*
ಕೀರ್ತನೆ 9
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಪುತ್ರನ ಮರಣದ” ರಾಗ. ದಾವೀದನ ಕೀರ್ತನೆ.
ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಾನು ನಿಮ್ಮನ್ನು ಸ್ತುತಿಸುವೆನು;
ನಿಮ್ಮ ಅದ್ಭುತ ಕಾರ್ಯಗಳನ್ನೆಲ್ಲಾ ನಾನು ವರ್ಣಿಸುವೆನು.
ನಾನು ನಿಮ್ಮಲ್ಲಿ ಆನಂದಿಸಿ ಉಲ್ಲಾಸಪಡುವೆನು;
ಮಹೋನ್ನತರೇ, ನಾನು ನಿಮ್ಮ ಹೆಸರನ್ನು ಕೊಂಡಾಡಿ ಹಾಡುವೆನು.
 
ನನ್ನ ಶತ್ರುಗಳು ಹಿಂದಿರುಗಿ ಓಡುವರು;
ಅವರು ನಿಮ್ಮ ಮುಂದೆ ಎಡವಿಬಿದ್ದು ನಾಶವಾಗುವರು.
ನೀವು ನನ್ನ ನ್ಯಾಯವನ್ನೂ ವ್ಯಾಜ್ಯವನ್ನೂ ತೀರಿಸಲು
ನೀತಿಯುಳ್ಳ ನ್ಯಾಯಾಧಿಪತಿಯಾಗಿ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೀರಿ.
ರಾಷ್ಟ್ರಗಳನ್ನು ಖಂಡಿಸಿ ದುಷ್ಟರನ್ನು ದಂಡಿಸಿದ್ದೀರಿ;
ಅವರ ಹೆಸರನ್ನು ಯುಗಯುಗಾಂತರಗಳವರೆಗೂ ಅಳಿಸಿಬಿಟ್ಟಿದ್ದೀರಿ.
ವೈರಿಯನ್ನು ವಿನಾಶವು ನಿರಂತರವಾಗಿ ಬೆನ್ನಟ್ಟಿದೆ,
ನೀವು ಅವರ ಪಟ್ಟಣಗಳನ್ನು ಕೆಡವಿದ್ದೀರಿ;
ಅವರ ಸ್ಮರಣೆಯು ಅವರೊಂದಿಗೇ ನಾಶವಾಯಿತು.
 
ಯೆಹೋವ ದೇವರು ಸದಾ ಆಳುವವರು;
ಅವರು ನ್ಯಾಯಕ್ಕಾಗಿ ತಮ್ಮ ಸಿಂಹಾಸನವನ್ನು ಸ್ಥಾಪಿಸಿದ್ದಾರೆ.
ಅವರು ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವರು;
ಪ್ರಜೆಗಳಿಗೆ ಯಥಾರ್ಥವಾದ ತೀರ್ಪು ನೀಡುವರು.
ಯೆಹೋವ ದೇವರು ಕುಗ್ಗಿದವರಿಗೆ ಆಶ್ರಯವಾಗಿರುವರು,
ಇಕ್ಕಟ್ಟಿನ ದಿವಸಗಳಲ್ಲಿ ಭದ್ರಕೋಟೆಯಾಗಿರುವರು.
10 ನಿಮ್ಮ ಹೆಸರನ್ನು ತಿಳಿದವರು ನಿಮ್ಮಲ್ಲಿ ಭರವಸೆ ಇಡುವರು,
ಏಕೆಂದರೆ ಯೆಹೋವ ದೇವರೇ,
ನಿಮ್ಮನ್ನು ಹುಡುಕುವವರನ್ನು ನೀವು ಎಂದಿಗೂ ತೊರೆದುಬಿಡುವುದಿಲ್ಲ.
 
11 ಚೀಯೋನಿನಲ್ಲಿ ವಾಸಿಸುವ ಯೆಹೋವ ದೇವರಿಗೆ ಸ್ತುತಿಹಾಡಿರಿ;
ಅವರ ಕ್ರಿಯೆಗಳನ್ನು ರಾಷ್ಟ್ರಗಳಲ್ಲಿ ಸಾರಿ ಹೇಳಿರಿ.
12 ಅವರು ಪ್ರಾಣಹತ್ಯೆ ಮಾಡುವವರನ್ನು ಮುಯ್ಯಿತೀರಿಸಲು ಜ್ಞಾಪಕಮಾಡಿಕೊಳ್ಳುವರು;
ಬಾಧೆಗೆ ಒಳಗಾಗಿರುವ ದೀನರ ಕೂಗನ್ನು ಅವರು ಅಲಕ್ಷ್ಯಮಾಡುವುದಿಲ್ಲ.
 
13 ಯೆಹೋವ ದೇವರೇ, ನನ್ನ ವೈರಿಗಳು ನನ್ನನ್ನು ಹಿಂಸಿಸುವುದನ್ನು ನೋಡಿರಿ.
ನನ್ನನ್ನು ಕರುಣಿಸಿ, ಮರಣ ದ್ವಾರದಿಂದ ನನ್ನನ್ನು ಮೇಲಕ್ಕೆತ್ತಿರಿ.
14 ಆಗ ಚೀಯೋನೆಂಬ ನಗರ ದ್ವಾರಗಳಲ್ಲಿ
ನಿಮ್ಮ ಸ್ತುತಿಯನ್ನು ಸಾರುವೆನು.
ನಿಮ್ಮ ರಕ್ಷಣೆಯಲ್ಲಿ ಆನಂದಿಸುವೆನು.
 
15 ರಾಷ್ಟ್ರಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ;
ಅವರು ಅಡಗಿಸಿಟ್ಟ ಬಲೆಯಲ್ಲೇ ಅವರ ಕಾಲುಗಳು ಸಿಕ್ಕಿಕೊಂಡಿವೆ.
16 ಯೆಹೋವ ದೇವರು ತಮ್ಮ ನ್ಯಾಯಕೃತ್ಯಗಳಲ್ಲಿ ಪ್ರಸಿದ್ಧರಾಗಿದ್ದಾರೆ;
ದುಷ್ಟರು ತಮ್ಮ ಕೈಕೆಲಸದಲ್ಲಿ ಸಿಕ್ಕಿಕೊಂಡಿದ್ದಾರೆ.
17 ದುಷ್ಟರು ಪಾತಾಳಕ್ಕೆ ತಿರುಗುವರು,
ದೇವರನ್ನು ಮರೆಯುವ ರಾಷ್ಟ್ರಗಳ ಅಂತ್ಯವೂ ಹಾಗೇ ಇರುವುದು.
18 ಆದರೆ ದೇವರು ಬಡವರನ್ನು ಎಂದೆಂದಿಗೂ ಮರೆಯುವುದಿಲ್ಲ;
ಕುಗ್ಗಿದವರ ನಿರೀಕ್ಷೆ ಎಂದೆಂದಿಗೂ ನಾಶವಾಗುವುದಿಲ್ಲ.
 
19 ಯೆಹೋವ ದೇವರೇ ಎದ್ದೇಳಿರಿ, ಮನುಷ್ಯರು ನನ್ನ ಮೇಲೆ ವಿಜಯ ಸಾಧಿಸದಿರಲಿ;
ರಾಷ್ಟ್ರಗಳಿಗೆ ನಿಮ್ಮ ಮುಂದೆಯೇ ನ್ಯಾಯತೀರ್ಪಾಗಲಿ.
20 ಯೆಹೋವ ದೇವರೇ, ಅವರನ್ನು ಭಯದಲ್ಲಿರಿಸಿರಿ;
ರಾಷ್ಟ್ರಗಳು ತಾವು ಮನುಷ್ಯರೇ ಎಂದು ತಿಳಿದುಕೊಳ್ಳಲಿ.
* ಕೀರ್ತನೆ 9: 9:0 9 ಮತ್ತು 10 ನೇ ಕೀರ್ತನೆಗಳು ಮೂಲತಃ ಒಂದೇ ಕವಿತೆಯಾಗಿರಬಹುದು. ಇದರಲ್ಲಿ ಹೀಬ್ರೂ ವರ್ಣಮಾಲೆಯ ಅನುಕ್ರಮ ಅಕ್ಷರಗಳೊಂದಿಗೆ ಪರ್ಯಾಯ ರೇಖೆಗಳು ಪ್ರಾರಂಭವಾದವು.