6
ಕ್ರೈಸ್ತರ ನಡುವೆ ನ್ಯಾಯನಿರ್ಣಯದ ಸಮಸ್ಯೆಗಳು
1 ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವಿರೋಧವಿದ್ದರೆ, ನೀವು ನ್ಯಾಯಾಲಯಗಳಿಗೆ ಹೋಗುವುದೇಕೆ? ಅವರು ನೀತಿವಂತರಲ್ಲ. ಹೀಗಿರಲು ನಿಮಗೆ ನ್ಯಾಯತೀರ್ಪು ಮಾಡಲು ಅವರಿಗೆ ನೀವು ಅವಕಾಶ ಮಾಡಿಕೊಡುವುದೇಕೆ? ನಿಮಗೆ ನಾಚಿಕೆಯಾಗಬೇಕು. ನಿಮಗೆ ನ್ಯಾಯತೀರ್ಪು ನೀಡಲು ನೀವು ದೇವಜನರಿಗೆ ಏಕೆ ಅವಕಾಶ ಕೊಡಬಾರದು?
2 ದೇವಜನರು ಲೋಕಕ್ಕೆ ತೀರ್ಪು ಮಾಡುವರೆಂಬುದು ನಿಮಗೆ ತಿಳಿಯದೋ? ದೇವಜನರು ಲೋಕಕ್ಕೆ ನ್ಯಾಯತೀರ್ಪು ಮಾಡುವವರಾಗಿದ್ದರೆ, ಇಂಥ ಚಿಕ್ಕ ಸಂಗತಿಗಳ ಬಗ್ಗೆಯೂ ನ್ಯಾಯತೀರ್ಪು ಮಾಡಬಲ್ಲರೆಂಬುದು ನಿಶ್ಚಯವಾಗಿದೆ.
3 ಮುಂದಿನ ಕಾಲದಲ್ಲಿ ನಾವು ದೇವದೂತರಿಗೂ ನ್ಯಾಯತೀರಿಸುತ್ತೇವೆ ಎಂಬುದು ನಿಮಗೆ ಗೊತ್ತಿದೆ. ಆದ್ದರಿಂದ ಈ ಜೀವಿತದ ಸಂಗತಿಗಳನ್ನು ಕುರಿತು ನಾವು ತೀರ್ಪುಮಾಡಬಲ್ಲೆವು.
4 ಹೀಗಿರಲು, ನಿಮಲ್ಲಿ ಭಿನ್ನಾಭಿಪ್ರಾಯಗಳಿದ್ದು ಅದಕ್ಕೆ ನ್ಯಾಯನಿರ್ಣಯದ ಅಗತ್ಯವಿರುವಾಗ, ಸಭೆಗೆ ಸೇರಿಲ್ಲದ ಜನರ ಬಳಿಗೆ ನೀವು ಆ ಸಂಗತಿಗಳನ್ನು ತೆಗೆದುಕೊಂಡು ಹೋಗುವುದೇಕೆ? ಆ ಜನರಿಗೆ ಸಭೆಯಲ್ಲಿ ಯಾವ ಮಾನ್ಯತೆಯೂ ಇಲ್ಲ.
5 ನಿಮ್ಮನ್ನು ನಾಚಿಕೆಪಡಿಸಲು ಹೀಗೆ ಹೇಳುತ್ತಿದ್ದೇನೆ. ವಿಶ್ವಾಸಿಗಳಾಗಿರುವ ಇಬ್ಬರು ಸಹೋದರರ ನಡುವೆ ಉಂಟಾಗಿರುವ ವ್ಯಾಜ್ಯಕ್ಕೆ ತೀರ್ಪು ನೀಡಬಲ್ಲ ಜ್ಞಾನಿಯೊಬ್ಬನು ನಿಮ್ಮ ಸಭೆಯಲ್ಲಿ ಇಲ್ಲವೇ?
6 ನಿಮ್ಮಲ್ಲಿ ಒಬ್ಬ ಸಹೋದರನು ಮತ್ತೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅವರ ವ್ಯಾಜ್ಯಕ್ಕೆ ತೀರ್ಪು ನೀಡಲು ಅವಿಶ್ವಾಸಿಗಳಿಗೆ ನೀವು ಅವಕಾಶ ಮಾಡಿಕೊಟ್ಟಿದ್ದೀರಿ!
7 ನೀವು ಆಗಲೇ ಸೋತು ಹೋಗಿದ್ದೀರೆಂಬುದನ್ನು ನಿಮ್ಮ ಮಧ್ಯದಲ್ಲಿರುವ ವ್ಯಾಜ್ಯಗಳೇ ಸೂಚಿಸುತ್ತವೆ. ಅದಕ್ಕಿಂತ, ನೀವು ಕೆಟ್ಟದ್ದನ್ನು ಸಹಿಸಿಕೊಳ್ಳಬೇಕಿತ್ತು; ಮೋಸವನ್ನು ತಾಳಿಕೊಳ್ಳಬೇಕಿತ್ತು.
8 ಆದರೆ ಸ್ವತಃ ನೀವೇ ಕೆಟ್ಟದ್ದನ್ನು ಮಾಡುತ್ತೀರಿ ಮತ್ತು ಮೋಸ ಮಾಡುತ್ತೀರಿ! ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನಿಗೇ ನೀವು ಹೀಗೆ ಮಾಡುತ್ತೀರಿ.
9-10 ಅಧರ್ಮಿಗಳು ದೇವರ ರಾಜ್ಯವನ್ನು ಪಡೆಯುವುದಿಲ್ಲವೆಂದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ದೇವರ ರಾಜ್ಯಕ್ಕೆ ಸೇರದ ಜನರು ಯಾರ್ಯಾರೆಂದರೆ: ಲೈಂಗಿಕ ಪಾಪ ಮಾಡುವವರು, ವಿಗ್ರಹಗಳನ್ನು ಪೂಜಿಸುವವರು, ವ್ಯಭಿಚಾರ ಮಾಡುವವರು, ಸಲಿಂಗಕಾಮಿಗಳು, ಕದಿಯುವವರು, ಸ್ವಾರ್ಥಿಗಳು, ಕುಡುಕರು, ಬೈಯುವವರು ಮತ್ತು ಮೋಸಗಾರರು.
11 ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರಾತ್ಮನ ಮೂಲಕವಾಗಿಯೂ ನೀವು ತೊಳೆಯಲ್ಪಟ್ಟಿರಿ; ಪರಿಶುದ್ಧರಾದಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿಕೊಂಡಿರಿ.
ದೇವರ ಮಹಿಮೆಗಾಗಿ ನಿಮ್ಮ ದೇಹಗಳನ್ನು ಉಪಯೋಗಿಸಿರಿ
12 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಸ್ವತಂತ್ರವಿದೆ.” ಆದರೆ ಪ್ರತಿಯೊಂದೂ ಜನರಿಗೆ ಪ್ರಯೋಜಕವಲ್ಲ. “ಪ್ರತಿಯೊಂದನ್ನೂ ಮಾಡುವುದಕ್ಕೆ ನನಗೆ ಸ್ವತಂತ್ರವಿದೆ.” ಆದರೆ ನಾನು ಯಾವುದನ್ನೂ ನನ್ನ ಒಡೆಯನನ್ನಾಗಿ ಮಾಡಿಕೊಳ್ಳುವುದಿಲ್ಲ.
13 “ಆಹಾರವು ಹೊಟ್ಟೆಗೋಸ್ಕರವಿದೆ, ಹೊಟ್ಟೆಯು ಆಹಾರಕ್ಕೋಸ್ಕರವಿದೆ.” ಹೌದು, ದೇವರು ಅವೆರಡನ್ನು ನಾಶಮಾಡುವನು. ದೇಹವಿರುವುದು ಲೈಂಗಿಕ ಪಾಪಮಾಡುವುದಕ್ಕಾಗಿಯಲ್ಲ. ದೇಹವು ಪ್ರಭುವಿಗೋಸ್ಕರವಿದೆ, ಪ್ರಭುವು ದೇಹಕ್ಕೋಸ್ಕರವಿದ್ದಾನೆ.
14 ದೇವರು ತನ್ನ ಶಕ್ತಿಯಿಂದ ಪ್ರಭು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ದೇವರು ನಮ್ಮನ್ನು ಸಹ ಜೀವಂತವಾಗಿ ಎಬ್ಬಿಸುವನು.
15 ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿಲ್ಲವೇ? ಹೀಗಿರಲಾಗಿ, ನಾನು ಕ್ರಿಸ್ತನ ಅಂಗಗಳನ್ನು ತೆಗೆದುಕೊಂಡು ಅವುಗಳನ್ನು ಸೂಳೆಯ ಅಂಗಗಳನ್ನಾಗಿ ಮಾಡಕೂಡದು.
16 “ಇಬ್ಬರೂ ಒಂದೇ ದೇಹವಾಗುತ್ತಾರೆ” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದ್ದರಿಂದ ಸೂಳೆಯೊಂದಿಗೆ ಲೈಂಗಿಕ ಸಂಬಂಧವಿರುವವನು ಆಕೆಯೊಂದಿಗೆ ಒಂದೇ ದೇಹವಾಗಿದ್ದಾನೆ ಎಂಬುದು ನಿಮಗೆ ತಿಳಿದಿರಬೇಕು.
17 ಆದರೆ ಪ್ರಭುವಿನೊಂದಿಗೆ ಸಂಬಂಧವನ್ನು ಹೊಂದಿರುವಂಥವನು ಆತ್ಮದಲ್ಲಿ ಪ್ರಭುವಿನೊಂದಿಗೆ ಒಂದಾಗಿರುತ್ತಾನೆ.
18 ಆದ್ದರಿಂದ ಲೈಂಗಿಕ ಪಾಪದಿಂದ ಓಡಿಹೋಗಿರಿ. ಒಬ್ಬನು ಮಾಡುವ ಇತರ ಪಾಪಗಳೆಲ್ಲಾ ಅವನ ದೇಹದ ಹೊರಗಾಗಿವೆ. ಆದರೆ ಲೈಂಗಿಕ ಪಾಪ ಮಾಡುವ ವ್ಯಕ್ತಿ ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.
19 ನಿಮ್ಮ ದೇಹವು ಪವಿತ್ರಾತ್ಮನಿಗೆ ಆಲಯವಾಗಿದೆ ಎಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮೊಳಗಿದ್ದಾನೆ. ನೀವು ದೇವರಿಂದ ಆತನನ್ನು ಹೊಂದಿಕೊಂಡಿರಿ. ನೀವು ನಿಮ್ಮ ಸ್ವಂತ ಸ್ವತ್ತುಗಳಲ್ಲ.
20 ನೀವು ದೇವರಿಂದ ಕ್ರಯಕ್ಕೆ ಕೊಳ್ಳಲ್ಪಟ್ಟವರು. ಆದ್ದರಿಂದ ನಿಮ್ಮ ದೇಹಗಳಿಂದ ದೇವರನ್ನು ಘನಪಡಿಸಿರಿ.