23
ಟೈರಿನ ವಿಷಯವಾದ ಪ್ರವಾದನೆ
ಟೈರಿನ ವಿಷಯವಾದ ಪ್ರವಾದನೆ:
ತಾರ್ಷೀಷಿನ ಹಡಗುಗಳೇ, ಗೋಳಾಡಿರಿ,
ಏಕೆಂದರೆ ಟೈರ್ ಹಾಳಾಗಿರುವುದರಿಂದ
ನಿಮಗೆ ಮನೆಯಿಲ್ಲ ಮತ್ತು ಬಂದರವೂ ಇಲ್ಲ.
ಇದು ಕಿತ್ತೀಮ್ ದೇಶದವರಿಂದ ಅವರಿಗೆ ತಿಳಿಯಿತು.
 
ದ್ವೀಪಗಳ ನಿವಾಸಿಗಳೇ,
ಸಮುದ್ರವನ್ನು ದಾಟುವ ಸೀದೋನಿನ ವರ್ತಕರಿಂದ
ಸಮೃದ್ಧಿಯನ್ನು ಹೊಂದಿದವರೇ ಮೌನವಾಗಿರಿ.
ಪ್ರವಾಹದಿಂದ ಶೀಹೋರಿನ ಧಾನ್ಯವೂ,
ನೈಲ್ ನದಿಯ ಸುಗ್ಗಿಯೂ ಅದಕ್ಕೆ ಆದಾಯವಾಗಿತ್ತು.
ಅನೇಕ ಜನಾಂಗಗಳಿಗೆ ವ್ಯಾಪಾರ ಸ್ಥಳವಾಗಿತ್ತು.
 
ಸೀದೋನೇ ಮತ್ತು ಸಮುದ್ರದ ಕೋಟೆಯೇ ನಾಚಿಕೆಪಡಿರಿ.
ಏಕೆಂದರೆ ಇದೇ ಸಮುದ್ರದ ಘೋಷಣೆಯಾಗಿದೆ:
“ನಾವು ಪ್ರಸವವೇದನೆ ಪಡುವುದಿಲ್ಲ, ಹೆರುವುದಿಲ್ಲ,
ಇಲ್ಲವೆ ಪುತ್ರಪುತ್ರಿಯರನ್ನು ಸಾಕಿ ಸಲಹುವುದಿಲ್ಲ,”
ಈಜಿಪ್ಟಿನಿಂದ ಸುದ್ದಿ ಆದ ಹಾಗೆ
ಟೈರಿನ ಸುದ್ದಿಗೆ ಬಹಳ ವೇದನೆ ಪಡುವರು.
 
ತಾರ್ಷೀಷಿಗೆ ದಾಟಿ ಹೋಗಿರಿ,
ದ್ವೀಪ ನಿವಾಸಿಗಳೇ ಗೋಳಾಡಿರಿ.
ನಿಮ್ಮ ಉಲ್ಲಾಸದ ಪಟ್ಟಣವೂ,
ಪೂರ್ವಕಾಲದ ಹಳೆಯ ಸಂಪ್ರದಾಯದಿಂದ ಬಂದಿದ್ದೂ ಇದೆಯೋ?
ಅವಳ ಸ್ವಂತ ಕಾಲುಗಳು ಅದನ್ನು ದೂರ ದೇಶದಲ್ಲಿ
ನಿವಾಸಿಸುವುದಕ್ಕೆ ತೆಗೆದುಕೊಂಡು ಹೋಗುವವು.
ಅದು ಕಿರೀಟದಾಯಕವಾದ ಪಟ್ಟಣವು.
ಅದರ ವರ್ತಕರಾದ ಪ್ರಭುಗಳು,
ಅದರ ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ.
ಇಂಥ ಟೈರಿಗೆ ವಿರುದ್ಧವಾಗಿ ಈ ಆಲೋಚನೆ ಮಾಡಿದವರು ಯಾರು?
ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇಕೆಂತಲೂ,
ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವಮಾನಪಡಿಸಬೇಕೆಂತಲೂ
ಸೇನಾಧೀಶ್ವರ ಯೆಹೋವ ದೇವರೇ ಹೀಗೆ ಸಂಕಲ್ಪಿಸಿದ್ದಾರೆ.
 
10 ತಾರ್ಷೀಷಿನ ಮಗಳೇ,
ನೈಲ್ ನದಿಯಂತೆ ನಿನ್ನ ದೇಶದಲ್ಲಿ ಹಾದುಹೋಗು.
ಅಲ್ಲಿ ಇನ್ನು ನಿನ್ನನ್ನು ತಡೆಯುವವರು ಯಾರೂ ಇಲ್ಲ.
11 ಯೆಹೋವ ದೇವರು ಸಮುದ್ರದ ಮೇಲೆ
ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ.
ಅವರು ವ್ಯಾಪಾರದ ಪಟ್ಟಣವನ್ನು
ಕಾನಾನಿನ ದುರ್ಗಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾರೆ.
12 “ಹಿಂಸೆಗೆ ಈಡಾದ ಕನ್ಯೆಯಂತಿರುವ ಸೀದೋನ್ ನಗರಿಯೇ,
ಇನ್ನು ಮೇಲೆ ನಿನಗೆ ಸಂತೃಪ್ತಿ ಇಲ್ಲ.
 
“ಎದ್ದು, ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು.
ಅಲ್ಲಿಯೂ ನಿನಗೆ ವಿಶ್ರಾಂತಿ ಇರದು.”
13 ಕಸ್ದೀಯರ ದೇಶವು! ಅಸ್ಸೀರಿಯದವರು ಅದನ್ನು
ಕಾಡುಮೃಗಗಳಿಗೆ ಈಡು
ಮಾಡುವ ತನಕ ಈ ಜನರು ಇರಲಿಲ್ಲ.
ಗೋಪುರಗಳನ್ನು ಕಟ್ಟಿಸಿಕೊಂಡು
ಅವರು ಅದರ ಅರಮನೆಗಳನ್ನು ಕಟ್ಟಿಸಿಕೊಂಡು ಅದನ್ನು ನಾಶಮಾಡಿದ್ದಾರೆ.
 
14 ತಾರ್ಷೀಷಿನ ಹಡಗುಗಳೇ, ಗೋಳಾಡಿರಿ!
ಏಕೆಂದರೆ ನಿಮ್ಮ ಆಶ್ರಯಸ್ಥಾನವು ಹಾಳಾಯಿತು, ಎಂದು ಆತನು ಹೇಳಿದ್ದಾನೆ.
15 ಆ ದಿವಸದಲ್ಲಿ ಟೈರ್ ಪಟ್ಟಣವು ಒಬ್ಬ ಅರಸನ ದಿವಸಗಳ ಪ್ರಕಾರ ಎಪ್ಪತ್ತು ವರುಷಗಳ ತನಕ ಜ್ಞಾಪಕಕ್ಕೆ ಬಾರದೆ ಇರುವುದು. ಎಪ್ಪತ್ತು ವರ್ಷಗಳ ಕೊನೆಯಲ್ಲಿ ಟೈರ್ ಪಟ್ಟಣವು ವೇಶ್ಯೆಯ ವಿಷಯವಾದ ಈ ಗೀತೆಯ ಹಾಗಾಗುವುದು:
16 “ಮರೆತುಹೋದ ವೇಶ್ಯೆಯೇ,
ಕಿನ್ನರಿಯನ್ನು ತೆಗೆದುಕೋ.
ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ,
ಬಹಳ ಗೀತೆಗಳನ್ನು ಹಾಡು.”
17 ಎಪ್ಪತ್ತು ವರುಷಗಳಾದ ಮೇಲೆ ಯೆಹೋವ ದೇವರು ಟೈರನ್ನು ಪರಾಮರಿಸುವರು. ಅದು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಲೋಕದವರಲ್ಲಿರುವ ಎಲ್ಲಾ ರಾಜ್ಯಗಳ ಸಂಗಡ ಭೂಮಿಯ ಮೇಲೆ ವ್ಯಾಪಾರ ಮಾಡುವುದು. 18 ಆದರೆ ಅವಳ ವ್ಯಾಪಾರವೂ ಮತ್ತು ಅವಳ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಯೆಹೋವ ದೇವರಿಗೆ ಪರಿಶುದ್ಧವಾಗುವುದು. ಅವಳ ಆದಾಯವು ಯೆಹೋವ ದೇವರ ಸನ್ನಿಧಾನದಲ್ಲಿ ವಾಸಿಸುವವರೆಗೆ ಬೇಕಾದಷ್ಟು ಅನ್ನವನ್ನೂ, ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನುಕೂಲವಾಗುವುದು.