5
“ ‘ಯಾವನಾದರೂ ಆಣೆ ಇಡುವುದನ್ನು ಕೇಳಿ, ಸಾಕ್ಷಿಯಾಗಿದ್ದು, ಪಾಪಮಾಡಿದರೆ, ಅವನು ಅದನ್ನು ಕಂಡೂ ಇಲ್ಲವೆ ತಿಳಿದೂ ಅವನು ಅದನ್ನು ಹೇಳದಿದ್ದರೆ, ಅವನು ತನ್ನ ಅಪರಾಧವನ್ನು ಹೊತ್ತುಕೊಳ್ಳಬೇಕು.
“ ‘ಇಲ್ಲವೆ, ಯಾವನಿಗಾದರೂ ಅಶುದ್ಧವಾದ ಕಾಡುಮೃಗ, ಪಶು ಇವುಗಳ ಹೆಣವಾಗಲಿ, ಅಶುದ್ಧವಾದ ಹರಿದಾಡುವ ಕ್ರಿಮಿಗಳ ಹೆಣಗಳಾಗಲಿ ಅಥವಾ ಬೇರೆ ಯಾವ ಅಶುದ್ಧವಸ್ತುವಾಗಲಿ ತಗಲಿದರೆ ಅವನಿಗೆ ತಿಳಿಯದೆ ಇದ್ದರೂ ಅವನು ಅಶುದ್ಧವಾಗಿದ್ದು ಅಪರಾಧಿಯಾಗಿರುವನು. ಇಲ್ಲವೆ, ಅವನು ಮನುಷ್ಯನ ಅಶುದ್ಧತ್ವವನ್ನು ತಗಲಿದರೆ, ಮನುಷ್ಯನನ್ನು ಅಶುದ್ಧಪಡಿಸುವ ಯಾವುದೇ ಅಶುದ್ಧತ್ವವಾಗಿದ್ದರೂ ಅದು ಅವನಿಗೆ ತಿಳಿಯದೆ ಇದ್ದು, ತರುವಾಯ ಅದು ಅವನಿಗೆ ತಿಳಿದಾಗ, ಅವನು ಅಪರಾಧಿಯಾಗಿರುವನು. ಒಬ್ಬನು ಆಣೆಯಿಟ್ಟು ಕೆಟ್ಟದ್ದನ್ನಾಗಲಿ, ಒಳ್ಳೆಯದನ್ನಾಗಲಿ ಮಾಡುವುದನ್ನು ತನ್ನ ತುಟಿಗಳಿಂದ ಉಚ್ಛರಿಸಿದರೆ, ಒಬ್ಬ ಮನುಷ್ಯನು ಪ್ರಮಾಣದೊಡನೆ ಉಚ್ಚರಿಸಿದ್ದು ಯಾವುದೇ ಆಗಿರಲಿ, ಅದು ಅವನಿಗೆ ತಿಳಿಯದೆ ಇದ್ದು, ತರುವಾಯ ಅದು ಅವನಿಗೆ ತಿಳಿದಾಗ, ಇವುಗಳೊಂದರಲ್ಲಿ ಅವನು ಅಪರಾಧಿಯಾಗಿರುವನು. ಅವನು ಇವುಗಳೊಂದರಲ್ಲಿ ಅಪರಾಧಿಯಾಗಿದ್ದು, ತಾನು ಅದರಲ್ಲಿ ಪಾಪಮಾಡಿದ್ದೇನೆಂದು ಅರಿಕೆ ಮಾಡುವುದಾದರೆ, ಅವನು ತಾನು ಮಾಡಿದ ಪಾಪಕ್ಕಾಗಿ ಯೆಹೋವ ದೇವರಿಗೆ ಅಪರಾಧ ಬಲಿಯನ್ನು ಪಾಪ ಪರಿಹಾರದ ಬಲಿಗಾಗಿ ಮಂದೆಯಿಂದ ಒಂದು ಹೆಣ್ಣು ಕುರಿಯನ್ನಾಗಲಿ, ಒಂದು ಮೇಕೆಯನ್ನಾಗಲಿ ತರಬೇಕು. ಯಾಜಕನು ಅವನ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು.
“ ‘ಯಾರಾದರೂ ಒಂದು ಕುರಿಮರಿಯನ್ನು ತರುವುದಕ್ಕೆ ಅಶಕ್ತರಾಗಿದ್ದರೆ, ತಾವು ಮಾಡಿದ ಅಪರಾಧಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ, ಇಲ್ಲವೆ ಎರಡು ಪಾರಿವಾಳದ ಮರಿಗಳನ್ನಾಗಲಿ ಯೆಹೋವ ದೇವರಿಗೆ ತರಬೇಕು. ಒಂದನ್ನು ಪಾಪ ಪರಿಹಾರದ ಬಲಿಗಾಗಿ, ಮತ್ತೊಂದನ್ನು ದಹನಬಲಿಗಾಗಿ ತರಬೇಕು. ಅವನು ಅವುಗಳನ್ನು ಯಾಜಕರ ಬಳಿಗೆ ತಂದಾಗ ಅವನು ಪಾಪ ಪರಿಹಾರದ ಬಲಿಗೆ ತಂದಿರುವುದನ್ನು ಮೊದಲು ಸಮರ್ಪಿಸಿ, ಅದರ ತಲೆಯನ್ನು ಕುತ್ತಿಗೆಯಿಂದ ಮುರಿಯಬೇಕು. ಆದರೆ ಅದನ್ನು ವಿಭಾಗಿಸಬಾರದು. ಇದಲ್ಲದೆ, ಅವನು ಪಾಪ ಪರಿಹಾರದ ಬಲಿಯ ರಕ್ತವನ್ನು ಬಲಿಪೀಠದ ಬದಿಯಲ್ಲಿ ಚಿಮುಕಿಸಬೇಕು. ಉಳಿದ ರಕ್ತವನ್ನು ಬಲಿಪೀಠದ ಬದಿಯಲ್ಲಿ ಹಿಂಡಬೇಕು. ಅದು ದೋಷಪರಿಹಾರ ಬಲಿಯಾಗಿರುವುದು. 10 ಅವನು ಕ್ರಮದ ಪ್ರಕಾರ, ಎರಡನೆಯದನ್ನು ದಹನಬಲಿಯಾಗಿ ಸಮರ್ಪಿಸಬೇಕು. ಯಾಜಕನು ಅವನು ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನಿಗೆ ಕ್ಷಮೆ ದೊರಕುವುದು.
11 “ ‘ಆದರೆ ಅವರು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ತರುವುದಕ್ಕೆ ಅಶಕ್ತರಾಗಿದ್ದರೆ, ಪಾಪಮಾಡಿದವರು ತಮ್ಮ ಬಲಿಗಾಗಿ, ಮೂರು ಸೇರು ಗೋಧಿ ಹಿಟ್ಟನ್ನು ಪಾಪ ಪರಿಹಾರದ ಬಲಿಯಾಗಿ ತರಬೇಕು. ಅವರು ಅದರ ಮೇಲೆ ಎಣ್ಣೆಯನ್ನು ಇಲ್ಲವೆ ಸಾಂಬ್ರಾಣಿಯನ್ನು ಹಾಕಬಾರದು. ಏಕೆಂದರೆ ಅದು ದೋಷಪರಿಹಾರ ಬಲಿಯಾಗಿದೆ. 12 ತರುವಾಯ ಅವರು ಅದನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಜ್ಞಾಪಕಾರ್ಥವಾಗಿ ಅದರಿಂದ ತನ್ನ ಹಿಡಿಯಷ್ಟು ತೆಗೆದುಕೊಂಡು, ಬಲಿಪೀಠದ ಮೇಲೆ ಬೆಂಕಿಯ ಅರ್ಪಣೆಗಳಿಗನುಸಾರವಾಗಿ ಯೆಹೋವ ದೇವರಿಗಾಗಿ ಸುಡಬೇಕು. ಅದು ಪಾಪ ಪರಿಹಾರದ ಬಲಿಯಾಗಿರುವುದು. 13 ಇವುಗಳಲ್ಲಿ ಒಂದನ್ನು ಪಾಪದ ವಿಷಯವಾಗಿ ಯಾಜಕನು ಅವನಿಗೋಸ್ಕರ ಪ್ರಾಯಶ್ಚಿತ್ತ ಮಾಡಬೇಕು. ಆಗ ಅದು ಅವನಿಗೆ ಕ್ಷಮಿಸಲಾಗುವುದು. ಉಳಿದದ್ದು ಯಾಜಕನಿಗಾಗಿ ಧಾನ್ಯ ಸಮರ್ಪಣೆಯಾಗಿರುವುದು.’ ”
ಪ್ರಾಯಶ್ಚಿತ್ತ ಬಲಿ
14 ಯೆಹೋವ ದೇವರು ಮೋಶೆಗೆ, 15 “ಯಾರಾದರೂ ಅತಿಕ್ರಮಿಸಿದ್ದರೆ ಮತ್ತು ಯೆಹೋವ ದೇವರ ಪರಿಶುದ್ಧ ಸಂಗತಿಗಳನ್ನು ಅರಿಯದೆ ಪಾಪಮಾಡಿದ್ದರೆ, ಅವರು ತಮ್ಮ ಅತಿಕ್ರಮಕ್ಕಾಗಿ ತಮ್ಮ ಹಿಂಡುಗಳಿಂದ ಕಳಂಕರಹಿತವಾದ ಟಗರನ್ನು ಸಮರ್ಪಿಸಬೇಕು. ಪವಿತ್ರ ಸ್ಥಳಕ್ಕೆ ನೇಮಕವಾದ ಎರಡು ಬೆಳ್ಳಿನಾಣ್ಯ ಅಥವಾ ಹೆಚ್ಚು ಬೆಲೆಬಾಳುವ ಟಗರನ್ನು ಹಿಂಡಿನಿಂದ ತಂದು ಪ್ರಾಯಶ್ಚಿತ್ತ ಬಲಿಗಾಗಿ ಯೆಹೋವ ದೇವರಿಗೆ ಅರ್ಪಿಸಬೇಕು. 16 ಪರಿಶುದ್ಧವಾದದ್ದಲ್ಲದೆ, ತಾನು ಅನ್ಯಾಯವಾಗಿ ಇಟ್ಟುಕೊಂಡಿರುವ ದೇವರ ವಸ್ತುಗಳನ್ನು ಅದಕ್ಕೆ ಐದನೆಯ ಪಾಲನ್ನು ಕೂಡಿಸಿ, ಅದನ್ನು ಯಾಜಕನಿಗೆ ಕೊಡಬೇಕು. ಅವನು ಪ್ರಾಯಶ್ಚಿತ್ತಕ್ಕಾಗಿ ತಂದ ಟಗರಿನಿಂದ ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವದು,” ಎಂದನು.
17 “ಯಾರಾದರೂ ಯೆಹೋವ ದೇವರು ನಿಷೇಧಿಸಿದ ಆಜ್ಞೆಗಳಲ್ಲಿ ಯಾವುದನ್ನಾದರೂ ಮಾಡಿ, ಪಾಪಮಾಡಿದರೆ, ಅದು ಅವರಿಗೆ ತಿಳಿಯದಿದ್ದರೂ ಅವರು ಅಪರಾಧಿಯಾಗಿರುವರು ಮತ್ತು ಅವರು ತಮ್ಮ ಅಪರಾಧವನ್ನು ಹೊತ್ತುಕೊಳ್ಳುವರು. 18 ಅಲ್ಲದೆ ಅವನು ಹಿಂಡಿನೊಳಗಿಂದ ಕಳಂಕರಹಿತವಾದ ಒಂದು ಟಗರನ್ನು ನಿನ್ನ ಅಂದಾಜಿಗನುಸಾರ ಪ್ರಾಯಶ್ಚಿತ್ತ ಬಲಿಗಾಗಿ, ಯಾಜಕನ ಬಳಿಗೆ ತರಬೇಕು. ಯಾಜಕನು, ಅಜ್ಞಾನದಿಂದ ಅವನು ಉದ್ದೇಶವಿಲ್ಲದೆ ಮಾಡಿದ ತಪ್ಪಿಗಾಗಿ, ಪ್ರಾಯಶ್ಚಿತ್ತವನ್ನು ಮಾಡಬೇಕು. ಅವನಿಗೆ ಕ್ಷಮೆ ದೊರಕುವುದು. 19 ಅವನು ನಿಶ್ಚಯವಾಗಿ ಯೆಹೋವ ದೇವರ ವಿರುದ್ಧವಾಗಿ ಅಪರಾಧ ಮಾಡಿದ್ದಾನೆ, ಅದಕ್ಕಾಗಿ ಇದು ಪ್ರಾಯಶ್ಚಿತ್ತ ಬಲಿಯಾಗಿದೆ,” ಎಂದರು.