8
ಬಿಲ್ದದನ ವಾದ
ಆಗ, ಶೂಹ್ಯನಾದ ಬಿಲ್ದದನು ಈ ಪ್ರಕಾರ ಉತ್ತರಕೊಟ್ಟನು:
“ನೀನು ಎಷ್ಟರವರೆಗೆ ಇವುಗಳನ್ನು ನುಡಿಯುತ್ತಿರುವೆ?
ನೀನು ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ.
ದೇವರು ತೀರ್ಪಿಗೆ ವಿರುದ್ಧವಾದದ್ದನ್ನು ಮಾಡುತ್ತಾರೋ?
ಸರ್ವಶಕ್ತರು ನೀತಿಗೆ ವಿರುದ್ಧವಾದದ್ದನ್ನು ಮಾಡುವರೋ?
ನಿನ್ನ ಮಕ್ಕಳು ದೇವರಿಗೆ ವಿರೋಧವಾಗಿ ಪಾಪಮಾಡಿದ್ದರೆ,
ದೇವರು ಅವರ ಪಾಪಕ್ಕಾಗಿ ಅವರನ್ನು ದಂಡಿಸುವರು.
ಆದರೆ ನೀನೇ ದೇವರನ್ನು ಜಾಗ್ರತೆಯಾಗಿ ಹುಡುಕಿ,
ಸರ್ವಶಕ್ತರಿಗೆ ಬಿನ್ನಹ ಮಾಡು.
ನೀನು ಶುದ್ಧನೂ, ಯಥಾರ್ಥನೂ ಆಗಿದ್ದರೆ,
ನಿಶ್ಚಯವಾಗಿ ಈಗಲೇ ದೇವರು ನಿನಗೋಸ್ಕರ ಎಚ್ಚೆತ್ತು,
ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವರು.
ನಿನ್ನ ಆರಂಭವು ಅಲ್ಪವಾಗಿದ್ದರೂ,
ನಿನ್ನ ಅಂತ್ಯವು ಬಹಳವಾಗಿ ವೃದ್ಧಿ ಹೊಂದುವುದು.
 
“ಪೂರ್ವಿಕರನ್ನು ವಿಚಾರಿಸು;
ಅವರ ಪಿತೃಗಳು ಕಲಿತಿದ್ದನ್ನು ಕಂಡುಕೊಳ್ಳುವುದಕ್ಕೆ ಸಿದ್ಧನಾಗು.
ನಾವು ನಿನ್ನೆ ಹುಟ್ಟಿದವರೂ ಏನೂ ಅರಿಯದವರೂ ಆಗಿದ್ದೇವೆ;
ಏಕೆಂದರೆ ನಮ್ಮ ದಿವಸಗಳು ಭೂಮಿಯ ಮೇಲೆ ನೆರಳಿನಂತಿವೆ.
10 ಪೂರ್ವಿಕರು ನಿನಗೆ ಬೋಧಿಸಿ ಬುದ್ಧಿ ಹೇಳಲಿಲ್ಲವೋ?
ಅವರು ತಮ್ಮ ತಿಳುವಳಿಕೆಯನ್ನು ಹೊರತರಲಿಲ್ಲವೋ?
11 ಕೆಸರಿಲ್ಲದೆ ಆಪು ಹುಲ್ಲು ಬೆಳೆಯುವುದೋ?
ನೀರಿಲ್ಲದೆ ಜಂಬು ಹುಲ್ಲು ಮೊಳೆಯುವುದೋ?
12 ಅದು ಹಸುರಾಗಿ ಇನ್ನೂ ಕೊಯ್ಯದೆ ಇದ್ದಾಗಲೂ,
ಎಲ್ಲಾ ಹುಲ್ಲಿಗಿಂತಲೂ ಅದು ಮೊದಲು ಒಣಗಿಹೋಗುವುದು.
13 ದೇವರನ್ನು ಮರೆಯುವವರೆಲ್ಲರ ದಾರಿ ಹಾಗೆಯೇ;
ಭಕ್ತಿಹೀನರ ನಿರೀಕ್ಷೆಯು ನಾಶವಾಗುವುದು.
14 ಅಂಥವರ ಭರವಸೆಯು ಭಂಗವಾಗುವುದು*;
ಅವರ ಆಶ್ರಯವು ಜೇಡರ ಹುಳದ ಮನೆಯಂತಿರುವುದು.
15 ಅಂಥಾ ಮನೆ ಮೇಲೆ ಒರಗಿಕೊಂಡರೆ, ಅದು ನಿಲ್ಲದು;
ಅದನ್ನು ಬಿಗಿಹಿಡಿದರೆ, ಅದು ತಡೆಯಲಾರದು.
16 ಸೂರ್ಯನ ಮುಂದೆ ಭಕ್ತಿಹೀನರು ಹಸುರು ಬಳ್ಳಿಯಂತೆ ಇದ್ದಾರೆ;
ಆ ಬಳ್ಳಿಯು ತೋಟದಲ್ಲೆಲ್ಲಾ ಹಬ್ಬುತ್ತಿದೆ.
17 ಅವರ ಬೇರುಗಳು ಬಂಡೆಗಳ ರಾಶಿಯ ಮೇಲೆ ಸುತ್ತಿ,
ಕಲ್ಲುಗಳ ನಡುವೆ ನುಗ್ಗುತ್ತವೆ.
18 ಭಕ್ತಿಹೀನನನ್ನು ಅವನ ಸ್ಥಳದಿಂದ ಕಿತ್ತುಹಾಕಿದರೆ,
‘ನಾನು ನಿನ್ನನ್ನು ಎಂದಿಗೂ ನೋಡಿಲ್ಲ,’ ಎಂದು ಆ ನೆಲವು ಅವನನ್ನು ಅಲ್ಲಗಳೆಯುವುದು.
19 ಹೀಗೆ ಭಕ್ತಿಹೀನನ ಜೀವವು ಒಣಗಿಹೋಗುವುದು;
ಆದರೆ ಆ ಮಣ್ಣಿನ ನೆಲದಿಂದ ಬೇರೆ ಸಸಿಗಳು ಮೊಳೆಯುವುದು.
 
20 “ದೇವರು ನಿರ್ದೋಷಿಯನ್ನು ತಿರಸ್ಕರಿಸುವುದಿಲ್ಲ;
ಕೆಡುಕರ ಕೈಗಳನ್ನು ದೇವರು ಬಲಪಡಿಸುವದಿಲ್ಲ.
21 ದೇವರು ನಿನ್ನ ಬಾಯನ್ನು ನಗೆಯಿಂದ ತುಂಬಿಸುವರು;
ನಿನ್ನ ತುಟಿಗಳನ್ನು ಜಯ ಧ್ವನಿಯಿಂದಲೂ ತುಂಬಿಸುವರು.
22 ನಿನ್ನ ಶತ್ರುಗಳಿಗೆ ನಾಚಿಕೆಯಾಗುವುದು;
ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವುದು.”
* 8:14 8:14 ಈ ಪದಕ್ಕೆ ಹೀಬ್ರೂ ಭಾಷೆಯಲ್ಲಿ ಅರ್ಥವು ಅನಿಶ್ಚಿತವಾಗಿದೆ