39
ಗೋಗನ ಸೋಲು
1 ಈಗ, “ನರಪುತ್ರನೇ, ನೀನು ಗೋಗನಿಗೆ ವಿರುದ್ಧವಾಗಿ ಈ ಪ್ರವಾದನೆಯನ್ನು ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ರೋಷ್, ಮೆಷೆಕ್, ತೂಬಲ್ ಜನಾಂಗಗಳ ಪ್ರಭುವಾದ ಗೋಗನೇ, ಆಹಾ! ನಾನು ನಿನ್ನ ವಿರುದ್ಧವಾಗಿದ್ದೇನೆ.
2 ನಾನು ನಿನ್ನನ್ನು ಪರಿವರ್ತಿಸಿ, ಮುಂದುವರಿಸಿ ಉತ್ತರದಿಕ್ಕಿನ ಕಟ್ಟಕಡೆಯಿಂದ ಬರಮಾಡಿ, ಇಸ್ರಾಯೇಲಿನ ಪರ್ವತಗಳ ಮೇಲೆ ನುಗ್ಗಿಸಿ,
3 ನಾನು ನಿನ್ನ ಎಡಗೈಯಲ್ಲಿರುವ ಬಿಲ್ಲನ್ನು ಹೊಡೆದು ಹಾಕಿ, ನಿನ್ನ ಬಲಗೈಯಲ್ಲಿರುವ ಬಾಣಗಳನ್ನು ಬೀಳುವಂತೆ ಮಾಡುವೆನು.
4 ನೀನೂ, ನಿನ್ನ ಎಲ್ಲಾ ಸೈನ್ಯದಳಗಳೂ ಮತ್ತು ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳಲ್ಲಿ ಬೀಳುವಿರಿ; ನಾನು ನಿಮ್ಮನ್ನು ಹದ್ದುಗಳಿಗೂ, ಪಕ್ಷಿಗಳಿಗೂ ಕಾಡಿನ ಮೃಗಗಳಿಗೂ, ಬಯಲಿನ ಭೂಜಂತುಗಳಿಗೂ ಆಹಾರವಾಗುವಂತೆ ನಾನು ನಿನ್ನನ್ನು ಕೊಡುವೆನು.
5 ನೀನು ತೆರೆದ ಬಯಲಿನಲ್ಲಿ ಬೀಳುವಿ. ಏಕೆಂದರೆ ನಾನೇ ಅಪ್ಪಣೆ ಕೊಟ್ಟಿದ್ದೇನೆ’ ಎಂದು ಕರ್ತನಾದ ಯೆಹೋವನ ನುಡಿಯುತ್ತಾನೆ.
6 ನಾನು ಮಾಗೋಗ್ ದೇಶದ ಮೇಲೂ, ಕರಾವಳಿಯ ಸೀಮೆಗಳಲ್ಲಿ ನಿರ್ಭಯವಾಗಿ ವಾಸಿಸುವವರ ಮೇಲೂ ಬೆಂಕಿಯನ್ನು ಕಳುಹಿಸುವೆನು. ಆಗ ನಾನೇ ಯೆಹೋವನು ಎಂದು ಅವರಿಗೆ ತಿಳಿಯುವುದು.
7 “ನಾನು ನನ್ನ ಪವಿತ್ರ ನಾಮವನ್ನು ನನ್ನ ಜನರಾದ ಇಸ್ರಾಯೇಲರ ಮಧ್ಯದಲ್ಲಿ ವ್ಯಕ್ತಗೊಳಿಸುವೆನು. ಅದನ್ನು ಇನ್ನು ಮುಂದೆ ಅಪಕೀರ್ತಿಗೆ ಗುರಿಯಾಗದ ಹಾಗೆ ಮಾಡುತ್ತೇನೆ. ನಾನೇ ಯೆಹೋವ, ಇಸ್ರಾಯೇಲಿನ ಸದಮಲಸ್ವಾಮಿ ಎಂದು ಅನ್ಯ ಜನಾಂಗಗಳಿಗೆ ಗೊತ್ತಾಗುವುದು.”
8 ಕರ್ತನಾದ ಯೆಹೋವನು ಇಂತೆನ್ನುತ್ತಾನೆ. “ಇಗೋ! ಇದು ಬಂತು, ಇದು ಸಂಭವಿಸಿತು; ನಾನು ಮುಂತಿಳಿಸಿದ ದಿನವು ಇದೇ.
9 “ಇಸ್ರಾಯೇಲಿನ ಪಟ್ಟಣಗಳ ನಿವಾಸಿಗಳು ಬಯಲಿಗೆ ಬಂದು ಶತ್ರುವಿನ ಆಯುಧಗಳಿಗೆ ಬೆಂಕಿಯಿಟ್ಟು ಸುಟ್ಟುಬಿಡುವರು. ಹೌದು, ಖೇಡ್ಯ, ಗುರಾಣಿ, ಬಿಲ್ಲು, ಬಾಣ, ದೊಣ್ಣೆ, ಈಟಿ ಇವುಗಳನ್ನು ಏಳು ವರ್ಷಗಳ ತನಕ ಸುಡುತ್ತಲೇ ಬರುವರು.
10 ಅದಕ್ಕಾಗಿ ಅವರು ಕಾಡಿನಿಂದ ಸೌದೆಯನ್ನು ತರಬೇಕಾಗುವುದಿಲ್ಲ, ವನದಲ್ಲಿ ಮರವನ್ನು ಕಡಿಯಬೇಕಾಗುವುದಿಲ್ಲ; ಆಯುಧಗಳನ್ನೇ ಸೌದೆಯನ್ನಾಗಿ ಉರಿಸುವರು; ತಮ್ಮನ್ನು ಸೂರೆಮಾಡಿದವರನ್ನು ತಾವು ಸೂರೆಮಾಡುವರು, ತಮ್ಮನ್ನು ಕೊಳ್ಳೆಹೊಡೆದವರನ್ನು ತಾವು ಕೊಳ್ಳೆಹೊಡೆಯುವರು” ಇದು ಕರ್ತನಾದ ಯೆಹೋವನ ನುಡಿ.
11 “ಆ ದಿನದಲ್ಲಿ ಗೋಗನಿಗೆ ನಾನು ಇಸ್ರಾಯೇಲಿನ ಸಮಾಧಿಗಳಲ್ಲಿ ಸ್ಥಳವನ್ನು ಏರ್ಪಡಿಸುವೆನು; ಲವಣ ಸಮುದ್ರದ ಪೂರ್ವದಿಕ್ಕಿನಲ್ಲಿ ಪ್ರಯಾಣಿಕರ ಮಾರ್ಗವಾದ ಕಣಿವೆಯೇ. ಅಲ್ಲಿ ಪ್ರಯಾಣ ಮಾಡಲು ಆಗುವುದಿಲ್ಲ; ಅಲ್ಲೇ ಗೋಗನನ್ನೂ ಮತ್ತು ಅವನ ಸಮೂಹವೆಲ್ಲವನ್ನೂ ಸಮಾಧಿ ಮಾಡುವರು; ಅ ಕಣಿವೆಯನ್ನು ‘ಗೋಗನ ಸಮೂಹದ ಕಣಿವೆ’ ಎಂದು ಕರೆಯುವರು.
12 ಇಸ್ರಾಯೇಲರು ದೇಶವನ್ನು ಶುದ್ಧಿಮಾಡುವುದಕ್ಕಾಗಿ ಏಳು ತಿಂಗಳು ಅವರನ್ನು ಸಮಾಧಿ ಮಾಡುತ್ತಲೇ ಇರುವರು.
13 ಹೌದು, ದೇಶದ ಸಕಲ ಪ್ರಜೆಗಳು ಅವರನ್ನು ಸಮಾಧಿ ಮಾಡುವರು. ಹೀಗೆ ನಾನು ಮಹಿಮೆಯನ್ನು ಹೊಂದುವ ದಿನವು ನನ್ನ ಜನರಿಗೆ ಸ್ಮರಣೆಯ ದಿನವಾಗಿರುವುದು” ಇದು ಕರ್ತನಾದ ಯೆಹೋವನ ನುಡಿ.
14 ತರುವಾಯ ಅವರು ದೇಶವನ್ನು ಶುದ್ಧಿ ಮಾಡುವುದಕ್ಕೆ ತಕ್ಕವರನ್ನು ಆರಿಸಿ, ದೇಶದಲ್ಲಿ ತಿರುಗುತ್ತಾ ನೆಲದ ಮೇಲೆ ಉಳಿದಿರುವವರನ್ನು ಸಮಾಧಿ ಮಾಡುವುದಕ್ಕೆ ಯಾವಾಗಲೂ ದೇಶವನ್ನು ಹಾದುಹೋಗುವ ಮನುಷ್ಯರನ್ನೇ ನೇಮಿಸುವರು ಮತ್ತು ಏಳು ತಿಂಗಳಾದ ಮೇಲೆ ಇವರು ಈ ಹುಡುಕುವ ಕೆಲಸದಲ್ಲಿ ತೊಡಗುವರು.
15 ಪ್ರಯಾಣಿಕರಲ್ಲಿ ಯಾರೇ ಆಗಲಿ ಪ್ರಯಾಣ ಮಾಡುತ್ತಿರುವಾಗ ಮನುಷ್ಯನ ಎಲುಬನ್ನು ನೋಡಿದರೆ, ಅಲ್ಲಿ ಒಂದು ಗುರುತನ್ನು ನಿಲ್ಲಿಸುವರು; ಸಮಾಧಿ ಮಾಡುವವರು ಗೋಗನ ಸಮೂಹದ ಕಣಿವೆಯಲ್ಲಿ ಅದನ್ನು ಸಮಾಧಿ ಮಾಡುವ ತನಕ ಆ ಗುರುತು ಹಾಗೆಯೇ ನಿಂತಿರುವುದು.
16 ಆ ಪಟ್ಟಣಕ್ಕೆ ‘ಹಮೇನ್’ “ಸಮೂಹಪುರ” ಎಂದು ಹೆಸರಾಗುವುದು. ಹೀಗೆ ಅವರು ದೇಶವನ್ನು ಶುದ್ಧಿಮಾಡುವರು.
17 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನರಪುತ್ರನೇ, ಎಲ್ಲಾ ಬಗೆಯ ಪಕ್ಷಿಗಳಿಗೂ, ಸಮಸ್ತ ಭೂಜಂತುಗಳಿಗೂ ಹೀಗೆ ನುಡಿ, ‘ನೀವು ಕೂಡಿಬನ್ನಿರಿ; ನಾನು ಇಸ್ರಾಯೇಲಿನ ಪರ್ವತಗಳ ಮೇಲೆ ನಿಮಗಾಗಿ ಅರ್ಪಿಸುವ ಮಹಾಯಜ್ಞಕ್ಕೆ ಎಲ್ಲಾ ಕಡೆಯಿಂದಲೂ ನೆರೆದು ಬಂದು, ಮಾಂಸವನ್ನು ತಿಂದು, ರಕ್ತವನ್ನು ಕುಡಿಯಿರಿ.
18 ಟಗರುಗಳ, ಕುರಿಗಳ, ಹೋತಗಳ, ಹೋರಿಗಳ ಅಂತು ಬಾಷಾನಿನ ಕೊಬ್ಬಿದ ಪಶುಗಳ ರಕ್ತವನ್ನು ಕುಡಿಯುವಿರಿ. ನೀವು ಬಲಿಷ್ಠರ ಮತ್ತು ಭೂಪತಿಗಳ ಮಾಂಸವನ್ನು ತಿನ್ನುವಿರಿ.
19 ನಾನು ನಿಮಗೋಸ್ಕರ ಅರ್ಪಿಸುವ ಯಜ್ಞಪಶುಗಳ ಮಾಂಸವನ್ನು ಹೊಟ್ಟೆತುಂಬಾ ತಿನ್ನುವಿರಿ, ರಕ್ತವನ್ನು ಅಮಲೇರುವವರೆಗೂ ಕುಡಿಯುವಿರಿ.
20 ನಾನು ಸಿದ್ಧಪಡಿಸುವ ಆ ಔತಣದಲ್ಲಿ ಕುದುರೆ, ರಾಹುತ, ಶೂರ ಸಕಲ ವಿಧವಾದ ಸೈನಿಕರನ್ನು ಬೇಕಾದಷ್ಟು ಭಕ್ಷಿಸುವಿರಿ’ ” ಇದು ಕರ್ತನಾದ ಯೆಹೋವನ ನುಡಿ.
21 “ನಂತರ ನಾನು ಜನಾಂಗಗಳ ನಡುವೆ ನನ್ನ ಮಹಿಮೆಯನ್ನು ಸ್ಥಾಪಿಸಲು, ಆ ಸೈನಿಕರ ಮೇಲೆ ಕೈಮಾಡಿ, ನ್ಯಾಯದಂಡನೆ ನಡೆಸಿದವನು ನಾನೇ ಎಂಬುದು ಆ ಜನಾಂಗಗಳಿಗೆಲ್ಲಾ ತಿಳಿಯುವುದು.
22 ಹೀಗೆ ಇಸ್ರಾಯೇಲ್ ವಂಶದವರು ನಾನೇ ಅವರ ದೇವರಾದ ಯೆಹೋವನೆಂದು ಅಂದಿನಿಂದ ಯಾವಾಗಲೂ ತಿಳಿದುಕೊಳ್ಳುವರು.
23 “ಇದಲ್ಲದೆ, ಇಸ್ರಾಯೇಲರು ತಮ್ಮ ಅಧರ್ಮದ ನಿಮಿತ್ತವೇ ಸೆರೆಯಾಗಿ ಹೋದರೆಂತಲೂ, ಅವರು ನನಗೆ ದ್ರೋಹಮಾಡಿದ್ದರಿಂದ ನಾನು ಅವರಿಗೆ ವಿಮುಖನಾಗಿ ಅವರೆಲ್ಲರೂ ಖಡ್ಗದಿಂದ ಹತರಾಗುವಂತೆ ಅವರನ್ನು ಶತ್ರುಗಳ ವಶ ಮಾಡಿದೆನೆಂತಲೂ ಜನಾಂಗಗಳಿಗೆ ಗೊತ್ತಾಗುವುದು.
24 ಅವರ ಪಾಪಕ್ಕೂ, ದುರಾಚಾರಗಳಿಗೂ ತಕ್ಕಂತೆ ನಾನು ಅವರನ್ನು ದಂಡಿಸಿ ನನ್ನ ಮುಖವನ್ನು ಅವರಿಗೆ ಮರೆಮಾಡಿದ್ದೇನೆ.”
ದೇವಜನರ ಪುನಃಸ್ಥಾಪನೆ
25 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಪವಿತ್ರನಾಮಕ್ಕೆ ಇನ್ನು ಅಪಕೀರ್ತಿ ಬಾರದಂತೆ ನಾನು ಈಗ ಅನುಕಂಪವುಳ್ಳವನಾಗಿ ಯಾಕೋಬ್ಯರ ದುರಾವಸ್ಥೆಯನ್ನು ತಪ್ಪಿಸಿ, ಇಸ್ರಾಯೇಲ್ ವಂಶದವರಿಗೆಲ್ಲಾ ಕೃಪೆ ತೋರಿಸುವೆನು.
26 ನಾನು ನನ್ನ ಜನರನ್ನು ದೇವದ್ರೋಹಿಗಳಾದ ಅನ್ಯಜನಾಂಗಗಳ ವಶದಿಂದ ತಪ್ಪಿಸಿ, ಆ ಶತ್ರುಗಳ ದೇಶಗಳಿಂದ ಒಟ್ಟುಗೂಡಿಸಿ, ಅನೇಕ ಜನಾಂಗಗಳ ಕಣ್ಣೆದುರಿಗೆ ಅವರ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.
27 ನಾನು ಅವರನ್ನು ಜನರೊಳಗಿಂದ ತಂದ ಮೇಲೆ ಅವರ ಶತ್ರುಗಳ ದೇಶದೊಳಗಿಂದ ಅವರನ್ನು ಕೂಡಿಸಿ, ಅನೇಕ ಜನಾಂಗಗಳ ಮುಂದೆ ಅವರಲ್ಲಿ ಪರಿಶುದ್ಧನಾಗುವೆನು.
28 “ನಾನು ಅವರನ್ನು ಅನ್ಯಜನಾಂಗಗಳೊಳಗೆ ಸೆರೆಹೋಗುವಂತೆ ಮಾಡಿದ ಮೇಲೆ ಅವರನ್ನು ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿದುದರಿಂದ ನಾನೇ ಅವರ ದೇವರಾದ ಯೆಹೋವನು ಎಂದು ದೃಢಮಾಡಿಕೊಳ್ಳುವರು. ಅವರಲ್ಲಿ ಯಾರನ್ನೂ ದೇಶದಲ್ಲಿ ವಾಸಿಸುವುದಕ್ಕೆ ಬಿಡುವುದಿಲ್ಲ.
29 ಇನ್ನೆಂದಿಗೂ ನಾನು ನನ್ನ ಮುಖವನ್ನು ಮರೆಮಾಡುವುದಿಲ್ಲ. ಇಸ್ರಾಯೇಲ್ ವಂಶದ ಮೇಲೆ ನನ್ನ ಆತ್ಮವನ್ನು ಸುರಿಸಿದ್ದೇನೆ” ಇದು ಕರ್ತನಾದ ಯೆಹೋವನ ನುಡಿ.