು ಪ್ರಾರ್ಥನೆ ಮಾಡುವಾಗ ಯೆಹೂದ್ಯರಲ್ಲದವರಂತೆ ವ್ಯರ್ಥವಾಗಿ ಹೇಳಿದ್ದನ್ನೇ ಪದೇಪದೇ ಹೇಳಬೇಡಿರಿ. ತಮ್ಮ ಅನೇಕ ಮಾತುಗಳ ದೆಸೆಯಿಂದ ತಮ್ಮ ಪ್ರಾರ್ಥನೆಯನ್ನು ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಇರಬೇಡಿರಿ, ಏಕೆಂದರೆ ನೀವು ಕೇಳುವುದಕ್ಕೆ ಮೊದಲೇ, ನಿಮ್ಮ ತಂದೆಗೆ ನಿಮ್ಮ ಅಗತ್ಯಗಳು ತಿಳಿದಿವೆ.
“ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿರಿ:
“ ‘ಪರಲೋಕದಲ್ಲಿರುವ ನಮ್ಮ ತಂದೆಯೇ,
ನಿಮ್ಮ ನಾಮವು ಪರಿಶುದ್ಧವೆಂದು ಎಣಿಸಲಾಗಲಿ,
10 ನಿಮ್ಮ ರಾಜ್ಯವು ಬರಲಿ;
ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ
ಭೂಲೋಕದಲ್ಲಿಯೂ ನೆರವೇರಲಿ.
11 ನಮ್ಮ ಅನುದಿನದ ಆಹಾರವನ್ನು ನಮಗೆ ಈ ದಿನವೂ ದಯಪಾಲಿಸಿರಿ.
12 ನಮಗೆ ಸಾಲಮಾಡಿದವರನ್ನು* ನಾವು ಕ್ಷಮಿಸಿದಂತೆ,
ನಮ್ಮ ಸಾಲಗಳನ್ನು ಕ್ಷಮಿಸಿರಿ.
13 ನಮ್ಮನ್ನು ಶೋಧನೆಗೆ ಸೇರಿಸದೆ,
ಕೇಡಿನಿಂದ ತಪ್ಪಿಸಿರಿ.
ಏಕೆಂದರೆ ರಾಜ್ಯವೂ ಬಲವೂ ಮಹಿಮೆಯೂ
ಸದಾಕಾಲ ನಿಮ್ಮದೇ. ಆಮೆನ್.
14 ನಿಮಗೆ ವಿರೋಧವಾಗಿ ತಪ್ಪುಮಾಡುವವರನ್ನು ನೀವು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮನ್ನು ಕ್ಷಮಿಸುವರು. 15 ಆದರೆ ನೀವು ಬೇರೆಯವರ ತಪ್ಪುಗಳನ್ನು ಕ್ಷಮಿಸದಿದ್ದರೆ, ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.
ಉಪವಾಸ
16 “ನೀವು ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪಗೆ ಮಾಡಿಕೊಳ್ಳಬೇಡಿರಿ, ತಾವು ಉಪವಾಸ ಮಾಡುತ್ತಿದ್ದೇವೆಂದು ಜನರಿಗೆ ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ತಮ್ಮ ಮುಖವನ್ನು ಬಾಡಿಸಿಕೊಂಡಿರುತ್ತಾರೆ. ಅವರು ತಮಗೆ ಬರತಕ್ಕ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 17 ಆದರೆ ನೀನು ಉಪವಾಸ ಮಾಡುವಾಗ, ತಲೆಗೆ ಎಣ್ಣೆ ಹಚ್ಚಿಕೊಂಡು, ಮುಖ ತೊಳೆದುಕೋ. 18 ಹೀಗೆ ಮಾಡಿದರೆ, ಕಾಣದಿರುವ ನಿನ್ನ ತಂದೆಯ ಹೊರತು ಬೇರೆ ಯಾರಿಗೂ ನೀನು ಉಪವಾಸದಿಂದಿರುವುದು ತಿಳಿಯುವುದಿಲ್ಲ ಮತ್ತು ಗುಟ್ಟಾಗಿ ಮಾಡುವುದನ್ನು ಕಾಣುವ ನಿನ್ನ ತಂದೆ, ನಿನಗೆ ಪ್ರತಿಫಲ ಕೊಡುವರು.
ಸ್ವರ್ಗದಲ್ಲಿ ನಿಕ್ಷೇಪ
19 “ಭೂಲೋಕದಲ್ಲಿ ನಿಮಗೋಸ್ಕರ ಆಸ್ತಿಪಾಸ್ತಿಯನ್ನು ಕೂಡಿಸಿಡಬೇಡಿರಿ, ಇಲ್ಲಿ ಅದಕ್ಕೆ ನುಸಿ ಮತ್ತು ಕಿಲುಬು ಹಿಡಿದು ಹಾಳಾಗುವುದು ಇಲ್ಲವೆ ಕಳ್ಳರು ಕನ್ನಾಕೊರೆದು ಕದಿಯುವರು. 20 ಆದರೆ ಪರಲೋಕದಲ್ಲಿ ನಿಮಗಾಗಿ ನಿಕ್ಷೇಪವನ್ನು ಕೂಡಿಟ್ಟುಕೊಳ್ಳಿರಿ, ಅಲ್ಲಿ ಅದಕ್ಕೆ ನುಸಿ ಮತ್ತು ಕಿಲುಬು ಹಿಡಿದು ಹಾಳಾಗುವುದಿಲ್ಲ. ಕಳ್ಳರು ಕನ್ನ ಕೊರೆದು ಕದಿಯುವುದಿಲ್ಲ. 21 ನಿಮ್ಮ ಸಂಪತ್ತು ಇರುವಲ್ಲಿಯೇ, ನಿಮ್ಮ ಹೃದಯವು ಸಹ ಇರುವುದು.
22 “ಕಣ್ಣು ದೇಹಕ್ಕೆ ದೀಪವಾಗಿದೆ. ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಬೆಳಕಾಗಿರುವುದು. 23 ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಕತ್ತಲಾಗಿರುವುದು. ನಿನ್ನಲ್ಲಿರುವ ಬೆಳಕೇ ಕತ್ತಲಾಗಿರುವುದಾದರೆ ಅದು ಎಂತಹ ಕಾರ್ಗತ್ತಲಲ್ಲವೇ!
24 “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು. ನೀವು ದೇವರಿಗೂ ಧನಕ್ಕೂ ಸೇವೆ ಮಾಡಲಾರಿರಿ.
ಚಿಂತಿಸಬೇಡಿರಿ
25 “ಆದ್ದರಿಂದ ನಿಮ್ಮ ಜೀವನಕ್ಕಾಗಿ, ಏನು ಊಟಮಾಡಬೇಕು, ಏನು ಕುಡಿಯಬೇಕು ಅಥವಾ ನಿಮ್ಮ ದೇಹಕ್ಕೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂದು ನಾನು ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವೂ ವಸ್ತ್ರಕ್ಕಿಂತ ದೇಹವೂ ಮೇಲಾದದ್ದಲ್ಲವೇ? 26 ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕೂಡಿಡುವುದಿಲ್ಲ. ಆದರೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾರೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಲ್ಲವೇ? 27 ನೀವು ಚಿಂತಿಸುವುದರಿಂದ ನಿಮ್ಮ ಜೀವನಕ್ಕೆ ಒಂದು ತಾಸನ್ನು ಕೂಡಿಸಲು ಸಾಧ್ಯವೇ?
28 “ನೀವು ಉಡುಪಿನ ವಿಷಯ ಚಿಂತಿಸುವುದೇಕೆ? ಅಡವಿಯಲ್ಲಿ ಹೂವುಗಳು ಬೆಳೆಯುವುದನ್ನು ಗಮನಿಸಿರಿ. ಅವು ದುಡಿಯುವುದಿಲ್ಲ, ನೂಲುವುದಿಲ್ಲ. 29 ಆದರೂ ಅರಸನಾದ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಆ ಹೂವುಗಳಲ್ಲಿ ಒಂದರಂತೆಯಾದರೂ ಉಡುಪನ್ನು ಧರಿಸಿರಲಿಲ್ಲ ಎಂದು, ನಾನು ನಿಮಗೆ ಹೇಳುತ್ತೇನೆ. 30 ಅಲ್ಪವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ, ನಿಮಗೆ ಇನ್ನೂ ಎಷ್ಟೋ ಹೆಚ್ಚಾಗಿ ಉಡಿಸುವರಲ್ಲವೇ? 31 ಆದ್ದರಿಂದ, ‘ಏನು ಊಟಮಾಡಬೇಕು? ಏನು ಕುಡಿಯಬೇಕು ಮತ್ತು ಏನು ಧರಿಸಬೇಕು?’ ಎಂದು ಚಿಂತಿಸಬೇಡಿರಿ. 32 ಇವೆಲ್ಲವನ್ನು ದೇವರನ್ನು ಅರಿಯದವರು ಹುಡುಕುತ್ತಾರೆ. ಇವೆಲ್ಲಾ ನಿಮಗೆ ಅವಶ್ಯವೆಂದು ಪರಲೋಕದಲ್ಲಿರುವ ನಿಮ್ಮ ತಂದೆಯು ತಿಳಿದಿದ್ದಾರೆ. 33 ನೀವು ಮೊದಲು ದೇವರ ರಾಜ್ಯವನ್ನೂ ಅದರ ನೀತಿಯನ್ನೂ ಹುಡುಕಿರಿ. ಆಗ ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು. 34 ಆದ್ದರಿಂದ, ನಾಳೆಯ ವಿಷಯವಾಗಿ ಚಿಂತಿಸಬೇಡಿರಿ. ನಾಳೆಯ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವುದು, ಆ ದಿನದ ಪಾಡು ಆ ದಿನಕ್ಕೆ ಸಾಕು.
* 6:12 6:12 ಅಥವಾ ತಪ್ಪುಮಾಡಿದವರನ್ನು 6:13 6:13 ಏಕೆಂದರೆ…ನಿಮ್ಮದೇ. ಆಮೆನ್ ಕೆಲವು ಪುರಾತನ ಪ್ರತಿಗಳಲ್ಲಿ ಈ ಪದಗಳಿರುವುದಿಲ್ಲ 6:27 6:27 ಅಥವಾ ಒಂದು ಮೊಳ