ಹೋಶೇಯನು
ಗ್ರಂಥಕರ್ತೃತ್ವ
ಹೋಶೇಯನ ಪುಸ್ತಕದಲ್ಲಿರುವ ಬಹುತೇಕ ಸಂದೇಶಗಳು ಹೋಶೇಯನಿಂದ ನುಡಿಯಲ್ಪಟ್ಟಿರುವ ಸಂದೇಶಗಳಾಗಿವೆ. ಅವುಗಳನ್ನು ತಾನೇ ಬರೆದಿದ್ದಾನೋ ಎಂದು ನಮಗೆ ಗೊತ್ತಿಲ್ಲ; ಹೋಶೇಯನು ದೇವರಿಗಾಗಿ ಮಾತನಾಡಿದನೆಂಬ ದೃಢ ನಿಶ್ಚಯತೆಯುಳ್ಳ ಹಿಂಬಾಲಕರು ಬಹುಶಃ ಅವನ ಮಾತುಗಳನ್ನು ಸಂಕಲಿಸಿರಬಹುದು. “ರಕ್ಷಣೆ” ಎಂಬುದು ಪ್ರವಾದಿಯ ಹೆಸರಿನ ಅರ್ಥವಾಗಿದೆ, ಇತರ ಯಾವುದೇ ಪ್ರವಾದಿಗಳಿಗಿಂತಲೂ ಹೆಚ್ಚಾಗಿ, ಹೋಶೇಯನು ತನ್ನ ಸಂದೇಶವನ್ನು ತನ್ನ ವೈಯಕ್ತಿಕ ಜೀವನದೊಂದಿಗೆ ನಿಕಟವಾಗಿ ಸಂಯೋಜಿಸಿಕೊಂಡಿದ್ದನು. ಅಂತಿಮವಾಗಿ ಅವನ ವಿಶ್ವಾಸಕ್ಕೆ ದ್ರೋಹ ಬಗೆಯುವಳು ಎಂದು ಅವನಿಗೆ ತಿಳಿದಿದಂಥ ಓರ್ವ ಸ್ತ್ರೀಯನ್ನು ಮದುವೆಯಾಗುವುದರ ಮೂಲಕ ಮತ್ತು ಇಸ್ರಾಯೇಲಿಗೆ ನ್ಯಾಯತೀರ್ಪಿನ ಸಂದೇಶಗಳನ್ನು ರವಾನಿಸುವಂಥ ಹೆಸರುಗಳನ್ನು ತನ್ನ ಮಕ್ಕಳಿಗೆ ಇಡುವುದರ ಮೂಲಕ, ಹೋಶೇಯನ ಪ್ರವಾದನಾತ್ಮಕ ನುಡಿಯು ಅವನ ಕುಟುಂಬದ ಜೀವನದಿಂದ ಪ್ರವಹಿಸಿತ್ತು.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 750-710 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಹೋಶೇಯನ ಸಂದೇಶಗಳನ್ನು ಸಂಗ್ರಹಿಸಿ, ಸಂಪಾದಿಸಿ, ಮತ್ತು ನಕಲಿಸಲಾಗಿದೆ. ಈ ಪ್ರಕ್ರಿಯೆಯು ಯಾವಾಗ ಪೂರ್ಣಗೊಂಡಿತ್ತು ಎಂಬುದು ಸ್ಪಷ್ಟವಾಗಿಲ್ಲ, ಆದರೆ ಬಹುಶಃ ಯೆರೂಸಲೇಮಿನ ನಾಶಕ್ಕೆ ಮುಂಚಿತವಾಗಿ ಅದು ಮುಕ್ತಾಯವಾಗಿರಬಹುದು.
ಸ್ವೀಕೃತದಾರರು
ಹೋಶೇಯನ ಮೌಖಿಕ ಸಂದೇಶದ ಮೂಲ ಪ್ರೇಕ್ಷಕರು ಇಸ್ರಾಯೇಲಿನ ಉತ್ತರದ ರಾಜ್ಯದವರಾಗಿರಬಹುದು. ಅವರು ಧ್ವಂಸವಾದ ನಂತರ, ಅವನ ಮಾತುಗಳನ್ನು ನ್ಯಾಯತೀರ್ಪಿನ ಪ್ರವಾದನಾತ್ಮಕ ಎಚ್ಚರಿಕೆಗಳು, ಪಶ್ಚಾತ್ತಾಪದ ಕರೆ, ಮತ್ತು ಪುನಃಸ್ಥಾಪನೆಯ ವಾಗ್ದಾನವಾಗಿ ಸಂರಕ್ಷಿಸಲಾಗಿದೆ.
ಉದ್ದೇಶ
ದೇವರು ನಂಬಿಗಸ್ತಿಕೆಯನ್ನು ಬಯಸುತ್ತಾನೆ ಎಂದು ಇಸ್ರಾಯೇಲ್ಯರಿಗೂ ಮತ್ತು ನಮಗೂ ಜ್ಞಾಪಿಸಲು ಹೋಶೇಯನು ಈ ಪುಸ್ತಕವನ್ನು ಬರೆದಿದ್ದಾನೆ. ಯೆಹೋವನು ಒಬ್ಬನೇ ನಿಜವಾದ ದೇವರು, ಮತ್ತು ಆತನು ಅವಿಭಜಿತ ನಿಷ್ಠೆಯನ್ನು ಬಯಸುತ್ತಾನೆ. ಪಾಪವು ನ್ಯಾಯತೀರ್ಪನ್ನು ಉಂಟುಮಾಡುತ್ತದೆ. ಸಂಕಟಕರವಾದ ಪರಿಣಾಮಗಳು, ಆಕ್ರಮಣ ಮತ್ತು ದಾಸತ್ವದ ಬಗ್ಗೆ ಹೋಶೇಯನು ಎಚ್ಚರಿಸಿದನು. ವಾಗ್ದಾನವನ್ನು ಮಾಡಿ ನಂತರ ಅದನ್ನು ಮುರಿದುಹಾಕುವ ಮಾನವರಂತೆ ದೇವರು ನಂಬಿಗಸ್ತಿಕೆಯು ಇರುವುದಿಲ್ಲ. ಇಸ್ರಾಯೇಲಿನ ನಂಬಿಕೆದ್ರೋಹದ ಹೊರತಾಗಿಯೂ, ದೇವರು ಅವರನ್ನು ಪ್ರೀತಿಸುತ್ತಿರುವುದನ್ನು ಮುಂದುವರಿಸಿ, ಅವರ ಪುನಃಸ್ಥಾಪನೆಗಾಗಿ ಮಾರ್ಗವನ್ನು ಒದಗಿಸಿಕೊಟ್ಟನು. ಹೋಶೇಯನ ಮತ್ತು ಗೋಮೆರಳ ಮದುವೆಯ ಸಾಂಕೇತಿಕ ಪ್ರಸ್ತುತಿಯ ಮೂಲಕ, ವಿಗ್ರಹಾರಾಧಕ ಇಸ್ರಾಯೇಲ್ ರಾಷ್ಟ್ರದ ಮೇಲಿರುವ ದೇವರ ಪ್ರೀತಿಯನ್ನು ಪಾಪ, ನ್ಯಾಯತೀರ್ಪು ಮತ್ತು ಕ್ಷಮಿಸುವ ಪ್ರೀತಿ ಎಂಬ ವಿಷಯಗಳಲ್ಲಿ ಮನೋರಂಜಕವಾದ ರೂಪಕವಾಗಿ ಪ್ರದರ್ಶಿಸಲಾಗಿದೆ.
ಮುಖ್ಯಾಂಶ
ಅಪನಂಬಿಗಸ್ತಿಕೆ
ಪರಿವಿಡಿ
1. ಹೋಶೇಯನ ದ್ರೋಹಿಯಾದ ಹೆಂಡತಿ — 1:1-11
2. ಇಸ್ರಾಯೇಲರಿಗೆ ಉಂಟಾದ ದೇವರ ಶಿಕ್ಷೆ ಮತ್ತು ನ್ಯಾಯತೀರ್ಪು — 2:1-23
3. ದೇವರು ತನ್ನ ಜನರನ್ನು ವಿಮೋಚಿಸಿದ್ದು — 3:1-5
4. ಇಸ್ರಾಯೇಲರ ಶಿಕ್ಷೆ ಮತ್ತು ಅಪನಂಬಿಗಸ್ತಿಕೆ — 4:1-10:15
5. ದೇವರ ಪ್ರೀತಿ ಮತ್ತು ಇಸ್ರಾಯೇಲಿನ ಪುನಃಸ್ಥಾಪನೆ — 11:1-14:9
1
ಹೋಶೇಯನ ಪತ್ನಿಯ ಪತಿದ್ರೋಹ
1 ಯೆಹೂದದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ, ಇವರ ಕಾಲದಲ್ಲಿ, ಅಂದರೆ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ಕಾಲದಲ್ಲಿ ಬೆಯೇರಿಯ ಮಗನಾದ ಹೋಶೇಯನಿಗೆ ಯೆಹೋವನು ತನ್ನ ವಾಕ್ಯವನ್ನು ದಯಪಾಲಿಸಿದನು.
ಹೋಶೇಯನ ಮದುವೆ ಮತ್ತು ಮೂವರು ಮಕ್ಕಳು ಜನಿಸಿದ್ದು
2 ಯೆಹೋವನು ಹೋಶೇಯನ ಸಂಗಡ ಮೊದಲು ಮಾತನಾಡಿದಾಗ ಆತನು ಅವನಿಗೆ, “ನೀನು ಹೋಗಿ ಒಬ್ಬ ವ್ಯಭಿಚಾರಿಣಿಯನ್ನು ಮದುವೆಮಾಡಿಕೊಂಡು ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ.
ಏಕೆಂದರೆ, ದೇಶವು ನನ್ನನ್ನು ಬಿಟ್ಟು ಅಧಿಕ ವ್ಯಭಿಚಾರವನ್ನು ನಡೆಸುತ್ತದೆ ಎಂಬುದಕ್ಕೆ ಇದು ದೃಷ್ಟಾಂತವಾಗಿರಲಿ” ಎಂದು ಹೇಳಿದನು.
3 ಅದರಂತೆ ಹೋಶೇಯನು ಹೋಗಿ ದಿಬ್ಲಯಿಮನ ಮಗಳಾದ ಗೋಮೆರಳನ್ನು ಮದುವೆಯಾದನು. ಅವಳು ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ಕೊಟ್ಟಳು.
4 ಯೆಹೋವನು ಅವನನ್ನು ಕುರಿತು, “ಈ ಮಗುವಿಗೆ ಇಜ್ರೇಲ್ ಎಂಬ ಹೆಸರಿಡು; ಇಜ್ರೇಲಿನಲ್ಲಿ ಸುರಿಸಿದ ರಕ್ತಕ್ಕೆ ಪ್ರತಿಯಾಗಿ ಸ್ವಲ್ಪ ಕಾಲದೊಳಗೆ ನಾನು ಯೇಹು ವಂಶದವರಿಗೆ ಮುಯ್ಯಿ ತೀರಿಸಿ ಇಸ್ರಾಯೇಲ್ ಜನಾಂಗವನ್ನು ನಿರ್ನಾಮ ಮಾಡುವೆನು.
5 ಆ ದಿನದಲ್ಲಿ ನಾನು ಇಜ್ರೇಲ್ ತಗ್ಗಿನೊಳಗೆ ಇಸ್ರಾಯೇಲಿನ ಬಿಲ್ಲನ್ನು ಮುರಿದುಬಿಡುವೆನು” ಎಂದನು.
6 ಗೋಮೆರಳು ಪುನಃ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಯೆಹೋವನು ಹೋಶೇಯನಿಗೆ, “ಈ ಮಗುವಿಗೆ ‘ಲೋ ರುಹಾಮ’ ಎಂಬ ಹೆಸರಿಡು; ಏಕೆಂದರೆ ನಾನು ಇಸ್ರಾಯೇಲ್ ವಂಶದವರಲ್ಲಿ ಇನ್ನು ವಾತ್ಸಲ್ಯವಿಡುವುದಿಲ್ಲ, ಅವರನ್ನು ಕ್ಷಮಿಸುವುದಿಲ್ಲ.
7 ಆದರೆ ನಾನು ಯೆಹೂದ ವಂಶದವರಲ್ಲಿ ವಾತ್ಸಲ್ಯವಿಟ್ಟು ಅವರನ್ನು ಉದ್ಧರಿಸುವೆನು. ಬಿಲ್ಲು, ಕತ್ತಿ, ಕಾಳಗ, ಕುದುರೆ, ರಾಹುತರ, ಮೂಲಕವಲ್ಲ, ಅವರ ದೇವರಾದ ಯೆಹೋವನ ಬಲದಿಂದಲೇ ಅವರನ್ನು ರಕ್ಷಿಸುವೆನು” ಅಂದನು.
8 ಆ ಕೂಸು ಮೊಲೆ ಬಿಟ್ಟ ಮೇಲೆ ಅವಳು ಪುನಃ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದಳು.
9 ಆಗ ಯೆಹೋವನು, “ಈ ಮಗುವಿಗೆ ‘ಲೋ ಅಮ್ಮಿ’ ಎಂಬ ಹೆಸರಿಡು; ಏಕೆಂದರೆ ನೀವು ನನ್ನ ಪ್ರಜೆಯಲ್ಲ, ನಾನು ಇನ್ನು ನಿಮ್ಮ ದೇವರಲ್ಲ” ಎಂದನು.
ಇಸ್ರಾಯೇಲಿನ ಮುಂದಿನ ಸುಸ್ಥಿತಿ
10 ಇಸ್ರಾಯೇಲರ ಸಂಖ್ಯೆಯು ಅಳೆಯುವುದಕ್ಕೂ, ಲೆಕ್ಕಿಸುವುದಕ್ಕೂ ಅಸಾಧ್ಯವಾದ ಸಮುದ್ರತೀರದ ಮರಳಿನಂತಾಗುವುದು.
ಆಗ ಅವರು ನನ್ನ ಪ್ರಜೆಯಲ್ಲ ಎನಿಸಿಕೊಳ್ಳುವುದಕ್ಕೆ ಬದಲಾಗಿ ಜೀವಸ್ವರೂಪನಾದ ದೇವರ ಮಕ್ಕಳು ಎನಿಸಿಕೊಳ್ಳುವರು.
11 ಯೆಹೂದ್ಯರು ಮತ್ತು ಇಸ್ರಾಯೇಲರೂ ಒಟ್ಟುಗೂಡಿ ಒಬ್ಬನನ್ನೇ ಶಿರಸ್ಸನ್ನಾಗಿ ಮಾಡಿಕೊಂಡು ದೇಶದೊಳಗಿಂದ ಹೊರಡುವರು; ಇಜ್ರೇಲಿನ ಸುದಿನವು ಅತಿವಿಶೇಷವಾದದ್ದು.