ಕೀರ್ತನೆ 126
ಯಾತ್ರಾ ಗೀತೆ.
ಯೆಹೋವ ದೇವರು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ
ನಾವು ಕನಸು ಕಂಡವರ ಹಾಗಿದ್ದೆವು.
ಆಗ ನಮ್ಮ ಬಾಯಿ ನಗೆಯಿಂದಲೂ,
ನಮ್ಮ ಬಾಯಿ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು;
ಆಗ ಜನಾಂಗಗಳು,
“ಯೆಹೋವ ದೇವರು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ,” ಎಂದು ಹೇಳಿದರು.
ಯೆಹೋವ ದೇವರು ನಮಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ;
ಆದಕಾರಣ ಸಂತೋಷಿಸುತ್ತಾ ಇದ್ದೇವೆ.
 
ಯೆಹೋವ ದೇವರೇ, ನೆಗೆವನಲ್ಲಿರುವ* ಹೊಳೆಗಳ ಹಾಗೆ
ಉಳಿದಿರುವವರನ್ನು ಸಹ ಸೆರೆಯಿಂದ ತಿರುಗಿ ಬರಮಾಡಿರಿ.
ಕಣ್ಣೀರಿನಿಂದ ಬಿತ್ತುವವರು,
ಆನಂದ ಗೀತದೊಡನೆ ಕೊಯ್ಯುವರು;
ಬಿತ್ತಲು ಬೀಜವನ್ನು ಹೊತ್ತುಕೊಂಡು
ಅಳುತ್ತಾ ಹೋಗುವವರು,
ತಮ್ಮ ಸಿವುಡುಗಳನ್ನು ಹೊತ್ತುಕೊಂಡು
ಆನಂದ ಗೀತದೊಡನೆ ತಿರುಗಿ ಬರುವರು.
* ಕೀರ್ತನೆ 126:4 126:4 ನೆಗೆವನಲ್ಲಿರುವ ಅಂದರೆ ದೇಶದ ದಕ್ಷಿಣ ಪ್ರಾಂತ್ಯ