8
ಪವಿತ್ರಾತ್ಮರ ಮೂಲಕ ಜೀವನ
ಆದ್ದರಿಂದ, ಈಗ ಕ್ರಿಸ್ತ ಯೇಸುವಿನಲ್ಲಿ ಇರುವವರಿಗೆ ದಂಡನಾತೀರ್ಪು ಇರುವುದಿಲ್ಲ. ಏಕೆಂದರೆ ಕ್ರಿಸ್ತ ಯೇಸುವಿನ ಮೂಲಕ ಪವಿತ್ರಾತ್ಮರ ಜೀವದ ನಿಯಮವು ನಿನ್ನನ್ನು* ಪಾಪದ ನಿಯಮದಿಂದಲೂ ಮರಣದ ನಿಯಮದಿಂದಲೂ ಬಿಡುಗಡೆ ಮಾಡಿದೆ. ನಿಯಮವು ನಮ್ಮ ಮಾಂಸಭಾವದ ಬಲಹೀನತೆಯಿಂದ ಯಾವುದನ್ನು ಮಾಡಲಿಕ್ಕೆ ಸಾಧ್ಯವಾಗದೆ ಹೋಯಿತೋ ಅದನ್ನು ದೇವರೇ ಮಾಡಿದರು. ಪಾಪ ಪರಿಹಾರಕ್ಕಾಗಿ ದೇವರು ತಮ್ಮ ಸ್ವಂತ ಪುತ್ರನನ್ನು ಪಾಪಮಯವಾದ ನರಮಾಂಸದ ರೂಪದಲ್ಲಿ ಕಳುಹಿಸಿಕೊಟ್ಟರು. ಆ ನರಮಾಂಸದಲ್ಲಿಯೇ ಪಾಪಕ್ಕೆ ದಂಡನಾತೀರ್ಪು ಮಾಡಿ ಸಾಧ್ಯಗೊಳಿಸಿದರು. ಹೀಗೆ ನಾವು ಮಾಂಸಭಾವದವರಾಗಿ ಬಾಳದೆ ಪವಿತ್ರಾತ್ಮರಿಗನುಸಾರವಾಗಿ ಬಾಳುವ ನಮ್ಮಲ್ಲಿ ನಿಯಮದ ಅಗತ್ಯವು ನೆರವೇರುವುದಕ್ಕೆ ಆಸ್ಪದವಾಯಿತು.
ಮಾಂಸಭಾವದವರಾಗಿ ಬಾಳುವವರ ಮನಸ್ಸು ಅದಕ್ಕೆ ಸಂಬಂಧಪಟ್ಟವುಗಳ ಮೇಲಿರುತ್ತದೆ. ಆದರೆ ಪವಿತ್ರಾತ್ಮ ದೇವರಿಗೆ ಅನುಸಾರವಾಗಿ ಬಾಳುವವರ ಮನಸ್ಸು ಪವಿತ್ರಾತ್ಮ ದೇವರಿಗೆ ಸಂಬಂಧಪಟ್ಟವುಗಳ ಮೇಲಿರುತ್ತದೆ. ಮಾಂಸಭಾವದ ಮನಸ್ಸು ಮರಣಕರವಾದದ್ದು, ಪವಿತ್ರಾತ್ಮ ದೇವರ ಮೇಲೆ ಮನಸ್ಸಿಡುವುದು ಜೀವವೂ ಸಮಾಧಾನವೂ ಆಗಿರುತ್ತದೆ. ಮಾಂಸಭಾವದ ಮನಸ್ಸು ದೇವರಿಗೆ ಶತ್ರುವಾಗಿರುತ್ತದೆ. ಏಕೆಂದರೆ, ಅದು ದೇವರ ನಿಯಮಕ್ಕೆ ಒಳಪಡುವುದೂ ಇಲ್ಲ, ಒಳಪಡುವುದಕ್ಕಾಗುವುದೂ ಇಲ್ಲ. ಮಾಂಸಭಾವಕ್ಕೆ ಒಳಗಾದವರು ದೇವರನ್ನು ಮೆಚ್ಚಿಸಲಾರರು.
ಆದರೆ ದೇವರ ಆತ್ಮವು ನಿಮ್ಮಲ್ಲಿ ಇರುವುದು ನಿಜವಾಗಿದ್ದರೆ ನೀವು ಮಾಂಸಭಾವಾಧೀನರಾಗಿರದೆ ದೇವರ ಆತ್ಮನಿಗೆ ಅಧೀನರಾಗಿದ್ದೀರಿ. ಕ್ರಿಸ್ತ ಯೇಸುವಿನ ಆತ್ಮ ಇಲ್ಲದವನು ಕ್ರಿಸ್ತ ಯೇಸುವಿಗೆ ಸೇರಿದವನಲ್ಲ. 10 ಆದರೆ ಕ್ರಿಸ್ತ ಯೇಸು ನಿಮ್ಮಲ್ಲಿ ಇರುವುದಾದರೆ, ನಿಮ್ಮ ಶರೀರವು ಪಾಪದ ನಿಮಿತ್ತ ಸತ್ತಿದ್ದರೂ ನಿಮ್ಮ ಆತ್ಮವು ನೀತಿಯ ನಿಮಿತ್ತ ಜೀವಿಸುತ್ತದೆ. 11 ಯೇಸುವನ್ನು ಮರಣದಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮವು ನಿಮ್ಮಲ್ಲಿ ವಾಸಮಾಡುತ್ತಿರುವುದಾದರೆ, ಕ್ರಿಸ್ತ ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ವಾಸಿಸುವ ಪವಿತ್ರಾತ್ಮ ದೇವರ ಮೂಲಕವೇ ನಿಮ್ಮ ಸಾಯುತ್ತಿರುವ ದೇಹಗಳಿಗೂ ಜೀವವನ್ನು ಕೊಡುವರು.
12 ಆದ್ದರಿಂದ, ಪ್ರಿಯರೇ, ನಾವು ಮಾಂಸಭಾವದ ಹಂಗಿನಲ್ಲಿಲ್ಲ. ಅದರ ಆಶಾಪಾಶಗಳಿಗೆ ಅನುಗುಣವಾಗಿ ಬದುಕಲು ಋಣಸ್ಥರಲ್ಲ. 13 ಏಕೆಂದರೆ, ನೀವು ಮಾಂಸಭಾವಕ್ಕೆ ಅನುಸಾರವಾಗಿ ಜೀವಿಸಿದರೆ, ಸಾಯುವಿರಿ. ಆದರೆ ಪವಿತ್ರಾತ್ಮ ದೇವರಿಂದ ದೈಹಿಕ ದುರಭ್ಯಾಸಗಳನ್ನು ಸಾಯಿಸಿದರೆ, ನೀವು ಬದುಕುವಿರಿ.
14 ಯಾರು ದೇವರ ಆತ್ಮರಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಪುತ್ರರಾಗಿರುತ್ತಾರೆ. 15 ನಿಮ್ಮನ್ನು ಪುನಃ ಭಯಕ್ಕೆ ದಾಸರನ್ನಾಗಿ ಮಾಡುವ ಆತ್ಮನನ್ನು ನಾವು ಹೊಂದದೆ, ಪುತ್ರತ್ವದ ಪವಿತ್ರಾತ್ಮನನ್ನೇ ಹೊಂದಿದವರಾಗಿ ದೇವರನ್ನು, “ಅಪ್ಪಾ, ತಂದೆಯೇ,” ಎಂದು ಕರೆಯುತ್ತೇವೆ. 16 ನಾವು ದೇವರ ಮಕ್ಕಳಾಗಿದ್ದೇವೆ ಎಂಬುದಕ್ಕೆ ದೇವರ ಆತ್ಮರು ನಮ್ಮ ಆತ್ಮದೊಂದಿಗೆ ಸಾಕ್ಷಿಕೊಡುತ್ತಾರೆ. 17 ನಾವು ಈಗ ಮಕ್ಕಳಾಗಿರುವುದಾದರೆ, ಬಾಧ್ಯರಾಗಿರುತ್ತೇವೆ; ದೇವರಿಗೆ ಬಾಧ್ಯರು ಮತ್ತು ಕ್ರಿಸ್ತ ಯೇಸುವಿನೊಂದಿಗೆ ಸಹಬಾಧ್ಯರಾಗಿದ್ದೇವೆ. ನಾವು ಕ್ರಿಸ್ತ ಯೇಸುವಿನ ಶ್ರಮೆಗಳಲ್ಲಿ ನಿಜವಾಗಿಯೂ ಪಾಲುಗಾರರಾಗಿದ್ದರೆ, ಅವರ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.
ಮುಂದಣ ಮಹಿಮೆ
18 ನಮಗೆ ಮುಂದೆ ಪ್ರಕಟವಾಗಲಿರುವ ಮಹಿಮೆಯೊಂದಿಗೆ ಹೋಲಿಸುವಾಗ ಈಗಿನ ಸಂಕಟಗಳು ಅಲ್ಪವೆಂದು ನಾನು ಎಣಿಸುತ್ತೇನೆ. 19 ದೇವರ ಮಕ್ಕಳ ಪ್ರತ್ಯಕ್ಷತೆಯನ್ನು ಸೃಷ್ಟಿಯು ಆತುರದಿಂದ ಎದುರು ನೋಡುತ್ತಿದೆ. 20 ಸೃಷ್ಟಿಯು ನಾಶಕ್ಕೆ ಒಳಗಾಯಿತು. ಆದರೆ ಸ್ವಂತ ಇಚ್ಛೆಯಿಂದಲ್ಲ. ಅದನ್ನು ನಿರೀಕ್ಷೆಯಿಂದ ಒಳಪಡಿಸಿದ ದೇವರಿಂದಲೇ ಆಯಿತು. ಆದರೂ ಸೃಷ್ಟಿಗೂ ನಿರೀಕ್ಷೆಯಿದೆ. 21 ಈ ಸೃಷ್ಟಿಯು ಕೂಡ ನಾಶದ ಬಂಧನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ.
22 ಈವರೆಗೂ ಸೃಷ್ಟಿಯೆಲ್ಲ ಪ್ರಸವ ವೇದನೆಯಂಥ ನೋವಿನಿಂದ ನರಳುತ್ತಿದೆ ಎಂದು ನಾವು ಬಲ್ಲೆವು. 23 ಅಷ್ಟೇ ಅಲ್ಲದೆ, ಪವಿತ್ರಾತ್ಮ ದೇವರ ಪ್ರಥಮ ಫಲವನ್ನು ಹೊಂದಿದವರಾಗಿರುವ ನಾವು ಕೂಡ, ಮಕ್ಕಳ ಪದವಿಯನ್ನು ಪಡೆಯುವುದಕ್ಕಾಗಿ ನಮ್ಮ ದೇಹಗಳ ಬಿಡುಗಡೆಗಾಗಿ ಎದುರುನೋಡುತ್ತಾ ಆತುರದಿಂದ ನರಳುತ್ತಾ ಇದ್ದೇವೆ. 24 ಈ ನಿರೀಕ್ಷೆಯಿಂದಲೇ ನಾವು ರಕ್ಷಣೆಯನ್ನು ಹೊಂದಿದವರಾಗಿದ್ದೇವೆ. ಆದರೆ ಕಣ್ಣಿಗೆ ಕಾಣುವ ನಿರೀಕ್ಷೆಯು ನಿರೀಕ್ಷೆಯೇ ಅಲ್ಲ. ಕಾಣುತ್ತಿರುವುದನ್ನು ಯಾರಾದರೂ ನಿರೀಕ್ಷಿಸುವರೋ? 25 ಆದರೆ ನಾವು ಇನ್ನು ಕಾಣದಿರುವಂಥದ್ದಕ್ಕಾಗಿ ನಿರೀಕ್ಷಿಸುವುದಾದರೆ ಅದಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರುತ್ತೇವೆ.
26 ಅದೇ ರೀತಿಯಲ್ಲಿ ಪವಿತ್ರಾತ್ಮರು ನಮ್ಮ ಬಲಹೀನತೆಯಲ್ಲಿ ನಮಗೆ ಸಹಾಯ ಮಾಡುತ್ತಾರೆ. ಯಾವುದಕ್ಕಾಗಿ ಹೇಗೆ ಪ್ರಾರ್ಥಿಸಬೇಕೆಂದು ನಾವು ತಿಳಿಯದವರಾಗಿದ್ದೇವೆ. ಆದರೆ ಪವಿತ್ರಾತ್ಮರು ತಾವೇ ಮಾತುಗಳಿಂದ ವ್ಯಕ್ತಪಡಿಸಲು ಸಾಧ್ಯವಾಗದ ನರಳಾಟದೊಂದಿಗೆ ನಮಗೋಸ್ಕರ ಪ್ರಾರ್ಥಿಸುವವರಾಗಿದ್ದಾರೆ. 27 ನಮ್ಮ ಹೃದಯಗಳನ್ನು ಪರಿಶೋಧಿಸುವ ದೇವರು ಪವಿತ್ರಾತ್ಮರ ಮನಸ್ಸನ್ನು ಬಲ್ಲವರಾಗಿದ್ದಾರೆ. ಏಕೆಂದರೆ ಪವಿತ್ರಾತ್ಮರು ದೇವಜನರಿಗಾಗಿ ದೇವರ ಚಿತ್ತದ ಪ್ರಕಾರ ವಿಜ್ಞಾಪಿಸುತ್ತಾರೆ.
28 ದೇವರನ್ನು ಪ್ರೀತಿಸಿ ದೇವರ ಉದ್ದೇಶಕ್ಕೆ ಅನುಸಾರವಾಗಿ ಕರೆಹೊಂದಿದವರಿಗೆ ಸಕಲವನ್ನು ಒಳ್ಳೆಯದಕ್ಕಾಗಿಯೇ ದೇವರು ಮಾಡುವರು, ಎಂದು ನಮಗೆ ಗೊತ್ತಿದೆ. 29 ಅನೇಕ ಸಹೋದರರ ಮಧ್ಯೆ ಜ್ಯೇಷ್ಠಪುತ್ರನೆನಿಸುವಂತೆ ದೇವರು ಯಾರನ್ನು ಮೊದಲು ತಿಳಿದುಕೊಂಡರೋ ಅವರನ್ನು ತಮ್ಮ ಪುತ್ರನ ಹೋಲಿಕೆಗೆ ಸಮಾನರಾಗುವಂತೆ ಮುಂದಾಗಿ ನೇಮಿಸಿದರು. 30 ಆದರೆ ದೇವರು ಯಾರನ್ನು ಮುಂದಾಗಿ ನೇಮಿಸಿದರೋ, ಅವರನ್ನು ಕರೆದರು; ಯಾರನ್ನು ಕರೆದರೋ, ಅವರನ್ನು ನೀತಿವಂತರೆಂದು ನಿರ್ಣಯಿಸಿದರು; ಯಾರನ್ನು ನೀತಿವಂತರೆಂದು ನಿರ್ಣಯಿಸಿದರೋ ಅವರನ್ನು ಮಹಿಮೆಪಡಿಸಿದರು.
ಜಯಶಾಲಿಗಳಿಗಿಂತಲೂ ಹೆಚ್ಚಿನವರು
31 ಹಾಗಾದರೆ, ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಪರವಾಗಿ ಇದ್ದರೆ ನಮ್ಮನ್ನು ವಿರೋಧಿಸುವವರು ಯಾರು? 32 ದೇವರು ತಮ್ಮ ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ನಮ್ಮೆಲ್ಲರಿಗೋಸ್ಕರ ಕ್ರಿಸ್ತ ಯೇಸುವನ್ನು ಕೊಟ್ಟ ಮೇಲೆ ನಮಗೆ ಉದಾರವಾಗಿ ಅವರೊಂದಿಗೆ ಎಲ್ಲವನ್ನು ಸಹ ಕೊಡದೆ ಇರುವರೇ? 33 ದೇವರು ತಾವೇ ಆರಿಸಿಕೊಂಡವರ ಮೇಲೆ ದೋಷಾರೋಪಣೆ ಮಾಡುವವರಾರು? ದೇವರೇ ನೀತಿವಂತರೆಂದು ನಿರ್ಣಯ ಮಾಡುವವರಾಗಿರುತ್ತಾರೆ. 34 ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ, ಜೀವಿತರಾಗಿ ಎದ್ದು ದೇವರ ಬಲಗಡೆಯಲ್ಲಿ ಇದ್ದಾರೆ ಮತ್ತು ಅವರೇ ನಮಗೋಸ್ಕರ ವಿಜ್ಞಾಪಿಸುವವರಾಗಿರುತ್ತಾರೆ. 35 ಕ್ರಿಸ್ತ ಯೇಸುವಿನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಇಕ್ಕಟ್ಟೋ ಹಿಂಸೆಯೋ ಆಹಾರವಿಲ್ಲದಿರುವುದೋ ಬಟ್ಟೆ ಇಲ್ಲದಿರುವುದೋ ಅಪಾಯವೋ ಖಡ್ಗವೋ? ಇವೆಲ್ಲವೂ ನಮ್ಮನ್ನು ಅಗಲಿಸಲಾರವು. 36 ಇವು ಪವಿತ್ರ ವೇದದಲ್ಲಿ ಬರೆದಿರುವಂತೆ ಇವೆ:
“ನಿನಗೋಸ್ಕರ ನಾವು ದಿನವೆಲ್ಲಾ ಮರಣಕ್ಕೆ ಗುರಿಯಾಗಿದ್ದೇವೆ;
ವಧಿಸಲಿಕ್ಕಾಗಿರುವ ಕುರಿಗಳಂತೆ ನಾವು ಭಾವಿಸಿರುತ್ತೇವೆ.”
37 ಇವೆಲ್ಲವುಗಳಲ್ಲಿಯೂ ನಾವು ನಮ್ಮನ್ನು ಪ್ರೀತಿಸಿದಾತನ ಮೂಲಕ ಜಯ ಹೊಂದಿದವರಿಗಿಂತಲೂ ಹೆಚ್ಚಿನವರಾಗಿದ್ದೇವೆ. 38 ಏಕೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ವರ್ತಮಾನಕಾಲದ ಸಂಗತಿಗಳಾಗಲಿ, ಭವಿಷ್ಯತ್ಕಾಲದ ಸಂಗತಿಗಳಾಗಲಿ, ಯಾವುದೇ ಶಕ್ತಿಯಾಗಲಿ, 39 ಎತ್ತರವಾಗಲಿ, ಆಳವಾಗಲಿ ಅಥವಾ ಸೃಷ್ಟಿಯಲ್ಲಿರುವ ಬೇರೆ ಯಾವುದೇ ಆಗಲಿ ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸಲಾಗದೆಂದು ನಮಗೆ ದೃಢ ನಿಶ್ಚಯವಿದೆ.
* 8:2 8:2 ಕೆಲವು ಪ್ರತಿಗಳಲ್ಲಿ ನನ್ನನ್ನು 8:36 8:36 ಕೀರ್ತನೆ 44:22