12
ಯುಗದ ಸಮಾಪ್ತಿ
“ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾಪಾಲಕನಾದ ದೇವದೂತ ಮೀಕಾಯೇಲನು ಆ ಕಾಲದಲ್ಲಿ ಏಳುವನು. ಮೊಟ್ಟಮೊದಲು ಜನಾಂಗವು ಉಂಟಾದ ದಿನದಿಂದ ಇಂದಿನವರೆಗೂ ಸಂಭವಿಸದಂಥ ಸಂಕಟವು ಸಂಭವಿಸುವುದು. ಆಗ ನಿನ್ನ ಜನರೊಳಗೆ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಸಿಕ್ಕುವವೋ ಅವರೆಲ್ಲರೂ ರಕ್ಷಿಸಲ್ಪಡುವರು. ಸತ್ತು ಧೂಳಿನ ನೆಲದೊಳಗೆ ದೀರ್ಘ ನಿದ್ರೆಮಾಡುವವರಲ್ಲಿ ಅನೇಕರು ಎಚ್ಚೆತ್ತು ಕೆಲವರು ನಿತ್ಯಜೀವವನ್ನು, ಕೆಲವರು ನಿಂದನೆ ಮತ್ತು ನಿತ್ಯತಿರಸ್ಕಾರಗಳನ್ನು ಅನುಭವಿಸುವರು. ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಬಹಳ ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು. ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು, ಅವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆ ಹಾಕು. ಅಂತ್ಯಕಾಲದ ವರೆಗೆ ಮರೆಯಾಗಿರಲಿ. ಬಹಳ ಜನರು ಅತ್ತಿತ್ತ ತಿರುಗುವರು, ತಿಳಿವಳಿಕೆಯು ಹೆಚ್ಚುವುದು.”
ಕೂಡಲೆ ದಾನಿಯೇಲನಾದ ನಾನು ಮತ್ತಿಬ್ಬರನ್ನು ಕಂಡೆನು. ಅವರೊಳಗೆ ಒಬ್ಬನು ನದಿಯ ಈ ದಡದಲ್ಲಿ, ಇನ್ನೊಬ್ಬನು ಆ ದಡದಲ್ಲಿ ನಿಂತಿದ್ದರು. ಇವರಲ್ಲಿ ನದಿಯ ನೀರಿನ ಮೇಲೆ ನಾರಿನ ಹೊದಿಕೆಯನ್ನು ಹೊದ್ದುಕೊಂಡಿದ್ದ ಒಬ್ಬನು, “ಈ ಅಪೂರ್ವ ಕಾರ್ಯಗಳು ಕೊನೆಗಾಣುವುದಕ್ಕೆ ಎಷ್ಟು ಕಾಲ ಹಿಡಿಯುವುದು?” ಎಂದು ಕೇಳಿದನು. ನದಿಯ ನೀರಿನ ಮೇಲೆ ನಾರಿನ ಹೊದಿಕೆಯನ್ನು ಹೊದ್ದುಕೊಂಡು ನಿಂತಿದ್ದ ಪುರುಷನನ್ನು ಕೇಳಲು, ಆ ಪುರುಷನು ಎಡ ಮತ್ತು ಬಲಗೈಗಳನ್ನು ಆಕಾಶದ ಕಡೆಗೆ ಎತ್ತಿಕೊಂಡು, “ಶಾಶ್ವತ ಜೀವಸ್ವರೂಪನಾಣೆ, ಒಂದು ಕಾಲ, ಎರಡುಕಾಲ, ಅರ್ಧಕಾಲ* ಕಳೆಯಬೇಕು. ದೇವಜನರ ಬಲವನ್ನು ಸಂಪೂರ್ಣವಾಗಿ ಮುರಿದುಬಿಟ್ಟ ಮೇಲೆ ಈ ಕಾರ್ಯಗಳೆಲ್ಲಾ ಮುಕ್ತಾಯವಾಗುವವು” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು. ನನಗೆ ಕೇಳಿಸಿದರೂ ಅರ್ಥವಾಗಲಿಲ್ಲ. ಆಗ ನಾನು, “ಎನ್ನೊಡೆಯನೇ, ಈ ಕಾರ್ಯಗಳ ಪರಿಣಾಮವೇನು?” ಎಂದು ಪ್ರಶ್ನೆ ಮಾಡಲು, ಅವನು, “ದಾನಿಯೇಲನೇ, ಈ ಮಾತುಗಳು ಅಂತ್ಯಕಾಲದ ವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿವೆ, ಹೋಗು. 10 ಅನೇಕರು ತಮ್ಮನ್ನು ಶುದ್ಧೀಕರಿಸಿ, ಶುಭ್ರಮಾಡಿಕೊಂಡು ಶೋಧಿತರಾಗುವರು; ದುಷ್ಟರು ದುಷ್ಟರಾಗಿಯೇ ನಡೆಯುವರು, ಅವರಲ್ಲಿ ಯಾರಿಗೂ ವಿವೇಕವಿರದು; ಜ್ಞಾನಿಗಳಿಗೆ ವಿವೇಕವಿರುವುದು. 11 ನಿತ್ಯಹೋಮವು ನೀಗಿಸಲ್ಪಟ್ಟು, ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ ಸಾವಿರದ ಇನ್ನೂರತ್ತೊಂಭತ್ತು ದಿನಗಳು ಕಳೆಯಬೇಕು. 12 ಕಾದುಕೊಂಡು, ಸಾವಿರದ ಮುನ್ನೂರ ಮೂವತ್ತೈದು ದಿನಗಳ ಕೊನೆಯವರೆಗೆ ತಾಳುವವನು ಧನ್ಯನು. 13 ನೀನು ಹೋಗಿ ಅಂತ್ಯದ ವರೆಗೆ ವಿಶ್ವಾಸದಿಂದ ಇರು. ನೀನು ದೀರ್ಘನಿದ್ರೆಯನ್ನು ಹೊಂದಿ, ಯುಗದ ಸಮಾಪ್ತಿಯಲ್ಲಿ ಎದ್ದು, ನಿನಗಾಗುವ ಸ್ವತ್ತಿನೊಳಗೆ ನಿಲ್ಲುವಿ” ಎಂದು ಹೇಳಿದನು.
* 12:7 ಒಂದು ಕಾಲ, ಎರಡುಕಾಲ, ಅರ್ಧಕಾಲ ಅಂದರೆ ಮೂರುವರೆ ವರ್ಷ.