10
1 ಆಗ ಸಮುಯೇಲನು ಎಣ್ಣೆಕುಪ್ಪಿಯಿಂದ ಅವನ ತಲೆಯ ಮೇಲೆ ಸುರಿದು, ಅವನನ್ನು ಮುದ್ದಿಟ್ಟು ಅವನಿಗೆ, “ಯೆಹೋವ ದೇವರು ನಿನ್ನನ್ನು ತಮ್ಮ ಆಸ್ತಿಯಾಗಿರುವ ಜನರ ಮೇಲೆ ನಾಯಕನಾಗಿರಲು ಅಭಿಷೇಕ ಮಾಡಿದ್ದಾರೆ.
2 ನೀನು ಈ ಹೊತ್ತು ನನ್ನನ್ನು ಬಿಟ್ಟುಹೋದಾಗ, ಬೆನ್ಯಾಮೀನ್ಯರ ಮೇರೆಯಾದ ಚೆಲ್ಚಹಿನಲ್ಲಿರುವ ರಾಹೇಲಳ ಸಮಾಧಿಯ ಬಳಿಯಲ್ಲಿ ಇಬ್ಬರು ಮನುಷ್ಯರನ್ನು ಕಂಡುಕೊಳ್ಳುವೆ. ಅವರು ನಿನಗೆ, ‘ನೀನು ಹುಡುಕಲು ಹೋದ ಕತ್ತೆಗಳು ಸಿಕ್ಕಿದವು, ನಿನ್ನ ತಂದೆಯು ಕತ್ತೆಗಳ ಚಿಂತೆ ಬಿಟ್ಟು, ನಿನಗೋಸ್ಕರ ಚಿಂತೆಪಟ್ಟು, ತನ್ನ ಮಗನಿಗೋಸ್ಕರ ಏನು ಮಾಡಲಿ? ಎನ್ನುತ್ತಾನೆ,’ ಎಂದು ಹೇಳುವರು.
3 “ನೀನು ಆ ಸ್ಥಳವನ್ನು ಬಿಟ್ಟು, ಆ ಕಡೆ ದಾಟಿ, ತಾಬೋರಿನ ಹತ್ತಿರವಿರುವ ಅಲ್ಲೋನ್ ವೃಕ್ಷದ ಬಳಿಗೆ ಬರುವಾಗ ಒಬ್ಬನು ಮೂರು ಮೇಕೆಯ ಮರಿಗಳನ್ನೂ, ಮತ್ತೊಬ್ಬನು ಮೂರು ರೊಟ್ಟಿಗಳನ್ನೂ, ಇನ್ನೊಬ್ಬನು ದ್ರಾಕ್ಷಾರಸವಿರುವ ಒಂದು ಬುದ್ದಲಿಯನ್ನೂ ಹೊತ್ತುಕೊಂಡು ದೇವರ ಬಳಿಗೆ ಬೇತೇಲಿಗೆ ಹೋಗುವ ಮೂವರನ್ನು ಕಾಣುವೆ.
4 ಅವರು ನಿನ್ನ ಕ್ಷೇಮಸಮಾಚಾರವನ್ನು ವಿಚಾರಿಸಿ, ನಿನಗೆ ಎರಡು ರೊಟ್ಟಿಗಳನ್ನು ಕೊಡುವರು. ಅವುಗಳನ್ನು ನೀನು ಅವರ ಕೈಯಿಂದ ತೆಗೆದುಕೊಳ್ಳುವೆ.
5 “ತರುವಾಯ ಫಿಲಿಷ್ಟಿಯರ ತಾಣವಿರುವ ದೇವರ ಗಿಬೆಯ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣಕ್ಕೆ ಪ್ರವೇಶಿಸುವಾಗ, ನಿನಗೆದುರಾಗಿ ವೀಣೆ, ದಮ್ಮಡಿ, ಕೊಳಲು, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವುದು. ಅವರು ಪ್ರವಾದಿಸುವರು.
6 ಆಗ ಯೆಹೋವ ದೇವರ ಆತ್ಮವು ನಿನ್ನ ಮೇಲೆ ಬರುವುದು. ನೀನು ಅವರ ಸಂಗಡ ಪ್ರವಾದಿಸುವೆ, ಬೇರೆ ಮನುಷ್ಯನಾಗಿ ಮಾರ್ಪಡುವೆ.
7 ಈ ಗುರುತುಗಳೆಲ್ಲಾ ನಿನಗೆ ಸಂಭವಿಸಿದಾಗ, ದೇವರು ನಿನ್ನ ಸಂಗಡ ಇರುವುದರಿಂದ ನೀನು ಆ ವೇಳೆಯಲ್ಲಿ ನಿನಗೆ ಕೈಗೂಡಿದ ಹಾಗೆ ಮಾಡು.
8 “ಆದರೆ ನೀನು ನನಗೆ ಮುಂದಾಗಿ ಗಿಲ್ಗಾಲಿಗೆ ಇಳಿದು ಹೋಗಬೇಕು. ನಾನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸುವುದಕ್ಕಾಗಿ ನಿನ್ನ ಬಳಿಗೆ ಬರುವೆನು. ನೀನು ಮಾಡಬೇಕಾದದ್ದನ್ನು ನಾನು ನಿನಗೆ ತಿಳಿಸುವವರೆಗೂ ನೀನು ಅಲ್ಲಿ ಏಳು ದಿವಸ ಕಾದುಕೊಳ್ಳಬೇಕು,” ಎಂದನು.
ಸೌಲನು ಅರಸನಾದದ್ದು
9 ಅವನು ಸಮುಯೇಲನನ್ನು ಬಿಟ್ಟುಹೋಗಲು ಹಿಂದಿರುಗಿದಾಗ, ದೇವರು ಅವನಿಗೆ ಹೊಸ ಹೃದಯವನ್ನು ಕೊಟ್ಟರು. ಆ ಸಮಸ್ತ ಗುರುತುಗಳು ಆ ದಿವಸದಲ್ಲಿ ಅವನಿಗೆ ಸಂಭವಿಸಿದವು.
10 ಅವನು ಗಿಬೆಯದ ಗುಡ್ಡಕ್ಕೆ ಬಂದಾಗ, ಪ್ರವಾದಿಗಳ ಗುಂಪು ಅವನೆದುರಿಗೆ ಬಂತು. ಆಗ ದೇವರ ಆತ್ಮವು ಅವನ ಮೇಲೆ ಬಂದದ್ದರಿಂದ, ಅವರಲ್ಲಿದ್ದು ಪ್ರವಾದಿಸಿದನು.
11 ಅದಕ್ಕೆ ಮುಂಚೆ ಅವನನ್ನು ತಿಳಿದವರೆಲ್ಲರು, ಅವನು ಪ್ರವಾದಿಗಳ ಸಂಗಡವಿದ್ದು ಪ್ರವಾದಿಸುವುದನ್ನು ಕಂಡಾಗ, ಅವರು ಒಬ್ಬರ ಸಂಗಡ ಒಬ್ಬರು, “ಕೀಷನ ಮಗನಿಗೆ ಆದದ್ದೇನು? ಸೌಲನೂ ಸಹ ಪ್ರವಾದಿಗಳಲ್ಲಿ ಇದ್ದಾನೋ?” ಎಂದರು.
12 ಅದಕ್ಕೆ ಅಲ್ಲಿಯವನೊಬ್ಬನು, “ಹಾಗಾದರೆ ಅವರ ನಾಯಕರು ಯಾರು?” ಎಂದನು. ಆದ್ದರಿಂದ, “ಸೌಲನು ಸಹ ಪ್ರವಾದಿಗಳಲ್ಲಿ ಇದ್ದಾನೋ?” ಎಂಬ ಗಾದೆ ಉಂಟಾಯಿತು.
13 ಅವನು ಪ್ರವಾದಿಸಿದ ತರುವಾಯ ಗುಡ್ಡದ ಮೇಲಕ್ಕೆ ಬಂದನು.
14 ಆಗ ಸೌಲನ ಚಿಕ್ಕಪ್ಪನು, “ನೀವು ಎಲ್ಲಿಗೆ ಹೋದಿರಿ?” ಎಂದು ಅವನನ್ನೂ, ಅವನ ಸೇವಕನನ್ನೂ ಕೇಳಿದನು.
ಅದಕ್ಕವನು, “ಕತ್ತೆಗಳನ್ನು ಹುಡುಕುವುದಕ್ಕೆ, ಅವುಗಳನ್ನು ಕಾಣದೆ ಹೋದುದರಿಂದ ಸಮುಯೇಲನ ಬಳಿಗೆ ಹೋದೆವು,” ಎಂದನು.
15 ಅದಕ್ಕೆ ಸೌಲನ ಚಿಕ್ಕಪ್ಪನು, “ಸಮುಯೇಲನು ನಿನಗೆ ಏನು ಹೇಳಿದನು? ದಯಮಾಡಿ ನನಗೆ ತಿಳಿಸು,” ಎಂದನು.
16 ಸೌಲನು ತನ್ನ ಚಿಕ್ಕಪ್ಪನಿಗೆ, “ಕತ್ತೆಗಳು ದೊರಕಿದವೆಂದು ಅವನು ನಮಗೆ ಸ್ಪಷ್ಟವಾಗಿ ತಿಳಿಸಿದನು,” ಎಂದನು. ಆದರೆ ಅವನು ಸಮುಯೇಲನು ಹೇಳಿದ ರಾಜ್ಯಭಾರದ ಮಾತನ್ನು ಅವನಿಗೆ ತಿಳಿಸಲಿಲ್ಲ.
17 ಸಮುಯೇಲನು ಇಸ್ರಾಯೇಲರನ್ನು ಮಿಚ್ಪೆಯಲ್ಲಿ ಯೆಹೋವ ದೇವರ ಬಳಿಗೆ ಒಟ್ಟಾಗಿ ಕರೆದು ಅವರಿಗೆ,
18 “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಾನು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿ, ನಿಮ್ಮನ್ನು ಈಜಿಪ್ಟಿನವರ ಕೈಯಿಂದಲೂ, ನಿಮ್ಮನ್ನು ಬಾಧೆಪಡಿಸಿದ ಸಮಸ್ತ ರಾಜ್ಯಗಳ ಕೈಯಿಂದಲೂ ಬಿಡಿಸಿದೆನು.’
19 ಆದರೆ ನಿಮ್ಮ ಎಲ್ಲಾ ಕೇಡುಗಳಿಂದಲೂ ಇಕ್ಕಟ್ಟುಗಳಿಂದಲೂ ನಿಮ್ಮನ್ನು ತಪ್ಪಿಸಿ ರಕ್ಷಿಸಿದ ನಿಮ್ಮ ದೇವರನ್ನು ನೀವು ಈ ದಿವಸದಲ್ಲಿ ತಿರಸ್ಕರಿಸಿ ಅವರಿಗೆ, ‘ನಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸು,’ ಎಂದು ಹೇಳಿದಿರಿ. ಆದ್ದರಿಂದ ಈಗ ಯೆಹೋವ ದೇವರ ಮುಂದೆ ನಿಮ್ಮ ಗೋತ್ರಗಳ ಪ್ರಕಾರವಾಗಿಯೂ, ನಿಮ್ಮ ಕುಲಗಳ ಪ್ರಕಾರವಾಗಿಯೂ ಬನ್ನಿರಿ,” ಎಂದನು.
20 ಸಮುಯೇಲನು ಇಸ್ರಾಯೇಲಿನ ಗೋತ್ರಗಳನ್ನೆಲ್ಲಾ ಸಮೀಪಕ್ಕೆ ಬರಮಾಡಿದಾಗ, ಬೆನ್ಯಾಮೀನನ ಗೋತ್ರಕ್ಕೆ ಚೀಟು ಬಿದ್ದಿತು.
21 ಅವನು ಬೆನ್ಯಾಮೀನನ ಗೋತ್ರವನ್ನು ಅದರ ಕುಲಗಳ ಹಾಗೆಯೇ ಹತ್ತಿರಕ್ಕೆ ಬರಮಾಡಿದಾಗ, ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟು ಬಿದ್ದಿತು. ಆದರೆ ಅವನನ್ನು ಹುಡುಕುವಾಗ, ಅವನು ಸಿಕ್ಕಲಿಲ್ಲ.
22 ಆದ್ದರಿಂದ ಅವರು, “ಅವನು ಇನ್ನು ಇಲ್ಲಿ ಬರುವನೋ?” ಎಂದು ಯೆಹೋವ ದೇವರನ್ನು ವಿಚಾರಿಸಿದರು.
ಯೆಹೋವ ದೇವರು, “ಇಗೋ, ಅವನು ಸಲಕರಣೆಗಳಲ್ಲಿ ಅಡಗಿಕೊಂಡಿದ್ದಾನೆ,” ಎಂದು ಹೇಳಿದರು.
23 ಆಗ ಅವರು ಓಡಿಹೋಗಿ ಅಲ್ಲಿಂದ ಅವನನ್ನು ಕರೆತಂದರು. ಅವನು ಜನರ ಮಧ್ಯದಲ್ಲಿ ನಿಲ್ಲುವಾಗ ಅವನು ತನ್ನ ಭುಜದಿಂದ ಎಲ್ಲಾ ಜನರಿಗಿಂತ ಎತ್ತರವಾಗಿದ್ದನು.
24 ಆಗ ಸಮುಯೇಲನು, “ಯೆಹೋವ ದೇವರು ಆಯ್ದುಕೊಂಡವನನ್ನು ನೋಡಿರಿ, ಸಮಸ್ತ ಜನರಿಗೆ ಎಲ್ಲಾ ಜನರಲ್ಲಿ ಇವನಿಗೆ ಸಮಾನವಾದವನು ಯಾವನೂ ಇಲ್ಲವಲ್ಲ,” ಎಂದನು.
ಜನರೆಲ್ಲರು ಆರ್ಭಟಿಸಿ, “ಅರಸ ಬಾಳಲಿ,” ಎಂದರು.
25 ಸಮುಯೇಲನು ರಾಜ್ಯದ ಪದ್ಧತಿಯನ್ನು ಜನರಿಗೆ ಹೇಳಿಕೊಟ್ಟು, ಒಂದು ಪುಸ್ತಕದಲ್ಲಿ ಬರೆದು, ಯೆಹೋವ ದೇವರ ಮುಂದೆ ಇಟ್ಟನು. ಆಗ ಸಮುಯೇಲನು ಜನರನ್ನೆಲ್ಲಾ ಅವರವರ ಮನೆಗೆ ಕಳುಹಿಸಿಬಿಟ್ಟನು.
26 ಸೌಲನು ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು. ದೇವರು ಯಾರ ಹೃದಯವನ್ನು ಮುಟ್ಟಿದರೋ, ಅವರ ಒಂದು ಗುಂಪು ಅವನ ಸಂಗಡ ಹೋಯಿತು.
27 ಆದರೆ ಕೆಲವು ಪುಂಡಪೋಕರಿಗಳು, “ಇವನು ನಮ್ಮನ್ನು ರಕ್ಷಿಸುವುದೇನು?” ಎಂದು ಅವನನ್ನು ತಿರಸ್ಕರಿಸಿದರು. ಅವರು ಅವನಿಗೆ ಕಾಣಿಕೆಯನ್ನು ತೆಗೆದುಕೊಂಡು ಬರಲಿಲ್ಲ. ಅವನು ಕೇಳದ ಹಾಗೆ ಇದ್ದನು.