40
ನೂತನ ದೇವಾಲಯದ ವಿಧಾನ
1 ನಾವು ಸೆರೆಯಾದ ಇಪ್ಪತ್ತೈದನೆಯ ವರ್ಷದ, ಮೊದಲನೆಯ ತಿಂಗಳಿನ, ಹತ್ತನೆಯ ದಿನದಲ್ಲಿ, ಪಟ್ಟಣವು ಹಾಳಾದ ಮೇಲೆ ಹದಿನಾಲ್ಕನೆಯ ವರ್ಷದ ಆ ದಿನದಲ್ಲೇ ಯೆಹೋವನ ಹಸ್ತಸ್ಪರ್ಶದಿಂದ ನಾನು ಪರವಶನಾಗಲು, ಆತನು ನನ್ನನ್ನು ಅಲ್ಲಿಗೆ ಬರಮಾಡಿದನು.
2 ಯೆಹೋವನು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು, ಅತ್ಯುನ್ನತ ಪರ್ವತದ ಮೇಲೆ ಇಳಿಸಿದನೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂದಿತು. ದಕ್ಷಿಣದ ಕಡೆ ಆ ಪರ್ವತದ ಮೇಲೆ ಪಟ್ಟಣದಂತಿರುವ ಕಟ್ಟಡಗಳು ಕಾಣಿಸಿತು.
3 ಆಮೇಲೆ ಆತನು ನನ್ನನ್ನು ಅಲ್ಲಿಗೆ ತಂದಾಗ, ಇಗೋ, ತಾಮ್ರದಂತೆ ಹೊಳೆಯುವ ಒಬ್ಬ ಪುರುಷನು ನಾರಿನ ನೂಲನ್ನು, ಅಳತೆಯ ಕೋಲನ್ನೂ ಕೈಯಲ್ಲಿ ಹಿಡಿದುಕೊಂಡು ಬಾಗಿಲಲ್ಲೇ ನಿಂತುಕೊಂಡಿದ್ದನು.
4 ಆ ಪುರುಷನು ನನಗೆ, “ನರಪುತ್ರನೇ, ನೀನು ಕಣ್ಣಿಟ್ಟು ನೋಡು, ಕಿವಿಗೊಟ್ಟು ಕೇಳು; ನಾನು ನಿನಗೆ ತೋರಿಸುವುದನ್ನೆಲ್ಲಾ ಮನಸ್ಸಿಟ್ಟು ತಿಳಿದುಕೋ. ನಾನು ನಿನಗೆ ತೋರಿಸುವುದನ್ನು ನೀನು ನೋಡಬೇಕೆಂದೇ ಇಲ್ಲಿಗೆ ಬರಮಾಡಿದ್ದೇನೆ. ನೀನು ನೋಡುವುದನ್ನೆಲ್ಲಾ ಇಸ್ರಾಯೇಲ್ ವಂಶದವರಿಗೆ ಪ್ರಕಟಿಸು” ಎಂದು ಹೇಳಿದನು.
ಪೂರ್ವದಿಕ್ಕಿನ ಹೆಬ್ಬಾಗಿಲು
5 ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು. ಆ ಪುರುಷನ ಕೈಯಲ್ಲಿ ಆರು ಮೊಳ ಉದ್ದದ ಅಳತೆ ಕೋಲು ಇತ್ತು. (ಉದ್ದಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ); ಅವನು ಆ ಗೋಡೆಯ ಅಗಲವನ್ನು ಅಳತೆ ಮಾಡಿದಾಗ ಅದರ ಅಗಲವೂ ಮತ್ತು ಎತ್ತರವೂ ಒಂದೇ ಕೋಲಾಗಿತ್ತು.
6 ಆಮೇಲೆ ಅವನು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಬಂದು, ಮೆಟ್ಟಿಲುಗಳನ್ನು ಹತ್ತಿ, ಹೊಸ್ತಿಲಿನ ಅಗಲವನ್ನು ಅಳೆದನು. ಅದು ಒಂದೇ ಕೋಲು ಅಗಲವಾಗಿತ್ತು. ಅಗಲವಾದ ಹೊಸ್ತಿಲಿನ ಬಾಗಿಲೂ ಅಲ್ಲಿ ಇತ್ತು.
7 ಅಲ್ಲಿ ಗೋಡೆಯಲ್ಲಿದ್ದ ಒಂದೊಂದು ಕೋಣೆಯು ಒಂದು ಕೋಲು ಉದ್ದವಾಗಿಯೂ, ಒಂದು ಕೋಲು ಅಗಲವಾಗಿಯೂ ಇತ್ತು. ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಒಂದು ಕೋಲು. ಆ ಗೋಡೆಕೋಣೆಗಳು ಒಂದಕ್ಕೊಂದು ಐದೈದು ಮೊಳ ದೂರವಾಗಿದ್ದವು; ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಒಂದು ಕೋಲು.
8 ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯ ಅಗಲವನ್ನು ಅಳೆದನು. ಅದು ಒಂದು ಕೋಲು ಉದ್ದವಾಗಿತ್ತು.
9 ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯನ್ನು ಎಂಟು ಮೊಳವೆಂದೂ; ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು. ಹೆಬ್ಬಾಗಿಲಿನ ಕೈಸಾಲೆಯು ದೇವಸ್ಥಾನಕ್ಕೆ ಎದುರಾಗಿತ್ತು.
10 ಪೂರ್ವದಿಕ್ಕಿನ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಮೂರು ಗೋಡೆಕೋಣೆಗಳಿದ್ದವು. ಆ ಮೂರಕ್ಕೂ ಒಂದೇ ಅಳತೆ ಇತ್ತು. ಎರಡು ಪಕ್ಕಗಳಲ್ಲಿನ ಕಂಬಗಳೂ ಒಂದೇ ಅಳತೆಯಾಗಿದ್ದವು.
11 ಅನಂತರ ಅವನು ಹೆಬ್ಬಾಗಿಲ ದ್ವಾರದ ಅಗಲ ಹತ್ತು ಮೊಳವೆಂದೂ ಉದ್ದ ಹದಿಮೂರು ಮೊಳವೆಂದೂ ಅಳೆದನು.
12 ಎರಡು ಪಕ್ಕಗಳಲ್ಲಿನ ಗೋಡೆಕೋಣೆಗಳ ಮುಂದೆ ಒಂದೊಂದು ಮೊಳ ಅವಕಾಶ; ಎರಡು ಕಡೆಯ ಗೋಡೆಕೋಣೆಗಳ ಅಗಲವು ಮೂರು ಮೊಳ.
13 ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆಯಿಂದ ಇನ್ನೊಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಗಡೆ ಅಂದರೆ ಒಂದು ಕೋಣೆಯ ಬಾಗಿಲಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಇಪ್ಪತ್ತೈದು ಮೊಳವಾಗಿತ್ತು.
14 ಅಂಗಳದಲ್ಲಿನ ಕಂಬಗಳನ್ನು ಅಳತೆ ಮಾಡಲು ಅರವತ್ತು ಮೊಳವಿದ್ದವು; ಅದನ್ನು ಹೆಬ್ಬಾಗಿಲಿನ ಸುತ್ತುಮುತ್ತಲಿರುವ ಕಂಬದವರೆಗೂ ಅಳೆದನು.
15 ಪ್ರವೇಶದ ಬಾಗಿಲಿನ ಮುಂದುಗಡೆಯಿಂದ ಒಳ ಬಾಗಿಲಿನ ದ್ವಾರದ ಅಂಗಳದವರೆಗೂ ಐವತ್ತು ಮೊಳ ಉದ್ದವಾಗಿತ್ತು.
16 ಗೋಡೆ ಕೋಣೆಗಳಲ್ಲಿಯೂ ಒಳ ಎರಡು ಕಡೆಯ ನಿಲುವು ಕಂಬಗಳಲ್ಲಿಯೂ, ಕೈಸಾಲೆಗಳಲ್ಲಿಯೂ ಸಹ ಒಳಗಡೆ ಸುತ್ತಲೂ ಇಕ್ಕಟಾದ ಕಿಟಕಿಗಳಿದ್ದವು. ಒಂದೊಂದು ಗೋಡೆಯ ಮೇಲೆ ಖರ್ಜೂರ ಮರಗಳ ಚಿತ್ರಗಳಿದ್ದವು.
ಹೊರಗಿನ ಅಂಗಳ
17 ಆ ಮೇಲೆ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆದು ತಂದನು; ಇಗೋ, ಕೋಣೆಗಳೂ ಅಂಗಳದ ಸುತ್ತಲೂ ಕಲ್ಲುಹಾಸಿದ ನೆಲವೂ ಕಾಣಿಸಿದವು; ಕಲ್ಲುಹಾಸಿದ ನೆಲದ ಮೇಲೆ ಒಟ್ಟಾಗಿ ಮೂವತ್ತು ಕೊಠಡಿಗಳಿದ್ದವು.
18 ಆ ಕೆಳಗಣ ಕಲ್ಲುಹಾಸಿದ ನೆಲವೂ ಹೆಬ್ಬಾಗಿಲುಗಳ ಎರಡು ಪಕ್ಕಗಳವರೆಗೂ ಹಾಸಲ್ಪಟಿತ್ತು. ಅದರ ಅಗಲವೂ ಬಾಗಿಲುಗಳ ಉದ್ದಕ್ಕೆ ಸಮನಾಗಿತ್ತು. ಇದು ಕೆಳಗಿನ ಕಲ್ಲುಹಾಸಿದ ನೆಲವಾಗಿತ್ತು.
19 ಅವನು ಪೂರ್ವಕ್ಕೂ, ಉತ್ತರಕ್ಕೂ ಕೆಳಗಣ ಹೆಬ್ಬಾಗಿಲಿನ ಒಳಗಡೆಯಿಂದ ಒಳಗಣ ಅಂಗಳದ ಹೊರಗಡೆಯ ತನಕ ಅಳೆಯಲು, ಅದು ನೂರು ಮೊಳವಿತ್ತು.
ಉತ್ತರದ ಬಾಗಿಲು
20 ಇದಲ್ಲದೆ ಹೊರಗಣ ಅಂಗಳದ ಉತ್ತರದ ಹೆಬ್ಬಾಗಿಲಿನ ಅಗಲವನ್ನೂ ಮತ್ತು ಉದ್ದವನ್ನೂ ಅಳೆದನು.
21 ಅದರೊಳಗೆ ಎರಡು ಕಡೆ ಮೂರು ಗೋಡೆಕೋಣೆಗಳಿದ್ದವು; ಅಲ್ಲಿನ ಕಂಬಗಳೂ ಕೈಸಾಲೆಯೂ ಮೊದಲನೆಯ ಹೆಬ್ಬಾಗಿಲಿನ ಅಳತೆಯಂತಿದ್ದವು. ಆ ಹೆಬ್ಬಾಗಿಲಿನ ಉದ್ದವೂ ಐವತ್ತು ಮೊಳ, ಅಗಲವೂ ಇಪ್ಪತ್ತೈದು ಮೊಳವಾಗಿತ್ತು.
22 ಅಲ್ಲಿನ ಕಿಟಕಿಗಳೂ, ಕೈಸಾಲೆಯೂ, ಚಿತ್ರಿತವಾಗಿದ್ದ ಖರ್ಜೂರ ಮರಗಳೂ ಮೂಡಣ ಹೆಬ್ಬಾಗಿಲಿನ ಕಡೆಗೆ ಅಭಿಮುಖವಾಗಿದ್ದವು. ಅವರು ಏಳು ಮೆಟ್ಟಿಲುಗಳನ್ನು ಹತ್ತಿ, ಅಲ್ಲಿಗೆ ಸೇರುತ್ತಿದ್ದರು. ಕೈಸಾಲೆಯು ಅದರ ಒಳಗಡೆಯಿತ್ತು.
23 ಹೊರಗಣ ಅಂಗಳದ ಉತ್ತರ ಮತ್ತು ಪೂರ್ವಕ್ಕಿರುವ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಹೆಬ್ಬಾಗಿಲುಗಳು ಇದ್ದವು; ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ನೂರು ಮೊಳ ಅಳತೆ ಮಾಡಿದನು.
ದಕ್ಷಿಣದ ಬಾಗಿಲು
24 ಆ ಮೇಲೆ ಅವನು ನನ್ನನ್ನು ದಕ್ಷಿಣಕ್ಕೆ ಕರೆ ತಂದನು. ಇಗೋ, ಅಲ್ಲಿಯೂ ಒಂದು ಹೆಬ್ಬಾಗಿಲು ಇತ್ತು; ಅವನು ಅಲ್ಲಿನ ಕಂಬಗಳನ್ನೂ, ಕೈಸಾಲೆಯನ್ನೂ ಈ ಅಳತೆಯ ಪ್ರಕಾರವೇ ಅಳೆದನು.
25 ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಕಿಟಕಿಗಳೇ ಇದ್ದವು; ಅದರ ಉದ್ದವೂ ಐವತ್ತು ಮೊಳ ಮತ್ತು ಅಗಲವೂ ಇಪ್ಪತ್ತೈದು ಮೊಳವಾಗಿತ್ತು.
26 ಅಲ್ಲಿ ಹತ್ತುವುದಕ್ಕೆ ಏಳು ಮೆಟ್ಟಿಲುಗಳಿದ್ದವು. ಕೈಸಾಲೆಯ ಎರಡು ಪಕ್ಕದ ಕಂಬಗಳಲ್ಲಿ ಖರ್ಜೂರ ಮರಗಳ ಚಿತ್ರಗಳಿದ್ದವು.
27 ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಹೆಬ್ಬಾಗಿಲಿತ್ತು; ದಕ್ಷಿಣದ ಒಂದು ಬಾಗಿಲಿಂದ ಮತ್ತೊಂದು ಬಾಗಿಲಿಗೆ ನೂರು ಮೊಳ ಅಳೆದನು.
ಒಳಗಿನ ಅಂಗಳದ ಬಾಗಿಲು
28 ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಿಲಿನ ಮಾರ್ಗವಾಗಿ ಒಳಗಣ ಅಂಗಳಕ್ಕೆ ಕರೆದು ತಂದನು. ಅವನು ಆ ದಕ್ಷಿಣ ಹೆಬ್ಬಾಗಿಲನ್ನೂ, ಅಲ್ಲಿನ ಗೋಡೆಕೋಣೆ, ಕಂಬ, ಕೈಸಾಲೆ ಇವುಗಳನ್ನೂ ಅಳೆಯಲು, ಅದರ ಅಳತೆಗಳೆಲ್ಲ ಸಮನಾಗಿದ್ದವು.
29 ಅದರಲ್ಲಿಯೂ, ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲಾ ಕಡೆಯಿದ್ದವು; ಹೆಬ್ಬಾಗಿಲಿನ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
30 ಸುತ್ತುಮುತ್ತಲಿನ ಕೈಸಾಲೆಗಳ ಉದ್ದ ಇಪ್ಪತ್ತೈದು ಮೊಳ ಮತ್ತು ಅಗಲ ಐದು ಮೊಳವಾಗಿತ್ತು.
31 ಆ ಹೆಬ್ಬಾಗಿಲ ಕೈಸಾಲೆಯು ಹೊರಗಣ ಅಂಗಳಕ್ಕೆ ಅಭಿಮುಖವಾಗಿತ್ತು. ಅದರ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು. ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
32 ಅವನು ನನ್ನನ್ನು ಒಳಗಣ ಅಂಗಳದ ಪೂರ್ವಕ್ಕೆ ಕರೆದು ತಂದು, ಅಲ್ಲಿನ ಹೆಬ್ಬಾಗಿಲನ್ನೂ ಅಳೆಯಲು, ಅದರ ಅಳತೆಗಳೆಲ್ಲಾ ಒಂದೇ ಆಗಿ ಕಂಡುಬಂದವು.
33 ಅದರಲ್ಲಿಯೂ ಮತ್ತು ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು; ಆ ಹೆಬ್ಬಾಗಿಲಿನ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
34 ಅದರ ಕೈಸಾಲೆಯು ಹೊರಗಿನ ಅಂಗಳಕ್ಕೆ ಅಭಿಮುಖವಾಗಿತ್ತು; ಕೈಸಾಲೆಯ ಎದುರುಬದುರಿನ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
35 ಆ ಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿಗೆ ಕರೆದು ತಂದನು. ಅದರ ಗೋಡೆಕೋಣೆ, ಕಂಬ, ಕೈಸಾಲೆ ಇವುಗಳನ್ನೂ ಆ ಅಳತೆಯ ಪ್ರಕಾರವೇ ಅಳೆದನು.
36 ಅಲ್ಲಿನ ಕೋಣೆಗಳ, ಕಂಬಗಳ, ಕೈಸಾಲೆಗಳ ಎಲ್ಲಾ ಕಡೆಗಳಲ್ಲಿಯೂ ಕಿಟಕಿಗಳಿದ್ದವು; ಅದರ ಉದ್ದ ಐವತ್ತು ಮೊಳ ಮತ್ತು ಅಗಲ ಇಪ್ಪತ್ತೈದು ಮೊಳವಾಗಿತ್ತು.
37 ಅದರ ಕಂಬಗಳು, ಕೈಸಾಲೆಗಳು ಹೊರಗಣ ಅಂಗಳಕ್ಕೆ ಅಭಿಮುಖವಾಗಿದ್ದವು; ಆ ಎದುರುಬದುರಿನ ಕಂಬಗಳಲ್ಲಿ ಖರ್ಜೂರ ಮರಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಿಲುಗಳಿದ್ದವು.
ಯಜ್ಞಗಳನ್ನು ಸಿದ್ಧಪಡಿಸುವ ಕೋಣೆಗಳು
38 ಹೆಬ್ಬಾಗಿಲ ಕಂಬಗಳ ಪಕ್ಕದಲ್ಲಿ ಒಂದು ಕೋಣೆಯೂ, ಅದರ ದ್ವಾರವೂ ಕಾಣಿಸಿದವು. ಆ ಕೋಣೆಯೊಳಗೆ ಸರ್ವಾಂಗಹೋಮ ಪಶುಗಳ ಮಾಂಸವನ್ನು ತೊಳೆಯುತ್ತಿದ್ದರು.
39 ಹೆಬ್ಬಾಗಿಲಿನ ಕೈಸಾಲೆಯಲ್ಲಿ ಎರಡು ಕಡೆಯಲ್ಲಿಯೂ ಎರಡೆರಡು ಪೀಠಗಳಿದ್ದವು; ಅವುಗಳ ಮೇಲೆ ಸರ್ವಾಂಗಹೋಮ ಪಶು, ದೋಷಪರಿಹಾರಕ ಯಜ್ಞ ಪಶು, ಪ್ರಾಯಶ್ಚಿತ್ತಯಜ್ಞ ಪಶು ಇವುಗಳನ್ನು ವಧಿಸುತ್ತಿದ್ದರು.
40 ಉತ್ತರದ ಹೆಬ್ಬಾಗಿಲಿನ ಪ್ರವೇಶ ಸ್ಥಾನದ ಮೆಟ್ಟಿಲುಗಳ ಹತ್ತಿರ ಎರಡು ಪೀಠಗಳು ಇದ್ದವು.
41 ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ನಾಲ್ಕು ನಾಲ್ಕು ಪೀಠಗಳು, ಒಟ್ಟಿಗೆ ಯಜ್ಞಪಶುಗಳನ್ನು ವಧಿಸುವ ಎಂಟು ಪೀಠಗಳಿದ್ದವು.
42 ಇದಲ್ಲದೆ ಸರ್ವಾಂಗಹೋಮಕ್ಕಾಗಿ ಉಪಯುಕ್ತವಾದ ಕೆತ್ತಿದ ಕಲ್ಲಿನ ನಾಲ್ಕು ಪೀಠಗಳಿದ್ದವು. ಅವುಗಳ ಅಗಲ ಒಂದುವರೆ ಮೊಳ, ಉದ್ದ ಒಂದುವರೆ ಮೊಳ, ಎತ್ತರ ಒಂದುವರೆ ಮೊಳವಾಗಿತ್ತು. ಅವುಗಳ ಮೇಲೆ ಸರ್ವಾಂಗಹೋಮ ಪಶುಗಳನ್ನು ವಧಿಸುವ ಉಪಕರಣಗಳನ್ನು ಇಡುತ್ತಿದ್ದರು.
43 ಒಳಗೆ, ಸುತ್ತಲು ಕೈ ಅಗಲದಷ್ಟು ಕೊಂಡಿಗಳು ಜಡಿಯಲ್ಪಟ್ಟಿದ್ದವು. ನೈವೇದ್ಯ ಮಾಂಸವು ಪೀಠಗಳ ಮೇಲಿತ್ತು.
ಯಾಜಕರ ಕೋಣೆಗಳು
44 ಆ ಮೇಲೆ ಅವನು ನನ್ನನ್ನು ಒಳಗಣ ಅಂಗಳಕ್ಕೆ ಕರೆ ತಂದನು. ಇಗೋ, ಅಲ್ಲಿ ಎರಡು ಕೋಣೆಗಳು ಕಾಣಿಸಿದವು. ಉತ್ತರದ ಹೆಬ್ಬಾಗಿಲ ಪಕ್ಕದಲ್ಲಿ ಒಂದು ಕೋಣೆಯು ದಕ್ಷಿಣಕ್ಕೆ ಅಭಿಮುಖವಾಗಿತ್ತು; ಒಂದು ಕೋಣೆಯು ಉತ್ತರಕ್ಕೂ, ಇನ್ನೊಂದು ಕೋಣೆಯು ದಕ್ಷಿಣಕ್ಕೂ ಇತ್ತು.
45 ಆಗ ಅವನು ನನಗೆ, “ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೋಣೆಯು ದೇವಾಲಯದ ಮೇಲ್ವಿಚಾರಣೆಯನ್ನು ನಡೆಸುವ ಯಾಜಕರಿಗೆ ನೇಮಕವಾಗಿದೆ.
46 ಉತ್ತರಕ್ಕೆ ಅಭಿಮುಖವಾಗಿರುವ ಆ ಕೋಣೆಯು ಯಜ್ಞವೇದಿಯ ಕಾರ್ಯದರ್ಶಿಗಳಾದ ಯಾಜಕರಿಗೆ ನೇಮಕವಾಗಿದೆ. ಚಾದೋಕನ ಸಂತತಿಯವರಾದ ಇವರು ಲೇವಿಯ ಕುಲದವರಲ್ಲಿ ಯೆಹೋವನ ಸನ್ನಿಧಿ ಸೇವಕರಾಗಿದ್ದಾರೆ” ಎಂದು ಹೇಳಿದನು.
47 ಆ ಮೇಲೆ ಅವನು ಅಂಗಳವನ್ನು ಅಳೆಯಲು, ಅದು ನೂರು ಮೊಳ ಉದ್ದವಾಗಿಯೂ, ನೂರು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು. ಯಜ್ಞವೇದಿಯು ದೇವಸ್ಥಾನದ ಮುಂದೆ ಇತ್ತು.
ದೇವಾಲಯದ ದ್ವಾರಮಂಟಪ
48 ಕೂಡಲೆ ಅವನು ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆ ತಂದನು. ಅದನ್ನು ಅಳೆಯಲು, ಅದರ ಎದುರುಬದುರಿನ ಕಂಬಗಳ ಅಗಲ ಐದೈದು ಮೊಳ, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಮೂರು ಮೂರು ಮೊಳವಾಗಿತ್ತು.
49 ದ್ವಾರಮಂಟಪದ ಉದ್ದ ಇಪ್ಪತ್ತು ಮೊಳ, ಅಗಲ ಹನ್ನೊಂದು ಮೊಳ ಇದ್ದವು. ಹತ್ತು ಮೆಟ್ಟಿಲುಗಳನ್ನು ಹತ್ತಿ, ಅಲ್ಲಿಗೆ ಸೇರುತ್ತಿದ್ದರು. ಎರಡು ಕಡೆಯ ಕಂಬಗಳ ಪಕ್ಕದಲ್ಲಿ ಒಂದೊಂದು ಉಪಸ್ತಂಭವು ಇತ್ತು.