2
ಆದಕಾರಣ, ಎಲ್ಲಾ ದ್ವೇಷವನ್ನೂ ಎಲ್ಲಾ ವಂಚನೆಯನ್ನೂ ಕಪಟವನ್ನೂ ಹೊಟ್ಟೆಕಿಚ್ಚನ್ನೂ ಎಲ್ಲಾ ಅಪವಾದಗಳನ್ನೂ ವಿಸರ್ಜಿಸಿರಿ. ಹೊಸದಾಗಿ ಹುಟ್ಟಿದ ಶಿಶುಗಳಂತಿರುವ ನೀವು ರಕ್ಷಣೆಯಲ್ಲಿ ಬೆಳೆಯುವ ಹಾಗೆ ಆತ್ಮಿಕವಾದ ಶುದ್ಧಹಾಲನ್ನು ಬಯಸಿರಿ. ಏಕೆಂದರೆ ಕರ್ತದೇವರು ಒಳ್ಳೆಯವರೆಂದು ನೀವು ರುಚಿ ನೋಡಿದ್ದೀರಲ್ಲಾ.
ಆಯ್ಕೆಯಾದ ಜೀವವುಳ್ಳ ಕಲ್ಲುಗಳು
ನೀವು ಸಜೀವ ಕಲ್ಲಾಗಿರುವವರ ಬಳಿಗೆ ಬಂದಿದ್ದೀರಿ. ಆ ಕಲ್ಲು ಮನುಷ್ಯರಿಂದ ನಿರಾಕರಿಸಿದರೂ ಅದು ದೇವರಿಂದ ಆರಿಸಿಕೊಂಡದ್ದೂ ಅವರಿಗೆ ಅಮೂಲ್ಯವಾದದ್ದೂ ಆಯಿತು. ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮಿಕ ಮಂದಿರವಾಗುವುದಕ್ಕೆ ನಿರ್ಮಿತವಾಗುತ್ತಾ ಇದ್ದೀರಿ. ಕ್ರಿಸ್ತ ಯೇಸುವಿನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮಿಕ ಯಜ್ಞಗಳನ್ನು ಸಮರ್ಪಿಸಲು ನೀವು ಪವಿತ್ರ ಯಾಜಕವರ್ಗದವರಾಗಬೇಕು. ಪವಿತ್ರ ವೇದವು ಹೇಳುವುದೇನೆಂದರೆ:
“ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ.
ಅದು ಆರಿಸಿಕೊಂಡದ್ದು, ಅಮೂಲ್ಯವಾದದ್ದು.
ದೇವರ ಮೇಲೆ ನಂಬಿಕೆಯಿಡುವವನು
ಆಶಾಭಂಗಪಡುವದೇ ಇಲ್ಲ.”*
ಈಗ ನಂಬುವವರಾದ ನಿಮಗೆ ಈ ಕಲ್ಲು ಅಮೂಲ್ಯವಾದುದು. ನಂಬದವರಿಗಾದರೋ,
“ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ
ಮುಖ್ಯವಾದ ಮೂಲೆಗಲ್ಲಾಯಿತು,”
ಮತ್ತು,
“ಜನರು ಎಡವಲು ಕಾರಣವಾಗುವ ಕಲ್ಲೂ
ಅವರು ಬಿದ್ದುಹೋಗುವಂತೆ ಮಾಡುವ ಬಂಡೆಯೂ ಆಗಿರುತ್ತದೆ,”
ಅವರು ವಾಕ್ಯಕ್ಕೆ ಅವಿಧೇಯರಾದ್ದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರು ನೇಮಕವಾದರು.
ಆದರೆ ಕತ್ತಲೆಯೊಳಗಿದ್ದ ನಿಮ್ಮನ್ನು ಕರೆದು ತಮ್ಮ ಆಶ್ಚರ್ಯಕರವಾದ ಬೆಳಕಿಗೆ ಸೇರಿಸಿದ ದೇವರನ್ನು ಕೊಂಡಾಡುವವರಾಗುವಂತೆ ನೀವು ಆಯ್ದುಕೊಂಡ ಜನರೂ ರಾಜತನದ ಯಾಜಕರೂ ಪರಿಶುದ್ಧ ಜನಾಂಗವೂ ದೇವರ ಜನರೂ ಆಗಿದ್ದೀರಿ. 10 ಮೊದಲು ನೀವು ಪ್ರಜೆಗಳಾಗಿರಲಿಲ್ಲ. ಈಗ ದೇವರ ಪ್ರಜೆಗಳಾಗಿದ್ದೀರಿ. ಮೊದಲು ಕರುಣೆ ಹೊಂದಿರಲಿಲ್ಲ. ಈಗ ಕರುಣೆ ಹೊಂದಿದ್ದೀರಿ.
ಭಕ್ತಿಹೀನ ಸಮಾಜದಲ್ಲಿ ಭಕ್ತರಾಗಿ ಬಾಳುವುದು
11 ಪ್ರಿಯರೇ, ಈ ಲೋಕದಲ್ಲಿ ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 12 ನಿಮ್ಮ ನಡವಳಿಕೆಯು ಯೆಹೂದ್ಯರಲ್ಲದವರ ನಡುವೆ ಯೋಗ್ಯವಾಗಿರಲಿ, ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ, ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಕರ್ತ ಯೇಸು ನಮ್ಮನ್ನು ದರ್ಶಿಸುವ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.
13 ಮನುಷ್ಯನ ಪ್ರತಿಯೊಂದು ನಿಯಮಗಳಿಗೂ ಕರ್ತದೇವರ ನಿಮಿತ್ತ ನೀವು ಅಧೀನರಾಗಿರಿ. ಅರಸನು ಸರ್ವಾಧಿಕಾರಿಯಾಗಿದ್ದು, 14 ರಾಜ್ಯಪಾಲರು ಕೆಟ್ಟವರನ್ನು ದಂಡಿಸುವುದಕ್ಕೆ ಒಳ್ಳೆಯವರನ್ನು ಪ್ರೋತ್ಸಾಹಪಡಿಸುವುದಕ್ಕೆ ಅರಸನಿಂದ ಅವರು ಕಳುಹಿಸಲಾದವರೆಂದೂ ತಿಳಿದು ಅವರಿಗೆ ಅಧೀನರಾಗಿರಿ. 15 ನೀವು ನಿಮ್ಮ ಒಳ್ಳೆಯ ನಡತೆಯಿಂದ, ತಿಳುವಳಿಕೆಯಿಲ್ಲದೆ ಮಾತಾಡುವ ಮೂಢಜನರ ಬಾಯಿ ಮುಚ್ಚುವಂತೆ ಮಾಡುವುದೇ ದೇವರ ಚಿತ್ತ. 16 ಸ್ವತಂತ್ರರಾಗಿರಿ, ಆದರೆ ಕೆಟ್ಟತನವನ್ನು ಮರೆಮಾಡುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ. ದೇವರ ಸೇವಕರಂತೆಯೇ ಬಾಳಿರಿ. 17 ಎಲ್ಲರನ್ನು ಸನ್ಮಾನಿಸಿರಿ, ವಿಶ್ವಾಸಿಗಳ ಸಹೋದರತ್ವವನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ, ಅರಸನನ್ನು ಸನ್ಮಾನಿಸಿರಿ.
18 ದಾಸರೇ, ಯಜಮಾನರಿಗೆ ಅಧೀನರಾಗಿರಿ. ನೀವು ಅವರಲ್ಲಿ ಒಳ್ಳೆಯ ಯಜಮಾನರಿಗೆ ಮಾತ್ರವಲ್ಲ, ಕ್ರೂರ ಯಜಮಾನರಿಗೂ ಪೂರ್ಣಭಯಭಕ್ತಿಯಿಂದ ಅಧೀನರಾಗಿರಿ. 19 ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರ ವಿಷಯವಾದ ಮನಸ್ಸಾಕ್ಷಿಗೋಸ್ಕರ ಆ ದುಃಖವನ್ನು ಸಹಿಸಿಕೊಂಡರೆ ಅವನು ದೇವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. 20 ತಪ್ಪುಮಾಡಿ ಶಿಕ್ಷೆ ಹೊಂದುವುದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದರಿಂದೇನು ಹೆಚ್ಚಳ? ಆದರೆ ಒಳ್ಳೆಯದನ್ನು ಮಾಡಿ ಬಾಧೆಪಡುವುದರಲ್ಲಿ ನೀವು ತಾಳ್ಮೆಯಿಂದಿದ್ದರೆ ಇದು ದೇವರಿಗೆ ಮೆಚ್ಚುಗೆಯಾಗಿದೆ. 21 ಇದಕ್ಕಾಗಿಯೇ ನಿಮ್ಮನ್ನು ಕರೆಯಲಾಯಿತು: ಕ್ರಿಸ್ತ ಯೇಸು ಸಹ ನಮಗೋಸ್ಕರ ಬಾಧೆಯನ್ನು ಅನುಭವಿಸಿ ತಮ್ಮ ಹೆಜ್ಜೆಯ ಜಾಡಿನಲ್ಲಿ ನೀವು ನಡೆಯಬೇಕೆಂದು ಆದರ್ಶವನ್ನು ಬಿಟ್ಟುಹೋದರು.
22 “ಕ್ರಿಸ್ತ ಯೇಸುವು ಯಾವ ಪಾಪವನ್ನೂ ಮಾಡಲಿಲ್ಲ,
ಅವರ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.”§
23 ಬೈಯ್ಯುವವರನ್ನು ಅವರು ಪ್ರತಿಯಾಗಿ ಬೈಯಲಿಲ್ಲ. ಅವರು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವ ತಂದೆಗೆ ತಮ್ಮನ್ನು ಒಪ್ಪಿಸಿದರು. 24 ನಾವು ನಮ್ಮ ಪಾಪಗಳ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಕ್ರಿಸ್ತ ಯೇಸು ಶಿಲುಬೆಯ ಮೇಲೆ, “ನಮ್ಮ ಪಾಪಗಳನ್ನು ತಾವೇ ತಮ್ಮ ದೇಹದಲ್ಲಿ ಹೊತ್ತರು. ಅವರ ಗಾಯಗಳಿಂದ ನಿಮಗೆ ಗುಣವಾಯಿತು.” 25 ಏಕೆಂದರೆ, “ನೀವು ಕುರಿಗಳಂತೆ ದಾರಿ ತಪ್ಪಿದವರಾಗಿದ್ದೀರಿ.”* ಆದರೆ ಈಗ ನೀವು ತಿರುಗಿ ನಿಮ್ಮ ಆತ್ಮಗಳ ಕುರುಬ ಹಾಗೂ ಸಭಾಧ್ಯಕ್ಷರೂ ಆಗಿರುವ ಕ್ರಿಸ್ತ ಯೇಸುವಿನ ಬಳಿಗೆ ಬಂದಿದ್ದೀರಿ.
* 2:6 2:6 ಯೆಶಾಯ 28:16 2:7 2:7 ಕೀರ್ತನೆ 118:22 2:8 2:8 ಯೆಶಾಯ 8:14 § 2:22 2:22 ಯೆಶಾಯ 53:9 * 2:25 2:25 ಯೆಶಾಯ 53:4,5,6