18
ಯಾಜಕರಿಗೆ ಕಾಣಿಕೆಗಳು
1 ಯಾಜಕರಾದ ಲೇವಿಯರಿಗೂ, ಆ ಎಲ್ಲಾ ಲೇವಿಯ ಗೋತ್ರಕ್ಕೂ, ಇಸ್ರಾಯೇಲಿನ ಸಂಗಡ ಪಾಲೂ ಸೊತ್ತೂ ಇರಬಾರದು. ಅವರು ಯೆಹೋವ ದೇವರಿಗೆ ಸಮರ್ಪಿಸಿದ ದಹನಬಲಿಯ ಕಾಣಿಕೆಗಳ ಮೇಲೆ ಆಧಾರಮಾಡಿಕೊಂಡು ಜೀವಿಸಬೇಕು. ಅದು ಅವರ ಬಾಧ್ಯತೆಯಾಗಿದೆ.
2 ಲೇವಿಯರಿಗೆ ಅವರ ಸಹೋದರರ ಮಧ್ಯದಲ್ಲಿ ಸೊತ್ತಿರಬಾರದು. ಯೆಹೋವ ದೇವರು ಅವರಿಗೆ ಹೇಳಿದ ಹಾಗೆ ದೇವರೇ ಅವರ ಸೊತ್ತು.
3 ಎತ್ತನ್ನಾಗಲಿ, ಕುರಿಯನ್ನಾಗಲಿ ಬಲಿ ಅರ್ಪಿಸುವವರಿಂದ ಯಾಜಕರಿಗೆ ಸಿಕ್ಕುವ ಪಾಲು, ಅವುಗಳ ಮುಂದೊಡೆ, ದವಡೆ ಹಾಗೂ ಒಳಗಿನ ಭಾಗಗಳು.
4 ನಿಮ್ಮ ಧಾನ್ಯ, ಹೊಸ ದ್ರಾಕ್ಷಾರಸ, ಓಲಿವ್ ಎಣ್ಣೆಗಳ ಪ್ರಥಮ ಫಲವನ್ನೂ, ನಿಮ್ಮ ಕುರಿಗಳ ಉಣ್ಣೆಯಲ್ಲಿ ಪ್ರಥಮವಾದದ್ದನ್ನೂ ಅವರಿಗೆ ಕೊಡಬೇಕು.
5 ಏಕೆಂದರೆ ಅವರೂ, ಅವರ ಪುತ್ರರೂ ನಿತ್ಯವಾಗಿ ಯೆಹೋವ ದೇವರ ಹೆಸರಿನಲ್ಲಿ ಸೇವೆಮಾಡುತ್ತಾ ನಿಂತಿರುವ ಹಾಗೆ ಅವರನ್ನು ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಗೋತ್ರಗಳೊಳಗಿಂದ ಆಯ್ದುಕೊಂಡಿದ್ದಾರೆ.
6 ಒಬ್ಬ ಲೇವಿಯು ಸಮಸ್ತ ಇಸ್ರಾಯೇಲಿನಲ್ಲಿರುವ ಯಾವುದೇ ಊರಿನಲ್ಲಿ ಇಳಿದುಕೊಂಡಿರುವ ಸ್ಥಳದಿಂದ ತನ್ನ ಮನಸ್ಸಿನ ಪೂರ್ಣಾಪೇಕ್ಷೆಯೊಂದಿಗೆ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳಕ್ಕೆ ಬರಬಹುದು.
7 ಅಲ್ಲಿ ಯೆಹೋವ ದೇವರ ಮುಂದೆ ನಿಂತುಕೊಳ್ಳುವ ಇತರ ಲೇವಿಯರಂತೆ ಅವನೂ ತನ್ನ ದೇವರಾದ ಯೆಹೋವ ದೇವರ ಹೆಸರಿನಲ್ಲಿ ಸೇವೆಮಾಡಬಹುದು.
8 ಅವನು ಪಿತ್ರಾರ್ಜಿತ ಆಸ್ತಿಯನ್ನು ಮಾರಿದ್ದರಲ್ಲಿ ಹಣದ ಪಾಲನ್ನು ಸ್ವೀಕರಿಸಿದ್ದರೂ, ಮಿಕ್ಕ ಲೇವಿಯರೊಡನೆ ಸಮಾನ ಪಾಲು ಹೊಂದಬೇಕು.
ಅಸಹ್ಯವಾದ ಆಚಾರಗಳು
9 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ, ಆ ಜನಾಂಗಗಳು ಮಾಡುವ ಅಸಹ್ಯ ಕಾರ್ಯಗಳನ್ನು ನೀವು ಕಲಿಯಬಾರದು.
10 ತನ್ನ ಮಗನನ್ನು ಇಲ್ಲವೆ ಮಗಳನ್ನು ಆಹುತಿ ಕೊಡುವವನೂ, ಕಣಿ ಹೇಳುವವನೂ, ಶಕುನ ನೋಡುವವನೂ, ಸರ್ಪ ಮಂತ್ರದವನೂ, ಮಾಟಗಾರನೂ,
11 ಗಾರುಡಿಗಾರನೂ, ಯಕ್ಷಿಣಿಗಾರನೂ, ಮಂತ್ರಗಾರನೂ, ಸತ್ತವರ ಹತ್ತಿರ ವಿಚಾರಿಸುವವನೂ ನಿಮ್ಮಲ್ಲಿ ಇರಬಾರದು.
12 ಏಕೆಂದರೆ ಇಂಥವುಗಳನ್ನು ಮಾಡುವವರೆಲ್ಲಾ ಯೆಹೋವ ದೇವರಿಗೆ ಅಸಹ್ಯರಾಗಿದ್ದಾರೆ. ಈ ಅಸಹ್ಯಗಳ ನಿಮಿತ್ತವೇ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರದೂಡಿಸಿಬಿಡುತ್ತಾರೆ.
13 ನೀವು ನಿಮ್ಮ ದೇವರಾದ ಯೆಹೋವ ದೇವರ ಮುಂದೆ ನಿರ್ದೋಷಿಯಾಗಿರಬೇಕು.
ಆ ಪ್ರವಾದಿ
14 ನೀವು ಸ್ವಾಧೀನಪಡಿಸಿಕೊಳ್ಳುವ ಆ ಜನಾಂಗಗಳು ಶಕುನ ನೋಡುವವರ ಹಾಗೂ ಕಣಿಹೇಳುವವರ ಮಾತನ್ನು ಕೇಳುತ್ತಿದ್ದರು. ನಿಮ್ಮನ್ನಾದರೋ ನಿಮ್ಮ ದೇವರಾದ ಯೆಹೋವ ದೇವರು ಹಾಗೆ ಮಾಡಲು ಅನುಮತಿಸಲಿಲ್ಲ.
15 ನನ್ನಂಥ ಒಬ್ಬ ಪ್ರವಾದಿಯನ್ನು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ನಿಮ್ಮ ಸಹೋದರರ ನಡುವೆಯಿಂದ ಎಬ್ಬಿಸುವರು. ಆ ಪ್ರವಾದಿಯ ಮಾತನ್ನು ನೀವು ಕೇಳಬೇಕು.
16 ನೀವು ಹೋರೇಬಿನಲ್ಲಿ ಸಭೆಕೂಡಿದ ದಿನದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಂದ ಬೇಡಿಕೊಂಡ ಪ್ರಕಾರ ಆಗುವುದು. ಆಗ ನೀವು, “ನಾವು ಸಾಯದಂತೆ ಇನ್ನು ಮೇಲೆ ನಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ನಾವು ಕೇಳುವುದಿಲ್ಲ, ಈ ದೊಡ್ಡ ಬೆಂಕಿಯನ್ನೂ ನೋಡುವುದಿಲ್ಲ,” ಎಂದು ಹೇಳಿದಿರಿ.
17 ಆಗ ಯೆಹೋವ ದೇವರು ನನಗೆ, “ಅವರು ಹೇಳಿದ್ದು ಸರಿಯಾಗಿದೆ.
18 ನಿನ್ನ ಹಾಗಿರುವ ಪ್ರವಾದಿಯನ್ನು ನಾನು ಅವರ ಸಹೋದರರ ಮಧ್ಯದಿಂದ ಅವರಿಗೆ ಎಬ್ಬಿಸುವೆನು; ನನ್ನ ವಾಕ್ಯಗಳನ್ನು ಆತನ ಬಾಯಿಯಲ್ಲಿ ಇಡುವೆನು. ನಾನು ಆತನಿಗೆ ಆಜ್ಞಾಪಿಸುವುದನ್ನೆಲ್ಲಾ ಆತನು ಅವರಿಗೆ ಹೇಳುವನು.
19 ಆ ಪ್ರವಾದಿ ನನ್ನ ಹೆಸರಿನಿಂದ ಹೇಳುವ ನನ್ನ ವಾಕ್ಯಗಳನ್ನು ಕೇಳದ ಮನುಷ್ಯನು ಯಾವನೋ ಅವನನ್ನು ನಾನು ವಿಚಾರಿಸುವೆನು.
20 ಆದರೆ ನಾನು ಮಾತನಾಡಲು ಆಜ್ಞಾಪಿಸದೆ ಇರುವುದನ್ನು ನನ್ನ ಹೆಸರಿನಿಂದ ಮಾತನಾಡುವ ಪ್ರವಾದಿಯೂ, ಬೇರೆ ದೇವರುಗಳ ಹೆಸರಿನಿಂದ ಮಾತನಾಡುವ ಪ್ರವಾದಿಯೂ ಸಾಯಬೇಕು.”
21 ಇದಲ್ಲದೆ ನೀವು, “ಇದು ಯೆಹೋವ ದೇವರು ಹೇಳಿದ ವಾಕ್ಯವು ಅಲ್ಲ ಎಂದು ನಾವು ತಿಳಿದುಕೊಳ್ಳುವುದು ಹೇಗೆ?” ಎಂದು ನೀವು ನಿಮ್ಮ ಹೃದಯದಲ್ಲಿ ಆಲೋಚಿಸಬಹುದು.
22 ಒಬ್ಬ ಪ್ರವಾದಿಯು ಯೆಹೋವ ದೇವರ ಹೆಸರಿನಲ್ಲಿ ಮುಂತಿಳಿಸಿದ ಮಾತು ಸಂಭವಿಸದೆ ಹೋದರೆ ಅಥವಾ ನಿಜವಾಗದಿದ್ದರೆ, ಅದು ಯೆಹೋವ ದೇವರ ಮಾತು ಅಲ್ಲವೆಂದು ನೀವು ತಿಳಿದುಕೊಳ್ಳಬೇಕು. ಆ ಪ್ರವಾದಿಯು ಅಹಂಕಾರದಿಂದ ಅದನ್ನು ಮಾತನಾಡಿದ್ದರೆ, ಆದ್ದರಿಂದ ನೀವು ಅವನಿಗೆ ಭಯಪಡಬಾರದು.