ಕೀರ್ತನೆ 56
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ದೂರದ ಓಕ್ ಮರದ ಮೇಲೆ ಪಾರಿವಾಳ ಕುಳಿತಿದೆ” ಎಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ದಾವೀದನ ಗತ್ ಎಂಬ ಊರಲ್ಲಿ ಫಿಲಿಷ್ಟಿಯರ ಕೈವಶವಾದಾಗ ರಚಿಸಿದ ಕಾವ್ಯ.
ದೇವರೇ ಕರುಣಿಸು,
ಏಕೆಂದರೆ ಮನುಷ್ಯರು ನನ್ನನ್ನು ಬೆನ್ನಟ್ಟುತ್ತಿದ್ದಾರೆ.
ದಿನವೆಲ್ಲಾ ವಿರೋಧಿಸುತ್ತಾ ನನ್ನನ್ನು ಬಾಧಿಸುತ್ತಿದ್ದಾರೆ.
ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ಬೆನ್ನಟ್ಟುತ್ತಿದ್ದಾರೆ.
ಗರ್ವದಿಂದ ನನಗೆ ವಿರೋಧವಾಗಿ ಯುದ್ಧ ಮಾಡುತ್ತಿದ್ದಾರೆ.
 
ನಾನು ಭಯಪಡುವ ಸಮಯದಲ್ಲಿ ನಿಮ್ಮಲ್ಲಿ ಭರವಸೆ ಇಡುವೆನು.
ದೇವರ ಮಾತುಗಳಲ್ಲಿ ನಾನು ಹೆಮ್ಮೆಪಡುವೆನು.
ದೇವರಲ್ಲಿಯೇ ಭರವಸೆ ಇಡುವೆನು, ನಾನು ಭಯಪಡುವುದಿಲ್ಲ.
ಸಾಯುವ ಮನುಷ್ಯನು ನನಗೇನು ಮಾಡಬಲ್ಲ?
 
ಶತ್ರುಗಳು ನನ್ನ ಮಾತುಗಳನ್ನು ಸದಾ ಅಪಾರ್ಥ ಮಾಡಿಕೊಳ್ಳುತ್ತಾರೆ.
ನನಗೆ ವಿರೋಧವಾಗಿರುವ ಅವರ ಆಲೋಚನೆಗಳೆಲ್ಲಾ ಕೇಡಿಗಾಗಿವೆ.
ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ.
ನನ್ನ ಪ್ರಾಣ ತೆಗೆಯಲು ಕುತೂಹಲದಿಂದ
ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
ಅಪರಾಧದಿಂದ ಅವರು ತಪ್ಪಿಸಿಕೊಂಡಾರೋ?
ದೇವರೇ ಜನರನ್ನು ಕಠಿಣವಾಗಿ ದಂಡಿಸಿರಿ.
 
ನನ್ನ ಗೋಳಾಟವನ್ನು ಎಣಿಕೆ ಮಾಡಿರಿ,
ನಿಮ್ಮ ಸುರುಳಿಯಲ್ಲಿ ನನ್ನ ಕಣ್ಣೀರ ಲೆಕ್ಕಮಾಡಿರಿ,
ಅವು ನಿಮ್ಮ ಗ್ರಂಥದಲ್ಲಿ ಬರೆದಿದೆಯಲ್ಲವೇ?
ನಾನು ನಿಮಗೆ ಮೊರೆಯಿಟ್ಟಾಗ,
ನನ್ನ ಶತ್ರುಗಳು ಹಿಂದಿರುಗುವರು.
ಇದರಿಂದ ದೇವರು ನನಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವೆನು.
 
10 ನಾನು ದೇವರಲ್ಲಿಯೂ ದೇವರ ವಾಕ್ಯದಲ್ಲಿಯೂ ಹೆಮ್ಮೆಪಡುವೆನು.
ಹೌದು, ದೇವರಲ್ಲಿಯೂ ಯೆಹೋವ ದೇವರ ವಾಕ್ಯದಲ್ಲಿಯೂ ಹೆಮ್ಮೆಪಡುವೆನು.
11 ನಾನು ದೇವರಲ್ಲಿ ಭರವಸೆಯಿಡುವೆನು. ನಾನು ಭಯಪಡುವುದಿಲ್ಲ.
ಮಾನವನು ನನಗೇನು ಮಾಡುವನು?
 
12 ನನ್ನ ದೇವರೇ ನಾನು ನಿಮಗೆ ಸಲ್ಲಿಸಿದ ಹರಕೆಗಳಿಗೆ ಅಧೀನವಾಗಿದ್ದೇನೆ.
ನಾನು ಉಪಕಾರ ಸ್ತುತಿಯ ಕಾಣಿಕೆಗಳನ್ನು ನಿಮಗೆ ಸಲ್ಲಿಸುವೆನು.
13 ಏಕೆಂದರೆ ನೀವು ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀರಿ.
ನಾನು ಜೀವದ ಬೆಳಕಿನಲ್ಲಿ
ನಿಮ್ಮ ಮುಂದೆ ನಡೆದುಕೊಳ್ಳುವ
ಹಾಗೆ ನೀವು ನನ್ನ ಪಾದಗಳನ್ನು ಎಡವದಂತೆ ಕಾಪಾಡಿದ್ದೀರಿ.