24
ಯೋವಾಷನು ದೇವಾಲಯವನ್ನು ದುರಸ್ತು ಮಾಡಿಸಿದ್ದು
ಯೋವಾಷ್ ಅರಸನಾದಾಗ ಏಳು ವರ್ಷದವನಾಗಿದ್ದನು. ಯೆರೂಸಲೇಮಿನಲ್ಲಿ ನಾಲ್ವತ್ತು ವರ್ಷ ಆಳಿದನು, ಅವನ ತಾಯಿ ಬೇರ್ಷೆಬ ಊರಿನವಳಾದ ಚಿಬ್ಯಳೆಂಬವಳು. ಯೋವಾಷನು ಯಾಜಕನಾದ ಯೆಹೋಯಾದನ ಸಮಸ್ತ ದಿವಸಗಳಲ್ಲಿ ಯೆಹೋವ ದೇವರ ಸಮ್ಮುಖದಲ್ಲಿ ಸರಿಯಾದದ್ದನ್ನು ಮಾಡಿದನು. ಯೆಹೋಯಾದಾವನು ಯೋವಾಷನಿಗೆ ಇಬ್ಬರು ಮಹಿಳೆಯರನ್ನು ಮದುವೆಮಾಡಿಕೊಟ್ಟನು. ಅವನು ಪುತ್ರಪುತ್ರಿಯರನ್ನು ಪಡೆದನು.
ಕ್ರಮೇಣ ಯೋವಾಷನು ಯೆಹೋವ ದೇವರ ಆಲಯವನ್ನು ದುರಸ್ತು ಮಾಡುವ ಮನಸ್ಸುಳ್ಳವನಾದನು. ಆದ್ದರಿಂದ ಅವನು ಯಾಜಕರನ್ನೂ, ಲೇವಿಯರನ್ನೂ ಕೂಡಿಸಿಕೊಂಡು ಅವರಿಗೆ, “ನೀವು ಯೆಹೂದ ಪಟ್ಟಣಗಳಿಗೆ ಹೊರಟುಹೋಗಿ ವರ್ಷ ವರ್ಷಕ್ಕೆ ನಿಮ್ಮ ದೇವರ ಆಲಯವನ್ನು ದುರಸ್ತು ಮಾಡುವುದಕ್ಕೆ ಸಮಸ್ತ ಇಸ್ರಾಯೇಲರಿಂದ ಹಣವನ್ನು ಕೂಡಿಸಿರಿ ಮತ್ತು ಕೆಲಸವನ್ನು ಶೀಘ್ರವಾಗಿ ನಡೆಸಿರಿ,” ಎಂದನು. ಆದರೂ ಲೇವಿಯರು ಅವಸರ ಮಾಡದೆ ಇದ್ದರು.
ಅರಸನು ಮುಖ್ಯಯಾಜಕನಾದ ಯೆಹೋಯಾದಾವನನ್ನು ಕರೆಕಳುಹಿಸಿ ಅವನಿಗೆ, “ಯೆಹೋವ ದೇವರ ಸೇವಕನಾದ ಮೋಶೆಯೂ, ಇಸ್ರಾಯೇಲಿನ ಸಭೆಯೂ ದೇವದರ್ಶನ ಗುಡಾರದ ನಿಮಿತ್ತ ಆಜ್ಞಾಪಿಸಿದ ಕಾಣಿಕೆಯನ್ನು ಯೆಹೂದದಿಂದಲೂ, ಯೆರೂಸಲೇಮಿನಿಂದಲೂ ಬರುವಂತೆ ಮಾಡಲು ನೀನು ಲೇವಿಯರನ್ನು ಏಕೆ ವಿಚಾರಿಸಲಿಲ್ಲ?” ಎಂದನು.
ಆ ದುಷ್ಟ ಸ್ತ್ರೀಯಾದ ಅತಲ್ಯಳ ಪುತ್ರರು ಯೆಹೋವ ದೇವರ ಆಲಯವನ್ನು ಒಡೆದುಬಿಟ್ಟು, ಯೆಹೋವ ದೇವರ ಆಲಯಕ್ಕೆ ಪ್ರತಿಷ್ಠೆ ಮಾಡಿದವುಗಳನ್ನೆಲ್ಲಾ ಬಾಳನಿಗೆ ಕೊಟ್ಟುಬಿಟ್ಟಿದ್ದರು.
ಅರಸನು ಹೇಳಿದ್ದರಿಂದ ಅವರು ಒಂದು ಪೆಟ್ಟಿಗೆಯನ್ನು ಮಾಡಿ, ಯೆಹೋವ ದೇವರ ಆಲಯದ ಬಾಗಿಲಿನ ಹೊರಗೆ ಇಟ್ಟರು. ದೇವರ ಸೇವಕನಾದ ಮೋಶೆಯು ಮರುಭೂಮಿಯಲ್ಲಿ ಇಸ್ರಾಯೇಲರಿಗೆ ಆಜ್ಞಾಪಿಸಿದ ತೆರಿಗೆಯನ್ನು ಯೆಹೋವ ದೇವರಿಗೆ ತರಬೇಕೆಂದು ಯೆಹೂದದಲ್ಲಿಯೂ, ಯೆರೂಸಲೇಮಿನಲ್ಲಿಯೂ ಪ್ರಕಟಮಾಡಿದರು. 10 ಆಗ ಪ್ರಧಾನರೆಲ್ಲರೂ ಸಂತೋಷಪಟ್ಟು, ತೆರಿಗೆಯನ್ನು ತೆಗೆದುಕೊಂಡು ಬಂದು, ತುಂಬುವವರೆಗೆ ಪೆಟ್ಟಿಗೆಯೊಳಗೆ ಹಾಕಿದರು. 11 ಪೆಟ್ಟಿಗೆಯು ಲೇವಿಯರ ಕೈಯಿಂದ ಅರಸನ ಕಛೇರಿಗೆ ತಂದಾಗಲೆಲ್ಲಾ ಅದರಲ್ಲಿ ಬಹಳ ಹಣ ಕಾಣಿಸಿದ್ದರಿಂದ, ಅರಸನ ಕಾರ್ಯದರ್ಶಿಯೂ, ಮುಖ್ಯಯಾಜಕನ ಪರಿಚಾರಕನೂ ಬಂದು ಪೆಟ್ಟಿಗೆಯನ್ನು ಬರಿದುಮಾಡಿ, ತೆಗೆದುಕೊಂಡು ತಿರುಗಿ ಅದರ ಸ್ಥಳಕ್ಕೆ ಒಯ್ದಿಟ್ಟರು. ಹೀಗೆಯೇ ಅವರು ಪ್ರತಿದಿನ ಮಾಡಿ ಹಣವನ್ನು ಬಹಳ ಕೂಡಿಸಿದರು. 12 ಆಗ ಅರಸನೂ, ಯೆಹೋಯಾದಾವನೂ ಅದನ್ನು ಯೆಹೋವ ದೇವರ ಆಲಯದ ಸೇವೆಯ ಕಾರ್ಯವನ್ನು ಮಾಡುವವರಿಗೆ ಕೊಟ್ಟು ಅವರಿಂದ ಕೆಲಸ ಮಾಡಿಸಿದರು. ಯೆಹೋವ ದೇವರ ಆಲಯವನ್ನು ದುರಸ್ತಿಪಡಿಸುವ ನಿಮಿತ್ತ ಕಲ್ಲು ಕಡಿಯುವವರನ್ನೂ, ಬಡಗಿಯವರನ್ನೂ ಕೂಲಿಗೆ ಕರೆದುಕೊಂಡರು. ಯೆಹೋವ ದೇವರ ಆಲಯವನ್ನು ಭದ್ರ ಮಾಡುವ ನಿಮಿತ್ತ ಕಬ್ಬಿಣ, ಕಂಚಿನ ಕೆಲಸ ಮಾಡುವವರನ್ನು ಕೂಲಿಗೆ ಕರೆದುಕೊಂಡರು.
13 ಹೀಗೆ ಕೆಲಸದವರು ಕೆಲಸವನ್ನು ನಡೆಸಿದ್ದರಿಂದ, ಕೆಲಸವು ಅವರ ಕೈಯಿಂದ ಪೂರ್ಣವಾಯಿತು. ಅವರು ಯೆಹೋವ ದೇವರ ಆಲಯವನ್ನು ಮೊದಲಿದ್ದ ಸ್ಥಿತಿಗೆ ಅದನ್ನು ತಂದು ಭದ್ರಪಡಿಸಿದರು. 14 ಕೆಲಸ ಮುಗಿಸಿದ ಮೇಲೆ, ಮಿಕ್ಕ ಅರಸನ ಮುಂದೆಯೂ ಯೆಹೋಯಾದಾವನ ಮುಂದೆಯೂ ತಂದರು. ಅದರಿಂದ ಯೆಹೋವ ದೇವರ ಆಲಯಕ್ಕೋಸ್ಕರ ಬಂಗಾರ ಬೆಳ್ಳಿ ಪಾತ್ರೆಗಳಾದ ಸೇವೆಯ ಪಾತ್ರೆಗಳು, ಅರ್ಪಣೆಯ ಪಾತ್ರೆಗಳು, ಸೌಟುಗಳು ಮಾಡಲಾಗಿದ್ದವು. ಯೆಹೋಯಾದಾವನ ಸಮಸ್ತ ದಿವಸಗಳಲ್ಲಿ ಯಾವಾಗಲೂ ಯೆಹೋವ ದೇವರ ಆಲಯದಲ್ಲಿ ದಹನಬಲಿಗಳನ್ನು ಅರ್ಪಿಸಿದರು.
15 ಯೆಹೋಯಾದಾವನು ವೃದ್ಧನಾಗಿ ಮರಣಹೊಂದಿದನು. ಅವನು ಸಾಯುವಾಗ ನೂರಾಮೂವತ್ತು ವರ್ಷಗಳುಳ್ಳವನಾಗಿದ್ದನು. 16 ಅವನು ದೇವರಿಗೋಸ್ಕರವಾಗಿಯೂ, ಆತನ ಆಲಯಕ್ಕೋಸ್ಕರವಾಗಿಯೂ ಇಸ್ರಾಯೇಲಿನಲ್ಲಿ ಒಳ್ಳೆಯದನ್ನು ಮಾಡಿದ್ದರಿಂದ, ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಅರಸರ ಬಳಿಯಲ್ಲಿ ಹೂಳಿಟ್ಟರು.
ಯೋವಾಷನ ದುಷ್ಟತನ
17 ಯೆಹೋಯಾದಾವನ ಮರಣದ ತರುವಾಯ ಯೆಹೂದದ ಪ್ರಧಾನರು ಬಂದು ಅರಸನಿಗೆ ಅಡ್ಡಬಿದ್ದರು. ಆಗ ಅರಸನು ಅವರ ಮಾತನ್ನು ಕೇಳಿದನು. 18 ಅವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರ ಆಲಯವನ್ನು ಬಿಟ್ಟು, ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ ಸೇವಿಸಿದರು. ಆದಕಾರಣ ಅವರ ಈ ಅಪರಾಧದ ನಿಮಿತ್ತ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ದೇವರ ಕೋಪಾಗ್ನಿಯು ಬಂತು. 19 ಆದರೂ ಯೆಹೋವ ದೇವರು ತನ್ನ ಕಡೆಗೆ ಅವರನ್ನು ತಿರುಗಿಸುವುದಕ್ಕೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು. ಇವರು ಅವರಿಗೆ ಸಾಕ್ಷಿಗಾಗಿ ಮಾತನಾಡಿದರು. ಆದರೂ ಅವರು ಕಿವಿಗೊಡದೆ ಹೋದರು.
20 ಆಗ ದೇವರ ಆತ್ಮ ಯಾಜಕ ಯೆಹೋಯಾದಾವನ ಮಗನಾದ ಜೆಕರ್ಯನ ಮೇಲೆ ಬಂದು, ಅವನು ಜನರ ಮುಂದೆ ನಿಂತು ಅವರಿಗೆ, “ನೀವು ವೃದ್ಧಿ ಹೊಂದಕೂಡದ ಹಾಗೆ ಯೆಹೋವ ದೇವರ ಆಜ್ಞೆಗಳನ್ನು ಮೀರುವುದೇನು? ನಿಮಗೆ ಶುಭವಾಗುವುದಿಲ್ಲ. ನೀವು ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ, ದೇವರು ಸಹ ನಿಮ್ಮನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
21 ಆದ್ದರಿಂದ ಅವರು ಅವನಿಗೆ ವಿರೋಧವಾಗಿ ಒಳಸಂಚುಮಾಡಿ, ಯೆಹೋವ ದೇವರ ಆಲಯದ ಅಂಗಳದಲ್ಲಿ ಅರಸನ ಅಪ್ಪಣೆಯಂತೆ ಅವನನ್ನು ಕಲ್ಲೆಸೆದು ಕೊಂದರು. 22 ಹಾಗೆಯೇ ಅರಸನಾದ ಯೋವಾಷನು, ಇವನ ತಂದೆಯಾದ ಯೆಹೋಯಾದಾವನು ತನಗೆ ತೋರಿಸಿದ ದಯೆಯನ್ನು ಜ್ಞಾಪಕಮಾಡದೆ ಅವನ ಮಗನನ್ನು ಕೊಂದುಹಾಕಿದನು. ಜೆಕರ್ಯನು ಸಾಯುವಾಗ, “ಯೆಹೋವ ದೇವರು ನೋಡಿ ವಿಚಾರಿಸಲಿ,” ಎಂದು ಹೇಳಿದನು.
23 ವರ್ಷಾಂತ್ಯದಲ್ಲಿ ಅರಾಮಿನ ಸೈನ್ಯದವರು ಅವನಿಗೆ ವಿರೋಧವಾಗಿ ಹೊರಟು, ಯೆಹೂದ ಮತ್ತು ಯೆರೂಸಲೇಮಿಗೆ ಬಂದು, ಜನರ ಪ್ರಧಾನರನ್ನು ಅವರೊಳಗಿಂದ ನಾಶಮಾಡಿ, ಅವರಿಂದ ತೆಗೆದುಕೊಂಡ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು. 24 ಅವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ ಅರಾಮ್ಯರು ಚಿಕ್ಕ ಗುಂಪಿನ ಸೈನ್ಯದ ಸಂಗಡ ಬಂದಿದ್ದರೂ, ಯೆಹೋವ ದೇವರು ಅವರ ಮಹಾ ಸೈನ್ಯವನ್ನು ಶತ್ರುಗಳ ಕೈಯಲ್ಲಿ ಒಪ್ಪಿಸಿದನು. ಹೀಗೆಯೇ ಯೆಹೋವ ದೇವರು ಯೋವಾಷನಿಗೆ ವಿರೋಧವಾಗಿ ತೀರ್ಪು ಮಾಡಿದರು. 25 ಯೋವಾಷನು ತೀವ್ರ ಗಾಯಗೊಂಡು ಬಿದ್ದಿರುವಾಗ, ಅರಾಮೀಯರು ಅವನನ್ನು ಬಿಟ್ಟುಹೋದರು. ಅವರು ಹೋದ ತರುವಾಯ ಯಾಜಕನಾದ ಯೆಹೋಯಾದಾವನ ಮಕ್ಕಳ ರಕ್ತಾಪರಾಧದ ನಿಮಿತ್ತವಾಗಿ ಯೋವಾಷನ ಸ್ವಂತ ಸೇವಕರೇ ಅವನಿಗೆ ವಿರೋಧವಾಗಿ ಒಳಸಂಚುಮಾಡಿ, ಅವನ ಮಂಚದ ಮೇಲೆಯೇ ಅವನನ್ನು ಕೊಂದುಹಾಕಿದರು. ಅವರು ಯೋವಾಷನನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಆದರೆ ಅರಸರ ಸಮಾಧಿಯಲ್ಲಿ ಅವನನ್ನು ಸಮಾಧಿಮಾಡಲಿಲ್ಲ.
26 ಯೋವಾಷನಿಗೆ ವಿರೋಧವಾಗಿ ಒಳಸಂಚು ಮಾಡಿದವರು ಯಾರೆಂದರೆ, ಅಮ್ಮೋನ್ ದೇಶದ ಶಿಮೆಯಾತ್ ಎಂಬಾಕೆಯ ಮಗ ಜಾಬಾದ್*; ಮೋವಾಬ್ ದೇಶದ ಶಿಮ್ರೀತ್ ಎಂಬಾಕೆಯ ಮಗ ಯೆಹೋಜಾಬಾದನು. 27 ಆದರೆ ಅವನ ಪುತ್ರನನ್ನು ಕುರಿತೂ, ಅವನ ವಿರುದ್ಧ ನುಡಿದ ಪ್ರವಾದನೆಯ ಕುರಿತೂ, ದೇವರ ಆಲಯ ದುರಸ್ತು ಮಾಡುವುದನ್ನು ಕುರಿತೂ, ಅರಸರ ಚರಿತ್ರೆಯ ಪುಸ್ತಕದಲ್ಲಿ ಬರೆದಿರುತ್ತವೆ. ಅವನ ಮಗ ಅಮಚ್ಯನು ಅವನಿಗೆ ಬದಲಾಗಿ ಅರಸನಾದನು.
* 24:26 24:26 ಜಾಬಾದನು ಅಥವಾ ಯೋಜಾಬಾದ್