16
ದೇವರ ಕೋಪದ ಏಳು ಬೋಗುಣಿಗಳು
ಆಗ ದೇವಾಲಯದಿಂದ ಬಂದ ಗಟ್ಟಿಯಾದ ಧ್ವನಿಯು, ಏಳು ದೇವದೂತರಿಗೂ, “ಹೋಗಿರಿ, ಏಳು ಬೋಗುಣಿಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿದುಬಿಡಿರಿ!” ಎಂದು ಹೇಳುವುದನ್ನು ನಾನು ಕೇಳಿದೆನು.
ಮೊದಲನೆಯ ದೂತನು ಹೋಗಿ ತನ್ನ ಬೋಗುಣಿಯೊಳಗಿರುವುದನ್ನು ಭೂಮಿಯ ಮೇಲೆ ಸುರಿಯಲು, ಮೃಗದ ಗುರುತನ್ನು ಹಾಕಿಸಿಕೊಂಡು ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು.
ಎರಡನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ಸಮುದ್ರದ ಮೇಲೆ ಸುರಿಯಲು, ಅದು ಸತ್ತ ಮನುಷ್ಯನ ರಕ್ತದಂತಾಯಿತು, ಸಕಲ ಜೀವಿಗಳೂ ಸತ್ತವು.
ಮೂರನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ನದಿಗಳ ಮೇಲೂ ನೀರಿನ ಬುಗ್ಗೆಗಳ ಮೇಲೂ ಸುರಿಯಲು, ಅವು ರಕ್ತವಾದವು. ಆಗ ಜಲಾಶಯದ ಜಲಗಳ ದೂತನು:
“ನೀವು ಇದ್ದವರೂ, ಇರುವವರೂ ಆಗಿರುವ ಪರಿಶುದ್ಧರು.
ನೀವು ನೀತಿವಂತರಾಗಿದ್ದೀರಿ. ಏಕೆಂದರೆ, ನೀವು ಇವುಗಳಿಗೆ ನ್ಯಾಯತೀರಿಸುವಿರಿ.
ಅವರು ನಿಮ್ಮ ಭಕ್ತರ ಮತ್ತು ನಿಮ್ಮ ಪ್ರವಾದಿಗಳ ರಕ್ತವನ್ನು ಸುರಿಸಿದ್ದಾರೆ.
ನೀವು ಅವರಿಗೆ ಕುಡಿಯುವುದಕ್ಕೆ ರಕ್ತವನ್ನೇ ಕೊಟ್ಟಿರುವಿರಿ. ಅವರು ಅದಕ್ಕೆ ಪಾತ್ರರು.”
ಎಂದು ಹೇಳುವುದನ್ನು ಕೇಳಿದೆನು.
ಆಗ ಬಲಿಪೀಠವು ಹೀಗೆ ಮಾತನಾಡುವುದನ್ನು ಕೇಳಿದೆನು:
“ಕರ್ತಾ, ಸರ್ವಶಕ್ತರಾದ ದೇವರೇ,
ನಿಮ್ಮ ನ್ಯಾಯತೀರ್ಪುಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ.”
ನಾಲ್ಕನೆಯ ದೇವದೂತನು ತನ್ನ ಬೋಗುಣಿಯೊಳಗಿರುವುದನ್ನು ಸೂರ್ಯನ ಮೇಲೆ ಸುರಿಯಲು, ಸೂರ್ಯನಿಗೆ ಮನುಷ್ಯರನ್ನು ಬೆಂಕಿಯಿಂದ ಕಂದಿಸುವ ಅಧಿಕಾರ ಕೊಡಲಾಯಿತು. ಮನುಷ್ಯರು ಬಲವಾದ ಕಾವಿನಿಂದ ಕಂದಿ ಹೋದಾಗ್ಯೂ, ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು ದೂಷಿಸಿದರು. ಆದರೆ ಅವರು ದೇವರಿಗೆ ಮಹಿಮೆಯನ್ನು ಸಲ್ಲಿಸುವ ಹಾಗೆ ಪಶ್ಚಾತ್ತಾಪ ಪಡಲಿಲ್ಲ.
10 ಐದನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ಮೃಗದ ಸಿಂಹಾಸನದ ಮೇಲೆ ಸುರಿಯಲು, ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು, 11 ತಮ್ಮ ನೋವುಗಳಿಗಾಗಿಯೂ ಹುಣ್ಣುಗಳಿಗಾಗಿಯೂ ಪರಲೋಕದ ದೇವರನ್ನು ದೂಷಿಸಿದರು. ಆದರೆ ಅವರು, ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪ ಪಡಲಿಲ್ಲ.
12 ಆರನೆಯ ದೂತನು ತನ್ನ ಬೋಗುಣಿಯೊಳಗಿರುವುದನ್ನು ಯೂಫ್ರೇಟೀಸ್ ಮಹಾನದಿಯ ಮೇಲೆ ಸುರಿಯಲು, ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ ಅದರ ನೀರು ಬತ್ತಿಹೋಯಿತು. 13 ಆಗ ಕಪ್ಪೆಗಳಂತೆ ಕಾಣುವ ಮೂರು ಅಶುದ್ಧಾತ್ಮಗಳು ಘಟಸರ್ಪನ ಬಾಯೊಳಗಿಂದಲೂ ಮತ್ತು ಸುಳ್ಳು ಪ್ರವಾದಿಯ ಬಾಯೊಳಗಿಂದಲೂ ಮೃಗದ ಬಾಯೊಳಗಿಂದಲೂ ಬರುವುದನ್ನು ಕಂಡೆನು. 14 ಅವು ಸೂಚಕಕಾರ್ಯಗಳನ್ನು ನಡೆಸುವ ದೆವ್ವಗಳ ಆತ್ಮಗಳಾಗಿದ್ದು, ಭೂಲೋಕದ ರಾಜರುಗಳನ್ನು ಸರ್ವಶಕ್ತರಾದ ದೇವರ ಮಹಾದಿನದ ಯುದ್ಧಕ್ಕಾಗಿ ಕೂಡಿಸುವುದಕ್ಕಾಗಿ ಹೊರಟವು.
 
15 “ಇಗೋ, ನಾನು ಕಳ್ಳನು ಬರುವಂತೆ ಬರುತ್ತೇನೆ. ಬೆತ್ತಲೆಯಾಗಿ ತಿರುಗಾಡಿ, ಜನರಿಂದ ಅವಮಾನಗೊಳ್ಳದಂತೆ ಎಚ್ಚರವಾಗಿದ್ದು ತನ್ನ ವಸ್ತ್ರವನ್ನು ಯಾವನು ಕಾಪಾಡಿಕೊಳ್ಳುತ್ತಾನೋ ಅವನು ಧನ್ಯನು.”
 
16 ಆಗ ಅವು ಅವರನ್ನು ಹೀಬ್ರೂ ಭಾಷೆಯಲ್ಲಿ ಹರ್ಮಗೆದೋನ್ ಎಂಬ ಹೆಸರಿನ ಸ್ಥಳಕ್ಕೆ ಸೇರಿಸಿದವು.
17 ಏಳನೆಯ ದೂತನು ತನ್ನ ಬೋಗುಣಿಯಲ್ಲಿರುವುದನ್ನು ವಾಯುಮಂಡಲದ ಮೇಲೆ ಸುರಿಯಲು, ಆ ದೇವಾಲಯದೊಳಗಿನ ಸಿಂಹಾಸನದಿಂದ ಬಂದ ಮಹಾಧ್ವನಿಯು, “ಸಂಭವಿಸಿದ್ದಾಯಿತು” ಎಂದು ಹೇಳುವುದನ್ನು ಕೇಳಿದೆನು. 18 ಆಗ ಅಲ್ಲಿ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಮತ್ತು ಮಹಾಭೂಕಂಪವೂ ಸಂಭವಿಸಿದವು. ಮನುಷ್ಯನು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ. 19 ಮಹಾ ಪಟ್ಟಣವು ಮೂರು ಭಾಗಗಳಾಗಿ ಹೋಯಿತು ಮತ್ತು ರಾಷ್ಟ್ರಗಳ ನಗರಗಳು ಬಿದ್ದವು. ಇದಲ್ಲದೆ ಮಹಾ ಬಾಬಿಲೋನಿಗೆ ರೋಷವೆಂಬ ದ್ರಾಕ್ಷಾರಸದ ಬಟ್ಟಲನ್ನು ಕೊಡುವಂತೆ ದೇವರಿಗೆ ಅದು ಜ್ಞಾಪಕಕ್ಕೆ ಬಂತು. 20 ಆಗ ಪ್ರತಿಯೊಂದು ದ್ವೀಪಗಳು ಮರೆಯಾಗಿ ಹೋದವು, ಬೆಟ್ಟಗಳು ಕಾಣದಂತಾದವು. 21 ಆಕಾಶದಿಂದ ಒಂದೊಂದು ಸುಮಾರು ನಲವತ್ತೈದು ಕಿಲೋಗ್ರಾಂ* ತೂಕದ ಬಹುದೊಡ್ಡ ಆಲಿಕಲ್ಲುಗಳು ಮನುಷ್ಯರ ಮೇಲೆ ಬಿದ್ದವು. ಆಲಿಕಲ್ಲಿನ ಉಪದ್ರವವು ಬಹು ಹೆಚ್ಚಾಗಿದ್ದರಿಂದಲೂ ಮನುಷ್ಯರು ದೇವರನ್ನು ದೂಷಿಸಿದರು.
* 16:21 16:21 ಸುಮಾರು ನೂರು ಪೌಂಡುಗಳಷ್ಟು