5
ಸಭೆಯಲ್ಲಿ ನೈತಿಕ ಸಮಸ್ಯೆ
1 ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿದೆಯೆಂದು ಜನರು ನಿಜವಾಗಿಯೂ ಹೇಳುತ್ತಿದ್ದಾರೆ. ದೇವರನ್ನು ತಿಳಿದಿಲ್ಲದ ಜನರ ನಡುವೆಯೂ ಇಲ್ಲದಂಥ ಕೆಟ್ಟ ಬಗೆಯ ಲೈಂಗಿಕ ಪಾಪ ಅದಾಗಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನೆಂದು ಜನರು ಹೇಳುತ್ತಿದ್ದಾರೆ.
2 ಆದರೆ ನೀವು ನಿಮ್ಮ ವಿಷಯದಲ್ಲಿ ಇನ್ನೂ ಹೆಚ್ಚಳಪಡುತ್ತಿದ್ದೀರಿ. ನೀವು ದುಃಖಭರಿತರಾಗಿರಬೇಕಿತ್ತು. ಆ ಪಾಪ ಮಾಡಿದ ವ್ಯಕ್ತಿಯನ್ನು ನಿಮ್ಮ ಸಭೆಯಿಂದ ಹೊರಗೆ ಹಾಕಬೇಕಿತ್ತು.
3 ನನ್ನ ದೇಹ ನಿಮ್ಮೊಂದಿಗೆ ಇಲ್ಲದಿದ್ದರೂ ನಾನು ಆತ್ಮದಲ್ಲಿ ನಿಮ್ಮೊಂದಿಗಿದ್ದೇನೆ. ಆ ಪಾಪ ಮಾಡಿದ ವ್ಯಕ್ತಿಗೆ ನಾನು ಆಗಲೇ ತೀರ್ಪು ಮಾಡಿದ್ದೇನೆ. ನಾನು ಅಲ್ಲಿದ್ದಿದ್ದರೆ ಯಾವ ತೀರ್ಪನ್ನು ಕೊಡುತ್ತಿದ್ದೆನೋ ಅದೇ ತೀರ್ಪನ್ನು ಕೊಟ್ಟಿದ್ದೇನೆ.
4 ನಮ್ಮ ಪ್ರಭುವಾದ ಯೇಸುವಿನ ಹೆಸರಿನಲ್ಲಿ ಒಟ್ಟಾಗಿ ಸೇರಿಬನ್ನಿ. ನಾನು ಆತ್ಮದಲ್ಲಿ ನಿಮ್ಮೊಂದಿಗಿರುವೆನು. ನಮ್ಮ ಪ್ರಭುವಾದ ಯೇಸುವಿನ ಶಕ್ತಿಯೂ ನಿಮ್ಮೊಂದಿಗೆ ಇರುವುದು.
5 ಆ ಮನುಷ್ಯನ ಪಾಪಸ್ವಭಾವವು ನಾಶವಾಗುವುದಕ್ಕಾಗಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಿರಿ. ಆಗ ಪ್ರಭುವಿನ ದಿನದಂದು ಅವನ ಜೀವಾತ್ಮವು ರಕ್ಷಣೆಹೊಂದಲು ಸಾಧ್ಯವಾಗುವುದು.
6 ನೀವು ಅಹಂಕಾರಪಡುವುದು ಒಳ್ಳೆಯದಲ್ಲ. “ಒಂದಿಷ್ಟು ಹುಳಿಯು ಹಿಟ್ಟನ್ನೆಲ್ಲಾ ಉಬ್ಬಿಸುತ್ತದೆ” ಎಂಬ ನುಡಿಯು ನಿಮಗೆ ಗೊತ್ತೇ ಇದೆ.
7 ಹಳೆಯ ಹುಳಿಯನ್ನೆಲ್ಲಾ (ಪಾಪ) ತೆಗೆದುಹಾಕಿರಿ. ಆಗ ನೀವು ಹೊಸ ಹಿಟ್ಟಾಗುವಿರಿ. ನೀವು ನಿಜವಾಗಿಯೂ ಹುಳಿರಹಿತವಾದ ಪಸ್ಕದ ರೊಟ್ಟಿಯಾಗಿದ್ದೀರಿ. ಹೌದು, ನಮ್ಮ ಪಸ್ಕದ ಕುರಿಮರಿಯಾದ ಕ್ರಿಸ್ತನು ಆಗಲೇ ಕೊಲ್ಲಲ್ಪಟ್ಟಿದ್ದಾನೆ.
8 ಆದ್ದರಿಂದ ನಾವು ಪಸ್ಕದ ಊಟ ಮಾಡೋಣ. ದುಷ್ಟತನ ಮತ್ತು ಕೆಡುಕತನ ಎಂಬ ಹಳೆಯ ಹುಳಿಯಿಂದ ಕೂಡಿರುವ ರೊಟ್ಟಿಯನ್ನು ನಾವು ತಿನ್ನದೆ ಹುಳಿರಹಿತವಾದ ರೊಟ್ಟಿಯನ್ನು ತಿನ್ನೋಣ. ಸರಳತೆ ಮತ್ತು ಸತ್ಯತೆ ಇವುಗಳೇ ಆ ಹುಳಿರಹಿತ ರೊಟ್ಟಿ.
9 ಲೈಂಗಿಕ ಪಾಪ ಮಾಡುವ ಜನರ ಸಹವಾಸ ಮಾಡಕೂಡದೆಂದು ನಾನು ನನ್ನ ಪತ್ರದಲ್ಲಿ ನಿಮಗೆ ಬರೆದಿದ್ದೆ.
10 ಆದರೆ ಈ ಲೋಕದ ಪಾಪಿಷ್ಠ ಜನರ ಸಹವಾಸವನ್ನು ನೀವು ಮಾಡಕೂಡದೆಂಬ ಅರ್ಥದಲ್ಲಿ ನಾನು ಅದನ್ನು ಬರೆದಿರಲಿಲ್ಲ. ಈ ಲೋಕದ ಜನರು ಲೈಂಗಿಕ ಪಾಪ ಮಾಡುತ್ತಾರೆ; ಅವರು ಸ್ವಾರ್ಥಿಗಳಾಗಿದ್ದಾರೆ; ಒಬ್ಬರಿಗೊಬ್ಬರು ಮೋಸ ಮಾಡುತ್ತಾರೆ; ವಿಗ್ರಹಗಳನ್ನು ಪೂಜಿಸುತ್ತಾರೆ. ಆ ಜನರಿಂದ ದೂರವಿರಬೇಕಾದರೆ, ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾಗುತ್ತದೆ.
11 ಆದರೆ ಕ್ರಿಸ್ತನಲ್ಲಿ ತನ್ನನ್ನು ಸಹೋದರನೆಂದು ಹೇಳಿಕೊಳ್ಳುವವನು ಲೈಂಗಿಕ ಪಾಪ ಮಾಡುವವನಾಗಿದ್ದರೆ, ಸ್ವಾರ್ಥಿಯಾಗಿದ್ದರೆ, ವಿಗ್ರಹಗಳನ್ನು ಪೂಜಿಸುವವನಾಗಿದ್ದರೆ, ಜನರಿಗೆ ಕೆಟ್ಟ ಮಾತುಗಳನ್ನಾಡುವವನಾಗಿದ್ದರೆ, ಮದ್ಯಪಾನ ಮಾಡಿ ಮತ್ತನಾಗುವವನಾಗಿದ್ದರೆ, ಜನರಿಗೆ ಮೋಸ ಮಾಡುವವನಾಗಿದ್ದರೆ, ಅವನ ಸಹವಾಸ ಮಾಡಬಾರದು; ಅವನೊಂದಿಗೆ ಊಟವನ್ನು ಸಹ ಮಾಡಬಾರದು.
12-13 ಸಭೆಗೆ ಸೇರಿಲ್ಲದ ಜನರಿಗೆ ತೀರ್ಪು ಮಾಡುವುದು ನನ್ನ ಕೆಲಸವಲ್ಲ. ಅವರಿಗೆ ದೇವರೇ ತೀರ್ಪು ಮಾಡುವನು. ಆದರೆ ಸಭೆಗೆ ಸೇರಿರುವ ಜನರಿಗೆ ನೀವು ತೀರ್ಪು ಮಾಡಬೇಕು. “ದುಷ್ಟನನ್ನು ಸಭೆಯಿಂದ ಹೊರಗೆ ಹಾಕಿ” ಎಂದು ಪವಿತ್ರ ಗ್ರಂಥ ಹೇಳುತ್ತದೆ.