23
ಬಿಳಾಮನ ಮೊದಲನೆಯ ದರ್ಶನ
ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿ ನನಗೆ ಏಳು ಬಲಿಪೀಠಗಳನ್ನು ಕಟ್ಟಿ, ನನಗೆ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಸಿದ್ಧಮಾಡು,” ಎಂದನು. ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿದನು. ಬಾಲಾಕನು ಮತ್ತು ಬಿಳಾಮನು ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಬಲಿಪೀಠದ ಮೇಲೆ ಅರ್ಪಿಸಿದರು.
ಆಗ ಬಿಳಾಮನು ಬಾಲಾಕನಿಗೆ, “ನೀನು ನಿನ್ನ ದಹನಬಲಿಯ ಹತ್ತಿರ ನಿಂತುಕೋ, ನಾನು ಸ್ವಲ್ಪ ದೂರಹೋಗಿ ಬರುತ್ತೇನೆ. ಯೆಹೋವ ದೇವರು ನನಗೆ ದರ್ಶನ ಕೊಡಬಹುದು, ಅವರು ನನಗೆ ಸೂಚಿಸುವ ಸಂಗತಿಗಳನ್ನು ನಿನಗೆ ತಿಳಿಸುವೆನು,” ಎಂದು ಹೇಳಿ, ಒಂದು ಎತ್ತರವಾದ ಸ್ಥಳಕ್ಕೆ ಹೋದನು.
ಆಗ ದೇವರು ಬಿಳಾಮನನ್ನು ಸಂಧಿಸಿದರು. ಬಿಳಾಮನು ಅವರಿಗೆ, “ನಾನು ಏಳು ಬಲಿಪೀಠಗಳನ್ನು ಸಿದ್ಧಮಾಡಿ, ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ, ಒಂದೊಂದು ಟಗರನ್ನೂ ಅರ್ಪಿಸಿದ್ದೇನೆ,” ಎಂದನು.
ಯೆಹೋವ ದೇವರು ಬಿಳಾಮನ ಬಾಯಲ್ಲಿ ತನ್ನ ಮಾತನ್ನು ಇಟ್ಟು ಅವನಿಗೆ, “ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ, ನಾನು ಹೇಳಿದ್ದನ್ನು ತಿಳಿಸು,” ಎಂದರು.
ಆಗ ಅವನು ಬಾಲಾಕನ ಬಳಿಗೆ ತಿರುಗಿಬಂದನು. ಬಾಲಾಕನೂ ಮೋವಾಬಿನ ಸಕಲ ಪ್ರಭುಗಳೂ ಅವನು ಮಾಡಿದ ದಹನಬಲಿಯ ಹತ್ತಿರ ನಿಂತಿದ್ದರು. ಆಗ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ:
“ಬಾಲಾಕನು ನನ್ನನ್ನು ಅರಾಮಿನಿಂದಲೂ,
ಮೋವಾಬಿನ ಅರಸನು ಪೂರ್ವ ಪರ್ವತಗಳಿಂದಲೂ ಕರೆಯಿಸಿ,
‘ನನಗೋಸ್ಕರ ಯಾಕೋಬನನ್ನು ಶಪಿಸಿ ಬಾ,
ಇಸ್ರಾಯೇಲನ್ನು ಎದುರಿಸುವುದಕ್ಕೆ ಬಾ,’ ಎಂದು ನನಗೆ ಹೇಳಿದ್ದಾನೆ.
ದೇವರು ಶಪಿಸದವನನ್ನು
ನಾನು ಹೇಗೆ ಶಪಿಸಲಿ?
ಯೆಹೋವ ದೇವರು ಎದುರಿಸದವನನ್ನು
ನಾನು ಹೇಗೆ ಎದುರಿಸಲಿ?
ಬೆಟ್ಟಗಳ ತುದಿಯಿಂದ ಅವರನ್ನು ನೋಡುತ್ತೇನೆ.
ಎತ್ತರದ ಗುಡ್ಡಗಳಿಂದ ಅವರನ್ನು ದೃಷ್ಟಿಸಿದ್ದೇನೆ.
ನಾನು ಆ ಪ್ರತ್ಯೇಕವಾಗಿ ವಾಸಿಸುವ ಜನರನ್ನು ನೋಡುತ್ತೇನೆ.
ಆ ಜನಾಂಗವು ತಾನು ಇತರ ಜನಾಂಗಗಳಂತೆ ಸಾಧಾರಣವೆಂದು ಎಣಿಸುವುದಿಲ್ಲ.
10 ಧೂಳಿನಷ್ಟು ಅಸಂಖ್ಯವಾದ ಯಾಕೋಬರನ್ನು ಎಣಿಸುವುದಕ್ಕೂ,
ಇಸ್ರಾಯೇಲಿನ ನಾಲ್ಕನೆಯ ಒಂದು ಪಾಲನ್ನು ಲೆಕ್ಕ ಮಾಡುವುದಕ್ಕೂ ಯಾರಿಂದಾದೀತು?
ನೀತಿವಂತನು ಸಾಯುವಂತೆ ನಾನೂ ಸಾಯಬೇಕು.
ನನ್ನ ಅಂತ್ಯವು ಅವರಂತೆಯೇ ಆಗಲಿ.”
11 ಆಗ ಬಾಲಾಕನು ಬಿಳಾಮನಿಗೆ, “ಇದೇನು ನೀನು ನನಗೆ ಮಾಡಿದ್ದು? ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಯಿಸಿದೆನು, ನೀನು ಅವರನ್ನು ಶಪಿಸದೆ ಸಂಪೂರ್ಣವಾಗಿ ಆಶೀರ್ವದಿಸಿದೆ,” ಎಂದನು.
12 ಅದಕ್ಕೆ ಅವನು ಉತ್ತರವಾಗಿ, “ಯೆಹೋವ ದೇವರು ನನ್ನ ಬಾಯಿಯೊಳಗೆ ಇಡುವ ಮಾತನ್ನೇ ನಾನು ನುಡಿಯಬೇಕಲ್ಲವೇ?” ಎಂದನು.
ಬಿಳಾಮನ ಎರಡನೆಯ ದರ್ಶನ
13 ಬಾಲಾಕನು ಅವನಿಗೆ, “ನೀನು ಅವರನ್ನು ನೋಡತಕ್ಕ ಮತ್ತೊಂದು ಸ್ಥಳಕ್ಕೆ ನನ್ನೊಂದಿಗೆ ಬಾ, ಅವರನ್ನೆಲ್ಲಾ ನೋಡದೆ ಸಮೀಪದಲ್ಲಿ ಇರುವವರನ್ನು ಮಾತ್ರ ನೋಡುವೆ. ಅಲ್ಲಿಂದ ಅವರನ್ನು ನನಗೋಸ್ಕರ ಶಪಿಸು,” ಎಂದನು. 14 ಹೀಗೆ ಬಾಲಾಕನು ಬಿಳಾಮನನ್ನು ಪಿಸ್ಗಾದ ತುದಿಗೆ ಚೋಫೀಮ್ ಬಯಲಿಗೆ ಕರೆದುಕೊಂಡು ಹೋಗಿ ಏಳು ಬಲಿಪೀಠಗಳನ್ನು ಕಟ್ಟಿ ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ, ಒಂದೊಂದು ಟಗರನ್ನೂ ಅರ್ಪಿಸಿದನು.
15 ಆಗ ಅವನು ಬಾಲಾಕನಿಗೆ, “ಇಲ್ಲಿ ನಿನ್ನ ದಹನಬಲಿಯ ಹತ್ತಿರ ನಿಂತುಕೋ. ನಾನು ಅಲ್ಲಿ ಯೆಹೋವ ದೇವರನ್ನು ಎದುರುಗೊಳ್ಳುವೆನು,” ಎಂದನು.
16 ಆಗ ಯೆಹೋವ ದೇವರು ಬಿಳಾಮನ ಎದುರಿಗೆ ಬಂದು ಅವನ ಬಾಯಿಯೊಳಗೆ ವಾಕ್ಯವನ್ನಿಟ್ಟು, “ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ನಾನು ಹೇಳಿದಂತೆಯೇ ತಿಳಿಸು,” ಎಂದರು.
17 ಅವನ ಸಂಗಡ ಮೋವಾಬಿನ ಪ್ರಧಾನರೂ ಅವನ ದಹನಬಲಿಯ ಹತ್ತಿರ ನಿಂತುಕೊಂಡಿದ್ದರು. ಬಾಲಾಕನು ಅವನಿಗೆ, “ಯೆಹೋವ ದೇವರು ಏನು ಹೇಳಿದ್ದಾರೆ,” ಎಂದನು.
18 ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ:
“ಬಾಲಾಕನೇ, ಎದ್ದು ಕೇಳು;
ಚಿಪ್ಪೋರನ ಮಗನೇ, ನನಗೆ ಕಿವಿಗೊಡು.
19 ದೇವರು ಮನುಷ್ಯನಂತೆ ಸುಳ್ಳಾಡುವವರಲ್ಲ.
ನರಪುತ್ರರಂತೆ ಮನಸ್ಸನ್ನು ಬದಲಾಯಿಸಿಕೊಳ್ಳುವವರಲ್ಲ.
ಅವರು ನುಡಿದದ್ದನ್ನು ಮಾಡದಿರುವರೇ?
ವಾಗ್ದಾನ ಮಾಡಿದ್ದನ್ನು ಅವರು ನೆರವೇರಿಸದಿರುವರೇ?
20 ಆಶೀರ್ವದಿಸುವುದಕ್ಕೆ ನಾನು ಅಪ್ಪಣೆ ಹೊಂದಿದ್ದೇನೆ.
ಅವರು ಆಶೀರ್ವದಿಸಿದ ನಂತರ ನಾನು ಅದನ್ನು ಬದಲಾಯಿಸಲಾರೆನು.
 
21 “ಯೆಹೋವ ದೇವರು ಯಾಕೋಬನಲ್ಲಿ ಆಪತ್ತನ್ನು ಕಾಣಲಿಲ್ಲ.
ಇಸ್ರಾಯೇಲಿನಲ್ಲಿ ವಿಪತ್ತನ್ನು ನೋಡಲಿಲ್ಲ.
ಅವರ ದೇವರಾದ ಯೆಹೋವ ದೇವರು ಅವರ ಸಂಗಡ ಇದ್ದಾರೆ.
ಅರಸನ ಜಯಧ್ವನಿಯು ಅವರಲ್ಲಿ ಉಂಟು.
22 ದೇವರು ಅವರನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ.
ಅವರಿಗೆ ಕಾಡುಕೋಣದಂಥ ಬಲವುಂಟು.
23 ನಿಶ್ಚಯವಾಗಿ ಯಾಕೋಬನಲ್ಲಿ ಕಣಿಕೇಳುವದು ಇಲ್ಲ.
ಇಸ್ರಾಯೇಲರಲ್ಲಿ ಶಕುನನೋಡುವದು ಇಲ್ಲ.
‘ನೋಡಿರಿ, ದೇವರು ಎಂತಹ ಮಹತ್ಕಾರ್ಯವನ್ನು ಮಾಡಿದ್ದಾರೆ,’
ಎಂದು ಯಾಕೋಬನ ವಿಷಯವಾಗಿಯೂ,
ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು.
24 ಇಗೋ, ಜನಾಂಗವು ದೊಡ್ಡ ಸಿಂಹದ ಹಾಗೆ ಏಳುವುದು.
ಸಿಂಹದ ಮರಿಯ ಹಾಗೆ ಎದ್ದೇಳುವುದು.
ಅದು ಬೇಟೆಯನ್ನು ತಿಂದು,
ಹತರಾದವರ ರಕ್ತವನ್ನು ಕುಡಿಯುವವರೆಗೆ ಮಲಗದು.”
25 ಆಗ ಬಾಲಾಕನು ಬಿಳಾಮನಿಗೆ, “ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ,” ಎಂದನು.
26 ಆದರೆ ಬಿಳಾಮನು ಉತ್ತರವಾಗಿ, “ಬಾಲಾಕನಿಗೆ ಯೆಹೋವ ದೇವರು ಹೇಳುವುದನ್ನೆಲ್ಲಾ ನಾನು ಮಾಡುವೆನೆಂದು ನಿನಗೆ ಹೇಳಲಿಲ್ಲವೋ?” ಎಂದನು.
ಬಿಳಾಮನ ಮೂರನೆಯ ದರ್ಶನ
27 ಆಗ ಬಾಲಾಕನು ಬಿಳಾಮನಿಗೆ, “ದಯಮಾಡಿ ಬಾ, ನಾನು ನಿನ್ನನ್ನು ಬೇರೆ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗುವೆನು. ನೀನು ಅಲ್ಲಿಂದ ನನಗೋಸ್ಕರ ಅವರನ್ನು ಶಪಿಸುವುದು ಒಂದು ವೇಳೆ ದೇವರಿಗೆ ಯುಕ್ತವಾಗಿದ್ದೀತು,” ಎಂದನು. 28 ಆದಕಾರಣ ಬಾಲಾಕನು ಬಿಳಾಮನನ್ನು ಕಾಡಿಗೆದುರಾಗಿರುವ ಪೆಯೋರಿಯ ತುದಿಗೆ ಕರೆದುಕೊಂಡು ಹೋದನು.
29 ಬಿಳಾಮನು ಬಾಲಾಕನಿಗೆ, “ನನಗೆ ಇಲ್ಲಿ ಏಳು ಬಲಿಪೀಠಗಳನ್ನು ಕಟ್ಟಿ, ಇಲ್ಲಿ ನನಗೆ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಸಿದ್ಧಮಾಡು,” ಎಂದನು. 30 ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿ, ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ, ಒಂದೊಂದು ಟಗರನ್ನೂ ಅರ್ಪಿಸಿದನು.