ಕೀರ್ತನೆ 23
ದಾವೀದನ ಕೀರ್ತನೆ.
ಯೆಹೋವ ದೇವರು ನನ್ನ ಕುರುಬ ಆಗಿದ್ದಾರೆ, ನನಗೆ ಕೊರತೆಯೇ ಇಲ್ಲ.
ಅವರು ಹಸಿರುಗಾವಲುಗಳಲ್ಲಿ ನನ್ನನ್ನು ವಿಶ್ರಮಿಸುವಂತೆ ಮಾಡುತ್ತಾರೆ;
ಪ್ರಶಾಂತ ಜಲರಾಶಿಯ ಬಳಿಗೆ ನನ್ನನ್ನು ನಡೆಸುತ್ತಾರೆ.
ಅವರು ನನ್ನ ಪ್ರಾಣವನ್ನು ಚೈತನ್ಯಗೊಳಿಸುತ್ತಾರೆ.
ತಮ್ಮ ಹೆಸರಿನ ನಿಮಿತ್ತ
ನನ್ನನ್ನು ನೀತಿ ಮಾರ್ಗದಲ್ಲಿ ನಡೆಸುತ್ತಾರೆ.
ನಾನು ಕಾರ್ಗತ್ತಲಿನ*
ಕಣಿವೆಯಲ್ಲಿ ನಡೆಯುವಾಗಲೂ,
ನೀವು ನನ್ನೊಂದಿಗಿರುವುದರಿಂದ
ನಾನು ಕೇಡಿಗೆ ಹೆದರೆನು;
ನಿಮ್ಮ ದೊಣ್ಣೆಯೂ ನಿಮ್ಮ ಕೋಲೂ
ನನ್ನನ್ನು ಸಂತೈಸುತ್ತವೆ.
 
ನೀವು ನನ್ನ ವೈರಿಗಳ ಮುಂದೆಯೇ
ನನಗೊಂದು ಔತಣವನ್ನು ಸಿದ್ಧಮಾಡುತ್ತೀರಿ.
ನೀವು ನನ್ನ ತಲೆಗೆ ತೈಲವನ್ನು ಅಭಿಷೇಕಿಸುತ್ತೀರಿ.
ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.
ನಿಶ್ಚಯವಾಗಿ ಶುಭವೂ ಪ್ರೀತಿಯೂ
ನನ್ನ ಜೀವಮಾನವೆಲ್ಲಾ ನನ್ನನ್ನು ಹಿಂಬಾಲಿಸುತ್ತವೆ;
ನಾನು ಯೆಹೋವ ದೇವರ ಮನೆಯಲ್ಲಿ
ಸದಾಕಾಲವೂ ವಾಸಿಸುವೆನು.
* ಕೀರ್ತನೆ 23:4 23:4 ಅಥವಾ ಮರಣದ ನೆರಳಿನಲ್ಲಿ