30
ಧೂಪವೇದಿಕೆ
“ನೀನು ಜಾಲಿ ಮರದ ಕಟ್ಟಿಗೆಯಿಂದ ಧೂಪವೇದಿಯನ್ನು ಮಾಡಬೇಕು. ಅದರ ಉದ್ದ ಮತ್ತು ಅಗಲ ಸುಮಾರು ನಲವತ್ತೈದು ಸೆಂಟಿಮೀಟರ್*, ಅದರ ಎತ್ತರ ಸುಮಾರು ತೊಂಬತ್ತು ಸೆಂಟಿಮೀಟರ್ ಇದ್ದು, ಅದು ಚಚ್ಚೌಕವಾಗಿರಬೇಕು. ಅದರ ಕೊಂಬುಗಳನ್ನು ಸಹ ಜಾಲಿ ಮರದಿಂದಲೇ ಮಾಡಬೇಕು. ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿ, ಅದರ ಸುತ್ತಲೂ ಬಂಗಾರದ ಗೋಟನ್ನು ಮಾಡಬೇಕು. ಅದರ ಗೋಟಿನ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡಬೇಕು. ಇವುಗಳನ್ನು ಹೊರುವುದಕ್ಕಾಗಿ ಅವುಗಳಲ್ಲಿ ಕೋಲುಗಳನ್ನು ಸಿಕ್ಕಿಸಬೇಕು. ಆ ಕೋಲುಗಳನ್ನು ಜಾಲಿ ಮರದಿಂದ ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅದನ್ನು ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಮುಂದೆಯೂ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಇರುವ ಮಂಜೂಷದ ಮೇಲಿನ ಕರುಣಾಸನದ ಮುಂದೆಯೂ ಇಡಬೇಕು.
“ಅದರ ಮೇಲೆ ಆರೋನನು ಪರಿಮಳ ಧೂಪವನ್ನು ಸುಡಬೇಕು. ಪ್ರತಿದಿನ ಬೆಳಿಗ್ಗೆ ಸುಡಬೇಕು. ಪ್ರತಿದಿನ ಬೆಳಿಗ್ಗೆ ದೀಪಗಳನ್ನು ಸಿದ್ಧಮಾಡುವಾಗ ಅದನ್ನು ಸುಡಬೇಕು. ಆರೋನನು ಸಂಜೆ ದೀಪಗಳನ್ನು ಹಚ್ಚುವ ಸಮಯದಲ್ಲಿ ಧೂಪವೇದಿಯ ಮೇಲೆ ಧೂಪವನ್ನು ಸುಡಬೇಕು. ಅದೇ ನಿಮ್ಮ ಸಂತತಿಯವರಿಗೆ ಯೆಹೋವ ದೇವರ ಮುಂದೆ ಅರ್ಪಿಸಬೇಕಾದ ನಿತ್ಯವಾದ ಧೂಪವು. ನೀವು ಅದರ ಮೇಲೆ ಬೇರೆ ಧೂಪವನ್ನಾಗಲಿ, ದಹನಬಲಿಗಳನ್ನಾಗಲಿ, ಧಾನ್ಯಗಳ ಅರ್ಪಣೆಯನ್ನಾಗಲಿ ಅರ್ಪಿಸಬಾರದು. ಇಲ್ಲವೆ ಪಾನಾರ್ಪಣೆಯನ್ನು ಅದರ ಮೇಲೆ ಹೊಯ್ಯಬಾರದು. 10 ಆರೋನನು ಮತ್ತು ಅವನ ಸಂತತಿಯವರು ವರ್ಷಕ್ಕೆ ಒಂದು ಸಾರಿ ಪಾಪ ಪರಿಹಾರದ ಬಲಿಯ ರಕ್ತದಿಂದ ಅದರ ಕೊಂಬುಗಳಿಗೆ ಹಚ್ಚಿ ಪ್ರಾಯಶ್ಚಿತ್ತ ಮಾಡಬೇಕು. ಅದು ಯೆಹೋವ ದೇವರಿಗೆ ಮಹಾಪರಿಶುದ್ಧವಾದದ್ದು.”
ಪ್ರಾಯಶ್ಚಿತ್ತದ ಹಣ
11 ಆಗ ಯೆಹೋವ ದೇವರು ಪ್ರಕಟಪಡಿಸಿ ಮೋಶೆಗೆ, 12 “ನೀನು ಇಸ್ರಾಯೇಲರನ್ನು ಎಣಿಸಲು ಜನಗಣತಿಯನ್ನು ತೆಗೆದುಕೊಂಡಾಗ ಪ್ರತಿಯೊಬ್ಬನು ತನ್ನ ಜೀವನದ ವಿಮೋಚನೆಯ ಕ್ರಯವನ್ನು ಯೆಹೋವ ದೇವರಿಗೆ ಕೊಡಬೇಕು. ಈ ರೀತಿ ಮಾಡಿದಲ್ಲಿ ಅವರನ್ನು ಎಣಿಸುವಾಗ ಅವರಲ್ಲಿ ವ್ಯಾಧಿ ಉಂಟಾಗುವುದಿಲ್ಲ. 13 ಲೆಕ್ಕಿತರಾದವರಲ್ಲಿ ಸೇರುವ ಪ್ರತಿಯೊಬ್ಬ ಮನುಷ್ಯನು ಕೊಡಬೇಕಾದದ್ದು ಏನೆಂದರೆ ಶೆಕೆಲಿಗೆ ಇಪ್ಪತ್ತು ಗೇರಾಗಳ§ ಪ್ರಕಾರವಾಗಿ ಪರಿಶುದ್ಧ ಆಲಯದ ಶೆಕೆಲಿನ ಮೇರೆಗೆ ಅರ್ಧ ಶೆಕೆಲ್ ಕೊಡಬೇಕು. ಅರ್ಧ ಶೆಕೆಲ್ ಯೆಹೋವ ದೇವರಿಗೆ ಅರ್ಪಿಸುವ ಕಾಣಿಕೆಯಾಗಿರಬೇಕು. 14 ಲೆಕ್ಕಿತರಾದವರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೂ ಹೆಚ್ಚು ಪ್ರಾಯವುಳ್ಳವರೂ ಯೆಹೋವ ದೇವರಿಗೆ ಕಾಣಿಕೆಯನ್ನು ಕೊಡಬೇಕು. 15 ನಿಮ್ಮ ಜೀವನದ ಪ್ರಾಯಶ್ಚಿತ್ತಕ್ಕೆ ಯೆಹೋವ ದೇವರಿಗೆ ಅರ್ಪಿಸುವ ಕಾಣಿಕೆಯನ್ನು ಕೊಡುವುದರಲ್ಲಿ ಐಶ್ವರ್ಯವಂತರು ಅರ್ಧ ಶೇಕೆಲಿಗಿಂತ ಹೆಚ್ಚು ಕೊಡಬಾರದು. ಬಡವನು ಕಡಿಮೆ ಕೊಡಬಾರದು. 16 ಪ್ರಾಯಶ್ಚಿತ್ತದ ಹಣವನ್ನು ಇಸ್ರಾಯೇಲರಿಂದ ತೆಗೆದುಕೊಂಡು ದೇವದರ್ಶನದ ಗುಡಾರದ ಕೆಲಸಕ್ಕಾಗಿ ಪ್ರತ್ಯೇಕಿಸಬೇಕು. ಇದೇ ಯೆಹೋವ ದೇವರ ಮುಂದೆ ಇಸ್ರಾಯೇಲರಿಗೆ ಜ್ಞಾಪಕಾರ್ಥಕ್ಕಾಗಿಯೂ ಅವರ ಪ್ರಾಯಶ್ಚಿತ್ತಕ್ಕಾಗಿಯೂ ಇರುವುದು,” ಎಂದರು.
ತೊಳೆಯುವುದಕ್ಕೆ ಬೋಗುಣಿ
17 ಯೆಹೋವ ದೇವರು ಮೋಶೆಗೆ, 18 “ತೊಳೆದುಕೊಳ್ಳುವದಕ್ಕಾಗಿ ಕಂಚಿನ ಬೋಗುಣಿಯನ್ನು ಮಾಡಿಸಿ ಅದಕ್ಕೆ ಕಂಚಿನ ಪೀಠವನ್ನೂ ಮಾಡಿಸಿ, ಅದನ್ನು ದೇವದರ್ಶನದ ಗುಡಾರ ಮತ್ತು ಬಲಿಪೀಠದ ಮಧ್ಯದಲ್ಲಿಟ್ಟು, ಅದರಲ್ಲಿ ನೀರನ್ನು ತುಂಬಿಸಿಡಬೇಕು. 19 ಏಕೆಂದರೆ ಆರೋನನೂ ಅವನ ಪುತ್ರರೂ ಅದರಲ್ಲಿ ಕೈಕಾಲುಗಳನ್ನು ತೊಳೆಯಬೇಕು. 20 ಅವರು ದೇವದರ್ಶನದ ಗುಡಾರದಲ್ಲಿ ಪ್ರವೇಶಿಸುವಾಗ ಸೇವೆ ಮಾಡುವುದಕ್ಕೂ, ಬೆಂಕಿಯಿಂದ ಯೆಹೋವ ದೇವರಿಗೆ ದಹನಬಲಿಯನ್ನು ಅರ್ಪಿಸುವುದಕ್ಕೂ ಬಲಿಪೀಠದ ಬಳಿಗೆ ಬರುವಾಗ ಅವರು ಸಾಯದ ಹಾಗೆ ನೀರಿನಲ್ಲಿ ತೊಳೆದುಕೊಳ್ಳಬೇಕು. 21 ಅವರು ಸಾಯದ ಹಾಗೆ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. ಇದೇ ಅವನಿಗೂ ಅವನ ಸಂತತಿಯವರಿಗೂ ತಲತಲಾಂತರಗಳಲ್ಲಿ ನಿತ್ಯವಾದ ಕಟ್ಟಳೆಯಾಗಿರಬೇಕು,” ಎಂದರು.
ಅಭಿಷೇಕ ತೈಲ
22 ಯೆಹೋವ ದೇವರು ಮೋಶೆಗೆ, 23 “ಉತ್ತಮವಾದ ತೈಲಗಳನ್ನು ಆರು ಕಿಲೋಗ್ರಾಂ ಸ್ವಚ್ಛವಾದ ರಕ್ತಬೋಳವು, ಇದರ ಅರ್ಧದಷ್ಟು ಮೂರು ಕಿಲೋಗ್ರಾಂ ಸುಗಂಧವಾದ ಲವಂಗಚಕ್ಕೆಯನ್ನು ಮತ್ತು ಮೂರು ಕಿಲೋಗ್ರಾಂ ಸುಗಂಧವಾದ ಬಜೆಯನ್ನು, 24 ಆರು ಕಿಲೋಗ್ರಾಂ ದಾಲ್ಚಿನ್ನಿಯನ್ನು ಪರಿಶುದ್ಧಸ್ಥಳದ ಅಳತೆಯ ಮೇರೆಗೆ ಇವುಗಳನ್ನು ನೀನು ತೆಗೆದುಕೊಳ್ಳಬೇಕು. ಸುಮಾರು ನಾಲ್ಕು ಲೀಟರಷ್ಟು* ಓಲಿವ್ ಎಣ್ಣೆಯನ್ನು ಸಹ ತೆಗೆದುಕೊಂಡು, 25 ಅದರಿಂದ ಸುಗಂಧಕಾರನ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮಾಡು. ಇದು ಪರಿಶುದ್ಧವಾದ ಅಭಿಷೇಕದ ತೈಲವಾಗಿರುವುದು. 26 ಅದರಿಂದ ಸಭೆಯ ಗುಡಾರವನ್ನೂ ಒಡಂಬಡಿಕೆಯ ಮಂಜೂಷವನ್ನೂ 27 ಮೇಜನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಧೂಪದ ವೇದಿಯನ್ನೂ 28 ದಹನಬಲಿಯ ಪೀಠವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಗಂಗಾಳವನ್ನೂ, ಅದರ ಕಾಲುಗಳನ್ನೂ ಅಭಿಷೇಕಿಸು. 29 ಅವು ಮಹಾಪರಿಶುದ್ಧವಾಗುವಂತೆ ಅವುಗಳನ್ನು ಶುದ್ಧಮಾಡು. ಅವುಗಳನ್ನು ಮುಟ್ಟುವುದೆಲ್ಲವೂ ಪರಿಶುದ್ಧವಾಗಿರಬೇಕು.
30 “ಆರೋನನನ್ನೂ, ಅವನ ಪುತ್ರರನ್ನೂ ಅಭಿಷೇಕಿಸಿ, ಅವರು ನನಗೆ ಯಾಜಕ ಸೇವೆಮಾಡುವಂತೆ ಅವರನ್ನು ಪ್ರತಿಷ್ಠೆ ಮಾಡು, ಎಂದರು. 31 ನೀನು ಇಸ್ರಾಯೇಲರಿಗೆ: ‘ತಲತಲಾಂತರಗಳಲ್ಲಿ ಇದು ನನಗೆ ಪರಿಶುದ್ಧವಾದ ಅಭಿಷೇಕ ಎಣ್ಣೆಯಾಗಿರಬೇಕು. 32 ಇದನ್ನು ಮನುಷ್ಯರ ಮೇಲೆ ಹೊಯ್ಯಬಾರದು. ಇದರ ಮಾದರಿಯಂತೆ ಅಥವಾ ಇದಕ್ಕೆ ಸಮಾನವಾದದ್ದನ್ನು ಮಾಡಬಾರದು. ಇದು ಪರಿಶುದ್ಧವಾದದ್ದು. ನೀವು ಸಹ ಇದನ್ನು ಪರಿಶುದ್ಧವೆಂದು ತಿಳಿದುಕೊಳ್ಳಬೇಕು. 33 ಇದರ ಹಾಗೆ ತೈಲ ಮಾಡುವವನೂ ಯಾಜಕನಲ್ಲದವನ ಮೇಲೆ ಇದನ್ನು ಹಚ್ಚುವವನನ್ನು ಸ್ವಜನರೊಳಗಿಂದ ತೆಗೆದುಹಾಕಬೇಕು,’ ಎಂದು ಹೇಳು,” ಎಂದರು.
ಪರಿಮಳ ದ್ರವ್ಯಗಳು
34 ಯೆಹೋವ ದೇವರು ಮೋಶೆಗೆ, “ನೀನು ಹಾಲು ಮಡ್ಡಿ, ಗುಗ್ಗಲ ಹಾಗೂ ಗಂಧದ ಚಕ್ಕೆ ಎಂಬ ಪರಿಮಳಗಳನ್ನೂ ಶುದ್ಧವಾದ ಸಾಮ್ರಾಣಿಯನ್ನೂ ತೆಗೆದುಕೋ. ಅವು ಸಮತೂಕವಾಗಿರಲಿ. 35 ಅದನ್ನು ಸುಗಂಧ ತೈಲ ಮಾಡುವವರ ವಿದ್ಯೆಯ ಪ್ರಕಾರ ಬೆರಸಿ, ಶುದ್ಧವಾದ ಮತ್ತು ಪವಿತ್ರವಾದ ತೈಲವನ್ನು ಮಾಡಬೇಕು. 36 ಅದರಲ್ಲಿ ಸ್ವಲ್ಪ ಪುಡಿಮಾಡಿ, ದೇವದರ್ಶನದ ಗುಡಾರದಲ್ಲಿ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇಡು. ಅದು ನಿಮಗೆ ಮಹಾಪರಿಶುದ್ಧವಾಗಿರಲಿ. 37 ನೀನು ಮಾಡುವ ಧೂಪದ ಮಾದರಿಯಂತೆ ನಿಮಗೋಸ್ಕರ ಮಾಡಿಕೊಳ್ಳಬಾರದು. ಅದನ್ನು ಯೆಹೋವ ದೇವರಿಗೆ ಪವಿತ್ರವೆಂದು ಪರಿಗಣಿಸಬೇಕು. 38 ಸುವಾಸನೆಗಾಗಿ ಅದನ್ನು ಮಾಡಿಕೊಳ್ಳುವವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
* 30:2 30:2 ಅಂದರೆ, ಒಂದು ಮೊಳ 30:2 30:2 ಅಂದರೆ, ಎರಡು ಮೊಳ 30:13 30:13 ಸುಮಾರು ಒಂದು ಶೆಕೆಲ್ ಹನ್ನೊಂದು ಗ್ರಾಂ § 30:13 30:13 ಸುಮಾರು ಒಂದು ಗೇರಾ ಆರುನೂರು ಗ್ರಾಂ * 30:24 30:24 ಹೀಬ್ರೂ ಭಾಷೆಯಲ್ಲಿ ಒಂದು ಹಿನ್, ಅಂದರೆ ಸುಮಾರು 4 ಲೀಟರ್