19
ಬುದ್ಧಿಹೀನನ ವಕ್ರ ತುಟಿಗಳಿಗಿಂತ,
ನಿರ್ದೋಷವಾಗಿ ನಡೆಯುವ ಬಡವನು ಉತ್ತಮ.
 
ಪರಿಜ್ಞಾನವಿಲ್ಲದ ಆಸಕ್ತಿಯು ಯುಕ್ತವಲ್ಲ;
ತನ್ನ ಹೆಜ್ಜೆಗಳಲ್ಲಿ ದುಡುಕುವವನು ದಾರಿ ತಪ್ಪುವನು.
 
ಮನುಷ್ಯನ ಬುದ್ಧಿಹೀನತೆ ಅವನ ದುರ್ಗತಿಗೆ ದಾರಿಯಾಗಿದೆ,
ಆದರೂ ಅವನ ಹೃದಯವು ಯೆಹೋವ ದೇವರಿಗೆ ವಿರೋಧವಾಗಿ ಉರಿಗೊಳ್ಳುತ್ತದೆ.
 
ಸಂಪತ್ತು ಅನೇಕ ಮಂದಿ ಸ್ನೇಹಿತರನ್ನು ಮಾಡಿಕೊಳ್ಳುತ್ತದೆ;
ಆದರೆ ಬಡವನು ತನ್ನ ಆಪ್ತಸ್ನೇಹಿತನಿಂದ ದೂರವಾಗುತ್ತಾನೆ.
 
ಸುಳ್ಳುಸಾಕ್ಷಿಯು ದಂಡನೆಯನ್ನು ಹೊಂದದಿರನು;
ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರಲಾರನು.
 
ಅನೇಕರು ಅಧಿಪತಿಯಿಂದ ಸಹಾಯ ಪಡೆಯುತ್ತಾರೆ.
ಕಾಣಿಕೆಗಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ.
 
ಬಡವನ ಬಂಧುಗಳೆಲ್ಲರು ಅವನನ್ನು ಹಗೆ ಮಾಡುತ್ತಾರೆ;
ತನ್ನ ಸ್ನೇಹಿತರು ತನ್ನಿಂದ ಎಷ್ಟೋ ಹೆಚ್ಚಾಗಿ ದೂರ ಹೋಗುತ್ತಾರಲ್ಲವೇ?
ಮಾತುಗಳಿಂದ ಅವನು ಮೊರೆಯಿಟ್ಟು ಹಿಂಬಾಲಿಸಿದರೂ
ಅವನಿಗೆ ಏನೂ ದೊರಕದು.
 
ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣವನ್ನೇ ಪ್ರೀತಿಸುತ್ತಾನೆ;
ತಿಳುವಳಿಕೆಯನ್ನು ಪ್ರೀತಿಸುವವನು ಶೀಘ್ರದಲ್ಲೇ ಏಳಿಗೆ ಹೊಂದುತ್ತಾನೆ.
 
ಸುಳ್ಳುಸಾಕ್ಷಿಯು ಶಿಕ್ಷೆಹೊಂದದೇ ಇರುವುದಿಲ್ಲ;
ಸುಳ್ಳಾಡುವವನು ಹಾಳಾಗಿ ಹೋಗುವನು.
 
10 ಬುದ್ಧಿಹೀನನಿಗೆ ಭೋಗಜೀವನವು ಯುಕ್ತವಲ್ಲ;
ಅಧಿಪತಿಗಳ ಮೇಲೆ ದೊರೆತನ ಮಾಡುವುದು ಸೇವಕನಿಗೆ ಯುಕ್ತವೇ ಅಲ್ಲ.
 
11 ಮನುಷ್ಯನ ಜ್ಞಾನವು ತಾಳ್ಮೆಯನ್ನು ನೀಡುತ್ತದೆ;
ಅಪರಾಧವನ್ನು ಲಕ್ಷಿಸದೆ ಇರುವುದು ಅವನಿಗೆ ಮಹಿಮೆಯಾಗಿದೆ.
 
12 ಅರಸನ ಕೋಪವು ಸಿಂಹದ ಘರ್ಜನೆಯಂತಿದೆ;
ಆದರೆ ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.
 
13 ಬುದ್ಧಿಹೀನನಾದ ಮಗನು ತನ್ನ ತಂದೆಗೆ ಹಾನಿಕರನು;
ಜಗಳವಾಡುವ ಹೆಂಡತಿ
ಯಾವಾಗಲೂ ತೊಟ್ಟಿಕ್ಕುವ ಹನಿ.
 
14 ಮನೆಯೂ ಸಂಪತ್ತೂ ಪಿತೃಗಳ ಸ್ವಾಸ್ತ್ಯವು;
ವಿವೇಕಿಯಾದ ಹೆಂಡತಿಯು ಯೆಹೋವ ದೇವರಿಂದಲೇ.
 
15 ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುತ್ತದೆ;
ಸೋಮಾರಿಯು ಹಸಿವೆಗೊಳ್ಳುವನು.
 
16 ಯಾರು ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ತನ್ನ ಜೀವವನ್ನು ಉಳಿಸಿಕೊಳ್ಳುತ್ತಾನೆ,
ಆದರೆ ಅವುಗಳನ್ನು ಅಸಡ್ಡೆ ಮಾಡುವವನು ಸಾಯುವನು.
 
17 ಬಡವರಿಗೆ ದಯೆ ತೋರಿಸುವವನು ಯೆಹೋವ ದೇವರಿಗೆ ಸಾಲ ಕೊಡುತ್ತಾನೆ;
ಆತನು ಅವನ ಉಪಕಾರಕ್ಕಾಗಿ ಪ್ರತ್ಯುಪಕಾರ ಮಾಡುವನು.
 
18 ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು;
ಅವನ ಮರಣಕ್ಕೆ ನೀನು ಕಾರಣನಾಗಬೇಡ.
 
19 ಕೋಪಿಷ್ಟನು ಶಿಕ್ಷೆಯನ್ನು ಅನುಭವಿಸುವನು;
ಅವನನ್ನು ನೀನು ಬಿಡಿಸಿದರೆ, ತಿರುಗಿ ನೀನು ಬಿಡಿಸಬೇಕಾಗುವುದು.
 
20 ಬುದ್ಧಿವಾದವನ್ನು ಕೇಳಿ, ಶಿಕ್ಷಣವನ್ನು ಅಂಗೀಕರಿಸು;
ಕಡೆಯಲ್ಲಿ ನೀನು ಜ್ಞಾನಿಯಾಗುವೆ.
 
21 ಮನುಷ್ಯನ ಹೃದಯದಲ್ಲಿ ಅನೇಕ ಯೋಜನೆಗಳಿವೆ;
ಆದರೂ ಯೆಹೋವ ದೇವರ ಸಂಕಲ್ಪವೇ ಈಡೇರುವುದು.
 
22 ನಿಷ್ಠೆಯು ಮನುಷ್ಯನನ್ನು ಆಕರ್ಷಕನನ್ನಾಗಿ ಮಾಡುತ್ತದೆ.
ಬಡವನು ಸುಳ್ಳುಗಾರನಿಗಿಂತ ಲೇಸು.
 
23 ಯೆಹೋವ ದೇವರ ಭಯವು ಜೀವದಾಯಕವು;
ಆಗ ಅವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವುದಿಲ್ಲ.
 
24 ಮೈಗಳ್ಳನು ಪಾತ್ರೆಯೊಳಗೆ ತನ್ನ ಕೈಯನ್ನು ಮುಳುಗಿಸಿ,
ಅವನು ಅದನ್ನು ಮತ್ತೆ ತನ್ನ ಬಾಯಿಗೆ ತರುವುದಿಲ್ಲ!
 
25 ಪರಿಹಾಸ್ಯಗಾರನನ್ನು ಹೊಡೆದರೆ, ಮುಗ್ಧರು ಎಚ್ಚರಗೊಳ್ಳುವರು;
ವಿವೇಕಿಯನ್ನು ಗದರಿಸಿದರೆ, ಅವನು ಪರಿಜ್ಞಾನವನ್ನು ಗ್ರಹಿಸುವನು.
 
26 ಯಾರು ತಂದೆಯನ್ನು ದೋಚಿಕೊಂಡು ತಾಯಿಯನ್ನು ಓಡಿಸುವರೋ
ನಾಚಿಕೆಯನ್ನುಂಟುಮಾಡಿ, ನಿಂದೆಯನ್ನು ತರುತ್ತಾರೆ.
 
27 ಮಗನೇ, ನೀನು ಬುದ್ಧಿವಾದಕ್ಕೆ ಲಕ್ಷ್ಯಕೊಡದಿದ್ದರೆ,
ಪರಿಜ್ಞಾನದ ಮಾತುಗಳಿಂದ ದಾರಿತಪ್ಪುವೆ.
 
28 ಭ್ರಷ್ಟನ ಸಾಕ್ಷಿಯು ನ್ಯಾಯತೀರ್ಪನ್ನು ಗೇಲಿ ಮಾಡುತ್ತದೆ;
ದುಷ್ಟನ ಬಾಯಿಯು ದ್ರೋಹವನ್ನು ನುಂಗುವುದು.
 
29 ಪರಿಹಾಸ್ಯಗಾರರಿಗೆ ನ್ಯಾಯ ತೀರ್ಪುಗಳೂ,
ಬುದ್ಧಿಹೀನರ ಬೆನ್ನಿಗೆ ಪೆಟ್ಟುಗಳೂ ಸಿದ್ಧವಾಗಿವೆ.