2
ಕ್ರಿಸ್ತನ ದೀನತೆಯ ಅನುಸರಣೆ
ನೀವು ಕ್ರಿಸ್ತನೊಂದಿಗೆ ಐಕ್ಯವಾಗಿರುವುದರಿಂದ ಉತ್ತೇಜನ, ಅವರ ಪ್ರೀತಿಯಿಂದ ಸಂತೈಸುವಿಕೆ, ಆತ್ಮನಲ್ಲಿ ಅನ್ಯೋನ್ಯತೆ, ಕನಿಕರದ ವಾತ್ಸಲ್ಯಗಳು ಇರುವುದಾದರೆ, ನೀವು ಒಂದೇ ಮನಸ್ಸು, ಒಂದೇ ಪ್ರೀತಿ, ಆತ್ಮ, ಹಾಗೂ ಒಂದೇ ಗುರಿಯುಳ್ಳವರಾಗಿ, ನನ್ನ ಸಂತೋಷವನ್ನು ಪರಿಪೂರ್ಣಗೊಳಿಸಿರಿ. ಸ್ವಾರ್ಥ ಉದ್ದೇಶದಿಂದಾಗಲಿ, ವ್ಯರ್ಥ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ ಪ್ರತಿಯೊಬ್ಬನೂ ದೀನತ್ವದಿಂದ ಮತ್ತೊಬ್ಬನನ್ನು ತನಗಿಂತಲೂ ಶ್ರೇಷ್ಠನೆಂದು ಎಣಿಸಲಿ. ಪ್ರತಿಯೊಬ್ಬನೂ ಸ್ವಹಿತವನ್ನು ನೋಡದೆ ಪರಹಿತವನ್ನು ಸಹ ನೋಡಲಿ.
ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿಯೂ ಇರಲಿ:
ಅವರು ದೇವರ ಸ್ವರೂಪವಾಗಿದ್ದರೂ,
ದೇವರಿಗೆ ಸಮಾನರಾಗಿರುವುದನ್ನು ಬಿಡಲೊಲ್ಲೆನೆಂದು ಎಣಿಸದೆ,
ತಮ್ಮನ್ನು ತಾವೇ ಬರಿದುಮಾಡಿಕೊಂಡು
ಗುಲಾಮನ ರೂಪವನ್ನು ಧರಿಸಿಕೊಂಡು
ಮನುಷ್ಯರಿಗೆ ಸಮನಾದರು.
ಹೀಗೆ ಅವರು ಆಕಾರದಲ್ಲಿ ಮನುಷ್ಯರಾಗಿ ಕಾಣಿಸಿಕೊಂಡಾಗ
ತಮ್ಮನ್ನು ತಾವೇ ತಗ್ಗಿಸಿಕೊಂಡು
ಮರಣವನ್ನು ಎಂದರೆ ಶಿಲುಬೆಯ
ಮರಣವನ್ನೂ ಹೊಂದುವಷ್ಟು ವಿಧೇಯರಾದರು.
 
ಈ ಕಾರಣದಿಂದಲೇ ದೇವರು ಅವರನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ
ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಅವರಿಗೆ ದಯಪಾಲಿಸಿದ್ದಾರೆ.
10 ಆದ್ದರಿಂದ ಪರಲೋಕ, ಭೂಲೋಕ, ಭೂಮಿಯ ಕೆಳಗಿರುವವರೆಲ್ಲರೂ
ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ,
11 ತಂದೆಯಾದ ದೇವರ ಮಹಿಮೆಗಾಗಿ
ಯೇಸು ಕ್ರಿಸ್ತನು ಕರ್ತದೇವರು ಎಂಬುದಾಗಿ ಪ್ರತಿಯೊಂದು ನಾಲಿಗೆಯೂ ಅರಿಕೆ ಮಾಡುವುದು.
ಗೊಣಗುಟ್ಟದೆ ಎಲ್ಲವನ್ನೂ ಮಾಡಿರಿ
12 ಹೀಗಿರುವಲ್ಲಿ ನನ್ನ ಪ್ರಿಯ ಸ್ನೇಹಿತರೇ, ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರುವಾಗಲೂ ನೀವು ಯಾವಾಗಲೂ ನನಗೆ ವಿಧೇಯರಾದಂತೆ ಈಗಲೂ ವಿಧೇಯರಾಗಿ, ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ರಕ್ಷಣೆಯನ್ನು ಕಾರ್ಯರೂಪಕ್ಕೆ ತನ್ನಿರಿ. 13 ಏಕೆಂದರೆ, ತಮ್ಮ ಸದುದ್ದೇಶವನ್ನು ನೆರವೇರಿಸುವಂತೆ ನಿಮ್ಮಲ್ಲಿ ಬಯಕೆಯನ್ನೂ ಕಾರ್ಯಸಾಧನೆಯನ್ನೂ ನಿರ್ಮಿಸುವವರು ದೇವರೇ.
14 ಗೊಣಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನೂ ಮಾಡಿರಿ. 15 ಹೀಗೆ ನೀವು ನಿಂದಾರಹಿತರೂ ದೋಷವಿಲ್ಲದವರೂ, “ನಿಷ್ಕಳಂಕರಾದ ದೇವರ ಮಕ್ಕಳಾಗಿ, ವಕ್ರವಾದ ದುಷ್ಟ ಜನಾಂಗದ ಮಧ್ಯದಲ್ಲಿ,”* ಜೀವವಾಕ್ಯವನ್ನು ಹಿಡಿದುಕೊಂಡು, ಲೋಕದಲ್ಲಿ ನಕ್ಷತ್ರಗಳಂತೆ ಹೊಳೆಯುವವರಾಗಿರುವಿರಿ. 16 ನೀವು ಜೀವವಾಕ್ಯವನ್ನು ಹಿಡಿದವರಾಗಿದ್ದರೆ, ಹೀಗೆ ನಾನು ಓಡಿದ ಓಟವೂ ಪ್ರಯಾಸವೂ ವ್ಯರ್ಥವಾಗಲಿಲ್ಲವೆಂದು ತಿಳಿದು ಕ್ರಿಸ್ತನ ಪುನರಾಗಮನ ದಿನದಲ್ಲಿ ಅಭಿಮಾನ ಪಡುವೆನು. 17 ನಿಮ್ಮ ವಿಶ್ವಾಸದಿಂದ ಬರುವ ಯಜ್ಞದ ಮೇಲೆಯೂ ಸೇವೆಯ ಮೇಲೆಯೂ ನಾನು ಪಾನಸಮರ್ಪಣೆಯಾದರೂ ಸಹ ಹರ್ಷದಿಂದ ನಿಮ್ಮೆಲ್ಲರೊಡನೆ ಆನಂದಿಸುವೆನು. 18 ಇದಕ್ಕಾಗಿಯೇ ನೀವೂ ಹರ್ಷಿಸಿರಿ. ನನ್ನೊಡನೆ ಆನಂದಿಸಿರಿ.
ತಿಮೊಥೆಯನೂ ಎಪಫ್ರೊದೀತನೂ
19 ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸುವುದಕ್ಕೆ ಕರ್ತ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಹೀಗೆ ಅವನ ಮುಖಾಂತರ ನಿಮ್ಮ ವಿಷಯವನ್ನು ತಿಳಿದು ನಾನು ಸಹ ಉತ್ತೇಜನಗೊಳ್ಳುವೆನು. 20 ಅವನ ಹಾಗೆ ನಿಮ್ಮ ಯೋಗಕ್ಷೇಮವನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು, ನನ್ನ ಬಳಿ ಬೇರೆ ಯಾರೂ ಇಲ್ಲ. 21 ಎಲ್ಲರೂ ಸ್ವಕಾರ್ಯಗಳನ್ನೇ ಹುಡುಕುತ್ತಾರೆಯೇ ಹೊರತು ಕ್ರಿಸ್ತ ಯೇಸುವಿನ ಕಾರ್ಯಗಳನ್ನು ಹುಡುಕುವುದಿಲ್ಲ. 22 ಆದರೆ ತಿಮೊಥೆಯನ ಗುಣಸ್ವಭಾವವನ್ನು ನೀವು ಬಲ್ಲಿರಿ. ಮಗನು ತಂದೆಗೆ ಹೇಗೋ ಹಾಗೆಯೇ ಅವನು ಸುವಾರ್ತೆಯಲ್ಲಿ ನನ್ನೊಂದಿಗೆ ಶ್ರಮಿಸಿದ್ದಾನೆ. 23 ಆದ್ದರಿಂದ ನನಗೆ ಏನು ಸಂಭವಿಸುವುದು ಎಂದು ತಿಳಿದ ಕೂಡಲೇ ಅವನನ್ನು ಕಳುಹಿಸುವ ನಿರೀಕ್ಷೆಯಿದೆ. 24 ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತ ದೇವರಲ್ಲಿ ಭರವಸೆಯುಳ್ಳವನಾಗಿದ್ದೇನೆ.
25 ಆದರೂ ನನ್ನ ಸಹೋದರನೂ ಜೊತೆ ಕೆಲಸದವನೂ ಸಹಸೈನಿಕನೂ ಆಗಿರುವ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವುದು ಅವಶ್ಯವೆಂದು ನಾನು ನೆನೆಸಿದ್ದೇನೆ. ಅವನು ನನ್ನ ಕೊರತೆಯಲ್ಲಿ ಸೇವೆ ಮಾಡುವಂತೆ ನೀವು ಕಳುಹಿಸಿದ ನಿಮ್ಮ ಸಂದೇಶಕನೂ ಆಗಿದ್ದಾನೆ. 26 ಏಕೆಂದರೆ ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದಾನೆ. ತಾನು ಅಸ್ವಸ್ಥನಾದ ಸುದ್ದಿಯು ನಿಮಗೆ ಮುಟ್ಟಿತೆಂದು ತಿಳಿದು ತುಂಬಾ ವ್ಯಸನಪಡುತ್ತಿದ್ದಾನೆ. 27 ಅವನು ಅಸ್ವಸ್ಥನಾಗಿ ಸಾಯುವ ಹಾಗೆ ಇದ್ದದ್ದು ನಿಜವೇ. ಆದರೆ ದೇವರು ಅವನನ್ನು ಕರುಣಿಸಿದರು. ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖ ಬಾರದಂತೆ ನನ್ನನ್ನು ಕರುಣಿಸಿದರು. 28 ಆದ್ದರಿಂದ ನೀವು ಅವನನ್ನು ನೋಡಿ ಪುನಃ ಆನಂದಿಸುವಂತೆಯೂ ನನಗೆ ದುಃಖ ಕಡಿಮೆಯಾಗುವಂತೆಯೂ ನಾನು ಅವನನ್ನು ಅತ್ಯಾಸಕ್ತಿಯಿಂದ ಕಳುಹಿಸಿದ್ದೇನೆ. 29 ನೀವು ಅವನನ್ನು ಪೂರ್ಣ ಆನಂದದಿಂದ ಕರ್ತನಲ್ಲಿ ಸೇರಿಸಿಕೊಳ್ಳಿರಿ ಮತ್ತು ಅಂಥವರನ್ನು ಸನ್ಮಾನಿಸಿರಿ. 30 ಅವನು ಕ್ರಿಸ್ತನ ಸೇವೆಯ ನಿಮಿತ್ತ ಸಾಯುವ ಹಾಗಿದ್ದನು. ನೀವು ನನಗೆ ಮಾಡಲು ಸಾಧ್ಯವಾಗದೆ ಹೋದ ಸಹಾಯವನ್ನು ತಾನೇ ಪೂರ್ತಿ ಮಾಡುವುದಕ್ಕಾಗಿ, ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಗುರಿಪಡಿಸಿಕೊಂಡನು.
* 2:15 2:15 ಧರ್ಮೋ 32:5