53
ನಮ್ಮ ಸುದ್ದಿಯನ್ನು ಯಾರು ನಂಬಿದ್ದಾರೆ?
ಯೆಹೋವ ದೇವರ ಬಾಹುವು ಯಾರಿಗೆ ಪ್ರಕಟವಾಯಿತು?
ಅವನು ಚಿಗುರಿನಂತೆಯೂ, ಒಣ ನೆಲದಿಂದ ಹುಟ್ಟಿಬರುವ
ಬೇರಿನಂತೆಯೂ ಯೆಹೋವ ದೇವರ ಮುಂದೆ ಬೆಳೆಯುವನು.
ಅವನಿಗೆ ಯಾವ ಸೌಂದರ್ಯವಾಗಲಿ ಇಲ್ಲವೆ ಘನತೆಯಾಗಲಿ ಇರಲಿಲ್ಲ.
ನಾವು ಅವನನ್ನು ನೋಡಿದಾಗ, ಅವನಲ್ಲಿ ಆಕರ್ಷಿಸತಕ್ಕ ಯಾವ ಚಂದವು ಇರಲಿಲ್ಲ.
ಆತನು ತಿರಸ್ಕೃತನೂ ಮಾನವಕುಲದಿಂದ ನಿರಾಕರಿಸಲಾದವನೂ,
ದುಃಖಿತ ಮನುಷ್ಯನೂ, ನೋವನ್ನು ಅನುಭವಿಸಿದವನೂ ಆಗಿದ್ದನು.
ನಾವು ನಮ್ಮ ಮುಖಗಳನ್ನು ಆತನಿಂದ ಮರೆಮಾಡಿಕೊಂಡೆವು.
ಆತನು ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಾವು ಆತನನ್ನು ಅತ್ಯಲ್ಪವಾಗಿ ಎಣಿಸಿದೆವು.
 
ನಿಶ್ಚಯವಾಗಿಯೂ ಆತನು ನಮ್ಮ ನೋವನ್ನು ತೆಗೆದುಕೊಂಡನು;
ಹೌದು, ನಮ್ಮ ದುಃಖಗಳನ್ನು ಸಹ ಹೊತ್ತುಕೊಂಡನು.
ಆದರೂ ನಾವು ಆತನನ್ನು ಪೆಟ್ಟು ತಿಂದವನು,
ದೇವರಿಂದ ಶಿಕ್ಷೆಹೊಂದಿದವನು, ಬಾಧೆಪಟ್ಟವನು ಎಂದು ಭಾವಿಸಿಕೊಂಡೆವು.
ನಮ್ಮ ಉಲ್ಲಂಘನೆಗಳಿಗಾಗಿ ಆತನು ತಿವಿತಕ್ಕೆ ಒಳಗಾದನು.
ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಿಹೋದನು.
ನಮಗೆ ಸಮಾಧಾನವನ್ನು ತಂದ ದಂಡನೆಯು ಆತನ ಮೇಲಿತ್ತು.
ಆತನ ಗಾಯಗಳಿಂದ ನಮಗೆ ಗುಣವಾಯಿತು.
ನಾವೆಲ್ಲರೂ ದಾರಿತಪ್ಪಿದ ಕುರಿಗಳಂತೆ ಇದ್ದೆವು.
ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು.
ಯೆಹೋವ ದೇವರು ನಮ್ಮ ಎಲ್ಲಾ ದುಷ್ಕೃತ್ಯಗಳನ್ನು
ಆತನ ಮೇಲೆ ಹಾಕಿದರು.
 
ಆತನು ದಬ್ಬಾಳಿಕೆಗೆ ಗುರಿಯಾಗಿ ಬಾಧೆಪಟ್ಟನು.
ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ.
ಬಲಿಗೆ ಎಳೆದುಕೊಂಡು ಹೋಗುವ ಕುರಿಯಂತೆಯೂ,
ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ
ಆತನು ಮೌನವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ.
ಆತನನ್ನು ದಬ್ಬಾಳಿಕೆಯಿಂದಲೂ, ನ್ಯಾಯತೀರ್ಪಿನಿಂದಲೂ ಎಳೆದುಕೊಂಡು ಹೋದರು.
ಆತನ ಕಾಲದವರಲ್ಲಿ ಯಾರು ಮರುಗಿದರು?
ಏಕೆಂದರೆ ಆತನನ್ನು ಜೀವಿತರ ಲೋಕದಿಂದ ತೆಗೆದುಹಾಕಿದರು.
ನನ್ನ ಪ್ರಜೆಯ ದ್ರೋಹಕ್ಕಾಗಿ ಆತನು ಶಿಕ್ಷೆಯನ್ನು ಹೊಂದಿದನು.
ಅವನು ಯಾವ ಅನ್ಯಾಯವನ್ನು ಮಾಡದಿದ್ದರೂ,
ಅವನ ಬಾಯಲ್ಲಿ ಯಾವ ವಂಚನೆಯು ಇಲ್ಲದಿದ್ದರೂ,
ಅವನು ಸತ್ತಾಗ ದುಷ್ಟರ ಮಧ್ಯೆ
ಪುಷ್ಟರ ನಡುವೆ ಅವನನ್ನು ಹೂಣಿಟ್ಟರು.
 
10 ಆದರೂ ಆತನನ್ನು ಜಜ್ಜುವುದು ಯೆಹೋವ ದೇವರ ಚಿತ್ತವಾಗಿತ್ತು.
ಯೆಹೋವ ದೇವರು ಆತನನ್ನು ಸಂಕಟಕ್ಕೆ ಒಳಪಡಿಸಿದನು.
ಯೆಹೋವ ದೇವರು ಆತನ ಪ್ರಾಣವನ್ನು ದೋಷಪರಿಹಾರದ ಬಲಿಯನ್ನಾಗಿ ಮಾಡುವಾಗ,
ಆತನು ತನ್ನ ಸಂತಾನವನ್ನು ಕಾಣುವನು.
ಆತನು ತನ್ನ ದಿವಸಗಳನ್ನು ಉದ್ದ ಮಾಡಿದ ಮೇಲೆ
ಮತ್ತು ಯೆಹೋವ ದೇವರ ಚಿತ್ತವು ಆತನ ಕೈಯಲ್ಲಿ ಸಫಲವಾಗುವುದು.
11 ಆತನು ತನ್ನ ಪ್ರಾಣದ ವೇದನೆಯನ್ನು ಸಹಿಸಿದ ತರುವಾಯ,
ಜೀವದ ಬೆಳಕನ್ನು ಕಂಡು ತೃಪ್ತನಾಗುವನು.
ತನ್ನ ತಿಳುವಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕರಿಗೆ ನೀತಿವಂತನಾಗಿ ನಿರ್ಣಯಿಸುವನು.
ಏಕೆಂದರೆ ಆತನೇ ಅವರ ಅಪರಾಧಗಳನ್ನು ಹೊತ್ತುಕೊಳ್ಳುವನು.
12 ಆದ್ದರಿಂದ ನಾನು ಆತನಿಗೋಸ್ಕರ ದೊಡ್ಡವರೊಂದಿಗೆ ಪಾಲನ್ನು ಕೊಡುವೆನು
ಮತ್ತು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲು ಹಂಚಿಕೊಳ್ಳುವನು.
ಏಕೆಂದರೆ ಆತನು ತನ್ನ ಪ್ರಾಣವನ್ನು ಮರಣದವರೆಗೂ ಹೊಯ್ದುಬಿಟ್ಟು,
ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡನು.
ಅನೇಕರ ಪಾಪವನ್ನು ಹೊತ್ತುಕೊಂಡು
ದ್ರೋಹಿಗಳಿಗೋಸ್ಕರ ವಿಜ್ಞಾಪನೆ ಮಾಡಿದನು.