ಕೀರ್ತನೆ 124
ದಾವೀದನ ಯಾತ್ರಾ ಗೀತೆ.
ಯೆಹೋವ ದೇವರು ನಮ್ಮ ಪರವಾಗಿ ಇರದಿದ್ದರೆ, ಏನಾಗುತ್ತಿತ್ತು
ಎಂದು ಇಸ್ರಾಯೇಲರೇ ಹೇಳಲಿ.
ವೈರಿಗಳು ನಮಗೆ ವಿರೋಧವಾಗಿ ಎದ್ದಾಗ
ಯೆಹೋವ ದೇವರು ನಮ್ಮ ಪರವಾಗಿ ಇರದಿದ್ದರೆ,
ಅವರು ನಮ್ಮ ಮೇಲೆ ರೋಷಗೊಂಡು
ನಮ್ಮನ್ನು ನಾಶಮಾಡಿಬಿಡುತ್ತಿದ್ದರು.
ಆಗ ಪ್ರವಾಹವು ನಮ್ಮನ್ನು ಮುಳುಗಿಸುತ್ತಿತ್ತು;
ತೊರೆಯು ನಮ್ಮ ಪ್ರಾಣದ ಮೇಲೆ ಹರಿಯುತ್ತಿತ್ತು.
ರಭಸ ಪ್ರವಾಹ ನಮ್ಮನ್ನು
ಕೊಚ್ಚಿಕೊಂಡು ಹೋಗಿಬಿಡುತ್ತಿತ್ತು.
 
ಆದರೆ ನಮ್ಮನ್ನು ವೈರಿಗಳ ಹಲ್ಲುಗಳಿಗೆ ಬೇಟೆಯಾಗಿ ಕೊಡದೆ ಇದ್ದ
ಯೆಹೋವ ದೇವರಿಗೆ ಸ್ತೋತ್ರವಾಗಲಿ.
ನಾವು ಬೇಟೆಗಾರರ ಬಲೆಯಿಂದ
ತಪ್ಪಿಸಿಕೊಂಡ ಪಕ್ಷಿಯಂತೆ ಇದ್ದೇವೆ.
ನಾವು ಹರಿದುಹೋದ ಬಲೆಯಿಂದ ತಪ್ಪಿಸಿಕೊಂಡೆವು.
ನಮ್ಮ ಸಹಾಯವು ಆಕಾಶವನ್ನೂ,
ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರ ಹೆಸರಿನಲ್ಲಿ ಒದಗಿ ಬಂತು.