4
ಸ್ಥಿರತೆ ಮತ್ತು ಐಕ್ಯತೆಗೆ ಮುಕ್ತಾಯ ಬೇಡಿಕೆ
ಹೀಗಿರಲಾಗಿ, ನನಗೆ ಆಪ್ತರೂ ನಾನು ಹಂಬಲಿಸುವವರೂ ಆದ ನನ್ನ ಪ್ರಿಯರೇ, ನನ್ನ ಆನಂದವೂ ಕಿರೀಟವೂ ಆಗಿರುವ ಸ್ನೇಹಿತರೇ, ಈಗಲೂ ಕರ್ತ ದೇವರಲ್ಲಿ ದೃಢವಾಗಿ ನಿಲ್ಲಿರಿ!
ಕರ್ತ ದೇವರಲ್ಲಿ ಒಂದೇ ಮನಸ್ಸುಳ್ಳವರಾಗಿರಬೇಕೆಂದು ಯುವೊದ್ಯಳನ್ನೂ ಸಂತುಕೆಯನ್ನೂ ಬೇಡಿಕೊಳ್ಳುತ್ತೇನೆ. ಜೀವಗ್ರಂಥದಲ್ಲಿ ಹೆಸರು ಬರೆದಿರುವ ಕ್ಲೇಮೆನ್ಸ್ ಮುಂತಾದ ನನ್ನ ಜೊತೆ ಕೆಲಸದವರೊಡನೆ ನನ್ನೊಂದಿಗೆ ಸುವಾರ್ತೆಗೋಸ್ಕರ ಪ್ರಯಾಸಪಟ್ಟ ಆ ಸ್ತ್ರೀಯರಿಗೆ ನೀನೂ ಸಹಾಯಕನಾಗಿರಬೇಕೆಂದು ನಿಜ ಜೊತೆಗಾರನೇ, ನಿನ್ನನ್ನೂ ಕೇಳಿಕೊಳ್ಳುತ್ತೇನೆ.
ಅಂತಿಮ ಪ್ರಬೋಧನೆಗಳು
ಯಾವಾಗಲೂ ಕರ್ತ ದೇವರಲ್ಲಿ ಆನಂದಿಸಿರಿ, ಆನಂದಪಡಿರಿ ಎಂದು ಮತ್ತೆ ಹೇಳುತ್ತೇನೆ. ನಿಮ್ಮ ಸಹನೆಯು ಎಲ್ಲರಿಗೂ ತಿಳಿದಿರಲಿ. ಕರ್ತದೇವರ ಬರುವಿಕೆಯು ಹತ್ತಿರವಾಗಿದೆ. ಯಾವ ವಿಷಯವಾಗಿಯೂ ಚಿಂತೆ ಮಾಡದೆ, ಸರ್ವ ವಿಷಯದಲ್ಲಿ ಕೃತಜ್ಞತಾಸ್ತುತಿಯೊಡನೆ ಪ್ರಾರ್ಥನೆ ವಿಜ್ಞಾಪನೆಗಳನ್ನು ಮಾಡುತ್ತಾ ನಿಮ್ಮ ಬೇಡಿಕೆಯನ್ನು ದೇವರಿಗೆ ಸಮರ್ಪಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನೂ ಮೀರುವ ದೇವರ ಸಮಾಧಾನವು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವುದು.
ಕಡೆಯದಾಗಿ ಪ್ರಿಯರೇ, ಯಾವುದು ಸತ್ಯವೂ ಯಾವುದು ಮಾನ್ಯವೂ ಯಾವುದು ನ್ಯಾಯವೂ ಯಾವುದು ಶುದ್ಧವೂ ಯಾವುದು ಪ್ರೀತಿಕರವೂ ಯಾವುದು ಮನೋಹರವೂ ಯಾವುದು ಉತ್ತಮವಾದದ್ದೋ ಯಾವುದು ಕೀರ್ತಿಗೆ ಯೋಗ್ಯವೋ ಅವೆಲ್ಲವುಗಳನ್ನೇ ಆಲೋಚಿಸಿರಿ. ನೀವು ಯಾವುದನ್ನು ನನ್ನಿಂದ ಕಲಿತು ಹೊಂದಿದ್ದೀರೋ ಮತ್ತು ಯಾವುದನ್ನು ನನ್ನಲ್ಲಿ ಕೇಳಿ ಕಂಡಿದ್ದೀರೋ ಅದನ್ನೇ ಮಾಡುವವರಾಗಿರಿ. ಆಗ ಸಮಾಧಾನದ ದೇವರು ನಿಮ್ಮೊಂದಿಗಿರುವರು.
ಉಡುಗೊರೆಗಳಿಗಾಗಿ ಧನ್ಯವಾದಗಳು
10 ಅಂತೂ ಕೊನೆಯದಾಗಿ ನನ್ನ ಬಗ್ಗೆ ನಿಮಗಿರುವ ಆಸಕ್ತಿಯು ಪುನಃ ಚಿಗುರಿದ್ದಕ್ಕಾಗಿ ಕರ್ತ ದೇವರಲ್ಲಿ ಬಹಳವಾಗಿ ಆನಂದಿಸುತ್ತೇನೆ. ನೀವು ನನ್ನ ಬಗ್ಗೆ ಆಸಕ್ತಿ ಮೊದಲಿನಿಂದ ಹೊಂದಿದ್ದರೂ ಅದನ್ನು ತೋರಿಸಲು ನಿಮಗೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. 11 ನನಗೆ ಕೊರತೆಯಿದೆ ಎಂಬುದಕ್ಕಾಗಿ ನಾನು ಇದನ್ನು ಹೇಳುತ್ತಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಸಂತೃಪ್ತನಾಗಿರುವುದನ್ನು ನಾನು ಕಲಿತುಕೊಂಡಿದ್ದೇನೆ. 12 ಕೊರತೆಯಲ್ಲಾಗಲಿ, ಸಮೃದ್ಧಿಯಲ್ಲಾಗಲಿ ಹೇಗೆ ಜೀವಿಸಬೇಕೆಂಬ ಅನುಭವವನ್ನು ತಿಳಿದುಕೊಂಡಿದ್ದೇನೆ. ಚೆನ್ನಾಗಿ ಊಟಮಾಡಿರಲಿ, ಹಸಿವೆಯಿಂದಿರಲಿ, ಸಮೃದ್ಧಿಯುಳ್ಳವನಾಗಿರಲಿ, ಕೊರತೆಯುಳ್ಳವನಾಗಿರಲಿ, ಯಾವುದೇ ಪರಿಸ್ಥಿತಿಯಲ್ಲಿದ್ದರೂ ಎಲ್ಲಾ ಪರಿಸ್ಥಿತಿಗಳಲ್ಲಿ ತೃಪ್ತನಾಗಿರುವ ರಹಸ್ಯವನ್ನು ಕಲಿತುಕೊಂಡಿದ್ದೇನೆ. 13 ನನಗೆ ಶಕ್ತಿನೀಡುವ ಕ್ರಿಸ್ತ ಯೇಸುವಿನ ಮೂಲಕ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ.
14 ಹೀಗಿದ್ದರೂ, ನನ್ನ ತೊಂದರೆಗಳಲ್ಲಿ ನೀವು ಭಾಗವಹಿಸಿದ್ದು ಒಳ್ಳೆಯದಾಯಿತು. 15 ಫಿಲಿಪ್ಪಿಯವರೇ, ನಾನು ಪ್ರಾರಂಭ ದಿನಗಳಲ್ಲಿ ನಿಮ್ಮ ನಡುವೆ ಸುವಾರ್ತೆ ಸಾರಿ ಮಕೆದೋನ್ಯದಿಂದ ಹೊರಟುಹೋದಾಗ, ನಿಮ್ಮನ್ನು ಬಿಟ್ಟು ಬೇರಾವ ಸಭೆಯವರು ಕೊಡುವ ಮತ್ತು ತೆಗೆದುಕೊಳ್ಳುವ ವಿಷಯದಲ್ಲಿ ಯಾರೂ ನನ್ನೊಂದಿಗೆ ಪಾಲುಗಾರರಾಗಲಿಲ್ಲ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. 16 ನಾನು ಥೆಸಲೋನಿಕದಲ್ಲಿದ್ದಾಗಲೂ ನನಗೆ ಕೊರತೆಯಾದಾಗ ನೀವು ಒಂದೆರಡು ಬಾರಿ ಸಹಾಯ ಕಳುಹಿಸಿದಿರಿ. 17 ನಾನು ನಿಮ್ಮಿಂದ ದಾನವನ್ನು ನಿರೀಕ್ಷಿಸುವುದಿಲ್ಲ. ಆದರೆ ನಿಮ್ಮ ಲೆಕ್ಕಕ್ಕೆ ಲಾಭ ಹೆಚ್ಚಿಸುವುದನ್ನೇ ನೋಡುತ್ತಿದ್ದೇನೆ. 18 ನಾನು ಎಲ್ಲವನ್ನೂ ಪರಿಪೂರ್ಣವಾಗಿ ಹೊಂದಿದ್ದೇನೆ. ನನಗೆ ಅಗತ್ಯಕ್ಕಿಂತಲೂ ಹೆಚ್ಚು ದೊರೆತಿದೆ. ನೀವು ಎಪಫ್ರೊದೀತನಿಂದ ಕಳುಹಿಸುವವುಗಳು ಈಗ ನನಗೆ ತಲುಪಿದೆ; ನಿಮ್ಮ ಕೊಡುಗೆ ದೇವರನ್ನು ಮೆಚ್ಚಿಸುವ ಸುಗಂಧ ಕಾಣಿಕೆಯೂ ಸ್ವೀಕೃತವಾದ ಯಜ್ಞವೂ ಆಗಿರುತ್ತವೆ. 19 ನನ್ನ ದೇವರು, ಕ್ರಿಸ್ತ ಯೇಸುವಿನಲ್ಲಿರುವ ತಮ್ಮ ಮಹಿಮೆಯ ಐಶ್ವರ್ಯಕ್ಕೆ ತಕ್ಕಂತೆಯೇ ನಿಮ್ಮ ಎಲ್ಲಾ ಕೊರತೆಗಳನ್ನು ನೀಗಿಸುವರು.
20 ನಮ್ಮ ತಂದೆ ದೇವರಿಗೆ ನಿರಂತರವೂ ಮಹಿಮೆಯಾಗಲಿ. ಆಮೆನ್.
 
ಅಂತಿಮ ವಂದನೆಗಳು
21 ಕ್ರಿಸ್ತ ಯೇಸುವಿನಲ್ಲಿರುವ ಎಲ್ಲಾ ದೇವಜನರಿಗೂ ವಂದನೆಗಳನ್ನು ಹೇಳಿರಿ.
ನನ್ನ ಜೊತೆಯಲ್ಲಿರುವ ಸಹೋದರರೂ ಸಹೋದರಿಯರೂ ವಂದನೆಗಳನ್ನು ತಿಳಿಸುತ್ತಾರೆ.
22 ಎಲ್ಲಾ ದೇವಜನರೂ ವಿಶೇಷವಾಗಿ ಕೈಸರನ ಮನೆತನಕ್ಕೆ ಸೇರಿದವರೂ ನಿಮಗೆ ವಂದನೆಗಳನ್ನು ತಿಳಿಸುತ್ತಾರೆ.
 
23 ಕರ್ತದೇವರು ಆಗಿರುವ ಕ್ರಿಸ್ತ ಯೇಸುವಿನ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ. ಆಮೆನ್.