9
ದಾವೀದನು ಹಾಗೂ ಮೆಫೀಬೋಶೆತನು
1 ದಾವೀದನು, “ಸೌಲನ ಕುಟುಂಬದಲ್ಲಿ ಯೋನಾತಾನನಿಗೋಸ್ಕರ ನಾನು ಅವನಿಗೆ ದಯೆ ತೋರಿಸುವ ಹಾಗೆ ಇನ್ನೂ ಯಾವನಾದರೂ ಉಳಿದಿದ್ದಾನೋ?” ಎಂದು ಕೇಳಿದನು.
2 ಆಗ ಸೌಲನ ಮನೆಯ ದಾಸನಾದ ಚೀಬನೆಂಬವನು ಇದ್ದನು. ಅವನನ್ನು ದಾವೀದನ ಬಳಿಗೆ ಕರೆತಂದರು. ಅರಸನು ಅವನಿಗೆ, “ನೀನು ಚೀಬನೋ?” ಎಂದನು.
ಅದಕ್ಕವನು, “ನಿನ್ನ ದಾಸನು ನಾನೇ,” ಎಂದನು.
3 ಅರಸನು, “ನಾನು ದೇವರ ದಯೆ ತೋರಿಸುವ ಹಾಗೆ ಸೌಲನ ಕುಟುಂಬದಲ್ಲಿ ಇನ್ನೂ ಯಾವನಾದರೂ ಇದ್ದಾನೋ?” ಎಂದನು.
ಆಗ ಚೀಬನು ಅರಸನಿಗೆ, “ಯೋನಾತಾನನಿಗೆ ಎರಡೂ ಕಾಲು ಕುಂಟಾದ ಮಗನಿದ್ದಾನೆ,” ಎಂದನು.
4 “ಅವನು ಎಲ್ಲಿ ಇದ್ದಾನೆ?” ಎಂದು ಅರಸನು ಅವನನ್ನು ಕೇಳಿದನು.
ಚೀಬನು ಅರಸನಿಗೆ, “ಅವನು ಲೋದೆಬಾರಲ್ಲಿ ಅಮ್ಮಿಯೇಲನ ಮಗ ಮಾಕೀರನ ಮನೆಯಲ್ಲಿ ಇದ್ದಾನೆ,” ಎಂದನು.
5 ಆಗ ಅರಸ ದಾವೀದನು ಲೋದೆಬಾರಿನಲ್ಲಿರುವ ಅಮ್ಮಿಯೇಲನ ಮಗ ಮಾಕೀರನ ಮನೆಯಿಂದ ಅವನನ್ನು ಕರೆಯಕಳುಹಿಸಿದನು.
6 ಸೌಲನ ಮಗನಾಗಿರುವ ಯೋನಾತಾನನ ಮಗ ಮೆಫೀಬೋಶೆತನು ದಾವೀದನ ಬಳಿಗೆ ಬಂದಾಗ, ಮೋರೆ ಕೆಳಗಾಗಿ ಬಿದ್ದು ವಂದಿಸಿದನು.
ದಾವೀದನು, “ಮೆಫೀಬೋಶೆತನೇ,” ಎಂದನು.
ಅವನು, “ಇಗೋ, ನಿನ್ನ ದಾಸನು,” ಎಂದನು.
7 ಆಗ ದಾವೀದನು ಅವನಿಗೆ, “ಭಯಪಡಬೇಡ, ಏಕೆಂದರೆ ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿ ದಯೆ ತೋರಿಸುವೆನು. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ತಿರುಗಿ ಕೊಡುವೆನು ಮತ್ತು ನೀನು ನನ್ನ ಮೇಜಿನಲ್ಲಿ ನಿತ್ಯವೂ ಭೋಜನ ಮಾಡುವೆ,” ಎಂದನು.
8 ಆಗ ಅವನು ಅಡ್ಡಬಿದ್ದು, “ನೀನು ನನ್ನಂಥ ಸತ್ತ ನಾಯಿಯನ್ನು ದೃಷ್ಟಿಸುವ ಹಾಗೆ ನಿನ್ನ ದಾಸನು ಎಷ್ಟರವನು,” ಎಂದನು.
9 ಅನಂತರ ದಾವೀದನು ಸೌಲನ ಸೇವಕನಾದ ಚೀಬನನ್ನು ಕರೆದು, “ನಿನ್ನ ಯಜಮಾನ ಸೌಲನಿಗೂ, ಅವನ ಕುಟುಂಬದವರಿಗೂ ಇದ್ದ ಎಲ್ಲವನ್ನು ಅವನ ಮೊಮ್ಮಗನಿಗೆ ಕೊಟ್ಟಿರುತ್ತೇನೆ.
10 ಆದ್ದರಿಂದ ನೀನೂ, ನಿನ್ನ ಪುತ್ರರೂ, ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ, ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ, ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮೊಮ್ಮಗ ಮೆಫೀಬೋಶೆತನು ನಿತ್ಯವೂ ನನ್ನ ಮೇಜಿನಲ್ಲಿ ಊಟಮಾಡುವನು,” ಎಂದನು. ಈ ಚೀಬನಿಗೆ ಹದಿನೈದು ಮಂದಿ ಪುತ್ರರೂ ಇಪ್ಪತ್ತು ಮಂದಿ ದಾಸರೂ ಇದ್ದರು.
11 ಆಗ ಚೀಬನು ಅರಸನಿಗೆ, “ಅರಸನಾದ ನನ್ನ ಒಡೆಯನು ತನ್ನ ದಾಸನಿಗೆ ಆಜ್ಞಾಪಿಸಿದ್ದನ್ನೆಲ್ಲಾ ನಿನ್ನ ದಾಸನು ಹಾಗೆಯೇ ಮಾಡುವನು,” ಎಂದನು. ಅರಸನ ಪುತ್ರರಲ್ಲಿ ಒಬ್ಬನ ಹಾಗೆ ಮೆಫೀಬೋಶೆತನು ಭೋಜನ ಮಾಡುವನೆಂದು ಅರಸನು ಹೇಳಿದನು.
12 ಮೆಫೀಬೋಶೆತನಿಗೆ ಮೀಕನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಚೀಬನ ಮನೆಯಲ್ಲಿ ವಾಸವಾಗಿದ್ದ ಸಮಸ್ತರೂ ಮೆಫೀಬೋಶೆತನಿಗೆ ದಾಸರಾಗಿದ್ದರು.
13 ಹೀಗೆಯೇ ಮೆಫೀಬೋಶೆತನು ಅರಸನ ಪಂಕ್ತಿಯಲ್ಲಿ ನಿತ್ಯವೂ ಭೋಜನ ಮಾಡುತ್ತಿದ್ದುದರಿಂದ ಯೆರೂಸಲೇಮಿನಲ್ಲೇ ವಾಸವಾಗಿದ್ದನು. ಅವನಿಗೆ ಎರಡೂ ಕಾಲು ಕುಂಟಾಗಿದ್ದವು.