3
ಸಾರ್ದಿಸಿನಲ್ಲಿರುವ ಸಭೆಗೆ
1 “ಸಾರ್ದಿಸಿನಲ್ಲಿರುವ ಸಭೆಯ ಸಂದೇಶಕನಿಗೆ ಬರೆ:
ದೇವರ ಏಳು ಆತ್ಮಗಳನ್ನೂ ಏಳು ನಕ್ಷತ್ರಗಳನ್ನೂ ಹಿಡಿದುಕೊಂಡಿರುವವರು ಹೇಳುವುದೇನೆಂದರೆ:
ನಾನು ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು. ಜೀವಿಸುವವನು ಎಂಬ ಹೆಸರು ನಿನಗಿದ್ದರೂ ಸತ್ತವನಾಗಿದ್ದೀಯೆ.
2 ಎಚ್ಚರವಾಗು, ಸಾಯುವ ಹಾಗಿರುವ ಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳು ನನಗೆ ಪರಿಪೂರ್ಣವಾಗಿ ಕಂಡುಬರಲಿಲ್ಲ.
3 ಆದ್ದರಿಂದ ನೀನು ಹೊಂದಿದ ಉಪದೇಶವನ್ನೂ ಕೇಳಿದ ರೀತಿಯನ್ನೂ ಜ್ಞಾಪಿಸಿಕೊಂಡು, ಅದನ್ನು ಕೈಕೊಳ್ಳುವವನಾಗಿ ಪಶ್ಚಾತ್ತಾಪಪಡು, ನೀನು ಎಚ್ಚರವಾಗಿರದಿದ್ದರೆ, ಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಎಂದು ನಿನಗೆ ಯಾವ ರೀತಿಯಲ್ಲಿಯೂ ತಿಳಿಯದು.
4 ಆದರೂ ತಮ್ಮ ವಸ್ತ್ರಗಳನ್ನು ಮೈಲಿಗೆ ಮಾಡಿಕೊಳ್ಳದಿರುವ ಕೆಲವು ಜನರು ಸಾರ್ದಿಸಿ ಪಟ್ಟಣದಲ್ಲಿ ಇದ್ದಾರೆ, ಅವರು ಯೋಗ್ಯರಾಗಿರುವುದರಿಂದ ಬಿಳಿವಸ್ತ್ರಗಳನ್ನು ಧರಿಸಿಕೊಂಡು ನನ್ನ ಜೊತೆಯಲ್ಲಿ ನಡೆಯುವರು.
5 ಜಯಹೊಂದುವವರಿಗೆ ಹೀಗೆ ಬಿಳಿಯ ವಸ್ತ್ರಗಳನ್ನು ಹೊದಿಸಲಾಗುವುದು. ಅವರ ಹೆಸರನ್ನು ಜೀವಬಾಧ್ಯರ ಪಟ್ಟಿಯಿಂದ ನಾನು ಅಳಿಸಿಬಿಡದೆ, ಅವರ ಹೆಸರನ್ನು ನನ್ನ ತಂದೆಯ ಮುಂದೆಯೂ ಅವರ ದೂತರ ಮುಂದೆಯೂ ಅರಿಕೆ ಮಾಡುವೆನು.
6 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ.
ಫಿಲದೆಲ್ಫಿಯದಲ್ಲಿರುವ ಸಭೆಗೆ
7 “ಫಿಲದೆಲ್ಫಿಯದಲ್ಲಿರುವ ಸಭೆಯ ಸಂದೇಶಕನಿಗೆ ಬರೆ:
ಪರಿಶುದ್ಧರೂ ಸತ್ಯವಂತರೂ ದಾವೀದನ ಬೀಗದ ಕೈಯುಳ್ಳವರೂ ಯಾರೂ ಮುಚ್ಚದಂತೆ ತೆರೆಯುವವರೂ ಯಾರೂ ತೆರೆಯದಂತೆ ಮುಚ್ಚುವವರೂ ಆಗಿರುವವರು ಹೇಳುವುದೇನೆಂದರೆ:
8 ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ನಿನ್ನ ಶಕ್ತಿಯು ಸ್ವಲ್ಪವೇ ಆಗಿದ್ದರೂ ನೀನು ನನ್ನ ಹೆಸರನ್ನು ನಿರಾಕರಿಸದೆ, ನನ್ನ ವಾಕ್ಯವನ್ನು ಕಾಪಾಡಿಕೊಂಡಿದ್ದರಿಂದ, ನಿನ್ನೆದುರಿನಲ್ಲಿ ಒಂದು ದ್ವಾರವನ್ನು ತೆರೆದಿಟ್ಟಿದ್ದೇನೆ, ಅದನ್ನು ಯಾರೂ ಮುಚ್ಚಲಾರರು.
9 ತಾವು ಯೆಹೂದ್ಯರೆಂದು ಸುಳ್ಳಾಗಿ ಹೇಳಿಕೊಳ್ಳುವ ಸೈತಾನನ ಸಭಾಮಂದಿರದಿಂದ ಕೆಲವರು ಬಂದು ನಿನ್ನ ಪಾದಕ್ಕೆ ಬೀಳುವಂತೆಯೂ ನಿನ್ನನ್ನು ನಾನು ಪ್ರೀತಿಸಿದ್ದನ್ನು ತಿಳಿಯುವಂತೆಯೂ ಮಾಡುವೆನು.
10 ನೀನು ನನ್ನ ವಾಕ್ಯವನ್ನು ಸಹನೆಯಿಂದ ಕಾಪಾಡಿಕೊಂಡಿದ್ದರಿಂದ, ಭೂನಿವಾಸಿಗಳನ್ನು ಪರೀಕ್ಷಿಸಲು ಇಡೀ ಲೋಕದಲ್ಲೆಲ್ಲಾ ಬರಲಿರುವ ಶೋಧನೆಯ ಸಮಯದಲ್ಲಿ ನಾನು ಸಹ ನಿನ್ನನ್ನು ಸುರಕ್ಷಿತವಾಗಿಡುವೆನು.
11 ನಾನು ಬೇಗ ಬರುತ್ತೇನೆ. ನಿನ್ನ ಕಿರೀಟವನ್ನು ಯಾರೂ ಅಪಹರಿಸದಂತೆ ನಿನಗಿರುವುದನ್ನು ಹಿಡಿದುಕೊಂಡಿರು.
12 ಯಾರು ಜಯ ಹೊಂದುತ್ತಾರೋ, ಅವರನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ಸ್ಥಾಪಿಸುವೆನು. ಅವರು ಎಂದಿಗೂ ಅದರೊಳಗಿಂದ ಹೊರಗೆ ಹೋಗುವುದಿಲ್ಲ. ನಾನು ನನ್ನ ದೇವರ ಹೆಸರನ್ನು ಪರಲೋಕದಲ್ಲಿರುವ ನನ್ನ ದೇವರಿಂದ ಇಳಿದು ಬರುವ ಹೊಸ ಯೆರೂಸಲೇಮಿನ ಹೆಸರನ್ನೂ ಹಾಗೂ ನನ್ನ ಹೊಸ ಹೆಸರನ್ನೂ ಅವರ ಮೇಲೆ ಬರೆಯುವೆನು.
13 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ.
ಲವೊದಿಕೀಯದಲ್ಲಿರುವ ಸಭೆಗೆ
14 “ಲವೊದಿಕೀಯದಲ್ಲಿರುವ ಸಭೆಯ ಸಂದೇಶಕನಿಗೆ ಬರೆ:
ಆಮೆನ್ ಎಂಬವರೂ ನಂಬಿಗಸ್ತರೂ ಸತ್ಯಸಾಕ್ಷಿಯೂ ದೇವರಿಂದಾದ ಸೃಷ್ಟಿಗೆ ಒಡೆಯರೂ ಆಗಿರುವವರು ಹೇಳುವುದೇನೆಂದರೆ:
15 ನಾನು ನಿನ್ನ ಕ್ರಿಯೆಗಳನ್ನು ಬಲ್ಲೆನು. ನೀನು ತಣ್ಣಗೂ ಇಲ್ಲ, ಬಿಸಿಯೂ ಇಲ್ಲ, ನೀನು ತಣ್ಣಗಾಗಲಿ, ಬಿಸಿಯಾಗಲಿ ಇದ್ದಿದ್ದರೆ ಚೆನ್ನಾಗಿತ್ತು.
16 ನೀನು ಬಿಸಿಯಾಗಲೀ, ತಣ್ಣಗಾಗಲೀ ಇಲ್ಲದೆ ಉಗುರುಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರಿ ಬಿಡುವೆನು.
17 ಏಕೆಂದರೆ ನೀನು ನಿನ್ನ ವಿಷಯದಲ್ಲಿ, ‘ನಾನು ಐಶ್ವರ್ಯವಂತನು, ನಾನು ಸಂಪಾದಕನಾಗಿದ್ದೇನೆ ಮತ್ತು ಕೊರತೆ ನನಗಿಲ್ಲ,’ ಎಂದು ಹೇಳಿಕೊಳ್ಳುತ್ತಿ. ಆದರೆ ನೀನು ಕೇವಲ ದುರವಸ್ಥೆಯುಳ್ಳವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬೆತ್ತಲೆಯಾದವನು ಎಂಬುದನ್ನು ತಿಳಿಯದೆ ಇದ್ದೀ.
18 ನೀನು ಸಿರಿವಂತನಾಗುವಂತೆ ಬೆಂಕಿಯಲ್ಲಿ ಪುಟಕ್ಕೆ ಹಾಕಿದ ಚಿನ್ನವನ್ನೂ ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಧರಿಸಿಕೊಳ್ಳುವುದಕ್ಕಾಗಿ ಬಿಳಿ ವಸ್ತ್ರಗಳನ್ನೂ ಕಣ್ಣು ಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವುದಕ್ಕಾಗಿ ಮುಲಾಮನ್ನೂ ನನ್ನಿಂದ ಕೊಂಡುಕೊಳ್ಳಬೇಕೆಂದು ನಾನು ನಿನಗೆ ಬುದ್ಧಿ ಹೇಳುತ್ತೇನೆ.
19 ನಾನು ಯಾರನ್ನು ಪ್ರೀತಿಸುತ್ತೇನೋ, ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀನು ಆಸಕ್ತನಾಗಿರು, ಪಶ್ಚಾತ್ತಾಪಪಡು.
20 ಇಗೋ, ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ. ಯಾರಾದರೂ ನನ್ನ ಸ್ವರವನ್ನು ಕೇಳಿ, ಬಾಗಿಲನ್ನು ತೆರೆದರೆ, ನಾನು ಪ್ರವೇಶ ಮಾಡಿ, ಆ ವ್ಯಕ್ತಿಯ ಸಂಗಡ ಊಟಮಾಡುವೆನು. ಅವರೂ ನನ್ನ ಸಂಗಡ ಊಟಮಾಡುವರು.
21 ನಾನು ಜಯಹೊಂದಿ, ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕುಳಿತುಕೊಂಡ ಹಾಗೆ, ಜಯಶಾಲಿಯಾದವನನ್ನು ನನ್ನೊಡನೆ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಾಡುವೆನು.
22 ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ.”