26
ಯೋಬನ ಉತ್ತರ
ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು:
“ಶಕ್ತಿ ಇಲ್ಲದವನಿಗೆ ನೀನು ಹೇಗೆ ಸಹಾಯ ಮಾಡಿದೆ?
ತ್ರಾಣವಿಲ್ಲದ ಕೈಯನ್ನು ಹೇಗೆ ರಕ್ಷಿಸಿದೆ?
ಜ್ಞಾನವಿಲ್ಲದವನಿಗೆ ಏನು ಬುದ್ಧಿವಾದ ಹೇಳಿರುವೆ?
ನೀನು ಯಾವ ವಿವೇಕದ ಮಾತುಗಳನ್ನು ಬಹಳವಾಗಿ ಪ್ರದರ್ಶಿಸಿದೆ.
ಈ ಮಾತುಗಳನ್ನು ಹೇಳಲು ನಿನಗೆ ಯಾರು ಸಹಾಯ ಮಾಡಿದರು?
ಯಾರ ಆತ್ಮವು ನಿನ್ನ ಬಾಯಿಂದ ಮಾತಾಡಿದ್ದು?
 
“ಸಾಗರದ ಕೆಳಗಿನ ಲೋಕದಲ್ಲಿ ವಾಸಿಸುವ
ಸತ್ತವರ ಆತ್ಮಗಳು ಆಳವಾದ ಯಾತನೆಯಲ್ಲಿವೆ.
ಪಾತಾಳವು ದೇವರ ದೃಷ್ಟಿಗೆ ತೆರೆದಿದೆ;
ನಾಶಲೋಕವು ದೇವರಿಗೆ ಮರೆಯಾಗಿಲ್ಲ.
ದೇವರು ಉತ್ತರ ದಿಕ್ಕಿನ ಆಕಾಶವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾರೆ;
ದೇವರು ಭೂಮಿಯನ್ನು ಏನೂ ಇಲ್ಲದರ ಮೇಲೆ ತೂಗು ಹಾಕಿದ್ದಾರೆ.
ತಮ್ಮ ಮೇಘಗಳಲ್ಲಿ ನೀರನ್ನು ತುಂಬಿ ಕಟ್ಟುತ್ತಾರೆ;
ಆದರೂ ಮೋಡವು ಅದರ ಭಾರದಿಂದ ಒಡೆದುಹೋಗುವುದಿಲ್ಲ.
ದೇವರು ತಮ್ಮ ಪೂರ್ಣಚಂದ್ರ ಸಿಂಹಾಸನವನ್ನು ಮರೆಮಾಡುತ್ತಾರೆ.
ಅದರ ಮುಂದೆ ಮೋಡವನ್ನು ಕವಿಸುತ್ತಾರೆ.
10 ಬೆಳಕು ಮತ್ತು ಕತ್ತಲುಗಳ ಸಂಧಿಸುವ ಸ್ಥಾನದಲ್ಲಿ,
ಸಮುದ್ರದ ಮೇಲೆ ಸುತ್ತಲೂ ವೃತ್ತ ಮೇರೆಯನ್ನು ಹಾಕಿದ್ದಾರೆ.
11 ಆಕಾಶಮಂಡಲದ ಸ್ತಂಭಗಳು ಕಂಪಿಸುತ್ತವೆ;
ದೇವರ ಗದರಿಕೆಗೆ ಅವು ಬೆರಗಾಗಿ ಕದಲುತ್ತವೆ.
12 ದೇವರು ತಮ್ಮ ಶಕ್ತಿಯಿಂದ ಸಮುದ್ರವನ್ನು ಕಲಕಿದ್ದಾರೆ;
ದೇವರು ತಮ್ಮ ಜ್ಞಾನದಿಂದ ಘಟಸರ್ಪನಾದ ರಹಾಬನನ್ನು ಹೊಡೆದುಹಾಕುತ್ತಾರೆ.
13 ದೇವರ ಶ್ವಾಸದಿಂದ ಆಕಾಶಮಂಡಲವು ಶುಭ್ರವಾಗಿದೆ;
ದೇವರು ಹಸ್ತವು ಹರಿದೋಡುವ ಸರ್ಪವನ್ನು ಇರಿಯುತ್ತದೆ.
14 ಇಗೋ, ಇವು ದೇವರ ಕಾರ್ಯಗಳಲ್ಲಿ ಕೆಲವು ಮಾತ್ರ;
ದೇವರನ್ನು ಕುರಿತು ಪಿಸುಧ್ವನಿ ಮಾತ್ರ ಕೇಳಿದ್ದೇವೆ;
ಹಾಗಾದರೆ, ದೇವರ ಪರಾಕ್ರಮದ ಗುಡುಗನ್ನು ಯಾರು ಗ್ರಹಿಸಿಕೊಳ್ಳುವರು?”