ಕೀರ್ತನೆ 97
ಯೆಹೋವ ದೇವರು ಆಳಿಕೆ ಮಾಡುತ್ತಾರೆ; ಭೂಮಿಯು ಉಲ್ಲಾಸಪಡಲಿ;
ದ್ವೀಪಗಳ ಸಮೂಹವು ಸಂತೋಷಪಡಲಿ.
ಮೇಘಗಳೂ, ಕಾರ್ಗತ್ತಲೂ ಅವರ ಸುತ್ತಲು ಇವೆ;
ನೀತಿಯೂ, ನ್ಯಾಯವೂ ಅವರ ಸಿಂಹಾಸನದ ಅಸ್ತಿವಾರವಾಗಿದೆ.
ಬೆಂಕಿಯು ಅವರ ಮುಂದೆ ಹೋಗಿ
ಅವರ ವೈರಿಗಳನ್ನು ಸುತ್ತಲೂ ದಹಿಸುವುದು.
ಅವರ ಮಿಂಚುಗಳು ಲೋಕವನ್ನು ಬೆಳಗಿಸುತ್ತವೆ;
ಭೂಮಿಯು ಕಂಡು ನಡುಗುತ್ತದೆ.
ಯೆಹೋವ ದೇವರ ಸನ್ನಿಧಿಯಲ್ಲಿ ಬೆಟ್ಟಗಳು ಕರಗುತ್ತವೆ,
ಸಮಸ್ತ ಭೂಮಿಯು ಮೇಣದ ಹಾಗೆ ಕರಗುತ್ತವೆ.
ಆಕಾಶವು ಅವರ ನೀತಿಯನ್ನು ತಿಳಿಸುತ್ತದೆ;
ಎಲ್ಲಾ ಜನಗಳು ಅವರ ಮಹಿಮೆಯನ್ನು ಕಾಣುತ್ತಾರೆ.
 
ವಿಗ್ರಹಗಳನ್ನು ಪೂಜಿಸಿ,
ವಿಗ್ರಹಗಳಲ್ಲಿ ಹೆಮ್ಮೆ ಪಡುವವರೆಲ್ಲರು ನಾಚಿಕೆಪಡಲಿ;
ಎಲ್ಲಾ ದೇವರುಗಳೇ, ಯೆಹೋವ ದೇವರನ್ನು ಆರಾಧಿಸಿರಿ!
 
ಯೆಹೋವ ದೇವರೇ, ನಿಮ್ಮ ನ್ಯಾಯಗಳನ್ನು
ಚೀಯೋನ್ ಪಟ್ಟಣವು ಕೇಳಿ ಸಂತೋಷಿಸಿತು;
ಯೆಹೂದದ ಪುತ್ರಿಯರು* ಸಹ ಉಲ್ಲಾಸಿಸುತ್ತಾರೆ.
ಏಕೆಂದರೆ ಯೆಹೋವ ದೇವರೇ, ನೀವು ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ;
ಎಲ್ಲಾ ದೇವರುಗಳ ಮೇಲೆ ನೀವು ಅತ್ಯಂತ ಮಹೋನ್ನತರಾಗಿದ್ದೀರಿ.
10 ಯೆಹೋವ ದೇವರನ್ನು ಪ್ರೀತಿಸುವವರು ಕೆಟ್ಟದ್ದನ್ನು ಹಗೆ ಮಾಡುವರು;
ದೇವರು ತಮ್ಮ ಭಕ್ತರ ಪ್ರಾಣಗಳನ್ನು ಕಾಪಾಡಿ,
ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವರು.
11 ನೀತಿವಂತನಿಗೋಸ್ಕರ ಬೆಳಕೂ,
ಯಥಾರ್ಥ ಹೃದಯದವರಿಗೋಸ್ಕರ ಅವರ ಹೃದಯದಲ್ಲಿ ಆನಂದವೂ ಇರುವುದು.
12 ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ;
ದೇವರ ಪರಿಶುದ್ಧ ನಾಮವನ್ನು ಕೊಂಡಾಡಿರಿ.
* ಕೀರ್ತನೆ 97:8 97:8 ಯೆಹೂದದ ಪುತ್ರಿಯರು ಅಂದರೆ, ಚೀಯೋನಿನ ಸುತ್ತಲಿನ ಹಳ್ಳಿಗಳು