31
ಬೆಚಲಯೇಲ್ ಹಾಗೂ ಒಹೊಲಿಯಾಬ
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಅವನಿಗೆ, “ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆದ ಬೆಚಲಯೇಲ್ ಎಂಬವನನ್ನು ಗುರುತಿಸಿ ನಾನು ಆರಿಸಿಕೊಂಡಿದ್ದೇನೆ. ನಾನು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕದಿಂದಲೂ ಎಲ್ಲಾ ವಿಧವಾದ ಕೌಶಲ್ಯದಿಂದಲೂ ತುಂಬಿಸಿದ್ದೇನೆ. ಅವನು ಚಿನ್ನ, ಬೆಳ್ಳಿ, ಕಂಚಿನಲ್ಲಿ ಕಲಾತ್ಮಕವಾದ ವಿನ್ಯಾಸಗಳ ಕೆಲಸವನ್ನು ಮಾಡುವುದಕ್ಕೂ, ರತ್ನಗಳಲ್ಲಿ ಕೆತ್ತನೆಯನ್ನೂ ಮರದಲ್ಲಿ ಕೆತ್ತನೆಯನ್ನೂ ಸಕಲ ವಿಧವಾದ ಕೌಶಲ್ಯದ ಕೆಲಸವನ್ನು ಬಲ್ಲವನಾಗಿರುವನು. ಇಗೋ, ನಾನೇ ಅವನೊಂದಿಗೆ ದಾನನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನನ್ನು ನೇಮಿಸಿದ್ದೇನೆ.
 
“ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವುದಕ್ಕೆ ಜಾಣರಾದವರೆಲ್ಲರ ಹೃದಯಗಳಲ್ಲಿ ಯಾವ ಕೆಲಸವನ್ನಾದರೂ ಕಲ್ಪಿಸಿ ಮಾಡುವದಕ್ಕೆ ಜ್ಞಾನವನ್ನು ಅನುಗ್ರಹಿಸಿದ್ದೇನೆ.
 
“ದೇವದರ್ಶನದ ಗುಡಾರ,
ಒಡಂಬಡಿಕೆಯ ಮಂಜೂಷ, ಅದರ ಮೇಲಿರುವ ಕರುಣಾಸನ,
ಗುಡಾರದ ಎಲ್ಲಾ ಉಪಕರಣಗಳು,
ಮೇಜು ಅದರ ಉಪಕರಣಗಳು,
ಶುದ್ಧ ಬಂಗಾರದ ದೀಪಸ್ತಂಭ, ಅದರ ಎಲ್ಲಾ ಉಪಕರಣಗಳು,
ಧೂಪವೇದಿ, ಬಲಿಪೀಠ,
ದಹನಬಲಿಪೀಠದ ಎಲ್ಲಾ ಉಪಕರಣಗಳು,
ಗಂಗಾಳ, ಅದರ ಕಾಲು,
10 ಯಾಜಕನಾದ ಆರೋನನ ಕಲಾತ್ಮಕವಾಗಿ ನೇಯ್ದ ಸೇವಾವಸ್ತ್ರಗಳು,
ಪರಿಶುದ್ಧ ವಸ್ತ್ರಗಳು,
ಯಾಜಕನ ಕೆಲಸ ಮಾಡುವುದಕ್ಕೆ ಅವನ ಮಕ್ಕಳ ವಸ್ತ್ರಗಳು,
11 ಅಭಿಷೇಕಿಸುವ ತೈಲ, ಪರಿಶುದ್ಧ ಸ್ಥಳಕ್ಕೋಸ್ಕರವಿರುವ ಪರಿಮಳ ಧೂಪ.
 
“ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು,” ಎಂದರು.
ಸಬ್ಬತ್ ದಿನ
12 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ, 13 “ನೀನು ಇಸ್ರಾಯೇಲರೊಂದಿಗೆ ಮಾತನಾಡಿ, ‘ನಿಶ್ಚಯವಾಗಿ ನೀವು ನನ್ನ ವಿಶ್ರಾಂತಿಯ ದಿನವನ್ನು ಕೈಗೊಳ್ಳಬೇಕು. ಏಕೆಂದರೆ ನಿಮ್ಮನ್ನು ಪರಿಶುದ್ಧ ಮಾಡುವ ಯೆಹೋವ ದೇವರು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ, ನಿಮಗೂ, ನಿಮ್ಮ ಸಂತತಿಯವರಿಗೂ ಗುರುತಾಗಿರುವುದು.
14 “ ‘ಹೀಗಿರುವುದರಿಂದ ನೀವು ಸಬ್ಬತ್ ದಿನವನ್ನು ಕೈಗೊಳ್ಳಬೇಕು. ಏಕೆಂದರೆ ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರ ಮಾಡುವ ಪ್ರತಿಯೊಬ್ಬನು ಸಾಯಲೇಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ, ಅವರನ್ನು ನಿಮ್ಮ ಜನರೊಳಗಿಂದ ತೆಗೆದುಹಾಕಬೇಕು. 15 ಆರು ದಿವಸ ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ಯೆಹೋವ ದೇವರಿಗೆ ಪರಿಶುದ್ಧವಾದ ಸಬ್ಬತ್ ದಿನ. ಆ ಸಬ್ಬತ್ ದಿನದಲ್ಲಿ ಕೆಲಸ ಮಾಡುವವರೆಲ್ಲಾ ಸಾಯಲೇಬೇಕು. 16 ಹೀಗಿರಲಾಗಿ ಇಸ್ರಾಯೇಲರು ತಮ್ಮ ತಲತಲಾಂತರಗಳಲ್ಲಿ ನಿತ್ಯ ಒಡಂಬಡಿಕೆಯಾಗಿ ಆಚರಿಸುವಂತೆ ಸಬ್ಬತ್ ದಿನವನ್ನು ಕೈಗೊಳ್ಳಬೇಕು. 17 ನನಗೂ, ಇಸ್ರಾಯೇಲರಿಗೂ ಇದೇ ಶಾಶ್ವತವಾದ ಗುರುತು. ಏಕೆಂದರೆ ಆರು ದಿವಸಗಳಲ್ಲಿ ಯೆಹೋವ ದೇವರು ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸ ನಿಲ್ಲಿಸಿ, ವಿಶ್ರಮಿಸಿಕೊಂಡರು ಎಂದು ಹೇಳು,’ ” ಎಂದರು.
18 ಯೆಹೋವ ದೇವರು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ, ಅವನಿಗೆ ಸಾಕ್ಷಿಯ ಎರಡು ಹಲಗೆಗಳನ್ನೂ ದೇವರು ಬೆರಳಿನಿಂದ ಬರೆದ ಕಲ್ಲಿನ ಹಲಗೆಗಳನ್ನೂ ಕೊಟ್ಟನು.