2
ನಿನವೆಯ ಪತನ
1 ನಿನವೆಯೇ, ನಿನ್ನನ್ನು ಚದರಿಸುವವನು ನಿನಗೆ ಮುಖಾಮುಖಿಯಾಗಿ ಬಂದಿದ್ದಾನೆ; ಪೌಳಿಗೋಡೆಯನ್ನು ರಕ್ಷಿಸಲು ಸಿದ್ಧನಾಗು. ದಾರಿಯ ಮೇಲೆ ಕಣ್ಣಿಡು, ನಿನ್ನ ಸೊಂಟವನ್ನು ಬಲಪಡಿಸಿಕೋ, ನಿನ್ನ ಶಕ್ತಿಯನ್ನು ಚೆನ್ನಾಗಿ ದೃಢಮಾಡಿಕೋ.
2 ಆಹಾ, ಯೆಹೋವನು ಯಾಕೋಬಿನ ಅತಿಶಯವನ್ನು, ಇಸ್ರಾಯೇಲಿನ ಅತಿಶಯದಂತೆ ಪುನರುಜ್ಜೀವನಗೋಳಿಸುವನು; ಕೊಳ್ಳೆಹೊಡೆಯುವವರು ಆ ಅತಿಶಯವನ್ನು ಸೂರೆಗೈದು ಅವುಗಳ ದ್ರಾಕ್ಷಾಲತೆಗಳನ್ನು ಹಾಳುಮಾಡಿದ್ದಾರೆ.
3 ಶತ್ರುವಿನ ಶೂರರ ಗುರಾಣಿಯು ರಕ್ತವರ್ಣವಾಗಿದೆ, ಪರಾಕ್ರಮಿಗಳ ಉಡುಪುಗಳು ಕಿರಿಮಂಜಿನಂತೆ; ಅವನ ಸಿದ್ಧತೆಯ ದಿನಗಳಲ್ಲಿ ಸೈಪ್ರಸ್ ಮರದದಿಂದ ಮಾಡಿದ ಈಟಿಗಳು ಝಳಪಿಸುತ್ತವೆ ಮತ್ತು ಪಟ್ಟಣದಲ್ಲಿ ಅವರು ನಡೆದು ಹೋಗುವಾಗ ಅವರ ರಥಗಳ ಉಕ್ಕು ಥಳಥಳಿಸುತ್ತದೆ.
4 ಪಟ್ಟಣದ ಹೊರಗೆ ರಥಗಳು ರಭಸದಿಂದ ತಿರುಗಾಡುತ್ತವೆ, ಮೈದಾನಗಳಲ್ಲಿ ಧಡಧಡ ಓಡಾಡುತ್ತವೆ; ಪಂಜುಗಳಂತೆ ಬೆಳಗುತ್ತವೆ, ಮಿಂಚುಗಳ ಹಾಗೆ ಹಾರುತ್ತವೆ.
5 ಪಟ್ಟಣದ ಅರಸನು ತನ್ನ ಸರದಾರರನ್ನು ಕರೆಕಳುಹಿಸಿದ್ದಾನೆ; ಅವರು ಓಡಿ ಹೋಗುತ್ತಾ ಮುಗ್ಗರಿಸುತ್ತಾರೆ; ಪೌಳಿಗೋಡೆ ಕಡೆಗೆ ತ್ವರೆಯಾಗಿ ಓಡುತ್ತಾರೆ; ಮರೆಯು ನಿಲ್ಲಿಸಲ್ಪಟ್ಟಿದೆ.
6 ನದಿ ದ್ವಾರಗಳು ತೆರೆಯಲ್ಪಟ್ಟಿವೆ; ಅರಮನೆಯ ಗೋಡೆ ಕುಸಿದುಬಿದ್ದಿದೆ.
7 ವಸ್ತ್ರವನ್ನು ಕಿತ್ತು ರಾಣಿಯನ್ನು ಬಯಲಿಗೆ ತರಲು ಆಕೆಯ ಸೇವಕಿಯರು ಎದೆ ಬಡೆದುಕೊಂಡು ಪಾರಿವಾಳಗಳಂತೆ ರೋದಿಸುತ್ತಾರೆ.
8 ಪುರಾತನ ಕಾಲದಿಂದ ನಿನವೆ ಪಟ್ಟಣವೂ ಕಟ್ಟೆ ಒಡೆದು ನೀರು ತುಂಬಿದ ಕೆರೆಯಂತೆ ಇದೆ. ಆಹಾ! ಹರಿದು ಓಡುವ ನೀರಿನಂತೆ ಅದರ ನಿವಾಸಿಗಳು ಓಡಿಹೋಗುತ್ತಾರೆ; ನಿಲ್ಲಿರಿ, ನಿಲ್ಲಿರಿ ಎಂದು ಅಪ್ಪಣೆಯಾದರೂ ಯಾರೂ ಹಿಂದೆ ನೋಡರು.
9 ಬೆಳ್ಳಿಯನ್ನು ಸೂರೆಮಾಡಿರಿ, ಬಂಗಾರವನ್ನು ಕೊಳ್ಳೆ ಹೊಡೆಯಿರಿ; ಕೂಡಿಸಿಟ್ಟ ಧನಕ್ಕೂ ಸಕಲ ವಿಧವಾದ ಶ್ರೇಷ್ಠವಸ್ತುಗಳ ನಿಧಿಗೂ ಮಿತಿಯೇ ಇಲ್ಲ.
10 ನಿನವೆಯು ಬರಿದಾಗಿದೆ, ಬಟ್ಟಬರಿದಾಗಿ ಬೀಳುಬಿದ್ದಿದೆ; ಎದೆಯು ಕರಗಿ ನೀರಾಗಿ ಹೋಗಿದೆ, ಮೊಣಕಾಲುಗಳು ಅದರುತ್ತವೆ, ಎಲ್ಲರ ಸೊಂಟಗಳಿಗೂ ವೇದನೆಯಾಗಿದೆ, ಎಲ್ಲರ ಮುಖಗಳೂ ಬಾಡಿವೆ.
11 ಮೃಗರಾಜರ ಪ್ರಾಯದ ಸಿಂಹಗಳ ಗವಿ ಎಲ್ಲಿ? ಸಿಂಹ, ಸಿಂಹಿಣಿ, ಸಿಂಹದ ಮರಿ ಇವುಗಳು ಯಾರಿಗೂ ಹೆದರದೆ ತಿರುಗುತ್ತಿದ್ದ ಸ್ಥಳವೆಲ್ಲಿ?
12 ಅಲ್ಲಿ ಸಿಂಹವು ತನ್ನ ಮರಿಗಳಿಗಾಗಿ ಬೇಕಾದಷ್ಟು ಬೇಟೆಯನ್ನು ಸೀಳುತ್ತಿತ್ತು, ತನ್ನ ಸಿಂಹಿಣಿಗಳಿಗಾಗಿ ಮೃಗಗಳ ಕುತ್ತಿಗೆಯನ್ನು ಸೀಳುತಿತ್ತು; ತನ್ನ ಗವಿಗಳನ್ನು ಬೇಟೆಯಿಂದಲೂ ತನ್ನ ಗುಹೆಯನ್ನು ಕೊಂದ ಮೃಗಗಳಿಂದಲೂ ತುಂಬಿಸಿತು.
13 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ! ನಾನು ನಿನಗೆ ವಿರುದ್ಧನಾಗಿದ್ದೇನೆ, ನಿನ್ನ ರಥಗಳನ್ನು ಸುಟ್ಟು ಹೊಗೆಹಾಯಿಸುವೆನು, ಕತ್ತಿಯು ನಿನ್ನ ಪ್ರಾಯದ ಸಿಂಹಗಳನ್ನು ಸೀಳಿ ನುಂಗಿ ಬಿಡುವವು; ನಿನಗೆ ಸಿಕ್ಕಿದ ಬೇಟೆಯನ್ನು ಲೋಕದೊಳಗಿಂದ ನಿರ್ಮೂಲಮಾಡುವೆನು; ನಿನ್ನ ರಾಯಭಾರಿಗಳ ಧ್ವನಿಯು ಇನ್ನು ಕೇಳಿಸುವುದಿಲ್ಲ.”