2
ದೇವರ ನೀತಿಯ ತೀರ್ಪು
ಆದ್ದರಿಂದ, ಯಾವ ಕಾರಣಕ್ಕಾಗಿ ನೀನು ಇತರರಿಗೆ ತೀರ್ಪು ಮಾಡುತ್ತಿರುವೆಯೋ ಅದನ್ನೇ ನೀನೂ ಮಾಡುತ್ತಿರುವುದರಿಂದ ನಿನ್ನನ್ನು ನೀನೇ ತೀರ್ಪು ಮಾಡಿಕೊಂಡ ಹಾಗಾಯಿತು. ಇತರರ ಮೇಲೆ ತೀರ್ಪುಮಾಡುವ ನಿನಗೆ ಹೇಳುವುದಕ್ಕೆ ನೆಪವಿಲ್ಲ. ಆದರೆ ಅಂಥಾ ಅಪರಾಧಗಳನ್ನು ಮಾಡುವವರ ವಿಷಯದಲ್ಲಿ ದೇವರು ಮಾಡುವ ತೀರ್ಪು ಸತ್ಯಕ್ಕನುಸಾರವಾಗಿಯೇ ಇರುವುದೆಂದು ನಾವು ಬಲ್ಲೆವು. ಮನುಷ್ಯನೇ, ಅಂಥವುಗಳನ್ನು ನಡೆಸುವವರ ಮೇಲೆ ತೀರ್ಪುಮಾಡುತ್ತಿರುವ ನೀನು ದೇವರ ತೀರ್ಪಿನಿಂದ ತಪ್ಪಿಸಿಕೊಂಡೇನೆಂದು ನೆನಸುತ್ತೀಯೋ? ದೇವರ ದಯೆ, ಐಶ್ವರ್ಯ, ಸಹನೆ ಮತ್ತು ದೀರ್ಘಶಾಂತಿ ಇವುಗಳನ್ನು ತಾತ್ಸಾರ ಮಾಡುತ್ತೀಯೋ? ದೇವರ ಒಳ್ಳೆಯತನವು ನಿನ್ನನ್ನು ಪಶ್ಚಾತ್ತಾಪಕ್ಕೆ ನಡೆಸುತ್ತದೆಂಬುದು ನಿನಗೆ ತಿಳಿಯದೋ?
ನೀನು ನಿನ್ನ ಕಠಿಣವಾದ ಮತ್ತು ಪಶ್ಚಾತ್ತಾಪ ಪಡದ ಹೃದಯದಿಂದ, ನಿನಗೋಸ್ಕರ ದೇವರ ನೀತಿಯುಳ್ಳ ತೀರ್ಪು ಪ್ರಕಟವಾಗುವ ಕೋಪದ ದಿನಕ್ಕಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಿದ್ದಿ. ದೇವರು, “ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲ ಕೊಡುವರು.”* ಯಾರು ಮಹಿಮೆ, ಮಾನ, ಅಮರತ್ವ ಸತ್ಕ್ರಿಯೆಗಳನ್ನು ಸಹನೆಯಿಂದ ಮಾಡುತ್ತಾರೋ ಅವರಿಗೆ ದೇವರು ನಿತ್ಯಜೀವವನ್ನು ಕೊಡುವರು. ಯಾರು ಸ್ವಾರ್ಥಿಗಳಾಗಿದ್ದು ಸತ್ಯವನ್ನು ಅನುಸರಿಸದೆ ಅನೀತಿಯನ್ನು ಅನುಸರಿಸುತ್ತಾರೋ ಅವರ ವಿರುದ್ಧ ದೇವರಿಗೆ ಕೋಪವೂ ಆಕ್ರೋಶವೂ ಬರುತ್ತವೆ. ಕೆಟ್ಟದ್ದನ್ನು ನಡೆಸುವ ಪ್ರತಿ ಮನುಷ್ಯನಿಗೆ ಕಷ್ಟವೂ ಸಂಕಟವೂ ಬರುತ್ತವೆ, ಯೆಹೂದ್ಯರಿಗೆ ಮೊದಲು, ಅನಂತರ ಯೆಹೂದ್ಯರಲ್ಲದವರಿಗೂ ಸಹ. 10 ಆದರೆ ಒಳ್ಳೆಯದನ್ನು ನಡೆಸುವ ಪ್ರತಿಯೊಬ್ಬನಿಗೆ ಮಹಿಮೆಯೂ ಗೌರವವೂ ಸಮಾಧಾನವೂ ಉಂಟಾಗುತ್ತವೆ. ಯೆಹೂದ್ಯರಿಗೆ ಮೊದಲು, ಅನಂತರ ಯೆಹೂದ್ಯರಲ್ಲದವರಿಗೂ ಸಹ. 11 ದೇವರಲ್ಲಿ ಪಕ್ಷಪಾತವಿಲ್ಲ.
12 ನಿಯಮವಿಲ್ಲದವರಾಗಿ ಪಾಪಮಾಡಿದವರು ನಿಯಮವಿಲ್ಲದೆಯೇ ನಾಶಹೊಂದುವರು. ನಿಯಮಕ್ಕೆ ಅಧೀನರಾಗಿದ್ದು ಪಾಪಮಾಡಿದವರು ನಿಯಮದ ಮೂಲಕವಾಗಿ ತೀರ್ಪನ್ನು ಹೊಂದುವರು. 13 ಯಾರೂ ನಿಯಮವನ್ನು ಕೇಳಿದ ಮಾತ್ರಕ್ಕೆ ದೇವರ ಮುಂದೆ ನೀತಿವಂತರಾಗುವುದಿಲ್ಲ. ಆದರೆ ನಿಯಮಕ್ಕೆ ವಿಧೇಯರಾಗುವವರೇ ನೀತಿವಂತರಾಗುವರು. 14 ನಿಯಮವಿಲ್ಲದ ಯೆಹೂದ್ಯರಲ್ಲದವರು ಸ್ವಾಭಾವಿಕವಾಗಿ ನಿಯಮದಲ್ಲಿ ಹೇಳಿದಂತೆ ನಡೆಯುವಾಗ ಅವರಿಗೆ ನಿಯಮವಿಲ್ಲದಿದ್ದರೂ ಅವರ ಅಂತರಂಗವೇ ನಿಯಮವಾಗಿದೆ. 15 ಅವರು ತಮ್ಮ ನಡತೆಯಿಂದಲೇ ನಿಯಮವು ತಮ್ಮ ಹೃದಯದಲ್ಲಿ ಬರೆದಿದೆ ಎಂಬುದನ್ನು ತೋರಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಾಕ್ಷಿಕೊಡುತ್ತದೆ. ಅವರ ಯೋಚನೆಗಳು ಒಂದಕ್ಕೊಂದು ಇದು ತಪ್ಪು ಅಥವಾ ತಪ್ಪಲ್ಲ ಎಂಬುದನ್ನು ಸೂಚಿಸುತ್ತವೆ. 16 ನಾನು ಸಾರುವ ಸುವಾರ್ತೆಯ ಪ್ರಕಾರ ದೇವರು ಕ್ರಿಸ್ತ ಯೇಸುವಿನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ವಿಚಾರಿಸುವ ದಿನದಲ್ಲಿ ಇವೆಲ್ಲಾ ಸಂಭವಿಸುವುದು.
ಯೆಹೂದ್ಯರು ಮತ್ತು ಮೋಶೆಯ ನಿಯಮ
17 ಆದರೆ, ನೀನು ಯೆಹೂದ್ಯನೆನಿಸಿಕೊಂಡವನೂ ನಿಯಮದಲ್ಲಿ ಭರವಸೆಯಿಟ್ಟವನೂ ದೇವರಿಗೆ ಸೇರಿದವನೂ 18 ದೇವರ ಚಿತ್ತವನ್ನು ಬಲ್ಲವನೂ ನಿಯಮದಿಂದ ಉಪದೇಶವನ್ನು ಹೊಂದಿ ಯಾವುದು ಉತ್ತಮವಾದದ್ದೆಂದು ಅನುಮೋದಿಸುವವನೂ ಆಗಿದ್ದೀ. 19 ನಿನಗೆ ನಿಯಮದ ಜ್ಞಾನ ಮತ್ತು ಸತ್ಯವು ಇರುವುದರಿಂದ ನೀನು ಕುರುಡರಿಗೆ ಮಾರ್ಗದರ್ಶಿಯೂ ಕತ್ತಲೆಯಲ್ಲಿರುವವರಿಗೆ ಬೆಳಕೂ 20 ತಿಳುವಳಿಕೆಯಿಲ್ಲದವರಿಗೆ ಶಿಕ್ಷಕನೂ ಬಾಲಕರಿಗೆ ಉಪಾಧ್ಯಾಯನೂ ಆಗಿದ್ದೀಯೆಂದು ಧೈರ್ಯವಾಗಿದ್ದೀಯಲ್ಲಾ? 21 ಇತರರಿಗೆ ಉಪದೇಶಿಸುವ ನೀನು, ನಿನಗೆ ನೀನೇ ಉಪದೇಶ ಮಾಡಿಕೋ. ಕದಿಯಬಾರದೆಂದು ಸಾರುವ ನೀನು ಕದಿಯುತ್ತೀಯೋ? 22 ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳಲ್ಲಿ ಅಸಹ್ಯಪಡುವ ನೀನು ದೇವಾಲಯಗಳನ್ನು ದೋಚುತ್ತೀಯೋ? 23 ನಿಯಮದ ಬಗ್ಗೆ ಹೆಚ್ಚಳ ಪಡುವ ನೀನು ನಿಯಮವನ್ನು ಮೀರಿ ನಡೆದು ದೇವರನ್ನು ಅವಮಾನ ಪಡಿಸುತ್ತೀಯೋ? 24 ಪವಿತ್ರ ವೇದದಲ್ಲಿ ಬರೆದಿರುವಂತೆ, “ನಿಮ್ಮ ದೆಸೆಯಿಂದ ಯೆಹೂದ್ಯರಲ್ಲದವರಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತಿದೆ.”
25 ನೀನು ನಿಯಮವನ್ನು ಕೈಕೊಳ್ಳುವವನಾದರೆ, ಸುನ್ನತಿ ಪ್ರಯೋಜನಕರವಾಗಿರುವುದು. ಆದರೆ ನೀನು ನಿಯಮವನ್ನು ಮೀರಿ ನಡೆಯುವವನಾದರೆ, ನಿನಗೆ ಸುನ್ನತಿಯಾಗಿದ್ದರೂ ಇಲ್ಲದಂತಾಗಿರುವುದು. 26 ಸುನ್ನತಿಯಿಲ್ಲದವನು ನಿಯಮಗಳನ್ನು ಕೈಗೊಳ್ಳುವವರೆಗೆ ಸುನ್ನತಿಯಿಲ್ಲದವನಾಗಿದ್ದರೂ ಸುನ್ನತಿಯಿದ್ದವನಂತೆ ಎಣಿಸುವುದಿಲ್ಲವೇ? 27 ಅವನು ಶಾರೀರಿಕವಾಗಿ ಸುನ್ನತಿಯಿಲ್ಲದವನಾಗಿದ್ದರೂ ನಿಯಮವನ್ನು ಅನುಸರಿಸುವುದರಿಂದ ಲಿಖಿತ ನಿಯಮವೂ ಸುನ್ನತಿಯೂ ಇದ್ದು ನಿಯಮವನ್ನು ಮೀರಿ ನಡೆಯುವ ನಿನ್ನನ್ನು ದೋಷಿಯೆಂದು ತೀರ್ಪು ಮಾಡುವನಲ್ಲವೇ?
28 ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ. ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ. 29 ಆದರೆ, ಆಂತರ್ಯದಲ್ಲಿ ಯೆಹೂದ್ಯನಾಗಿರುವವನೇ ಯೆಹೂದ್ಯನು. ಹಾಗೆಯೇ ಸುನ್ನತಿಯು ಆತ್ಮನಿಂದ ಹೃದಯದಲ್ಲಿ ಆಗುವಂಥದ್ದಾಗಿದೆ. ಇದು ಲಿಖಿತ ನಿಯಮದಿಂದ ಆಗುವಂಥದಲ್ಲ. ಅಂಥವನಿಗೆ ಮೆಚ್ಚುಗೆಯು ಮನುಷ್ಯರಿಂದ ಬರುವಂಥದಲ್ಲ, ದೇವರಿಂದಲೇ ಬರುವಂಥದ್ದಾಗಿದೆ.
* 2:6 2:6 ಕೀರ್ತನೆ 62:12; ಜ್ಞಾನೋಕ್ತಿ 24:12 2:24 2:24 ಯೆಶಾಯ 52:5; ಯೆಹೆ 36:20,22