ಕೀರ್ತನೆ 147
ಯೆಹೋವ ದೇವರನ್ನು ಸ್ತುತಿಸಿರಿ.
 
ಏಕೆಂದರೆ ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದು;
ದೇವರನ್ನು ಸ್ತುತಿಸುವುದು ರಮ್ಯವೂ, ಯೋಗ್ಯವೂ ಆಗಿದೆ.
 
ಯೆಹೋವ ದೇವರು ಯೆರೂಸಲೇಮನ್ನು ಕಟ್ಟುತ್ತಾರೆ,
ಚದರಿಹೋದ ಇಸ್ರಾಯೇಲನ್ನು ಕೂಡಿಸುತ್ತಾರೆ.
ದೇವರು ಮುರಿದ ಹೃದಯದವರನ್ನು ಸ್ವಸ್ಥಮಾಡಿ,
ಅವರ ಗಾಯಗಳನ್ನು ಕಟ್ಟುತ್ತಾರೆ.
ದೇವರು ನಕ್ಷತ್ರಗಳ ಸಂಖ್ಯೆಯನ್ನು ನಿರ್ಧರಿಸುತ್ತಾರೆ;
ಅವೆಲ್ಲವುಗಳನ್ನು ಅವುಗಳ ಹೆಸರಿನಿಂದ ಕರೆಯುತ್ತಾರೆ.
ನಮ್ಮ ಯೆಹೋವ ದೇವರು ದೊಡ್ಡವರು, ಬಹು ಶಕ್ತರು;
ಅವರ ವಿವೇಕಕ್ಕೆ ಎಣೆಯಿಲ್ಲ.
ಯೆಹೋವ ದೇವರು ಸಾತ್ವಿಕರನ್ನು ಉದ್ಧರಿಸುತ್ತಾರೆ;
ದುಷ್ಟರನ್ನು ದಂಡಿಸುತ್ತಾರೆ.
 
ಯೆಹೋವ ದೇವರಿಗೆ ಸ್ತೋತ್ರಗೀತೆ ಹಾಡಿರಿ,
ನಮ್ಮ ದೇವರನ್ನು ಕಿನ್ನರಿಯಿಂದ ಸ್ತುತಿಸಿರಿ.
 
ದೇವರು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾರೆ;
ಭೂಮಿಗೆ ಮಳೆಯನ್ನು ಸುರಿಸುತ್ತಾರೆ;
ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾರೆ.
ದೇವರು ಪಶುಗಳಿಗೂ,
ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾರೆ.
 
10 ಕುದುರೆಯ ಶಕ್ತಿಯಲ್ಲಿ ಅವರಿಗೆ ಇಷ್ಟವಿಲ್ಲ;
ಶೂರನ ಕಾಲ್ಬಲವನ್ನು ಮೆಚ್ಚುವುದಿಲ್ಲ.
11 ಯೆಹೋವ ದೇವರು ತಮಗೆ ಭಯಪಡುವವರಲ್ಲಿ ಆನಂದಿಸುತ್ತಾರೆ,
ತಮ್ಮ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರಲ್ಲಿ ಹರ್ಷಿಸುತ್ತಾರೆ.
 
12 ಯೆರೂಸಲೇಮೇ, ಯೆಹೋವ ದೇವರನ್ನು ಸ್ತುತಿಸು;
ಚೀಯೋನೇ, ನಿಮ್ಮ ದೇವರನ್ನು ಸ್ತುತಿಸು.
 
13 ನಿಮ್ಮ ಬಾಗಿಲುಗಳ ಅಗುಳಿಗಳನ್ನು ಬಲಗೊಳಿಸಿ,
ದೇವರು ನಿಮ್ಮ ಜನರನ್ನು ಆಶೀರ್ವದಿಸುತ್ತಾರೆ.
14 ದೇವರು ನಿಮ್ಮ ಮೇರೆಗಳನ್ನು ಸಮಾಧಾನಪಡಿಸುತ್ತಾರೆ;
ಉತ್ತಮವಾದ ಗೋಧಿಯಿಂದ ನಿಮ್ಮನ್ನು ತೃಪ್ತಿಪಡಿಸುತ್ತಾರೆ.
 
15 ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾರೆ;
ದೇವರ ವಾಕ್ಯವು ಬಹು ತೀವ್ರವಾಗಿ ಓಡುತ್ತದೆ.
16 ದೇವರು ಹಿಮವನ್ನು ಉಣ್ಣೆಯ ಹಾಗೆ ಹರಡುತ್ತಾರೆ;
ಮಂಜನ್ನು ಬೂದಿಯ ಹಾಗೆ ಚದರಿಸುತ್ತಾನೆ.
17 ದೇವರು ನೀರುಗಡ್ಡೆಯನ್ನು ಕಲ್ಲು ಹರಳುಗಳಂತೆ ಸುರಿದು ಹಾಕುತ್ತಾರೆ;
ಅವರು ಕಳುಹಿಸುವ ಚಳಿಯ ಮುಂದೆ ಯಾರು ನಿಲ್ಲುವರು?
18 ದೇವರು ತಮ್ಮ ವಾಕ್ಯವನ್ನು ಕಳುಹಿಸಿ ಅವುಗಳನ್ನು ಕರಗಿಸುತ್ತಾರೆ;
ದೇವರು ಗಾಳಿಯನ್ನು ಬೀಸುವಂತೆ ಮಾಡುತ್ತಾರೆ; ನೀರು ಹರಿಯುತ್ತದೆ.
 
19 ದೇವರು ಯಾಕೋಬ್ಯರಿಗೆ ತಮ್ಮ ವಾಕ್ಯವನ್ನು ಪ್ರಕಟಿಸುತ್ತಾರೆ,
ಇಸ್ರಾಯೇಲರಿಗೆ ತಮ್ಮ ತೀರ್ಪುಗಳನ್ನೂ, ತನ್ನ ನ್ಯಾಯವಿಧಿಗಳನ್ನೂ ಪ್ರಕಟಿಸುತ್ತಾರೆ.
20 ಬೇರೆ ಯಾವ ಜನಾಂಗಕ್ಕಾದರೂ ದೇವರು ಹೀಗೆ ಮಾಡಲಿಲ್ಲ;
ದೇವರ ನ್ಯಾಯವಿಧಿಗಳನ್ನು ಜನರು ತಿಳಿದುಕೊಳ್ಳುವುದಿಲ್ಲ.
 
ಯೆಹೋವ ದೇವರನ್ನು ಸ್ತುತಿಸಿರಿ.