4
ನ್ಯಾಯಸಭೆಯಲ್ಲಿ ಪೇತ್ರ ಮತ್ತು ಯೋಹಾನ
ಪೇತ್ರ ಮತ್ತು ಯೋಹಾನರು ಜನರೊಂದಿಗೆ ಮಾತನಾಡುತ್ತಿದ್ದಾಗಲೇ, ಯಾಜಕರೂ ದೇವಾಲಯದ ದಳಪತಿಯೂ ಸದ್ದುಕಾಯರೂ ಅವರ ಬಳಿಗೆ ಬಂದರು. ಯೇಸುವಿನಲ್ಲಿ ಸತ್ತವರಿಗೆ ಪುನರುತ್ಥಾನ ಉಂಟು ಎಂದು ಅಪೊಸ್ತಲರು ಜನರಿಗೆ ಬೋಧಿಸುತ್ತಿದ್ದರಿಂದ ಅವರು ಬಹಳ ಬೇಸರಗೊಂಡರು. ಅವರು ಪೇತ್ರ ಯೋಹಾನರನ್ನು ಬಂಧಿಸಿ, ಸಂಜೆಯಾದ್ದರಿಂದ ಮರುದಿನದವರೆಗೆ ಅವರನ್ನು ಸೆರೆಮನೆಯಲ್ಲಿ ಹಾಕಿದರು. ಆದರೆ ಸಂದೇಶವನ್ನು ಕೇಳಿದವರಲ್ಲಿ ಅನೇಕರು ನಂಬಿದರು. ಅವರ ಸಂಖ್ಯೆ ಸುಮಾರು ಐದು ಸಾವಿರಕ್ಕೇರಿತು.
ಮರುದಿನ ಅಧಿಕಾರಿಗಳು, ಹಿರಿಯರು, ನಿಯಮ ಬೋಧಕರು ಯೆರೂಸಲೇಮಿನಲ್ಲಿ ಸಭೆ ಸೇರಿದರು. ಮಹಾಯಾಜಕ ಅನ್ನನೂ ಹಾಗೂ ಮಹಾಯಾಜಕನ ಕುಟುಂಬದವರು ಕಾಯಫ, ಯೋಹಾನ ಮತ್ತು ಅಲೆಕ್ಸಾಂದ್ರ ಅಲ್ಲಿದ್ದರು. ಅವರು ಪೇತ್ರ ಯೋಹಾನರನ್ನು ತಮ್ಮೆದುರಿನಲ್ಲಿ ನಿಲ್ಲಿಸಿ ಅವರಿಗೆ, “ಯಾವ ಶಕ್ತಿಯಿಂದ ಇಲ್ಲವೆ, ಯಾವ ಹೆಸರಿನಿಂದ ನೀವಿದನ್ನು ಮಾಡಿದಿರಿ?” ಎಂದು ಪ್ರಶ್ನಿಸಿದರು.
ಆಗ ಪೇತ್ರನು ಪವಿತ್ರಾತ್ಮಭರಿತನಾಗಿ ಅವರಿಗೆ, “ಜನರ ಅಧಿಕಾರಿಗಳೇ, ಜನರ ಹಿರಿಯರೇ! ನಾವು ಒಬ್ಬ ಕುಂಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದದ್ದು ಹೇಗೆಂದು ನೀವು ನಮ್ಮನ್ನು ಇಂದು ಪ್ರಶ್ನಿಸುತ್ತಿರುವಿರಿ. 10 ನಿಮಗೂ ಎಲ್ಲಾ ಇಸ್ರಾಯೇಲ್ ಜನರಿಗೂ ಇದು ತಿಳಿದಿರಲಿ: ನೀವು ಯೇಸುವನ್ನು ಶಿಲುಬೆಗೆ ಹಾಕಿದಿರಿ. ಆದರೆ ದೇವರು ಸತ್ತವರೊಳಗಿಂದ ಎಬ್ಬಿಸಿದ ನಜರೇತಿನ ಕ್ರಿಸ್ತ ಯೇಸುವಿನ ಹೆಸರಿನಿಂದಲೇ ಈ ಮನುಷ್ಯನು ಪೂರ್ಣ ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುವನು. 11 ಪವಿತ್ರ ವೇದದಲ್ಲಿ,
“ ‘ಮನೆ ಕಟ್ಟುವವರಾದ ನೀವು ತಿರಸ್ಕರಿಸಿದ
ಕಲ್ಲು ಮುಖ್ಯವಾದ ಮೂಲೆಗಲ್ಲಾಯಿತು,’*
ಎಂದು ಬರೆದಿರುವುದು ಈ ಯೇಸುವಿನ ಬಗ್ಗೆಯೇ. 12 ಯೇಸು ಅಲ್ಲದೆ ಬೇರೆ ಯಾರಿಂದಲೂ ರಕ್ಷಣೆಯು ಇಲ್ಲ, ಏಕೆಂದರೆ ಆಕಾಶದ ಕೆಳಗೆ ಮನುಷ್ಯರೊಳಗೆ ಆ ಹೆಸರಲ್ಲದೇ ಬೇರೆ ಯಾವ ಹೆಸರಿನಿಂದಲೂ ರಕ್ಷಣೆಯಾಗುವುದಿಲ್ಲ,” ಎಂದನು.
13 ಪೇತ್ರ, ಯೋಹಾನರ ಧೈರ್ಯವನ್ನು ಅವರು ಕಂಡಾಗ, ಇವರು ವಿದ್ಯೆ ಕಲಿಯದ ಸಾಮಾನ್ಯ ಜನರೆಂದು ತಿಳಿದು ಬಹು ಆಶ್ಚರ್ಯಚಕಿತರಾಗಿ, ಇವರು ಯೇಸುವಿನೊಂದಿಗೆ ಇದ್ದವರು ಎಂಬುದನ್ನು ಗುರುತಿಸಿಕೊಂಡರು. 14 ಆದರೆ ಗುಣಹೊಂದಿದ ಮನುಷ್ಯನು ಅವರೊಂದಿಗೆ ನಿಂತುಕೊಂಡಿದ್ದನ್ನು ಅವರು ಕಂಡಾಗ ಇವರಿಗೆ ವಿರೋಧವಾಗಿ, ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. 15 ಆದ್ದರಿಂದ ಇವರನ್ನು ನ್ಯಾಯಸಭೆಯಿಂದ ಹೊರಗೆ ಹೋಗುವಂತೆ ಆಜ್ಞಾಪಿಸಿ ಒಬ್ಬರೊಂದಿಗೊಬ್ಬರು ಚರ್ಚೆಮಾಡಿ, 16 “ಈ ಮನುಷ್ಯರನ್ನು ನಾವು ಏನು ಮಾಡೋಣ? ಯೆರೂಸಲೇಮಿನ ಪ್ರತಿಯೊಬ್ಬ ನಿವಾಸಿಯೂ ಇವರು ಗಮನಾರ್ಹವಾದ ಅದ್ಭುತವನ್ನು ಮಾಡಿದ್ದಾರೆಂಬುದನ್ನು ತಿಳಿದಿದ್ದಾರೆ. ಇದನ್ನು ನಾವೂ ಅಲ್ಲಗಳೆಯುವುದಕ್ಕಾಗುವುದಿಲ್ಲ. 17 ಆದರೆ ಈ ವಿಷಯ ಜನರಲ್ಲಿ ಹೆಚ್ಚು ಪ್ರಸಾರವಾಗದಂತೆ ನಿಲ್ಲಿಸಲು, ಇವರು ಈ ನಾಮದಲ್ಲಿ ಇನ್ನೆಂದೂ ಯಾರೊಂದಿಗೂ ಮಾತನಾಡಬಾರದೆಂದು ಇವರಿಗೆ ಎಚ್ಚರಿಕೆ ಕೊಡೋಣ,” ಎಂದು ಯೋಚಿಸಿದರು.
18 ಅವರು ಶಿಷ್ಯರನ್ನು ಸಭೆಯಲ್ಲಿ ಕರೆದು, “ಯೇಸುವಿನ ಹೆಸರಿನಲ್ಲಿ ಮಾತನಾಡಲೂಬಾರದು, ಬೋಧಿಸಲೂಬಾರದು,” ಎಂದು ಆಜ್ಞಾಪಿಸಿದರು. 19 ಆದರೆ ಪೇತ್ರ ಮತ್ತು ಯೋಹಾನರು, “ದೇವರಿಗಿಂತ ಹೆಚ್ಚಾಗಿ ನಿಮಗೆ ಕಿವಿಗೊಡುವುದು ದೇವರ ದೃಷ್ಟಿಯಲ್ಲಿ ಸರಿಯಾದದ್ದೋ? ಎಂಬುದರ ಬಗ್ಗೆ ನೀವೇ ತೀರ್ಮಾನ ಮಾಡಿಕೊಳ್ಳಿರಿ. 20 ಏಕೆಂದರೆ ಕಂಡಿದ್ದನ್ನೂ ಕೇಳಿದ್ದನ್ನೂ ಕುರಿತು ನಾವು ಮಾತನಾಡದೆ ಇರಲಾರೆವು,” ಎಂದು ಉತ್ತರಕೊಟ್ಟರು.
21 ಅನಂತರ ನ್ಯಾಯಸಭೆಯವರು ಅವರನ್ನು ಬೆದರಿಸಿ ಕಳುಹಿಸಿಬಿಟ್ಟರು. ಅಲ್ಲಿ ಸಂಭವಿಸಿದ ಅದ್ಭುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಾ ಇದ್ದುದರಿಂದ, ಪೇತ್ರ ಯೋಹಾನರನ್ನು ಹೇಗೆ ದಂಡಿಸಬೇಕೆಂಬುದನ್ನು ಅವರು ನಿರ್ಣಯಿಸಲಾರದೆ ಹೋದರು. 22 ಅದ್ಭುತ ರೀತಿಯಲ್ಲಿ ಸ್ವಸ್ಥತೆ ಹೊಂದಿದ ಆ ಮನುಷ್ಯನು ನಾಲ್ವತ್ತಕ್ಕಿಂತಲೂ ಹೆಚ್ಚು ವರ್ಷ ವಯಸ್ಸಿನವನಾಗಿದ್ದನು.
ವಿಶ್ವಾಸಿಗಳ ಪ್ರಾರ್ಥನೆ
23 ಬಿಡುಗಡೆ ಹೊಂದಿದ, ಪೇತ್ರ ಮತ್ತು ಯೋಹಾನರು ವಿಶ್ವಾಸಿಗಳ ಬಳಿಗೆ ಹೋಗಿ, ತಮಗೆ ಮುಖ್ಯಯಾಜಕರೂ ಹಿರಿಯರೂ ಹೇಳಿದ್ದೆಲ್ಲವನ್ನೂ ವರದಿಮಾಡಿದರು. 24 ಇದನ್ನು ಕೇಳಿ ಅವರೆಲ್ಲರೂ ಒಟ್ಟಾಗಿ ಸ್ವರವೆತ್ತಿ ದೇವರಿಗೆ ಪ್ರಾರ್ಥನೆ ಮಾಡಿದರು: “ಕರ್ತದೇವರೇ, ನೀನು ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿರುವಿರಿ. 25 ಪವಿತ್ರಾತ್ಮ ದೇವರ ಮೂಲಕ ನಿಮ್ಮ ಸೇವಕನೂ ನಮ್ಮ ಪಿತೃವೂ ಆದ ದಾವೀದನ ಮುಖಾಂತರ ನೀವು ಮಾತನಾಡಿ:
“ ‘ರಾಷ್ಟ್ರಗಳು ರೋಷಗೊಳ್ಳುವುದೇಕೆ?
ಜನರು ವ್ಯರ್ಥವಾಗಿ ಕಲ್ಪಿಸಿಕೊಂಡದ್ದೇಕೆ?
26 ಕರ್ತ ದೇವರಿಗೂ ಅವರ ಅಭಿಷಿಕ್ತನಿಗೂ ವಿರೋಧವಾಗಿ
ಭೂಲೋಕದ ಅರಸರೂ ಅಧಿಪತಿಗಳೂ ಒಂದಾಗಿ ಕೂಡಿಕೊಳ್ಳುತ್ತಿರುವರು.
27 ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕ ಯೇಸುವಿನ ವಿರೋಧವಾಗಿ ದುರಾಲೋಚನೆ ಮಾಡಲು ಹೆರೋದನು ಮತ್ತು ಪೊಂತ್ಯ ಪಿಲಾತನು, ಯೆಹೂದ್ಯರಲ್ಲದವರೊಂದಿಗೂ ಇಸ್ರಾಯೇಲರೊಂದಿಗೂ ಈ ಪಟ್ಟಣದಲ್ಲೇ ಸೇರಿ ಬಂದಿದ್ದರು. 28 ನಿಮ್ಮ ಶಕ್ತಿಯೂ ಚಿತ್ತವೂ ಮುಂಚಿತವಾಗಿಯೇ ಏನಾಗಬೇಕೆಂದು ನಿರ್ಣಯಿಸಿದ್ದನ್ನೇ ಅವರು ಮಾಡಿದರು. 29 ಕರ್ತದೇವರೇ, ಈಗ ಅವರ ಬೆದರಿಕೆಯನ್ನು ನೋಡಿರಿ; ಬಹುಧೈರ್ಯದಿಂದ ನಿಮ್ಮ ವಾಕ್ಯವನ್ನು ಹೇಳಲು ನಿಮ್ಮ ಸೇವಕರನ್ನು ಬಲಪಡಿಸಿರಿ. 30 ನಿಮ್ಮ ಪವಿತ್ರ ಸೇವಕ ಯೇಸುವಿನ ನಾಮದ ಮೂಲಕವಾಗಿ ಗುಣಪಡಿಸಲು, ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಮಾಡಲು ದೇವರೇ, ನಿಮ್ಮ ಹಸ್ತವನ್ನು ಚಾಚಿರಿ.”
31 ಹೀಗೆ ಪ್ರಾರ್ಥನೆ ಮಾಡಿದ ತರುವಾಯ ಅವರು ನೆರೆದಿದ್ದ ಸ್ಥಳವು ಕಂಪನಗೊಂಡಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ಧೈರ್ಯದಿಂದ ದೇವರ ವಾಕ್ಯವನ್ನು ಸಾರತೊಡಗಿದರು.
ವಿಶ್ವಾಸಿಗಳು ತಮಗಿದ್ದುದನ್ನು ಹಂಚಿಕೊಂಡದ್ದು
32 ವಿಶ್ವಾಸಿಗಳೆಲ್ಲರ ಹೃದಯ ಹಾಗೂ ಮನಸ್ಸುಗಳು ಒಂದಾಗಿದ್ದವು. ಯಾವನೂ ತನ್ನ ಆಸ್ತಿಯನ್ನು ತನ್ನದೇ ಎಂದು ಹಕ್ಕು ಸಾಧಿಸಲಿಲ್ಲ. ಆದರೆ ಅವರೆಲ್ಲರೂ ತಮಗಿದ್ದ ಎಲ್ಲವನ್ನು ಹಂಚಿಕೊಂಡರು. 33 ಮಹಾಶಕ್ತಿಯಿಂದ ಅಪೊಸ್ತಲರು ಕರ್ತ ಯೇಸುವಿನ ಪುನರುತ್ಥಾನಕ್ಕೆ ಸಾಕ್ಷಿಕೊಟ್ಟರು. ಅವರೆಲ್ಲರ ಮೇಲೆ ದೇವರ ಮಹಾಕೃಪೆಯಿತ್ತು. 34 ಅವರಲ್ಲಿ ಕೊರತೆಯಿದ್ದವರು ಇರಲಿಲ್ಲ. ಏಕೆಂದರೆ ಹೊಲಗದ್ದೆಯಿದ್ದವರೂ ಮನೆಗಳಿದ್ದವರೆಲ್ಲರೂ ಅವುಗಳನ್ನು ಮಾರಿ ಹಣವನ್ನು ತಂದು, 35 ಅಪೊಸ್ತಲರ ಪಾದಗಳ ಬಳಿಯಲ್ಲಿ ಇಡುತ್ತಿದ್ದರು. ಅಪೊಸ್ತಲರು ಅದನ್ನು ಅಗತ್ಯವಿದ್ದವರಿಗೆ ತಕ್ಕಂತೆ ಹಂಚುತ್ತಿದ್ದರು.
36 ಸೈಪ್ರಸ್ ಎಂಬಲ್ಲಿ ಹುಟ್ಟಿದ ಒಬ್ಬ ಲೇವಿಯನು ಇದ್ದನು, ಅವನ ಹೆಸರು ಯೋಸೇಫ, ಅಪೊಸ್ತಲರು ಅವನನ್ನು “ಬಾರ್ನಬ” ಎಂದು ಕರೆದರು. ಬಾರ್ನಬ ಅಂದರೆ “ಆದರಣೆಯ ಪುತ್ರನು” ಎಂದು ಅರ್ಥ. 37 ಅವನು ತನ್ನ ಸ್ವಂತ ಹೊಲವನ್ನು ಮಾರಿ, ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು.
* 4:11 4:11 ಕೀರ್ತನೆ 118:22 4:26 4:26 ಅಭಿಷಿಕ್ತ ಅಂದರೆ ಕ್ರಿಸ್ತನು 4:26 4:26 ಕೀರ್ತನೆ 2:1,2