3
ನಿನವೆಯ ಧ್ವಂಸ
1 ಅಯ್ಯೋ, ರಕ್ತಮಯ ಪಟ್ಟಣವೆ ನಿನ್ನ ಗತಿಯನ್ನು ಏನೆಂದು ಹೇಳಲಿ! ಅದು ಸುಳ್ಳಿನಿಂದಲೂ, ಸುಲಿಗೆಯಿಂದಲೂ ತುಂಬಿದೆ; ಕೊಳ್ಳೆಹೊಡೆಯುವುದನ್ನು ಬಿಡುವುದೇ ಇಲ್ಲ.
2 ಆಹಾ! ಚಾಟಿಯ ಚಟಚಟ ಶಬ್ದ, ಚಕ್ರಗಳ ಚೀತ್ಕಾರ, ಕುದುರೆಗಳ ಭರಧೌಡು, ರಥಗಳ ಹಾರಾಟ,
3 ರಾಹುತರ ರಭಸ, ಥಳಥಳಿಸುವ ಕತ್ತಿ, ಮಿಂಚುವ ಈಟಿ, ಅಸಂಖ್ಯಾತವಾಗಿ ಹತರಾದ ಸೈನಿಕರ ಶವಗಳ ಮಹಾರಾಶಿ, ಸತ್ತವರು ಲೆಕ್ಕವೇ ಇಲ್ಲ, ನುಗ್ಗುವವರು ಅವರ ಹೆಣಗಳನ್ನು ಎಡವುತ್ತಾರೆ.
4 ಅತಿಸುಂದರಿಯೂ, ಮಂತ್ರತಂತ್ರ ನಿಪುಣಳೂ ಜನಾಂಗಗಳನ್ನು ತನ್ನ ವೇಶ್ಯಾವಾಟಿಕೆಯಿಂದ ಕುಲಗಳನ್ನು ತನ್ನ ಮಂತ್ರತಂತ್ರಗಳಿಂದ ಗುಲಾಮತನಕ್ಕೆ ತಂದವಳೂ ಆದ ವೇಶ್ಯೆಯು ಲೆಕ್ಕವಿಲ್ಲದ ವೇಶ್ಯಾವಾಟಿಕೆಯ ನಿಮಿತ್ತ ಇದೆಲ್ಲಾ ಆಗುವುದು.
5 ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, “ಇಗೋ ನಾನು ನಿನಗೆ ವಿರುದ್ಧವಾಗಿದ್ದೇನೆ, ನಿನ್ನ ನೆರಿಗೆಯನ್ನು ನಿನ್ನ ಕಣ್ಣ ಮುಂದೆಯೇ ಕೀಳಿಸುವೆನು, ನಿನ್ನ ಬೆತ್ತಲೆತನವನ್ನು ಜನಾಂಗಗಳಿಗೆ ತೋರಿಸುವೆನು, ನಿನ್ನ ಅವಮಾನವನ್ನು ರಾಜ್ಯಗಳಿಗೆ ತೋರುವಂತೆ ಮಾಡುವೆನು.
6 ನಿನ್ನ ಮೇಲೆ ಹೊಲಸನ್ನು ಹಾಕಿ ಮಾನಕಳೆದು ನಿನ್ನನ್ನು ಎಲ್ಲರೂ ಪರಿಹಾಸ್ಯ ಮಾಡುವಂತೆ ಮಾಡುವೆನು.
7 ನಿನ್ನನ್ನು ನೋಡುವ ಪ್ರತಿಯೊಬ್ಬನು ನಿನ್ನ ಕಡೆಯಿಂದ ಓಡಿಹೋಗಿ, ‘ನಿನವೆಯೂ ಹಾಳಾಯಿತಲ್ಲಾ, ಅದಕ್ಕಾಗಿ ಯಾರು ಗೋಳಾಡುವರು?’ ನಿನ್ನನ್ನು ಸಂತೈಸುವವರು ನನಗೆ ಎಲ್ಲಿ ಸಿಕ್ಕಾರು?” ಅಂದುಕೊಳ್ಳುವನು.
ನಿನವೆಯ ನಾಶನವು ಖಂಡಿತ
8 ನೀನು ನೋ ಆಮೋನ್ ಪಟ್ಟಣಗಿಂತ ಭದ್ರವಾಗಿದ್ದೀಯೋ? ಅದು ನೈಲಿನ ಪ್ರವಾಹಗಳಲ್ಲಿ ನೆಲೆಯಾಗಿತ್ತು. ನೀರು ಅದನ್ನು ಸುತ್ತಿಕೊಂಡಿತ್ತು, ಮಹಾ ನದಿಯು ಅದಕ್ಕೆ ಪೌಳಿಗೋಡೆ, ಜಲಾಶಯವು ಅದರ ದುರ್ಗ.
9 ಕೂಷ್ ಮತ್ತು ಐಗುಪ್ತವು ಅದರ ಅಪಾರ ಬಲ, ಪೂಟರೂ, ಲೂಬ್ಯರೂ ಅದಕ್ಕೆ ಸಹಾಯಕರು.
10 ಆದರೂ ಅದು ಗಡೀಪಾರಾಗಿ ಸೆರೆಹೋಯಿತು; ಅದರ ಮಕ್ಕಳನ್ನು ಪ್ರತಿ ಬೀದಿಯ ಕೊನೆಯಲ್ಲಿ ಬಂಡೆಗೆ ಅಪ್ಪಳಿಸಿ ಬಿಟ್ಟರು; ಅದರ ಪ್ರಮುಖರನ್ನು ಬಂಧಿಸಿ ಚೀಟು ಹಾಕಿದರು, ಅದರ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಬಂಧಿಸಿದರು.
11 ನೀನೂ ಓಲಾಡುವಿ, ಬಳಲಿಹೋಗುವಿ; ನೀನೂ ಶತ್ರುವಿನ ನಿಮಿತ್ತ ಆಶ್ರಯವನ್ನು ಹುಡುಕುವಿ.
12 ನಿನ್ನ ಕೋಟೆಗಳೆಲ್ಲಾ ಮೊದಲು ಮಾಗಿದ ಹಣ್ಣುಳ್ಳ ಅಂಜೂರದ ಮರಗಳಂತಿರುವವು; ಆ ಮರಗಳನ್ನು ಅಲ್ಲಾಡಿಸಿದರೆ ಹಣ್ಣು ತಿನ್ನುವವನ ಬಾಯಿಗೆ ಬೀಳುವುದು.
13 ಆಹಾ! ನಿನ್ನಲ್ಲಿನ ಜನರು ಹೆಣ್ಣಿಗರು; ನಿನ್ನ ದೇಶದ ಬಾಗಿಲುಗಳು ನಿನ್ನ ಶತ್ರುಗಳಿಗೆ ತೆರೆದು ಹಾಕಿವೆ; ಬೆಂಕಿಯು ನಿನ್ನ ಅಗುಳಿಗಳನ್ನು ನುಂಗಿಬಿಟ್ಟಿದೆ.
14 ಮುತ್ತಿಗೆಯ ಕಾಲಕ್ಕೆ ನೀರನ್ನು ಸೇದಿಟ್ಟುಕೋ, ನಿನ್ನ ಕೋಟೆಗಳನ್ನು ಬಲಪಡಿಸಿಕೋ; ಮಣ್ಣಿಗೆ ಇಳಿ, ಜೇಡಿಮಣ್ಣನ್ನು ತುಳಿ, ಇಟ್ಟಿಗೆಯ ಅಚ್ಚನ್ನು ಹಿಡಿ.
15 ಇದ್ದಲ್ಲಿಯೇ ಬೆಂಕಿಯು ನಿನ್ನನ್ನು ನುಂಗುವುದು. ಕತ್ತಿಯು ನಿನ್ನನ್ನು ಕಡಿದುಬಿಡುವುದು, ಮಿಡತೆಗಳೋಪಾದಿಯಲ್ಲಿ ನುಂಗಲ್ಪಡುವಿ; ನಿನ್ನ ಜನಸಂಖ್ಯೆಯು ಮಿಡತೆಗಳಷ್ಟು ಅಸಂಖ್ಯಾತವಾಗಲಿ, ಗುಂಪುಮಿಡತೆಗಳಷ್ಟು ಅಪರಿಮಿತವಾಗಲಿ,
16 ನಿನ್ನ ವರ್ತಕರ ಸಂಖ್ಯೆಯನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿಸಿದ್ದೀ; ಆದರೆ, ಮಿಡತೆಯು ರೆಕ್ಕೆಗಳ ಪರೆಯನ್ನು ಹರಿದುಕೊಂಡು ಹಾರಿಹೋಗಿ ಬಿಡುವುದಷ್ಟೇ.
17 ನಿನ್ನ ಪ್ರಭುಗಳು ಮಿಡತೆಯಂತಿದ್ದಾರೆ, ಮಿಡತೆಯ ದಂಡು ಚಳಿಗಾಲದಲ್ಲಿ ಬೇಲಿಗಳೊಳಗೆ ಇಳಿದಿದ್ದು, ಹೊತ್ತು ಹುಟ್ಟಿದಾಗ ಓಡಿಹೋಗಿ ಯಾರಿಗೂ ಗೊತ್ತಾಗದ ಸ್ಥಳದಲ್ಲಿ ಅಡಗುವ ಪ್ರಕಾರ ನಿನ್ನ ಸೇನಾಪತಿಗಳು ಮಾಯವಾಗುತ್ತಾರೆ.
18 ಅಶ್ಶೂರದ ಅರಸನೇ, ನಿನ್ನ ದೇಶಪಾಲಕರು ದೀರ್ಘ ನಿದ್ರೆ ಮಾಡುತ್ತಿದ್ದಾರೆ; ನಿನ್ನ ಮಹನೀಯರು ದೀರ್ಘನಿದ್ದೆಯಲ್ಲಿದ್ದಾರೆ; ನಿನ್ನ ಪ್ರಜೆಗಳು ಬೆಟ್ಟಗಳಲ್ಲಿ ಚದರಿದ್ದಾರೆ, ಅವರನ್ನು ಕೂಡಿಸುವವರು ಯಾರೂ ಇಲ್ಲ.
19 ನಿನ್ನ ಗಾಯವು ಗುಣಹೊಂದದು, ನಿನ್ನ ಗಾಯವು ತೀವ್ರವೇ. ನಿನ್ನ ವಿನಾಶದ ಸುದ್ದಿಯನ್ನು ಕೇಳಿದವರೆಲ್ಲರೂ ನಿನಗೆ ಚಪ್ಪಾಳೆ ಹಾಕಿ ನಗುತ್ತಾರೆ; ನಿನ್ನ ಕೆಡುಕಿಗೆ ನಿತ್ಯವೂ ಗುರಿಯಾಗದವರು ಯಾರೂ ಇಲ್ಲ.