6
ಬುದ್ಧಿಹೀನತೆಯ ವಿರುದ್ಧ ಎಚ್ಚರಿಕೆಗಳು
ಮಗನೇ, ನಿನ್ನ ನೆರೆಯವನಿಗೆ ನೀನು ಹೊಣೆಯಾಗಿದ್ದರೆ,
ಪರನಿಗಾಗಿ ನಿನ್ನ ಕೈಯನ್ನು ಒಡ್ಡಿದ್ದರೆ,
ನೀನು ನುಡಿದ ನಿನ್ನ ಬಾಯಿ ಮಾತುಗಳಿಂದಲೇ ಸಿಕ್ಕಿಕೊಂಡಿರುವೆ.
ನಿನ್ನ ಬಾಯಿ ಮಾತುಗಳೇ ನಿನ್ನನ್ನು ಸೆರೆಹಿಡಿದಿದೆ.
ಮಗನೇ, ನೀನು ನಿನ್ನ ನೆರೆಯವನ ಕೈಗೆ ಸಿಕ್ಕಿಕೊಂಡದರಿಂದ,
ನಿನ್ನನ್ನು ನೀನು ತಪ್ಪಿಸಿಕೊಳ್ಳಲು ಇದನ್ನು ಮಾಡು:
ಹೋಗಿ ನಿನ್ನನ್ನು ನೀನು ತಗ್ಗಿಸಿಕೋ,
ನಿನ್ನ ನೆರೆಯವನಿಗೆ ವಿಶ್ರಾಂತಿಯನ್ನು ಕೊಡಬೇಡ.
ನಿನ್ನ ಕಣ್ಣುಗಳಿಗೆ ನಿದ್ರೆಯನ್ನೂ
ನಿನ್ನ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡಬೇಡ.
ಬೇಟೆಗಾರನ ಕೈಯಿಂದ ಜಿಂಕೆಯೂ,
ಬಲೆ ಬೀಸುವವನ ಕೈಯಿಂದ ಪಕ್ಷಿಯೂ ತಪ್ಪಿಸಿಕೊಳ್ಳುವಂತೆ ನೀನು ತಪ್ಪಿಸಿಕೋ.
 
ಸೋಮಾರಿಯೇ, ನೀನು ಇರುವೆಯ ಹತ್ತಿರ ಹೋಗಿ,
ಅದರ ನಡವಳಿಕೆಯನ್ನು ನೋಡಿ ಜ್ಞಾನವಂತನಾಗು.
ನಾಯಕನಾಗಲೀ, ಮೇಲ್ವಿಚಾರಕನಾಗಲೀ,
ಅಧಿಕಾರಿಯಾಗಲೀ ಇರುವೆಗೆ ಇಲ್ಲದೆ ಹೋದರೂ,
ಬೇಸಿಗೆಯಲ್ಲಿ ಅದು ತನ್ನ ಆಹಾರವನ್ನು ಸಂಗ್ರಹಿಸುತ್ತದೆ.
ಸುಗ್ಗಿಯಲ್ಲಿ ತನ್ನ ಆಹಾರವನ್ನು ಕೂಡಿಸಿಕೊಳ್ಳುತ್ತದೆ.
 
ಸೋಮಾರಿಯೇ, ಎಷ್ಟು ಹೊತ್ತು ನೀನು ನಿದ್ರೆ ಮಾಡುವುದು?
ನಿನ್ನ ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವೆ?
10 ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ,
ಇನ್ನೂ ಸ್ವಲ್ಪ ವಿಶ್ರಾಂತಿಗಾಗಿ ಕೈ ಮುದುರಿಕೊಳ್ಳುವೆ ಎನ್ನುವೆಯಾ?
11 ಹೀಗೆ ನಿನಗೆ ಬಡತನವು ಕಳ್ಳನಂತೆಯೂ
ಕೊರತೆಯು ಶಸ್ತ್ರಧಾರಿಯಂತೆಯೂ ನಿನ್ನ ಮೇಲೆ ಬರುವುವು.
 
12 ತೊಂದರೆಕೊಡುವವನೂ ಕೆಡುಕನೂ
ಆಗಿರುವವನ ಬಾಯಿಂದ ಕುಟಿಲ ಮಾತೇ ಬರುವುದು.
13 ಅವನು ಕಣ್ಣು ಮಿಟುಕಿಸುತ್ತಾನೆ,
ಕಾಲು ಕೆರೆಯುತ್ತಾನೆ,
ಬೆರಳು ಸನ್ನೆಮಾಡುತ್ತಾನೆ,
14 ಅವನು ತನ್ನ ಹೃದಯದಲ್ಲಿ ಮೋಸಕರ ಯೋಜನೆಯನ್ನೇ ಮಾಡುತ್ತಾನೆ;
ಯಾವಾಗಲೂ ಅವನು ಜಗಳವನ್ನು ಕಲ್ಪಿಸುತ್ತಾನೆ.
15 ಆದ್ದರಿಂದ ಅವನಿಗೆ ವಿಪತ್ತು ಬೇಗ ಬರುವುದು;
ಯಾವ ಪರಿಹಾರವಿಲ್ಲದೆ ಅವನು ತಟ್ಟನೆ ನಾಶವಾಗುವನು.
 
16 ಈ ಆರು ವಿಷಯಗಳನ್ನು ಯೆಹೋವ ದೇವರು ಹಗೆ ಮಾಡುತ್ತಾರೆ;
ಹೌದು, ಏಳು ದೇವರಿಗೆ ಅಸಹ್ಯವಾಗಿವೆ, ಅವು ಯಾವವೆಂದರೆ:
17 ಹೆಮ್ಮೆಯ ದೃಷ್ಟಿ,
ಸುಳ್ಳಾಡುವ ನಾಲಿಗೆ,
ನಿರಪರಾಧಿಯ ರಕ್ತವನ್ನು ಸುರಿಸುವ ಕೈಗಳು,
18 ದುರಾಲೋಚನೆಗಳನ್ನು ಕಲ್ಪಿಸುವ ಹೃದಯ,
ಕೇಡಿಗೆ ನುಗ್ಗಲು ತ್ವರೆಪಡುವ ಕಾಲುಗಳು,
19 ಅಸತ್ಯವನ್ನಾಡುವ ಸುಳ್ಳುಸಾಕ್ಷಿ ಮತ್ತು
ಸಹೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.
ವ್ಯಭಿಚಾರಕ್ಕೆ ವಿರುದ್ಧವಾಗಿ ಎಚ್ಚರಿಕೆ
20 ಮಗನೇ, ನಿನ್ನ ತಂದೆಯ ಆಜ್ಞೆಯನ್ನು ಕೈಗೊಳ್ಳು,
ನಿನ್ನ ತಾಯಿಯ ಬೋಧನೆಯನ್ನು ತ್ಯಜಿಸಬೇಡ.
21 ಅವುಗಳನ್ನು ಯಾವಾಗಲೂ ನಿನ್ನ ಹೃದಯದಲ್ಲಿ ಬಂಧಿಸಿಕೋ.
ಅವುಗಳನ್ನು ನಿನ್ನ ಕೊರಳಿಗೆ ಧರಿಸಿಕೋ.
22 ನೀನು ನಡೆಯುವಾಗ ಅವು ನಿನಗೆ ಮಾರ್ಗದರ್ಶಿಯಾಗಿರುತ್ತವೆ.
ನೀನು ಮಲಗುವಾಗ ಅವು ನಿನ್ನನ್ನು ಕಾಯುತ್ತವೆ.
ನೀನು ಎಚ್ಚರಗೊಂಡಾಗ ಅವು ನಿನ್ನೊಂದಿಗೆ ಮಾತಾಡುತ್ತವೆ.
23 ಆಜ್ಞೆಯೇ ದೀಪವಾಗಿದೆ,
ಬೋಧನೆಯೇ ಬೆಳಕಾಗಿದೆ;
ಶಿಕ್ಷಣದ ತಿದ್ದುವಿಕೆಗಳು
ಜೀವ ಮಾರ್ಗವಾಗಿವೆ.
24 ಅವು ಕೆಟ್ಟ ಹೆಂಗಸಿನಿಂದಲೂ,
ಪರಸ್ತ್ರೀಯ ವಂಚಕ ಮಾತಿನಿಂದಲೂ ನಿನ್ನನ್ನು ತಪ್ಪಿಸಿ ಕಾಪಾಡಬಲ್ಲವು.
 
25 ನಿನ್ನ ಹೃದಯ ಅವಳ ಸೌಂದರ್ಯವನ್ನು ಮೋಹಿಸದಿರಲಿ.
ಅವಳ ಕಣ್ಣುರೆಪ್ಪೆಗಳಿಂದ ಅವಳು ನಿನ್ನನ್ನು ವಶಮಾಡಿಕೊಳ್ಳದೆ ಇರಲಿ.
 
26 ಏಕೆಂದರೆ ವೇಶ್ಯೆಯನ್ನು ಊಟದಿಂದ ಕೊಂಡುಕೊಳ್ಳಬಹುದು,
ಆದರೆ ವ್ಯಭಿಚಾರಿಣಿ ಅಮೂಲ್ಯ ಜೀವವನ್ನೇ ಬೇಟೆಯಾಡುವಳು.
27 ಒಬ್ಬನು ತನ್ನ ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ,
ಅವನ ವಸ್ತ್ರಗಳು ಸುಡುವುದಿಲ್ಲವೋ?
28 ಒಬ್ಬನು ಧಗಧಗಿಸುವ ಕೆಂಡದ ಮೇಲೆ ನಡೆದರೆ,
ಅವನ ಪಾದಗಳು ಸುಡುವುದಿಲ್ಲವೋ?
29 ಪರನ ಹೆಂಡತಿಯನ್ನು ಕೂಡುವವನ ಗತಿಯು ಹೀಗೆಯೇ ಇರುವದು.
ಅವಳನ್ನು ಮುಟ್ಟುವ ಯಾವನೂ ದಂಡನೆಯಿಂದ ತಪ್ಪಿಸಿಕೊಳ್ಳನು.
 
30 ಹಸಿದಾಗ ಕಳ್ಳನು ತನ್ನ ಹಸಿವೆಯನ್ನು ತೃಪ್ತಿಪಡಿಸಲು ಕಳವು ಮಾಡಿದರೆ,
ಜನರು ಅವನನ್ನು ಹೀಯಾಳಿಸುವುದಿಲ್ಲ.
31 ಅವನು ಸಿಕ್ಕಿಕೊಂಡರೆ ಏಳರಷ್ಟು ಹಿಂದಕ್ಕೆ ಕೊಡಬೇಕಾಗುವುದು.
ತನ್ನ ಮನೆಯ ಆಸ್ತಿಯನ್ನೆಲ್ಲಾ ಸಹ ಅವನು ಕೊಡಬೇಕಾಗುವುದು.
32 ವ್ಯಭಿಚಾರಿಯು ಬುದ್ಧಿಹೀನನಾಗಿದ್ದಾನೆ.
ಹಾಗೆ ಮಾಡುವವನು ತನ್ನನ್ನೇ ನಾಶಮಾಡಿಕೊಳ್ಳುವನು.
33 ಅವನಿಗೆ ಗಾಯವೂ ಅವಮಾನವೂ ಆಗುತ್ತವೆ.
ಅವನ ನಿಂದೆಯು ಎಂದಿಗೂ ಅಳಿಸಲಾಗದು.
 
34 ಏಕೆಂದರೆ ಮತ್ಸರವು ಪತಿಯ ಕ್ರೋಧವನ್ನು ಉದ್ರೇಕಿಸುವುದು.
ಆದ್ದರಿಂದ ಮುಯ್ಯಿ ತೀರಿಸುವಾಗ ಅವನು ಕರುಣೆ ತೋರನು.
35 ಅವನು ಯಾವ ಪರಿಹಾರವನ್ನು ಒಪ್ಪುವುದಿಲ್ಲ;
ಎಷ್ಟು ದೊಡ್ಡ ಲಂಚ ಕೊಟ್ಟರೂ ಅವನು ಅದನ್ನು ತಿರಸ್ಕರಿಸುವನು.