3
ಲೇವಿಯರು
ಯೆಹೋವ ದೇವರು ಸೀನಾಯಿ ಪರ್ವತದಲ್ಲಿ ಮೋಶೆಯ ಸಂಗಡ ಮಾತನಾಡಿದ ದಿವಸದಲ್ಲಿ ಆರೋನನ ಮತ್ತು ಮೋಶೆಯ ಸಂತತಿಗಳು ಇವೇ.
 
ಆರೋನನ ಮಕ್ಕಳುಗಳ ಹೆಸರುಗಳು: ಚೊಚ್ಚಲ ಮಗನು ನಾದಾಬ್, ತರುವಾಯ ಅಬೀಹೂ, ಎಲಿಯಾಜರ್ ಮತ್ತು ಈತಾಮಾರ್. ಯಾಜಕರಾಗಿ ಅಭಿಷೇಕ ಹೊಂದಿದ ಆರೋನನ ಮಕ್ಕಳುಗಳ ಹೆಸರುಗಳು ಇವೇ, ಇವರೇ ಯಾಜಕೋದ್ಯೋಗ ಮಾಡುವುದಕ್ಕೆ ಪ್ರತಿಷ್ಠಿತರಾದವರು. ಆದರೆ ನಾದಾಬ್ ಮತ್ತು ಅಬೀಹೂ ಎಂಬ ಇಬ್ಬರು ಸೀನಾಯಿ ಮರುಭೂಮಿಯಲ್ಲಿ ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯನ್ನು ಅರ್ಪಿಸಿದಾಗ, ಯೆಹೋವ ದೇವರ ಮುಂದೆ ಸತ್ತರು. ಅವರಿಗೆ ಮಕ್ಕಳು ಇರಲಿಲ್ಲ. ಹೀಗೆ ಎಲಿಯಾಜರನು, ಈತಾಮಾರನು ತಮ್ಮ ತಂದೆ ಆರೋನನ ಎದುರಿನಲ್ಲಿ ಯಾಜಕ ಉದ್ಯೋಗವನ್ನು ಮಾಡಿದರು.
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, “ಲೇವಿಯ ಗೋತ್ರವನ್ನು ಹತ್ತಿರ ಕರೆದು, ಯಾಜಕನಾದ ಆರೋನನ ಮುಂದೆ ನಿಲ್ಲಿಸು. ಅವರು ಅವನಿಗೆ ಸಹಾಯ ಮಾಡಲಿ. ಇದಲ್ಲದೆ ಅವರು ದೇವದರ್ಶನದ ಗುಡಾರದ ಬಳಿಯಲ್ಲಿದ್ದು ದೇವದರ್ಶನದ ಗುಡಾರದ ಸೇವೆಮಾಡುತ್ತಾ ಆರೋನನಿಗಾಗಿಯೂ ಸಮಸ್ತ ಸಮೂಹದವರಿಗಾಗಿಯೂ ಕರ್ತವ್ಯಗಳನ್ನು ನಿರ್ವಹಿಸಬೇಕು. ಅವರು ದೇವದರ್ಶನದ ಗುಡಾರದ ಎಲ್ಲಾ ಸಲಕರಣೆಗಳನ್ನು ನೋಡಿಕೊಳ್ಳಬೇಕು. ಗುಡಾರದ ಸೇವೆಯನ್ನು ಮಾಡುವ ಮೂಲಕ ಇಸ್ರಾಯೇಲರ ಜವಾಬ್ದಾರಿಗಳನ್ನು ಪೂರೈಸಬೇಕು. ಲೇವಿಯರನ್ನು ಆರೋನನಿಗೂ ಅವನ ಪುತ್ರರಿಗೂ ಒಪ್ಪಿಸು. ಇಸ್ರಾಯೇಲರೊಳಗಿಂದ ಅವನಿಗೆ ಪೂರ್ಣವಾಗಿ ಕೊಡಲಾದವರು ಇವರೇ. 10 ಇದಲ್ಲದೆ ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಆರೋನನನ್ನೂ ಅವನ ಪುತ್ರರನ್ನೂ ನೇಮಿಸಬೇಕು. ಪರಕೀಯನು ಸಮೀಪಿಸಿದರೆ ಸಾಯಬೇಕು.”
11 ಯೆಹೋವ ದೇವರು ಮೋಶೆಗೆ ಹೀಗೆಂದರು: 12 “ಪ್ರತಿಯೊಬ್ಬ ಇಸ್ರಾಯೇಲಿನ ಮಹಿಳೆಯ ಜೇಷ್ಠ ಮಗನಿಗೆ ಬದಲಾಗಿ ಇಸ್ರಾಯೇಲರೊಳಗಿಂದ ಲೇವಿಯರನ್ನು ತೆಗೆದುಕೊಂಡಿದ್ದೇನೆ. ಲೇವಿಯರು ನನಗೆ ಸೇರಿದವರು. 13 ಏಕೆಂದರೆ ಜೇಷ್ಠರಾದವರೆಲ್ಲರೂ ನನ್ನವರೇ. ನಾನು ಈಜಿಪ್ಟ್ ದೇಶದಲ್ಲಿ ಜೇಷ್ಠರಾದವುಗಳನ್ನೆಲ್ಲಾ ಹೊಡೆದ ದಿವಸದಲ್ಲಿ ನಾನು ಇಸ್ರಾಯೇಲರಲ್ಲಿ ಪುರುಷರಾಗಲಿ, ಪಶುಗಳಾಗಲಿ ಚೊಚ್ಚಲಾದ ಪ್ರತಿಯೊಂದನ್ನು ನನಗಾಗಿ ಪ್ರತ್ಯೇಕಿಸಿದ್ದೇನೆ. ಅವರು ನನ್ನವರಾಗಿರಬೇಕು. ನಾನೇ ಯೆಹೋವ ದೇವರು.”
14 ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ಮೋಶೆಗೆ ಹೇಳಿದ್ದೇನೆಂದರೆ: 15 “ಲೇವಿಯರನ್ನು ಕುಟುಂಬಗಳಾಗಿಯೂ, ಗೋತ್ರಗಳಾಗಿಯೂ ಎಣಿಕೆ ಮಾಡು. ಒಂದು ತಿಂಗಳು ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರನ್ನೂ ನೀನು ಎಣಿಸು,” ಎಂದರು. 16 ಆಗ ಮೋಶೆಯು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಮಾತಿನ ಪ್ರಕಾರವಾಗಿ ಎಣಿಸಿದನು.
 
17 ಲೇವಿಯ ಪುತ್ರರ ಹೆಸರುಗಳು:
ಗೇರ್ಷೋನ್, ಕೊಹಾತ್ ಮತ್ತು ಮೆರಾರೀ.
18 ಗೇರ್ಷೋನ್ ಗೋತ್ರದವರು:
ಲಿಬ್ನೀ ಹಾಗೂ ಶಿಮ್ಮೀ.
19 ಕೊಹಾತನ ಗೋತ್ರದವರು:
ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
20 ಮೆರಾರೀಯ ಗೋತ್ರದವರು:
ಮಹ್ಲೀ ಮತ್ತು ಮೂಷೀ ಎಂಬವರು.
 
ಗೋತ್ರ ಕುಟುಂಬಗಳ ಪ್ರಕಾರವಾಗಿ ಇವರೇ ಲೇವಿ ವಂಶದವರು.
 
21 ಗೇರ್ಷೋನ್ ವಂಶಕ್ಕೆ ಸೇರಿದ ಲಿಬ್ನೀಯ ಕುಟುಂಬವೂ ಶಿಮ್ಮೀಯ ಕುಟುಂಬದವರೂ ಇದ್ದರು.
22 ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಅವರ ಎಲ್ಲಾ ಗಂಡಸರ ಸಂಖ್ಯೆಯ ಪ್ರಕಾರ ಎಣಿಕೆಯಾದವರು 7,500 ಮಂದಿ.
23 ಗೇರ್ಷೋನ್ಯರ ಕುಟುಂಬಗಳು ದೇವದರ್ಶನದ ಗುಡಾರದ ಹಿಂದುಗಡೆ ಪಶ್ಚಿಮದ ಕಡೆಗೆ ಇಳಿದುಕೊಳ್ಳಬೇಕು.
24 ಗೇರ್ಷೋನ್ಯರ ಗೋತ್ರಗಳ ಮುಖ್ಯಸ್ಥನು ಲಾಯೇಲನ ಮಗ ಎಲ್ಯಾಸಾಫ್.
25 ದೇವದರ್ಶನದ ಗುಡಾರದ ಉಪಕರಣಗಳಲ್ಲಿ ಗೇರ್ಷೋನನ ವಂಶದವರು ನೋಡಿಕೊಳ್ಳಬೇಕಾದವುಗಳು ಯಾವವೆಂದರೆ: ಗುಡಾರ, ಅದರ ಮೇಲಿನ ಡೇರೆಯ ಬಟ್ಟೆ, ಅದರ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಲ್ಲಿರುವ ಪರದೆ, 26 ಗುಡಾರದ ಮತ್ತು ಬಲಿಪೀಠದ ಸುತ್ತಲಿರುವ ಅಂಗಳದ ತೆರೆಗಳು, ಅಂಗಳದ ಬಾಗಿಲಿನ ಪರದೆ ಮತ್ತು ಅವುಗಳ ಹಗ್ಗಗಳು. ಇಂತಹ ಎಲ್ಲಾ ವಿಧವಾದ ಸೇವೆಯನ್ನು ಗೇರ್ಷೋನ್ಯರು ಮಾಡಬೇಕಾಗಿತ್ತು.
 
27 ಅಮ್ರಾಮಿಯರು, ಇಚ್ಹಾರರು, ಹೆಬ್ರೋನಿಯರು, ಉಜ್ಜೀಯೇಲರು; ಇವು ಕೊಹಾತನ ಕುಟುಂಬಗಳು.
28 ಕೊಹಾತ್ಯರಲ್ಲಿ ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 8,600 ಮಂದಿ.
ಇವರು ಪರಿಶುದ್ಧ ಸ್ಥಳವನ್ನು ನೋಡಿಕೊಳ್ಳುತ್ತಿದ್ದರು.
29 ಕೊಹಾತ್ಯರ ಗೋತ್ರಗಳವರು ಪರಿಶುದ್ಧ ಸ್ಥಳವನ್ನು ಕಾಯುವ ಜವಾಬ್ದಾರಿಕೆ ಹೊಂದಿದ್ದರು. ಅವರು ಗುಡಾರದ ಬಳಿಯಲ್ಲಿ ದಕ್ಷಿಣದ ಕಡೆಗೆ ಇಳಿದುಕೊಳ್ಳಬೇಕು.
30 ಉಜ್ಜೀಯೇಲನ ಪುತ್ರನಾದ ಎಲೀಚಾಫಾನನು ಕೊಹಾತ್ಯರ ಕುಟುಂಬಗಳ ನಾಯಕನು.
31 ಅವರು ನೋಡಿಕೊಳ್ಳಬೇಕಾಗಿದ್ದವುಗಳು ಯಾವವೆಂದರೆ: ಮಂಜೂಷ, ಮೇಜು, ದೀಪಸ್ತಂಭ, ವೇದಿಕೆಗಳು, ದೇವಸ್ಥಾನದ ಸೇವೋಪಕರಣಗಳು ಹಾಗೂ ಒಳಗಣ ಪರದೆ. ಇಂಥ ಎಲ್ಲಾ ವಿಧವಾದ ಸೇವೆಯನ್ನು ಅವರು ಮಾಡಬೇಕಾಗಿತ್ತು.
32 ಇದಲ್ಲದೆ ಯಾಜಕನಾಗಿರುವ ಆರೋನನ ಮಗ ಎಲಿಯಾಜರನು ಲೇವಿಯರ ಮತ್ತೊಬ್ಬ ನಾಯಕನಾಗಿದ್ದನು. ಪರಿಶುದ್ಧಸ್ಥಳದ ಜವಾಬ್ದಾರಿಕೆಯುಳ್ಳವನ ಮೇಲೆ ವಿಚಾರಕನು ಅವನೇ.
 
33 ಮೆರಾರೀಯ ಮಹ್ಲೀಯರ ಹಾಗೂ ಮೂಷೀಯರ ಗೋತ್ರಗಳಿಗೆ ಸಂಬಂಧಪಟ್ಟವನು. ಇವು ಮೆರಾರೀ ಗೋತ್ರಗಳು.
34 ಅವರಲ್ಲಿ ಎಣಿಕೆಯಾದವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 6,200 ಮಂದಿ.
35 ಅಬೀಹೈಲನ ಮಗ ಜುರೀಯೇಲನು ಮೆರಾರೀ ಗೋತ್ರದ ಮುಖ್ಯಸ್ಥನು.
ಅವರು ದೇವದರ್ಶನ ಗುಡಾರದ ಬಳಿಯಲ್ಲಿ ಉತ್ತರ ದಿಕ್ಕಿನ ಕಡೆಗೆ ಇಳಿದುಕೊಳ್ಳಬೇಕು.
36 ಮೆರಾರೀ ಗೋತ್ರದವರು ದೇವದರ್ಶನ ಗುಡಾರದ ಹಲಗೆ, ಅಗುಳಿ, ಕಂಬ, ಕುಣಿಕೆ, ಅದರ ಎಲ್ಲಾ ಸಲಕರಣೆಗಳು, ಅದರ ಎಲ್ಲಾ ಸೇವೆಯೂ 37 ಅಂಗಳದ ಸುತ್ತಮುತ್ತಲಿರುವ ಕಂಬಗಳೂ ಅವುಗಳ ಕುಣಿಕೆಗಳೂ ಅವುಗಳ ಗೂಟಗಳೂ ಅವುಗಳ ಹಗ್ಗಗಳೂ ಇವೆಲ್ಲವುಗಳ ಮೇಲ್ವಿಚಾರಣೆ ಮಾಡಬೇಕು.
 
38 ದೇವದರ್ಶನ ಗುಡಾರದ ಎದುರಿನಲ್ಲಿ ಪೂರ್ವದಿಕ್ಕಿಗೆ ಅಂದರೆ ದೇವದರ್ಶನದ ಗುಡಾರದ ಮುಂದೆ ಪೂರ್ವದಿಕ್ಕಿಗೆ ಇಳಿದುಕೊಳ್ಳುವವರು ಮೋಶೆ, ಆರೋನ್ ಮತ್ತು ಅವನ ಪುತ್ರರು.
ಇವರು ಇಸ್ರಾಯೇಲರಿಗಾಗಿ ಪರಿಶುದ್ಧಸ್ಥಳದ ಮೇಲ್ವಿಚಾರಣೆ ಮಾಡುವವರು.
ಬೇರೆ ಯಾರಾದರೂ ಸಮೀಪಿಸಿದರೆ, ಅವರಿಗೆ ಮರಣಶಿಕ್ಷೆ ಆಗಬೇಕು.
 
39 ಮೋಶೆಯೂ ಆರೋನನೂ ಯೆಹೋವ ದೇವರ ಆಜ್ಞೆಯ ಪ್ರಕಾರ, ಕುಟುಂಬಗಳ ಪ್ರಕಾರ ಲೆಕ್ಕಮಾಡಿದ ಎಲ್ಲಾ ಲೇವಿಯರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 22,000 ಮಂದಿ.
 
40 ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ಇಸ್ರಾಯೇಲರಲ್ಲಿರುವ ಜೇಷ್ಠಪುತ್ರರಲ್ಲಿ ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರ ಲೆಕ್ಕವನ್ನು ತೆಗೆದುಕೋ. 41 ಇಸ್ರಾಯೇಲರಲ್ಲಿರುವ ಜೇಷ್ಠರಾದವರೆಲ್ಲರಿಗೆ ಬದಲಾಗಿ ಲೇವಿಯರನ್ನೂ ಇಸ್ರಾಯೇಲರ ಪಶುಗಳಲ್ಲಿರುವ ಸಕಲ ಚೊಚ್ಚಲಾದವುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನೂ ನನಗೋಸ್ಕರ ತೆಗೆದುಕೋ, ‘ನಾನೇ ಯೆಹೋವ ದೇವರು,’ ” ಎಂದರು.
42 ಯೆಹೋವ ದೇವರು ತನಗೆ ಆಜ್ಞಾಪಿಸಿದಂತೆ ಮೋಶೆ ಇಸ್ರಾಯೇಲರಲ್ಲಿ ಜೇಷ್ಠರಾಗಿರುವುದೆಲ್ಲವನ್ನು ಎಣಿಸಿದನು. 43 ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಜೇಷ್ಠರಾದವರೆಲ್ಲರ ಒಟ್ಟು ಸಂಖ್ಯೆ 22,273 ಮಂದಿ.
44 ಯೆಹೋವ ದೇವರು ಮೋಶೆಗೆ ಪುನಃ ಹೇಳಿದ್ದೇನೆಂದರೆ, 45 “ಇಸ್ರಾಯೇಲರಲ್ಲಿ ಜೇಷ್ಠರಾದವರೆಲ್ಲರಿಗೆ ಬದಲಾಗಿ ಲೇವಿಯರನ್ನು ಮತ್ತು ಅವರ ಚೊಚ್ಚಲಾದ ಪಶುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನು ತೆಗೆದುಕೋ. ಲೇವಿಯರು ನನ್ನವರಾಗಿರುವರು. ನಾನೇ ಯೆಹೋವ ದೇವರು. 46 ಇಸ್ರಾಯೇಲರ ಜೇಷ್ಠರಾದವರಲ್ಲಿ ಲೇವಿಯರಿಗಿಂತ ಹೆಚ್ಚಾಗಿರುವ 273 ಮಂದಿಯ ವಿಮೋಚನೆಯ ಕ್ರಯವಾಗಿ 47 ಒಬ್ಬೊಬ್ಬನಿಗೆ ಐದು ಶೆಕೆಲ್* ತೆಗೆದುಕೋ. ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, ಅಂದರೆ ಇಪ್ಪತ್ತು ಗೇರಾ ತೂಕದ ಶೆಕೆಲ್ ಈ ಪ್ರಕಾರವಾಗಿ ಇದನ್ನು ತೆಗೆದುಕೊಳ್ಳಬೇಕು. 48 ಅವರೊಳಗೆ ಹೆಚ್ಚಾಗಿರುವವರ ವಿಮೋಚನೆಯ ಕ್ರಯವನ್ನು ಆರೋನನಿಗೂ ಅವನ ಮಕ್ಕಳಿಗೂ ನೀನು ಕೊಡಬೇಕು.”
49 ಹೀಗೆ ಮೋಶೆಯು ಲೇವಿಯರಿಂದ ವಿಮೋಚಿಸಲಾದವರಿಗೆ ಹೆಚ್ಚು ಜನರ ವಿಮೋಚನೆಯ ಕ್ರಯವಾದ ಹಣವನ್ನು ತೆಗೆದುಕೊಂಡನು. 50 ಇಸ್ರಾಯೇಲರಲ್ಲಿ ಜೇಷ್ಠರಾದವರಿಂದ ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ ನಿಗದಿಯಾದ 1,365 ಶೆಕೆಲ್‌ಗಳನ್ನು ತೆಗೆದುಕೊಂಡನು. 51 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ವಿಮೋಚನೆಯ ಹಣವನ್ನು ಆರೋನನಿಗೂ, ಅವನ ಪುತ್ರರಿಗೂ ಕೊಟ್ಟನು.
* 3:47 3:47 ಅಂದರೆ ಸುಮಾರು 58 ಗ್ರಾಂ ಬೆಳ್ಳಿ