22
ಜೀವನದಿ
ಆಮೇಲೆ ದೂತನು ಸ್ಪಟಿಕದಂತೆ ಹೊಳೆಯುವ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಕುರಿಮರಿಯಾದವರ ಸಿಂಹಾಸನದಿಂದ ಹೊರಟು, ಪಟ್ಟಣದ ಪ್ರಧಾನ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳಿಗೂ ಫಲವನ್ನು ಫಲಿಸುತ್ತಾ ಹನ್ನೆರಡು ಸಾರಿ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವಂಥದ್ದಾಗಿದ್ದವು. ಇನ್ನು ಯಾವ ಶಾಪವೂ ಇರುವುದಿಲ್ಲ. ಅದರಲ್ಲಿ ದೇವರ ಮತ್ತು ಕುರಿಮರಿಯಾದವರ ಸಿಂಹಾಸನವಿರುವುದು. ದೇವರ ದಾಸರು ಅವರಿಗೆ ಸೇವೆಮಾಡುವರು. ದೇವರ ಮುಖವನ್ನು ಅವರು ಕಾಣುವರು. ಅವರ ಹಣೆಗಳ ಮೇಲೆ ದೇವರ ಹೆಸರು ಇರುವುದು. ಇನ್ನು ರಾತ್ರಿ ಇರುವುದಿಲ್ಲ. ದೀಪದ ಬೆಳಕೂ ಸೂರ್ಯನ ಬೆಳಕೂ ಅವಶ್ಯವಿಲ್ಲ. ಕರ್ತದೇವರೇ ಅವರಿಗೆ ಬೆಳಕನ್ನು ಕೊಡುವರು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು.
ಯೇಸು ಬರುತ್ತಿದ್ದಾರೆ
ಆಮೇಲೆ ದೇವದೂತನು ನನಗೆ, “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ!” ಎಂದನು. ಪ್ರವಾದಿಗಳಿಗೆ ಆತ್ಮಪ್ರೇರಣೆಯನ್ನು ನೀಡುವ ಕರ್ತದೇವರು ಬೇಗನೆ ಸಂಭವಿಸತಕ್ಕ ಸಂಗತಿಗಳನ್ನು ತಮ್ಮ ದಾಸರಿಗೆ ತೋರಿಸುವುದಕ್ಕಾಗಿಯೇ ತಮ್ಮ ದೇವದೂತನನ್ನು ಕಳುಹಿಸಿದರು.
 
ಆಗ, “ಇಗೋ, ಬೇಗನೆ ಬರುತ್ತೇನೆ! ಈ ಗ್ರಂಥದ ಪ್ರವಾದನಾ ವಾಕ್ಯಗಳನ್ನು ಕೈಗೊಂಡು ನಡೆಯುವವರು ಧನ್ಯರು,” ಎಂದು ಕರ್ತ ಆಗಿರುವ ಯೇಸು ಹೇಳಿದರು.
 
ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿ ಕಂಡವನು. ನಾನು ಕೇಳಿ ಕಂಡಾಗ ಈ ಸಂಗತಿಗಳನ್ನು ನನಗೆ ತೋರಿಸಿದ ದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು. ಅವನು ನನಗೆ, “ನೋಡು, ನೀನು ಹಾಗೆ ಮಾಡಬೇಡ. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಗೊಳ್ಳುವವರಿಗೂ ಜೊತೆಯ ದಾಸನಾಗಿದ್ದೇನೆ. ದೇವರನ್ನೇ ಆರಾಧಿಸು!” ಎಂದು ಹೇಳಿದನು.
10 ಇದಲ್ಲದೆ ಅವನು, “ನನಗೆ ಈ ಪುಸ್ತಕದಲ್ಲಿರುವ ಪ್ರವಾದನಾ ವಾಕ್ಯಗಳಿಗೆ ಮುದ್ರೆ ಹಾಕಬೇಡ. ಏಕೆಂದರೆ ಸಮಯವು ಸಮೀಪವಾಗಿದೆ. 11 ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ, ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆ ಮಾಡಿಕೊಳ್ಳಲಿ. ನೀತಿವಂತನು ಇನ್ನೂ ನೀತಿಯನ್ನು ಮಾಡಲಿ. ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ!” ಎಂದನು.
 
ಆಮಂತ್ರಣ ಮತ್ತು ಎಚ್ಚರಿಕೆ
12 ಆಗ ಕರ್ತ ಯೇಸು, “ಇಗೋ, ನಾನು ಬೇಗ ಬರುತ್ತೇನೆ. ಪ್ರತಿಯೊಬ್ಬರಿಗೂ ಅವರವರ ಕೆಲಸಕ್ಕೆ ತಕ್ಕಂತೆ ಕೊಡುವ ಪ್ರತಿಫಲವು ನನ್ನಲ್ಲಿದೆ. 13 ನಾನೇ ಆಲ್ಫಾ ಮತ್ತು ಒಮೆಗಾ, ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಆರಂಭವೂ ಸಮಾಪ್ತಿಯೂ ಆಗಿದ್ದೇನೆ.
 
14 “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡವರು ಧನ್ಯರು. ಹೀಗೆ ಅವರಿಗೆ ಜೀವವೃಕ್ಷದ ಹಕ್ಕು ಇರುವುದು. ಅವರು ದ್ವಾರಗಳ ಮೂಲಕ ಆ ಪಟ್ಟಣದೊಳಕ್ಕೆ ಸೇರುವರು. 15 ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆಗಾರರೂ ವಿಗ್ರಹಾರಾಧಕರೂ ಸುಳ್ಳನ್ನು ಪ್ರೀತಿಸಿ ಅನುಸರಿಸುವರೆಲ್ಲರೂ ಹೊರಗಿರುವರು.
 
16 “ಯೇಸುವೆಂಬ ನಾನು ನಮ್ಮ ಸಭೆಗಳಲ್ಲಿ ಈ ಸಂಗತಿಗಳ ವಿಷಯವಾಗಿ ನಿಮಗೆ ಸಾಕ್ಷಿ ನೀಡುವಂತೆ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದನ ವಂಶದ ಕುಡಿ, ಅವನ ಸಂತತಿಯೂ ಉದಯದ ಪ್ರಕಾಶಮಾನ ತಾರೆಯೂ ಆಗಿದ್ದೇನೆ!” ಎಂದರು.
 
17 ದೇವರಾತ್ಮ ಹಾಗು ವಧುವೂ “ಬಾ” ಎನ್ನುತ್ತಾರೆ, ಕೇಳುವವರು, “ಬಾ” ಎನ್ನಲಿ. ಬಾಯಾರಿದವರು ಬರಲಿ, ಇಷ್ಟವುಳ್ಳವರು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.
 
18 ಈ ಗ್ರಂಥದ ಪ್ರವಾದನೆಯನ್ನು ಕೇಳುವ ಪ್ರತಿಯೊಬ್ಬರಿಗೂ ನಾನು ಸಾಕ್ಷಿ ಕೊಡುವುದೇನೆಂದರೆ: ಯಾರಾದರೂ ಹೆಚ್ಚು ಮಾತುಗಳನ್ನು ಇವುಗಳಿಗೆ ಕೂಡಿಸಿದರೆ, ದೇವರು ಅವರ ಮೇಲೆ ಈ ಗ್ರಂಥದಲ್ಲಿ ಬರೆದಿರುವ ಉಪದ್ರವಗಳನ್ನು ಕೂಡಿಸುವರು. 19 ಯಾರಾದರೂ ಈ ಪ್ರವಾದನಾ ಗ್ರಂಥದಲ್ಲಿರುವ ಮಾತುಗಳನ್ನು ತೆಗೆದುಬಿಟ್ಟರೆ, ಈ ಗ್ರಂಥದಲ್ಲಿ ಬರೆದಿರುವ ಜೀವವೃಕ್ಷದಲ್ಲಿಯೂ ಪವಿತ್ರ ನಗರದಲ್ಲಿಯೂ ಅವರಿಗೆ ಸಿಗುವ ಪಾಲನ್ನು ದೇವರು ತೆಗೆದುಬಿಡುವರು.
 
20 ಈ ವಿಷಯಗಳಲ್ಲಿ ಸಾಕ್ಷಿ ನೀಡುವವರು, “ಹೌದು, ನಾನು ಬೇಗ ಬರುತ್ತೇನೆ!” ಎಂದು ಹೇಳುತ್ತಾರೆ.
ಆಮೆನ್. ಕರ್ತ ಯೇಸುವೇ ಬಾ.
 
21 ನಮ್ಮ ಕರ್ತ ಯೇಸುವಿನ ಕೃಪೆಯು ಎಲ್ಲರೊಂದಿಗೆ ಇರಲಿ. ಆಮೆನ್!