11
ಯೆರೂಸಲೇಮಿನಲ್ಲಿ ಹೊಸದಾಗಿ ವಾಸಿಸುತ್ತಿದ್ದವರ ಪಟ್ಟಿ
1 ಈಗ ಜನರ ನಾಯಕರು ಯೆರೂಸಲೇಮಿನಲ್ಲಿ ನೆಲೆಸಿದರು. ಉಳಿದ ಜನರೊಳಗೆ ಹತ್ತು ಮಂದಿಯಲ್ಲಿ ಒಂಬತ್ತು ಮಂದಿ ತಮ್ಮ ತಮ್ಮ ಊರುಗಳಲ್ಲಿ ಇದ್ದುಕೊಂಡು, ಹತ್ತರಲ್ಲೊಬ್ಬರು ಪವಿತ್ರ ನಗರವಾದ ಯೆರೂಸಲೇಮಿನಲ್ಲಿ ಬಂದು ವಾಸಿಸಲು ಚೀಟುಹಾಕಿದರು.
2 ಆಗ ಜನರು ಯೆರೂಸಲೇಮಿನಲ್ಲಿ ವಾಸವಾಗಿರಲು, ಸಮ್ಮತಿಪಟ್ಟವರೆಲ್ಲರನ್ನು ಆಶೀರ್ವದಿಸಿದರು.
3 ಯೆರೂಸಲೇಮಿನಲ್ಲಿ ವಾಸವಾಗಿದ್ದ ಸಂಸ್ಥಾನಪ್ರಧಾನರು ಯಾರೆಂದರೆ: ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರೂ, ಸೊಲೊಮೋನನ ಸೇವಕರ ಮಕ್ಕಳೂ, ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು.
4 ಯೆರೂಸಲೇಮಿನಲ್ಲಿ ಯೆಹೂದ ಮಕ್ಕಳಲ್ಲಿಯೂ, ಬೆನ್ಯಾಮೀನ್ಯರಲ್ಲಿಯೂ ಕೆಲವರು ವಾಸವಾಗಿದ್ದರು.
ಯೆಹೂದನ ವಂಶಜರಲ್ಲಿ:
ಒಬ್ಬನು ಅತಾಯನು, ಇವನು ಉಜ್ಜೀಯನ ಮಗ, ಜೆಕರ್ಯನ ಮಗ, ಅಮರ್ಯನ ಮಗ, ಶೆಫಟ್ಯನ ಮಗ, ಮಹಲಲೇಲನ ಮಗ, ಇವನು ಪೆರೆಚ್ ಸಂತಾನದವನು.
5 ಇನ್ನೊಬ್ಬನು ಬಾರೂಕನ ಮಗ ಮಾಸೇಯ. ಇವನು ಕೊಲ್ಹೋಜೆಯ ಮಗ, ಇವನು ಹಜಾಯನ ಮಗ, ಇವನು ಅದಾಯನ ಮಗ, ಇವನು ಯೋಯಾರೀಬನ ಮಗ, ಇವನು ಜೆಕರ್ಯನ ಮಗ, ಇವನು ಶೇಲಹನ ಸಂತಾನದವನು.
6 ಯೆರೂಸಲೇಮಿನಲ್ಲಿ ವಾಸವಾಗಿರುವ ಪೆರೆಚನ ಪುತ್ರರೆಲ್ಲಾ 468 ಮಂದಿ. ಇವರು ಪರಾಕ್ರಮಶಾಲಿಗಳು.
7 ಬೆನ್ಯಾಮೀನನ ವಂಶಜರು:
ಸಲ್ಲು, ಇವನು ಮೆಷುಲ್ಲಾಮನ ಮಗ, ಯೆಶಾಯನ ಮಗ, ಇಥಿಯೇಲನ ಮಗ, ಮಾಸೇಯನ ಮಗ, ಕೊಲಾಯನ ಮಗ, ಪೆದಾಯನ ಮಗ, ಯೊವೇದನ ಮಗ,
8 ಅವನ ತರುವಾಯ ಗಬ್ಬಾಯನು, ಸಲ್ಲಾಯನು, ಮೊದಲಾದ ಮಂದಿ 928.
9 ಜಿಕ್ರಿಯ ಮಗ, ಯೋಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. ಹಸ್ಸೆನುವಾಹನ ಮಗ ಯೆಹೂದನು ಪಟ್ಟಣದ ಹೊಸ ಭಾಗದ ಮೇಲೆ ಮೇಲ್ವಿಚಾರಕನಾಗಿದ್ದನು.
10 ಯಾಜಕರಲ್ಲಿ ಯಾರೆಂದರೆ:
ಯೋಯಾರೀಬನ ಮಗ ಯೆದಾಯನು, ಯಾಕೀನನು.
11 ಅಹೀಟೂಬನ ಮಗ, ಮೆರಾಯೋತನ ಮಗ, ಚಾದೋಕನ ಮಗ, ಮೆಷುಲ್ಲಾಮನ ಮಗ, ಹಿಲ್ಕೀಯನ ಮಗ ಸೆರಾಯನು ದೇವರ ಆಲಯದ ನಾಯಕನಾಗಿದ್ದನು.
12 ದೇವಾಲಯದ ಕೆಲಸವನ್ನು ನಡೆಸುವ ಅವರ ಸಹೋದರರು 822 ಮಂದಿ ಇದ್ದರು.
ಮಲ್ಕೀಯನ ಮಗ, ಪಷ್ಹೂರನ ಮಗ, ಜೆಕರ್ಯನ ಮಗ, ಅಮ್ಚೀಯ ಮಗ, ಪೆಲಲ್ಯನ ಮಗ, ಯೆರೋಹಾಮನ ಮಗ ಅದಾಯನೂ.
13 ಪಿತೃಗಳಲ್ಲಿ ಮುಖ್ಯಸ್ಥರಾದ ಅವನ ಸಹೋದರರೂ 242 ಮಂದಿಯಾಗಿದ್ದರು.
ಇಮ್ಮೇರನ ಮಗ ಮೆಷಿಲ್ಲೇಮೋತನ ಮಗ, ಅಹಜೈಯ ಮಗ, ಅಜರಯೇಲನ ಮಗ ಅಮಾಷಸಾಯಿ.
14 ಪರಾಕ್ರಮಶಾಲಿಗಳಾಗಿದ್ದ ಅವರ ಸಹೋದರರು 128 ಮಂದಿ ಇದ್ದರು.
ಹಗ್ಗೆದೋಲೀಮನ ಮಗನಾದ ಜಬ್ದಿಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು.
15 ಲೇವಿಯರಲ್ಲಿ ಯಾರೆಂದರೆ:
ಬುನ್ನಿಯ ಮಗ, ಹಷಬ್ಯನ ಮಗ, ಅಜ್ರೀಕಾಮನ ಮಗ, ಹಷ್ಷೂಬನ ಮಗ ಶೆಮಾಯನು.
16 ಲೇವಿಯರ ಮುಖ್ಯಸ್ಥರಲ್ಲಿ ಶಬ್ಬೆತೈನೂ, ಯೋಜಾಬಾದನೂ ದೇವರ ಆಲಯದ ಹೊರಗಿನ ಕೆಲಸವನ್ನು ವಿಚಾರಿಸುವವರಾಗಿದ್ದರು.
17 ಇದಲ್ಲದೆ ಆಸಾಫನ ಮಗ ಜಬ್ದೀಯ ಮಗ, ಮೀಕನ ಮಗ ಮತ್ತನ್ಯನು ಪ್ರಾರ್ಥನೆಯನ್ನು ಮತ್ತು ಕೃತಜ್ಞತಾಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು.
ಅವನ ಸಂಗಡಿಗರಲ್ಲಿ ಎರಡನೆಯವನು ಬಕ್ಬುಕ್ಯನು,
ಅವನ ಸಂಗಡ ಯೆದುತೂನನ ಮಗ, ಗಲಾಲನ ಮಗ, ಶಮ್ಮೂವನ ಮಗ ಅಬ್ದನು.
18 ಪರಿಶುದ್ಧ ಪಟ್ಟಣದಲ್ಲಿರುವ ಲೇವಿಯರೆಲ್ಲಾ 284 ಮಂದಿಯಾಗಿದ್ದರು.
19 ದ್ವಾರಪಾಲಕರು:
ಅಕ್ಕೂಬನೂ, ಟಲ್ಮೋನನೂ ಬಾಗಿಲುಗಳನ್ನು ಕಾಯುವವರಾದ ಅವರ ಸಂಗಡಿಗರೂ 172 ಮಂದಿಯಾಗಿದ್ದರು.
20 ಇಸ್ರಾಯೇಲರ ಮಿಕ್ಕಾದ ಯಾಜಕರೂ, ಲೇವಿಯರೂ ತಮ್ಮ ತಮ್ಮ ಸ್ವಾಧೀನವಾಗಿದ್ದ ಯೆಹೂದದ ಎಲ್ಲಾ ಪಟ್ಟಣಗಳಲ್ಲಿ ವಾಸವಾಗಿದ್ದರು.
21 ಆದರೆ ದೇವಾಲಯದ ಸೇವಕರು ಓಫೇಲ್ ಗುಡ್ಡದಲ್ಲಿ ವಾಸವಾಗಿದ್ದರು. ಜೀಹನೂ, ಗಿಷ್ಪನೂ ಅವರ ನಾಯಕರು.
22 ಮೀಕನ ಮಗ, ಮತ್ತನ್ಯನ ಮಗ, ಹಷಬ್ಯನ ಮಗ, ಬಾನೀಯ ಮಗ ಉಜ್ಜೀಯು ಯೆರೂಸಲೇಮಿನಲ್ಲಿರುವ ಲೇವಿಯರ ಮೇಲ್ವಿಚಾರಕನಾಗಿದ್ದನು. ಆಸಾಫನ ವಂಶದಲ್ಲಿರುವ ಹಾಡುಗಾರನಾದ ಉಜ್ಜೀಯನು ದೇವರ ಆಲಯ ಕಾರ್ಯದ ಮೇಲೆ ಅಧಿಕಾರಿಯಾಗಿದ್ದನು.
23 ಏಕೆಂದರೆ ದಿನದಿನಕ್ಕೆ ಹಾಡುಗಾರರಿಗೋಸ್ಕರ ಪ್ರತಿದಿನ ಕಟ್ಟಳೆ ಇರಬೇಕೆಂದು ಅರಸನು ಅವರನ್ನು ಕುರಿತು ಆಜ್ಞಾಪಿಸಿದ್ದನು.
24 ಯೆಹೂದನ ಮಗ ಜೆರಹನ ಮಕ್ಕಳಲ್ಲಿ ಒಬ್ಬನಾಗಿರುವ ಮೆಷೇಜಬೇಲನ ಮಗನಾದ ಪೆತಹ್ಯನು ಜನರಿಗೋಸ್ಕರ ಸಕಲ ಕಾರ್ಯಗಳಲ್ಲಿ ಅರಸನ ಪ್ರತಿನಿಧಿಯಾಗಿದ್ದನು.
25 ಗ್ರಾಮಗಳಲ್ಲಿಯೂ, ಅವುಗಳ ಹೊಲಗಳಲ್ಲಿಯೂ ಇದ್ದವರು ಯಾರೆಂದರೆ: ಯೆಹೂದನ ಮಕ್ಕಳಲ್ಲಿ ಕೆಲವರು ಕಿರ್ಯತ್ ಅರ್ಬ, ಅದರ ಗ್ರಾಮಗಳಲ್ಲಿಯೂ, ದೀಬೋನ್, ಅದರ ಗ್ರಾಮಗಳಲ್ಲಿಯೂ, ಯೆಕಬ್ಜೆಯೇಲ್, ಅದರ ಗ್ರಾಮಗಳಲ್ಲಿಯೂ,
26 ಯೇಷೂವ ಎಂಬ ಗ್ರಾಮದಲ್ಲಿಯೂ, ಮೋಲಾದ ಗ್ರಾಮದಲ್ಲಿಯೂ, ಬೇತ್ ಪೆಲೆಟ್ ಗ್ರಾಮದಲ್ಲಿಯೂ,
27 ಹಚರ್ ಷೂವಾಲ್ ಗ್ರಾಮದಲ್ಲಿಯೂ, ಬೇರ್ಷೆಬ ಮತ್ತು ಅವುಗಳ ಗ್ರಾಮಗಳಲ್ಲಿಯೂ
28 ಚಿಕ್ಲಗ್, ಮೆಕೋನ ಮತ್ತು ಅವುಗಳ ಗ್ರಾಮಗಳಲ್ಲಿಯೂ,
29 ಏನ್ರಿಮ್ಮೋನ್, ಚೊರ್ಗಾ, ಯರ್ಮೂತ್ ಎಂಬ ಗ್ರಾಮಗಳಲ್ಲಿಯೂ,
30 ಜಾನೋಹ, ಅದುಲ್ಲಾಮ್ ಮತ್ತು ಇವುಗಳ ಗ್ರಾಮಗಳೂ ಲಾಕೀಷ್ ಊರೂ ಇದರ ಪ್ರಾಂತಗಳೂ ಅಜೇಕವೂ ಅದರ ಗ್ರಾಮಗಳೂ ಯೆಹೂದದವರ ನಿವಾಸಸ್ಥಾನಗಳು. ಅವರು ಬೇರ್ಷೆಬ ಮೊದಲುಗೊಂಡು ಹಿನ್ನೋಮ್ ತಗ್ಗಿನವರೆಗೂ ವಾಸವಾಗಿದ್ದರು.
31 ಇದಲ್ಲದೆ ಬೆನ್ಯಾಮೀನ್ಯರು ಗೆಬ ಮೊದಲುಗೊಂಡು ಮಿಕ್ಮಾಷಿನವರೆಗೂ ವಾಸವಾಗಿದ್ದರು. ಅಯ್ಯಾ, ಬೇತೇಲ್ ಇವುಗಳ ಗ್ರಾಮಗಳೂ,
32 ಅನಾತೋತ್, ನೋಬ್, ಅನನ್ಯ,
33 ಹಾಚೋರ್, ರಾಮಾ, ಗಿತ್ತಯಿಮ್,
34 ಹಾದೀದ್, ಚೆಬೋಯಿಮ್, ನೆಬಲ್ಲಾಟ್,
35 ಲೋದ್, ಓನೋ ಮತ್ತು ಗೇಹರಾಷೀಮ್ ಎಂಬ ಕಸಬುಗಾರರ ತಗ್ಗೂ ಇವರಿಗೆ ಇದ್ದವು.
36 ಯೆಹೂದದ ಲೇವಿಯರ ಕೆಲವು ವರ್ಗಗಳವರು ಬೆನ್ಯಾಮೀನಿನಲ್ಲಿಯೂ ವಾಸಿಸುತ್ತಿದ್ದರು.