3
ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಪತಿಯರಲ್ಲಿ ಯಾರಾದರೂ ವಾಕ್ಯವನ್ನು ಸ್ವೀಕರಿಸದವರಾಗಿದ್ದರೂ ಪತ್ನಿಯರ ನಡತೆಯಿಂದ ವಾಕ್ಯವಿಲ್ಲದೆ ಅವರನ್ನು ಗೆಲ್ಲುವಂತೆ, ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಲಿ. ವಿಚಿತ್ರವಾಗಿ ಜಡೆ ಹೆಣೆದುಕೊಳ್ಳುವುದೂ ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವುದೂ ಇಲ್ಲವೆ ತುಂಬಾ ಬೆಲೆಯ ಉಡಿಗೆಗಳನ್ನು ಧರಿಸಿಕೊಳ್ಳುವುದೂ ಇವೇ ನಿಮ್ಮ ಅಲಂಕಾರವಾಗಿರಬಾರದು. ಅದರ ಬದಲು ಸಾತ್ವಿಕವಾದ ಶಾಂತಮನಸ್ಸು ಎಂಬ ಹೃದಯದ ಆಂತರ್ಯದ ಅಲಂಕಾರವೇ ನಿಮ್ಮದಾಗಿರಲಿ. ಇದು ದೇವರ ದೃಷ್ಟಿಗೆ ಬಹು ಅಮೂಲ್ಯವಾದದ್ದಾಗಿದೆ. ಪೂರ್ವಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಪತಿಯರಿಗೆ ಅಧೀನರಾಗಿದ್ದರು. ಹಾಗೆಯೇ ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು “ಯಜಮಾನ” ಎಂದು ಕರೆದಳು. ನೀವು ಸಾರಳ ಪುತ್ರಿಯರಾಗಿದ್ದೀರಲ್ಲಾ. ನೀವು ಒಳ್ಳೆಯದು ಯಾವುದೋ ಅದನ್ನು ಮಾಡುವುದಾದರೆ ಯಾವುದಕ್ಕೂ ಭಯಪಡಬೇಕಾಗಿರುವುದಿಲ್ಲ.
ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಬಲಹೀನಳೆಂಬುದನ್ನು ತಿಳಿದು ನಿಮ್ಮ ಪತ್ನಿಯರ ಸಂಗಡ ವಿವೇಕದಿಂದ ಇರಿ. ಅವರು ಜೀವ ಕೃಪೆಯಲ್ಲಿ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವುದಿಲ್ಲ.
ಒಳ್ಳೆಯದನ್ನು ಮಾಡಿದ್ದಕ್ಕಾಗಿ ಬಾಧೆ
ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರಿ, ಒಬ್ಬರಿಗೊಬ್ಬರೂ ಕರುಣೆಯುಳ್ಳವರಾಗಿದ್ದು ಸಹೋದರರಂತೆ ಪ್ರೀತಿಸಿರಿ. ಕನಿಕರವೂ ದೀನತೆ ಉಳ್ಳವರಾಗಿರಿ, ಅಪಕಾರಕ್ಕೆ ಅಪಕಾರವನ್ನೂ ನಿಂದೆಗೆ ನಿಂದೆಯನ್ನೂ ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದರಲ್ಲವೇ? ಹೀಗೆ ಮಾಡುವವರಾದ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರೆಂದು ನಿಮಗೆ ತಿಳಿದಿದೆಯಲ್ಲಾ.
10 “ಬಾಳನ್ನು ಪ್ರೀತಿಸಿ
ಸುದಿನಗಳನ್ನು ನೋಡುವುದಕ್ಕೆ ಇಷ್ಟವುಳ್ಳವನು
ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ
ವಂಚನೆಯ ಮಾತುಗಳನ್ನಾಡದ ಹಾಗೆ ತನ್ನ ತುಟಿಗಳನ್ನೂ ಬಿಗಿ ಹಿಡಿಯಲಿ.
11 ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಮಾಡಲಿ.
ಸಮಾಧಾನವನ್ನು ಹುಡುಕಿ ಅದಕ್ಕೋಸ್ಕರ ಪ್ರಯತ್ನಪಡಲಿ.
12 ಏಕೆಂದರೆ ನೀತಿವಂತರ ಮೇಲೆ ಕರ್ತದೇವರು ದೃಷ್ಟಿ ಇಡುತ್ತಾರೆ.
ಅವರ ಪ್ರಾರ್ಥನೆಗಳಿಗೆ ಕರ್ತದೇವರು ಕಿವಿಗೊಡುತ್ತಾರೆ.
ಆದರೆ ಕೆಟ್ಟದ್ದನ್ನು ಮಾಡುವವರಿಗೆ ದೇವರು ವಿಮುಖರಾಗಿದ್ದಾರೆ,”*
ಎಂದು ಪವಿತ್ರ ವೇದದಲ್ಲಿ ಬರೆದಿದೆಯಲ್ಲಾ?
13 ನೀವು ಒಳ್ಳೆಯದನ್ನು ಅನುಸರಿಸಲು ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ? 14 ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ನಿಮಗೆ ಆಶೀರ್ವಾದವಿರುವುದು. ಅವರ ಬೆದರಿಕೆಗೆ ಹೆದರಬೇಡಿರಿ ಮತ್ತು ಕಳವಳಪಡಬೇಡಿರಿ. 15 ಆದರೆ ಕ್ರಿಸ್ತ ಯೇಸುವನ್ನು ನಿಮ್ಮ ಹೃದಯಗಳಲ್ಲಿ “ಕರ್ತದೇವರು” ಎಂದು ಪ್ರತಿಷ್ಠೆ ಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಸಾತ್ವಿಕತ್ವದಿಂದಲೂ ಗೌರವದಿಂದಲೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧವಾಗಿರಿ. 16 ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ. ಆಗ ನೀವು ಕೆಟ್ಟದ್ದನ್ನು ಮಾಡುವವರೆಂದು ನಿಮ್ಮ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡಿ ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮ ಒಳ್ಳೆಯ ನಡವಳಿಕೆಯ ವಿಷಯವಾಗಿ ಸುಳ್ಳಾಗಿ ದೂರು ಹೇಳುವವರು ನಾಚಿಕೊಳ್ಳುವರು. 17 ಕೆಟ್ಟನಡತೆಯುಳ್ಳವರಾಗಿ ಬಾಧೆಪಡುವುದಕ್ಕಿಂತ ಒಳ್ಳೆಯ ನಡತೆಯುಳ್ಳವರಾಗಿಯೇ ದೇವರ ಚಿತ್ತವಿದ್ದರೆ ಬಾಧೆಪಡುವುದು ಲೇಸು. 18 ಕ್ರಿಸ್ತ ಯೇಸುವು ನೀತಿವಂತರಾಗಿದ್ದರೂ ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವುದಕ್ಕಾಗಿ, ಒಂದೇ ಸಾರಿ ಪಾಪಗಳಿಗೋಸ್ಕರ ಬಾಧೆಪಟ್ಟು ಶರೀರದಲ್ಲಿ ಮರಣಹೊಂದಿದರು. ಆದರೆ ಆತ್ಮದಲ್ಲಿ ಬದುಕುವವರಾದರು. 19 ಹೀಗೆ ಕ್ರಿಸ್ತ ಯೇಸುವು ಆತ್ಮರೂಪದಲ್ಲಿ ಬದುಕುವವರಾಗಿ, ಸೆರೆಯಲ್ಲಿದ್ದ ಅವಿಧೇಯ ಆತ್ಮಗಳ ಬಳಿಗೆ ಹೋಗಿ ಸಾರಿದರು. 20 ಅಂದರೆ, ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು, ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ, ಆ ನಾವೆಯೊಳಗೆ ಎಂಟೇ ಜನರು ನೀರಿನಿಂದ ಸಂರಕ್ಷಣೆ ಹೊಂದಿದರು. 21 ಈ ನೀರು ದೀಕ್ಷಾಸ್ನಾನವನ್ನು ಸೂಚಿಸುವಂತದ್ದಾಗಿದೆ. ಈ ದೀಕ್ಷಾಸ್ನಾನ ಕ್ರಿಸ್ತ ಯೇಸುವಿನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿಯು ಬೇಕೆಂದು ದೇವರನ್ನು ಬೇಡಿಕೊಳ್ಳುವಂಥದ್ದಾಗಿದೆ. 22 ಕ್ರಿಸ್ತ ಯೇಸು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾರೆ, ದೇವದೂತರೂ ಪ್ರಭುತ್ವಗಳೂ ಅಧಿಕಾರಗಳೂ ಅವರಿಗೆ ಅಧೀನವಾಗಿವೆ.
* 3:12 ಕೀರ್ತನೆ 34:12-16 3:14 ಯೆಶಾಯ 8:12