35
ಯಾಕೋಬನು ಬೇತೇಲಿಗೆ ಬಂದದ್ದು
1 ದೇವರು ಯಾಕೋಬನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಗಟ್ಟಾ ಹತ್ತಿ ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು. ನೀನು ನಿನ್ನ ಅಣ್ಣನಾದ ಏಸಾವನ ಬಳಿಯಿಂದ ಓಡಿ ಹೋದ ಕಾಲದಲ್ಲಿ ದೇವರು ಅಲ್ಲಿ ನಿನಗೆ ದರ್ಶನಕೊಟ್ಟನಲ್ಲಾ, ಆತನಿಗಾಗಿ ಯಜ್ಞವೇದಿಯನ್ನು ಕಟ್ಟಿಸು” ಎಂದು ಹೇಳಿದನು.
2 ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ “ನಿಮ್ಮ ಮಧ್ಯಲ್ಲಿರುವ ಅನ್ಯ ದೇವರುಗಳನ್ನು ತೆಗೆದುಹಾಕಿ ನಿಮ್ಮನ್ನು ಶುದ್ಧಪಡಿಸಿಕೊಂಡು, ವಸ್ತ್ರಗಳನ್ನು ಬದಲಾಯಿಸಿರಿ,
3 ನಾವು ಇಲ್ಲಿಂದ ಬೇತೇಲಿಗೆ ಹೋಗೋಣ. ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಲಾಲಿಸಿ ನಾನು ಹೋದ ಮಾರ್ಗದಲ್ಲೆಲ್ಲಾ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟಿಸುತ್ತೇನೆ” ಎಂದು ಹೇಳಿದನು.
4 ಆಗ ಅವರು ತಮ್ಮಲ್ಲಿದ್ದ ಎಲ್ಲಾ ಅನ್ಯ ದೇವರುಗಳನ್ನು, ತಮ್ಮ ಕಿವಿಯಲ್ಲಿದ್ದ ಓಲೆಗಳನ್ನು ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮ್ ಪಟ್ಟಣದ ಹತ್ತಿರವಿರುವ ಏಲಾ ಮರದ ಕೆಳಗೆ ಹೂಣಿಟ್ಟನು.
5 ಆಮೇಲೆ ಅವರು ಪ್ರಯಾಣ ಮಾಡುತ್ತಿರುವಾಗ, ಸುತ್ತಲಿರುವ ಊರುಗಳಲ್ಲಿ ದೇವರ ಭಯವು ಇದ್ದುದರಿಂದ ಅವರು ಯಾಕೋಬನ ಮಕ್ಕಳನ್ನು ಬೆನ್ನಟ್ಟಿ ಬರಲಿಲ್ಲ.
6 ಹೀಗೆ ಯಾಕೋಬನೂ ಅವನ ಸಂಗಡ ಇದ್ದ ಜನರೆಲ್ಲರೂ ಕಾನಾನ್ ದೇಶದಲ್ಲಿರುವ ಬೇತೇಲ್ ಎಂಬ ಲೂಜಿಗೆ ಬಂದರು.
7 ಅವನು ತನ್ನ ಅಣ್ಣನ ಬಳಿಯಿಂದ ಓಡಿಹೋದಾಗ ದೇವರು ಅವನಿಗೆ ಪ್ರತ್ಯಕ್ಷನಾದನು. ಅದುದರಿಂದ ಅವನು ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು.
8 ಅಲ್ಲಿ ರೆಬೆಕ್ಕಳ ದಾಸಿಯಾದ ದೆಬೋರಳು ಸತ್ತು ಹೋದಾಗ, ಅವರು ಆಕೆಯನ್ನು ಬೇತೇಲಿನ ತಗ್ಗಿನಲ್ಲಿರುವ ಅಲ್ಲೋನ್ ಮರದ ಬುಡದಲ್ಲಿ ಸಮಾಧಿಮಾಡಿದರು. ಆ ಸ್ಥಳಕ್ಕೆ ಅಲ್ಲೋನ್ ಬಾಕೂತ್ ಎಂದು ಹೆಸರಿಟ್ಟರು.
ದೇವರು ಯಾಕೋಬನಿಗೆ ಮಾಡಿದ ವಾಗ್ದಾನ
9 ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ ದೇವರು ಪುನಃ ಅವನಿಗೆ ದರ್ಶನ ಕೊಟ್ಟು ಅವನನ್ನು ಆಶೀರ್ವದಿಸಿದನು.
10 ದೇವರು ಅವನಿಗೆ, “ಈಗ ನಿನಗೆ ಯಾಕೋಬನೆಂದು ಹೆಸರಿರುವುದು. ಇನ್ನು ಮೇಲೆ ನೀನು ಯಾಕೋಬನೆಂದು ಕರೆಯಿಸಿಕೊಳ್ಳದೆ ‘ಇಸ್ರಾಯೇಲ್’ ಎಂದು ಕರೆಯಿಸಿಕೊಳ್ಳುವೆ” ಎಂದು ಹೇಳಿ ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟನು.
11 ದೇವರು ಅವನಿಗೆ, “ನಾನೇ ಸರ್ವಶಕ್ತನಾದ ದೇವರು, ನೀನು ಬಹು ಸಂತಾನವುಳ್ಳವನಾಗಿ ಹೆಚ್ಚುವೆ, ನಿನ್ನಿಂದ ಜನಾಂಗವೂ, ಜನಾಂಗಗಳ ಗುಂಪು ಉಂಟಾಗುವುದು. ಅನೇಕ ಜನಾಂಗಗಳ ಅರಸರು ನಿನ್ನಿಂದ ಹುಟ್ಟುವರು.
12 ನಾನು ಅಬ್ರಹಾಮ ಮತ್ತು ಇಸಾಕರಿಗೆ ವಾಗ್ದಾನ ಮಾಡಿದ ದೇಶವನ್ನು ನಿನಗೂ ನಿನ್ನ ತರುವಾಯ ಬರುವ ನಿನ್ನ ಸಂತತಿಯವರಿಗೂ ಕೊಡುವೆನು” ಎಂದು ಹೇಳಿದನು.
13 ಅನಂತರ ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಮೇಲಕ್ಕೇರಿ ಹೋದನು.
14 ಯಾಕೋಬನು ತನ್ನ ಸಂಗಡ ದೇವರು ಮಾತನಾಡಿದ ಸ್ಥಳದಲ್ಲಿ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಅದರ ಮೇಲೆ ಪಾನಕಾಭಿಷೇಕಮಾಡಿ ಎಣ್ಣೆಯನ್ನು ಹೊಯ್ದನು.
15 ಯಾಕೋಬನು ತನ್ನ ಸಂಗಡ ದೇವರು ಮಾತನಾಡಿದ ಸ್ಥಳಕ್ಕೆ “ಬೇತೇಲ್” ಎಂದು ಹೆಸರಿಟ್ಟನು.
ಬೆನ್ಯಾಮೀನ ಜನನ, ರಾಹೇಲಳ ಮರಣ
16 ಅವರು ಬೇತೇಲಿನಿಂದ ಪ್ರಯಾಣಮಾಡುತ್ತಿರಲು ಎಫ್ರಾತಿಗೆ ಸೇರುವುದಕ್ಕೆ ಇನ್ನೂ ಸ್ವಲ್ಪ ದೂರವಿದ್ದಾಗ ರಾಹೇಲಳು ಪ್ರಸವ ವೇದನೆಯಿಂದ ನರಳಿದಳು.
17 ಆಕೆಯು ಹೆರಿಗೆಯ ನೋವಿನಿಂದ ಬಹು ಕಷ್ಟಪಡುತ್ತಿರುವಾಗ ಸೂಲಗಿತ್ತಿಯು ಆಕೆಗೆ, “ಅಂಜಬೇಡ ಇನ್ನೊಂದು ಗಂಡು ಮಗುವು ಹುಟ್ಟುವುದು” ಎಂದು ಹೇಳಿದಳು.
18 ಆದರೆ ರಾಹೇಲಳು ಸತ್ತುಹೋದಳು. ಪ್ರಾಣಬಿಡುವಾಗ ಆಕೆಯು ಆ ಮಗುವಿಗೆ, “ಬೆನೋನಿ” ಎಂದು ಹೆಸರಿಟ್ಟಳು. ಆದರೆ ಅದರ ತಂದೆಯು ಅದಕ್ಕೆ, “ಬೆನ್ಯಾಮೀನ” ಎಂದು ಹೆಸರಿಟ್ಟನು.
19 ರಾಹೇಲಳು ಸತ್ತ ಮೇಲೆ, ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ದಾರಿಯಲ್ಲಿ ಆಕೆಯನ್ನು ಸಮಾಧಿಮಾಡಿದರು.
20 ಯಾಕೋಬನು ಆಕೆಯ ಸಮಾಧಿಯ ಮೇಲೆ ಸ್ತಂಭವನ್ನು ನಿಲ್ಲಿಸಿದನು. ಅದು ಇಂದಿನವರೆಗೂ “ರಾಹೇಲಳ ಸಮಾಧಿಯ ಸ್ತಂಭ” ಎಂದೇ ಎನಿಸಿಕೊಂಡಿದೆ.
21 ಅಲ್ಲಿಂದ ಇಸ್ರಾಯೇಲನು ಪ್ರಯಾಣ ಮಾಡಿ ಮಿಗ್ದಲ್ ಏದರಿನ ಆಚೆಯಲ್ಲಿ ತನ್ನ ಗುಡಾರವನ್ನು ಹಾಕಿಸಿದನು.
1ಪೂರ್ವ 2:1-2
22 ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳನ್ನು ಸಂಗಮಿಸಿದನು. ಈ ಸಂಗತಿಯು ಇಸ್ರಾಯೇಲನಿಗೆ ತಿಳಿಯಿತು. ಯಾಕೋಬನಿಗೆ ಹನ್ನೆರಡು ಮಂದಿ ಗಂಡು ಮಕ್ಕಳಿದ್ದರು.
23 ಯಾಕೋಬನಿಗೆ ಲೇಯಳಲ್ಲಿ ಹುಟ್ಟಿದವರು ಯಾರೆಂದರೆ: ಯಾಕೋಬನ ಚೊಚ್ಚಲ ಮಗನಾದ ರೂಬೇನ್ ಮತ್ತು ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್.
24 ರಾಹೇಲಳಲ್ಲಿ ಹುಟ್ಟಿದವರು: ಯೋಸೇಫನು ಮತ್ತು ಬೆನ್ಯಾಮೀನನು.
25 ರಾಹೇಲಳ ದಾಸಿಯಾದ ಬಿಲ್ಹಳಲ್ಲಿ ಹುಟ್ಟಿದವರು: ದಾನ್, ನಫ್ತಾಲಿ.
26 ಲೇಯಳ ದಾಸಿಯಾದ ಜಿಲ್ಪಳಲ್ಲಿ ಹುಟ್ಟಿದವರು: ಗಾದ್, ಆಶೇರ್. ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹುಟ್ಟಿದ ಮಕ್ಕಳು ಇವರೇ.
ಇಸಾಕನ ಮರಣ
27 ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಮಮ್ರೆಗೆ ಬಂದನು. ಮಮ್ರೆಯು ಹೆಬ್ರೋನೆಂಬ ಕಿರ್ಯತರ್ಬಕ್ಕೆ ಸೇರಿರುವುದು. ಅದು ಅಬ್ರಹಾಮ ಇಸಾಕರು ಪರದೇಶಸ್ಥರಾಗಿ ವಾಸವಾಗಿದ್ದ ಸ್ಥಳ.
28 ಇಸಾಕನು ದಿನತುಂಬಿದ ಮುದುಕನಾಗಿದ್ದು ನೂರ ಎಂಭತ್ತನೆಯ ವರ್ಷದಲ್ಲಿ ಪ್ರಾಣಬಿಟ್ಟು ತನ್ನ ಪೂರ್ವಿಕರ ಬಳಿಗೆ ಸೇರಿದನು.
29 ಇಸಾಕನ ಮಕ್ಕಳಾದ ಏಸಾವ, ಯಾಕೋಬರು ಅವನನ್ನು ಸಮಾಧಿಮಾಡಿದರು.