9
ಇಸ್ರಾಯೇಲರಿಗೆ ದಂಡನೆ
ಇಸ್ರಾಯೇಲೇ, ಬೇರೆ ಜನಾಂಗಗಳು ಉಲ್ಲಾಸಿಸುವ ಪ್ರಕಾರ
ಸಂತೋಷ ಪಡಬೇಡ.
ಏಕೆಂದರೆ ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ಮಾಡಿದ್ದೀಯೆ.
ಎಲ್ಲಾ ಧಾನ್ಯದ ಕಣಗಳಲ್ಲಿ
ವ್ಯಭಿಚಾರದ ಕೂಲಿಯನ್ನು ಪ್ರೀತಿ ಮಾಡಿದ್ದೀಯೆ.
ಧಾನ್ಯ ಕಣವು ಮತ್ತು ದ್ರಾಕ್ಷಿಯ ತೊಟ್ಟಿಯೂ ಅವರನ್ನು ಪೋಷಿಸುವುದಿಲ್ಲ.
ಹೊಸ ದ್ರಾಕ್ಷಾರಸವು ಅವಳಲ್ಲಿ ನಿಂತುಹೋಗುವುವು.
ಅವರು ಯೆಹೋವ ದೇವರ ದೇಶದಲ್ಲಿ ನೆಲೆಸುವುದಿಲ್ಲ.
ಆದರೆ ಎಫ್ರಾಯೀಮು ಈಜಿಪ್ಟಿಗೆ ಹಿಂದಿರುಗುವುದು.
ಅವರು ಅಸ್ಸೀರಿಯದಲ್ಲಿ ಅಶುದ್ಧವಾದವುಗಳನ್ನು ತಿನ್ನುವರು.
ಅವರು ದ್ರಾಕ್ಷಾರಸವನ್ನು ಕಾಣಿಕೆಯಾಗಿ ಯೆಹೋವ ದೇವರಿಗೆ ಅರ್ಪಿಸುವುದಿಲ್ಲ.
ಅವರ ಬಲಿಗಳು ಆತನಿಗೆ ಮೆಚ್ಚಿಗೆಯಾಗಿರುವುದಿಲ್ಲ.
ಅವರ ಬಲಿಗಳು ಅವರಿಗೆ ದುಃಖಿಸುವವರ ರೊಟ್ಟಿಯ ಹಾಗಿರುವುವು.
ಅದನ್ನು ತಿನ್ನುವವರೆಲ್ಲರೂ ಅಪವಿತ್ರರಾಗುವರು.
ಏಕೆಂದರೆ ಅದು ಅವರ ಹೊಟ್ಟೆ ತುಂಬುವುದಕ್ಕೆ ಮಾತ್ರ ಸರಿಯೇ ಹೊರತು,
ಯೆಹೋವ ದೇವರ ಆಲಯಕ್ಕೆ ಸಲ್ಲುವುದಿಲ್ಲ.
 
ಪರಿಶುದ್ಧ ದಿವಸದಲ್ಲಿಯೂ,
ಯೆಹೋವ ದೇವರ ಹಬ್ಬಗಳ ದಿವಸದಲ್ಲಿಯೂ ನೀನು ಏನು ಮಾಡುತ್ತೀ?
ಇಗೋ, ನಾಶನದಿಂದ ಅವರು ತಪ್ಪಿಸಿಕೊಂಡರೂ
ಈಜಿಪ್ಟ್ ಅವರನ್ನು ಕೂಡಿಸುವುದು.
ಮೋಫ್ ಪಟ್ಟಣವು ಅವರನ್ನು ಹೂಳುವುದು.
ಅವರ ಬೆಳ್ಳಿಯ ಬೊಕ್ಕಸಗಳು ಮುಳ್ಳು ಪೊದೆಗಳ ಪಾಲಾಗುವುವು.
ಮುಳ್ಳುಗಿಡಗಳು ಅವರ ಗುಡಾರಗಳನ್ನು ಆವರಿಸಿಕೊಂಡಿರುವುದು.
ದಂಡನೆಯ ದಿವಸಗಳು ಬಂದಿವೆ,
ಮುಯ್ಯಿ ತೀರಿಸುವ ದಿವಸಗಳೂ ಸಮೀಪವಾಗಿವೆ.
ಇಸ್ರಾಯೇಲು ಅದನ್ನು ತಿಳಿದುಕೊಳ್ಳಲಿ.
ಏಕೆಂದರೆ ನಿನ್ನ ಪಾಪಗಳು ಬಹಳವಾಗಿರುವುದರಿಂದಲೂ,
ದ್ವೇಷವು ಹೆಚ್ಚಾಗಿರುವುದರಿಂದಲೂ,
“ಪ್ರವಾದಿ ಮೂರ್ಖನೂ,
ಪ್ರೇರಿತ ಮನುಷ್ಯನು ಹುಚ್ಚನೂ,”
ಎಂದು ಇಸ್ರಾಯೇಲು ಹೇಳಿಕೊಳ್ಳುತ್ತದೆ.
ನನ್ನ ದೇವರೊಂದಿಗೆ ಪ್ರವಾದಿಯು
ಎಫ್ರಾಯೀಮನ ಮೇಲೆ ಕಾವಲುಗಾರನಾಗಿದ್ದಾನೆ,
ಆದರೂ ಅವನ ಮಾರ್ಗಗಳಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ
ಮತ್ತು ಅವನ ದೇವರ ಮನೆಯಲ್ಲಿ ದ್ವೇಷವಿದೆ.
ಗಿಬೆಯದ ದಿವಸಗಳಲ್ಲಿ ಆದ ಹಾಗೆ
ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ.
ಆದ್ದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕ ಮಾಡಿಕೊಳ್ಳುವನು.
ಅವರ ಪಾಪಕ್ಕೆ ತನ್ನ ದಂಡನೆಯನ್ನು ವಿಧಿಸುವನು.
 
10 “ನಾನು ಮರುಭೂಮಿಯಲ್ಲಿ ದ್ರಾಕ್ಷಾಫಲದ ಹಾಗೆ
ಇಸ್ರಾಯೇಲನ್ನು ಕಂಡುಕೊಂಡೆನು.
ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ
ನಿಮ್ಮ ಪಿತೃಗಳನ್ನು ನೋಡಿದೆನು.
ಆದರೆ ಅವರು ಬಾಳ್ ಪೆಯೋರನ ಹತ್ತಿರ ಬಂದು
ನಾಚಿಕೆಯ ವಿಗ್ರಹಕ್ಕೆ ತಮ್ಮನ್ನು ಪ್ರತ್ಯೇಕಿಸಿಕೊಂಡರು.
ಅವರು ಪ್ರೀತಿಸಿದ ವಿಗ್ರಹಗಳ ಹಾಗೆ ಅಸಹ್ಯರಾದರು.
11 ಎಫ್ರಾಯೀಮ್ ಘನತೆಯು ಪಕ್ಷಿಯಂತೆ ಹಾರಿಹೋಗುವುದು.
ಜನನವಿಲ್ಲ, ಗರ್ಭಧಾರಣೆ ಇಲ್ಲ, ಪ್ರಸವವಿಲ್ಲ.
12 ಅವರು ತಮ್ಮ ಮಕ್ಕಳನ್ನು ಬೆಳೆಸಿದ್ದರೂ,
ಅವರ ಮಕ್ಕಳಲ್ಲಿ ಯಾರೂ ಉಳಿಯದ ಹಾಗೆ
ನಾನು ಅವರನ್ನು ಮಕ್ಕಳಿಲ್ಲದವರನ್ನಾಗಿ ಮಾಡುವೆನು.
ನಾನು ಅವರನ್ನು ಬಿಟ್ಟು ಹೋಗುವಾಗ ಅವರಿಗೆ ಕಷ್ಟ!
13 ಎಫ್ರಾಯೀಮ್ ಟೈರ್‌ನಂತಹ ಸುಂದರವಾದ ಸ್ಥಳದಲ್ಲಿ
ನೆಡುವುದನ್ನು ನಾನು ಕಂಡೆನು.
ಆದರೆ ಎಫ್ರಾಯೀಮ್ ತನ್ನ ಮಕ್ಕಳನ್ನು ಹತ್ಯಗೆ ಈಡಾಗುವಂತೆ ಕಳುಹಿಸುವುದು.”
 
14 ಯೆಹೋವ ದೇವರೇ, ಅವರಿಗೆ ಕೊಡಿರಿ.
ಅವರಿಗೆ ನೀವು ಏನು ಕೊಡುತ್ತೀರಿ?
ಗರ್ಭ ಸ್ರಾವ, ಗರ್ಭವನ್ನು ಮತ್ತು
ಬತ್ತಿದ ಸ್ತನಗಳನ್ನು ಅವರಿಗೆ ಕೊಡಿರಿ.
 
15 ಅವರ ದುಷ್ಟತನವೆಲ್ಲಾ ಗಿಲ್ಗಾಲಿನಲ್ಲಿದೆ.
ಅಲ್ಲಿ ಅವರನ್ನು ಹಗೆ ಮಾಡಿದ್ದೇನೆ.
ಅವರ ಪಾಪ ಕೃತ್ಯಗಳ ನಿಮಿತ್ತ ಅವರನ್ನು
ನನ್ನ ಆಲಯದೊಳಗಿಂದ ಹೊರಡಿಸಿ,
ಅವರನ್ನು ಇನ್ನು ಪ್ರೀತಿಸುವುದೇ ಇಲ್ಲ.
ಅವರ ಅಧಿಕಾರಿಗಳೆಲ್ಲಾ ತಿರುಗಿ ಬೀಳುವವರೇ.
16 ಎಫ್ರಾಯೀಮು ಹೊಡೆತಕ್ಕೆ ಒಳಗಾಗಿದೆ.
ಅವರ ಬೇರು ಒಣಗಿಹೋಗಿದೆ,
ಅವರು ಫಲವನ್ನು ಕೊಡುವುದಿಲ್ಲ,
ಅವರು ಹೆತ್ತರೂ ಅವರ ಗರ್ಭದ ಪ್ರಿಯಕರವಾದ
ಫಲವನ್ನು ಸಹ ನಾನು ಕೊಲ್ಲುವೆನು.
 
17 ನನ್ನ ದೇವರು ಅವರನ್ನು ತಳ್ಳಿಬಿಡುವರು.
ಏಕೆಂದರೆ ಅವರು ಆತನಿಗೆ ವಿಧೇಯರಾಗಲಿಲ್ಲ.
ಅವರು ಜನಾಂಗಗಳಲ್ಲಿ ಅಲೆದಾಡುವವರಾಗಿರುವರು.