ನೆಹೆಮೀಯ
1
ನೆಹೆಮೀಯನ ಪ್ರಾರ್ಥನೆ
1 ಹಕಲ್ಯನ ಮಗ ನೆಹೆಮೀಯನ ಮಾತುಗಳು:
ಇಪ್ಪತ್ತನೆಯ ವರ್ಷದ, ಕಿಸ್ಲೇವ್ ಎಂಬ ಮಾರ್ಗಶಿರ ತಿಂಗಳಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದೆನು.
2 ಆಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀಯನು ಹಾಗೂ ಬೇರೆ ಕೆಲವು ಜನರು ಯೆಹೂದದಿಂದ ನನ್ನ ಬಳಿಗೆ ಬಂದರು. ಸೆರೆ ಹೋದವರಿಂದ ಉಳಿದಿರುವ ಯೆಹೂದ್ಯರ ಮತ್ತು ಯೆರೂಸಲೇಮಿನ ಸಮಾಚಾರವನ್ನು ನಾನು ಅವರಲ್ಲಿ ವಿಚಾರಿಸಿದೆನು.
3 ಅವರು ನನಗೆ, “ಸೆರೆಯಿಂದ ತಪ್ಪಿಸಿಕೊಂಡು ಈಗ ಆ ನಾಡಿನಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟ ನಿಂದೆಗಳಿಗೆ ಒಳಗಾಗಿದ್ದಾರೆ. ಯೆರೂಸಲೇಮಿನ ಪೌಳಿಗೋಡೆಯನ್ನು ಕೆಡವಲಾಗಿದೆ. ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ,” ಎಂದು ಹೇಳಿದರು.
4 ನಾನು ಈ ಸಮಾಚಾರವನ್ನು ಕೇಳಿದಾಗ, ನೆಲದ ಮೇಲೆ ಕೂತುಕೊಂಡು ಅತ್ತೆನು. ಹಲವಾರು ದಿನಗಳವರೆಗೆ ಶೋಕಿಸಿದೆ, ಉಪವಾಸವಿದ್ದೆ, ಪರಲೋಕ ದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಇದ್ದೆ.
5 ನಾನು ನನ್ನ ಪ್ರಾರ್ಥನೆಯಲ್ಲಿ:
“ಪರಲೋಕ ದೇವರಾದ ಯೆಹೋವ ದೇವರೇ, ನೀವು ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆಗಿದ್ದೀರಿ. ನಿಮ್ಮನ್ನು ಪ್ರೀತಿಸಿ ನಿಮ್ಮ ಆಜ್ಞೆಗಳಿಗೆ ವಿಧೇಯರಾಗಿರುವವರೊಂದಿಗೆ, ನಿಮ್ಮ ಪ್ರೀತಿಯ ಒಡಂಬಡಿಕೆಯನ್ನು ನೆರವೇರಿಸುವವರೇ, ಭಯಭಕ್ತಿಗೆ ಪಾತ್ರರಾದ ದೇವರೇ,
6 ಕೃಪೆಮಾಡಿ ನನಗೆ ಕಿವಿಗೊಡಿರಿ, ಕಟಾಕ್ಷಿಸಿ ನೋಡಿರಿ, ನಿಮ್ಮ ದಾಸನ ಪ್ರಾರ್ಥನೆಯನ್ನು ಆಲಿಸಿರಿ. ನಾನು ಈಗ ಹಗಲಿರುಳೂ ನಿಮ್ಮ ಸನ್ನಿಧಿಯಲ್ಲಿ ನಿಮ್ಮ ದಾಸರಾದ ಇಸ್ರಾಯೇಲರ ಪರವಾಗಿ ಪ್ರಾರ್ಥಿಸುತ್ತಾ ಇದ್ದೇನೆ. ಅವರು ನಿಮಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ಅರಿಕೆಮಾಡುತ್ತಾ ಇದ್ದೇನೆ. ನಾನೂ, ನನ್ನ ಪೂರ್ವಜರೂ ಆ ಪಾಪಗಳಲ್ಲಿ ಪಾಲುಗಾರರು.
7 ನಾವು ನಿಮಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು. ನೀವು ನಿಮ್ಮ ದಾಸನಾದ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ.
8 “ದಯಮಾಡಿ ನಿಮ್ಮ ಸೇವಕನಾದ ಮೋಶೆಗೆ ಹೇಳಿದ ಈ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ. ಮೋಶೆಯ ಮುಖಾಂತರ, ‘ನೀವು ದ್ರೋಹ ಮಾಡಿದರೆ, ನಾನು ನಿಮ್ಮನ್ನು ಜನಾಂಗಗಳ ನಡುವೆ ಚದರಿಸಿಬಿಡುವೆನು.
9 ಆದರೆ ನೀವು ನನ್ನ ಕಡೆಗೆ ತಿರುಗಿಕೊಂಡು ನನ್ನ ಆಜ್ಞೆಗಳನ್ನು ಅನುಸರಿಸಿ, ಅವುಗಳ ಪ್ರಕಾರ ನಡೆದರೆ, ನಿಮ್ಮಲ್ಲಿರುವವರು ಆಕಾಶದ ಅಂತ್ಯದವರೆಗೂ ಸೆರೆಯಾಗಿ ಹೋಗಿದ್ದರೂ, ನಾನು ಅಲ್ಲಿಂದ ಅವರನ್ನು ಕೂಡಿಸಿ, ನನ್ನ ಹೆಸರನ್ನಿಡಲು ಆಯ್ದುಕೊಂಡ ಸ್ಥಳಕ್ಕೆ ಅವರನ್ನು ಬರಮಾಡುವೆನು,’ ಎಂದು ಹೇಳಿದ್ದೀರಿ.
10 “ಅವರು ನಿಮ್ಮ ಮಹಾಶಕ್ತಿಯಿಂದಲೂ, ನಿಮ್ಮ ಭುಜಪರಾಕ್ರಮಗಳಿಂದ ನೀವು ವಿಮೋಚಿಸಿದ ನಿಮ್ಮ ಸೇವಕರೂ, ನಿಮ್ಮ ಜನರೂ ಆಗಿರುತ್ತಾರೆ.
11 ದೇವರೇ, ನಿಮ್ಮ ಹೆಸರಲ್ಲಿ ಭಯಭಕ್ತಿಯಿಂದ ಹರ್ಷಿಸುವ ನಿಮ್ಮ ಸೇವಕರ ಪ್ರಾರ್ಥನೆಗೆ ಕಿವಿಗೊಡಿರಿ. ಇಂದು ನಿಮ್ಮ ಸೇವಕನಾದ ನನಗೆ ಯಶಸ್ವಿಯನ್ನು ಕೊಟ್ಟು, ಈ ಅರಸನ ದೃಷ್ಟಿಯಲ್ಲಿ ನನಗೆ ದಯೆ ದೊರಕುವಂತೆ ಮಾಡಿರಿ,” ಎಂದು ಬೇಡಿಕೊಂಡೆನು.
ಆ ದಿವಸಗಳಲ್ಲಿ ನಾನು ಅರಸನಿಗೆ ಪಾನ ಸೇವಕನಾಗಿದ್ದೆನು.