6
ಯೆಹೋವ ದೇವರು ಮೋಶೆಯೊಡನೆ ಮಾತನಾಡಿ, “ಯಾರಾದರೂ ಪಾಪಮಾಡಿದರೆ ಮತ್ತು ನೆರೆಯವರಿಗೆ ಮೋಸ ಮಾಡುವ ಮೂಲಕ ಯೆಹೋವ ದೇವರಿಗೆ ವಿಶ್ವಾಸದ್ರೋಹಿ ಆಗಿದ್ದರೆ ಅಥವಾ ಅವರ ಆರೈಕೆಯಲ್ಲಿ ಏನಾದರೂ ಉಳಿಸಿಕೊಂಡಿದ್ದರೆ ಅಥವಾ ಯಾವುದನ್ನಾದರೂ ಕದ್ದುಕೊಂಡಿದ್ದರೆ ಅಥವಾ ಅವರು ತಮ್ಮ ನೆರೆಹೊರೆಯವರಿಗೆ ಮೋಸ ಮಾಡಿದ್ದರೆ, ಇಲ್ಲವೆ ಕಳೆದುಹೋಗಿದ ವಸ್ತು ಸಿಕ್ಕಿ, ಅದರ ವಿಷಯದಲ್ಲಿ ಸುಳ್ಳಾಡಿದ್ದರೆ ಮತ್ತು ಸುಳ್ಳಾಗಿ ಪ್ರಮಾಣ ಮಾಡಿದ್ದರೆ, ಇವೆಲ್ಲವುಗಳಲ್ಲಿ ಯಾವುದನ್ನಾದರೂ ಒಬ್ಬನು ಮಾಡಿದ್ದರೆ, ಅವನು ಪಾಪಮಾಡುವವನಾಗಿದ್ದಾನೆ. ಅವನು ಪಾಪಮಾಡಿ, ಅಪರಾಧಿಯಾಗಿರುವುದರಿಂದ ಬಲಾತ್ಕಾರವಾಗಿ ಪಡೆದುಕೊಂಡದ್ದನ್ನೂ ಇಲ್ಲವೆ ಅವನು ಮೋಸದಿಂದ ಪಡೆದ ವಸ್ತುವನ್ನೂ ಇಲ್ಲವೆ ಅವನ ವಶಕ್ಕೆ ಸಿಕ್ಕಿದ ವಸ್ತುವನ್ನೂ ಹಿಂದಕ್ಕೆ ತಂದುಕೊಡಬೇಕು. ಅಥವಾ ಅವನು ಸುಳ್ಳಾಗಿ ಪ್ರಮಾಣಮಾಡಿ, ಪಡೆದವುಗಳೆಲ್ಲವುಗಳನ್ನೂ ಕೂಡಿಸಿ, ಹಿಂದಕ್ಕೆ ಕೊಡಬೇಕು. ಪ್ರಾಯಶ್ಚಿತ್ತದ ಬಲಿ ಅರ್ಪಿಸುವ ದಿನದಲ್ಲಿ, ಅದರ ಯಜಮಾನನು ಯಾವನಾಗಿರುವನೋ, ಅವನಿಗೆ ಕೊಡಬೇಕು. ಅವನು ತನ್ನ ಪ್ರಾಯಶ್ಚಿತ್ತಕ್ಕಾಗಿ ಕಳಂಕರಹಿತವಾದ ಒಂದು ಟಗರನ್ನು ಹಿಂಡಿನಿಂದ ತಂದು ಅದನ್ನು ಯೆಹೋವ ದೇವರಿಗೆಂದು ಯಾಜಕನ ಬಳಿಗೆ ತರಬೇಕು. ಯಾಜಕನು ಅವನಿಗಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಬೇಕು. ಅತಿಕ್ರಮದಲ್ಲಿ ಅವನು ಏನನ್ನಾದರೂ ಮಾಡಿದ್ದರೆ, ಆ ವಿಷಯದಲ್ಲಿ ಅವನಿಗೆ ಕ್ಷಮಾಪಣೆಯಾಗುವುದು,” ಎಂದರು.
ದಹನಬಲಿ
ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ, “ಆರೋನನಿಗೂ ಅವನ ಪುತ್ರರಿಗೂ ಆಜ್ಞಾಪಿಸಿ ಹೀಗೆ ಹೇಳು, ‘ಇದು ದಹನಬಲಿಯ ನಿಯಮವಾಗಿದೆ. ದಹನಬಲಿ ಇಡೀ ರಾತ್ರಿ, ಅಂದರೆ ಬೆಳಗಿನವರೆಗೆ ಬಲಿಪೀಠದ ಅಗ್ನಿಕುಂಡದ ಮೇಲೆ ಇರಬೇಕು. ಬಲಿಪೀಠದ ಬೆಂಕಿಯು ಅದರೊಳಗೆ ಸುಡುತ್ತಾ ಇರುವುದು. 10 ಯಾಜಕನು ತನ್ನ ನಾರುಮಡಿಯ ಉಡುಪನ್ನೂ ತನ್ನ ಶರೀರದ ಮೇಲೆ ನಾರುಮಡಿಯ ಒಳಉಡುಪುಗಳನ್ನೂ ಧರಿಸಿಕೊಂಡು, ಬಲಿಪೀಠದ ಮೇಲೆ ದಹನಬಲಿಯೊಂದಿಗೆ ಸುಟ್ಟ ಬೂದಿಯನ್ನು ತೆಗೆದುಕೊಂಡು, ಅದನ್ನು ಬಲಿಪೀಠದ ಬಳಿಯಲ್ಲಿ ಹಾಕಬೇಕು. 11 ಆಮೇಲೆ ಅವನು ತನ್ನ ಉಡುಪುಗಳನ್ನು ತೆಗೆದುಹಾಕಿ, ಬೇರೆ ಉಡುಪುಗಳನ್ನು ಧರಿಸಿಕೊಂಡು, ಆ ಬೂದಿಯನ್ನು ಪಾಳೆಯದ ಆಚೆಗೆ ಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. 12 ಬಲಿಪೀಠದ ಮೇಲೆ ಬೆಂಕಿಯು ಅದರೊಳಗೆ ಸುಡುತ್ತಲೇ ಇರಬೇಕು. ಅದು ಆರಿಹೋಗಿರಬಾರದು. ಪ್ರತಿ ಮುಂಜಾನೆ ಯಾಜಕನು ಅದರ ಮೇಲೆ ಕಟ್ಟಿಗೆಯನ್ನು ಹಾಕಬೇಕು. ದಹನಬಲಿಯನ್ನು ಅದರ ಮೇಲೆ ಕ್ರಮವಾಗಿ ಇಡಬೇಕು. ಇದಲ್ಲದೆ ಅವನು ಅದರ ಮೇಲೆ ಸಮಾಧಾನ ಬಲಿ ಅರ್ಪಣೆಗಳ ಕೊಬ್ಬನ್ನು ಸುಡಬೇಕು. 13 ಬಲಿಪೀಠದ ಮೇಲೆ ಬೆಂಕಿಯು ಯಾವಾಗಲೂ ಉರಿಯುತ್ತಿರಬೇಕು, ಅದು ಎಂದಿಗೂ ಆರಬಾರದು.
ಧಾನ್ಯ ಸಮರ್ಪಣೆ
14 “ ‘ಧಾನ್ಯ ಸಮರ್ಪಣೆಯ ನಿಯಮವು ಇದೇ. ಆರೋನನ ಪುತ್ರರು ಬಲಿಪೀಠದ ಮುಂದೆ ಯೆಹೋವ ದೇವರ ಸನ್ನಿಧಿಯಲ್ಲಿ ಅದನ್ನು ಸಮರ್ಪಿಸಬೇಕು. 15 ಯಾಜಕನು ಧಾನ್ಯ ಸಮರ್ಪಣೆಯ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ, ಧಾನ್ಯ ಸಮರ್ಪಣೆಯ ಮೇಲಿರುವ ಅದರ ಎಣ್ಣೆಯನ್ನೂ, ಅದರ ಎಲ್ಲಾ ಸಾಂಬ್ರಾಣಿಯನ್ನೂ ತೆಗೆದುಕೊಂಡು ಜ್ಞಾಪಕಾರ್ಥವಾಗಿ ಯೆಹೋವ ದೇವರಿಗೆ ಬಲಿಪೀಠದ ಮೇಲೆ ಸುವಾಸನೆಗಾಗಿ ಅದನ್ನು ಸುಡಬೇಕು. 16 ಅದರಲ್ಲಿ ಉಳಿದದ್ದನ್ನು ಆರೋನನೂ, ಅವನ ಪುತ್ರರೂ ತಿನ್ನಬೇಕು. ಅದನ್ನು ಪರಿಶುದ್ಧ ಸ್ಥಳದಲ್ಲಿ ಹುಳಿಯಿಲ್ಲದ ರೊಟ್ಟಿಯೊಂದಿಗೆ ತಿನ್ನಬೇಕು. ಅದನ್ನು ಅವರು ದೇವದರ್ಶನದ ಗುಡಾರದ ಅಂಗಳದಲ್ಲಿ ತಿನ್ನಬೇಕು. 17 ಅದನ್ನು ಹುಳಿಯೊಂದಿಗೆ ಬೇಯಿಸಬಾರದು. ಅವರು ನನಗೆ ಬೆಂಕಿಯಿಂದ ಮಾಡಿದ ನನ್ನ ಸಮರ್ಪಣೆಗಳಲ್ಲಿ ಅವರ ಪಾಲನ್ನು ಅವರಿಗೆ ನಾನು ಕೊಟ್ಟಿದ್ದೇನೆ. ಅದು ದೋಷಪರಿಹಾರದ ಬಲಿಯ ಹಾಗೆಯೂ ಮಹಾಪರಿಶುದ್ಧವಾದದ್ದು. 18 ಆರೋನನ ಮಕ್ಕಳಲ್ಲಿ ಎಲ್ಲಾ ಗಂಡುಮಕ್ಕಳೂ ಅದನ್ನು ತಿನ್ನಬಹುದು. ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳ ವಿಷಯದಲ್ಲಿ ನಿಮ್ಮ ಸಂತತಿಗಳಿಗೆ ಇದು ಒಂದು ಶಾಶ್ವತ ಕಟ್ಟಳೆಯಾಗಿರುವುದು. ಅವುಗಳನ್ನು ಮುಟ್ಟುವ ಪ್ರತಿಯೊಬ್ಬನೂ ಪರಿಶುದ್ಧನಾಗಿರಬೇಕು,’ ” ಎಂದರು.
19 ಯೆಹೋವ ದೇವರು ಮೋಶೆಯೊಡನೆ ಮಾತನಾಡಿ, 20 “ಆರೋನನೂ, ಅವನ ಪುತ್ರರೂ ಅಭಿಷಿಕ್ತರಾದ ದಿನದಲ್ಲಿ, ಅವರು ಯೆಹೋವ ದೇವರಿಗೆ ಸಮರ್ಪಿಸಬೇಕಾದ ಬಲಿಯು ಇದೇ. ಮೂರು ಸೇರು ಗೋಧಿ ಹಿಟ್ಟಿನಲ್ಲಿ ನಿರಂತರವಾಗಿರುವ ಧಾನ್ಯ ಸಮರ್ಪಣೆಗಾಗಿ ಮುಂಜಾನೆ ಅದರಲ್ಲಿ ಅರ್ಧಭಾಗವನ್ನು ಮತ್ತು ರಾತ್ರಿ ಅದರಲ್ಲಿ ಅರ್ಧಭಾಗವನ್ನು ಸಮರ್ಪಿಸಬೇಕು. 21 ಅದನ್ನು ಒಂದು ಬೋಗುಣಿಯಲ್ಲಿ ಎಣ್ಣೆಯೊಂದಿಗೆ ಮಾಡಬೇಕು. ಅದನ್ನು ತರುವಾಗ ಅದು ಎಣ್ಣೆಯಿಂದ ನೆನೆದೇ ಇರಬೇಕು. ಬೇಯಿಸಿದ ಧಾನ್ಯ ಸಮರ್ಪಣೆಯ ತುಂಡುಗಳನ್ನು ನೀನು ಯೆಹೋವ ದೇವರಿಗೆ ಸುವಾಸನೆಯಾಗಿ ಸಮರ್ಪಿಸಬೇಕು. 22 ಅವನ ಪುತ್ರರಲ್ಲಿ ಅವನಿಗೆ ಬದಲಾಗಿ ಅಭಿಷಿಕ್ತನಾದ ಯಾಜಕನು ಅದನ್ನು ಸಮರ್ಪಿಸಬೇಕು. ಇದು ಯೆಹೋವ ದೇವರಿಗಾಗಿ ನಿರಂತರವಾದ ಒಂದು ಕಟ್ಟಳೆಯಾಗಿದೆ. ಅದು ಸಂಪೂರ್ಣವಾಗಿ ಸುಟ್ಟಿರಬೇಕು. 23 ಏಕೆಂದರೆ ಯಾಜಕನಿಗಾಗಿರುವ ಪ್ರತಿಯೊಂದು ಧಾನ್ಯ ಸಮರ್ಪಣೆಯೂ ಸಂಪೂರ್ಣವಾಗಿ ಸುಟ್ಟಿರಬೇಕು. ಅದನ್ನು ತಿನ್ನಬಾರದು,” ಎಂದರು.
ಪಾಪಪರಿಹಾರ ಬಲಿ
24 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ, 25 “ಆರೋನನಿಗೂ, ಅವನ ಪುತ್ರರಿಗೂ ಹೇಳು: ‘ಪಾಪ ಪರಿಹಾರದ ಬಲಿಯ ನಿಯಮವು ಇದೇ. ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ಪಾಪ ಪರಿಹಾರದ ಬಲಿಯೂ ಯೆಹೋವ ದೇವರ ಸನ್ನಿಧಿಯಲ್ಲಿ ವಧಿಸಬೇಕು. ಅದು ಮಹಾಪರಿಶುದ್ಧವಾದದ್ದು. 26 ಪಾಪ ಪರಿಹಾರದ ಬಲಿಯನ್ನು ಮಾಡುವ ಯಾಜಕನು ಅದನ್ನು ತಿನ್ನಬೇಕು. ಅದನ್ನು ಸಭೆಯ ದೇವದರ್ಶನದ ಗುಡಾರದ ಅಂಗಳದ ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕು. 27 ಅದರ ಮಾಂಸವನ್ನು ಮುಟ್ಟಿದ್ದೆಲ್ಲವೂ ಪರಿಶುದ್ಧವಾಗಿರುವುದು. ಅದರ ರಕ್ತದಲ್ಲಿ ಸ್ವಲ್ಪವಾದರೂ ಉಡುಪಿನ ಮೇಲೆ ಬಿದ್ದರೆ, ಅದನ್ನು ಚಿಮುಕಿಸಿದ ಪರಿಶುದ್ಧ ಸ್ಥಳದಲ್ಲಿಯೇ ತೊಳೆಯಬೇಕು. 28 ಆದರೆ ಅದನ್ನು ಬೇಯಿಸಿದ ಮಣ್ಣಿನ ಪಾತ್ರೆಯನ್ನು ಒಡೆಯಬೇಕು. ಅದನ್ನು ಒಂದು ಕಂಚಿನ ಪಾತ್ರೆಯಲ್ಲಿ ಬೇಯಿಸಿದ್ದಾದರೆ, ಅದನ್ನು ಬೆಳಗಿ, ನೀರಿನಿಂದ ತೊಳೆಯಬೇಕು. 29 ಯಾಜಕರ ಕುಟುಂಬದಲ್ಲಿ ಇರುವ ಗಂಡಸರೆಲ್ಲಾ ಅದನ್ನು ತಿನ್ನಬೇಕು. ಅದು ಮಹಾಪರಿಶುದ್ಧವಾದದ್ದು. 30 ಯಾವ ಪಾಪ ಪರಿಹಾರದ ಬಲಿಯ ರಕ್ತವನ್ನು ದೇವದರ್ಶನದ ಗುಡಾರದೊಳಗೆ ಸಮಾಧಾನಕ್ಕಾಗಿ ತರಲಾಗಿದೆಯೋ, ಆ ಬಲಿಯನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬಾರದು, ಅದನ್ನು ಬೆಂಕಿಯಿಂದ ಸುಡಬೇಕು.