20
ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ;
ಇವುಗಳಿಂದ ಮೋಸ ಹೋದವನು ಜ್ಞಾನಿಯಲ್ಲ.
 
ಅರಸನ ಭಯವು ಸಿಂಹದ ಘರ್ಜನೆಯಂತಿದೆ;
ಅವನ ಕೋಪವನ್ನೆಬ್ಬಿಸುವವರು, ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುವರು.
 
ಕಲಹವನ್ನು ತಡೆಯುವವನು, ಮಾನಕ್ಕೆ ಯೋಗ್ಯನು;
ಆದರೆ ಬುದ್ಧಿಹೀನನು ಮಾತ್ರ ಜಗಳವಾಡಲು ಒತ್ತಾಯಿಸುತ್ತಾನೆ.
 
ಮೈಗಳ್ಳನು ಮಳೆಗಾಲದಲ್ಲಿ ಉಳುಮೆ ಮಾಡುವುದಿಲ್ಲ;
ಆದಕಾರಣ ಸುಗ್ಗಿಯಲ್ಲಿ ಅವನು ಅಪೇಕ್ಷಿಸಿದರೂ ಏನೂ ಸಿಕ್ಕುವುದಿಲ್ಲ.
 
ಮನುಷ್ಯನ ಹೃದಯದ ಆಲೋಚನೆಯು ಆಳವಾದ ಬಾವಿಯ ನೀರಿನಂತಿದೆ;
ವಿವೇಕಿಯು ಅದನ್ನು ಸೇದುವನು.
 
ಅನೇಕರಲ್ಲಿ ಪ್ರತಿಯೊಬ್ಬನು ತನ್ನ ಸ್ವಂತ ಪ್ರಾಮಾಣಿಕತೆಯನ್ನು ಸಾರುವನು;
ಆದರೆ ನಂಬಿಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು?
 
ನೀತಿವಂತನು ನಿರ್ದೋಷವಾಗಿ ಜೀವಿಸುತ್ತಾನೆ;
ಅವನನ್ನು ಅನುಸರಿಸುವ ಅವನ ಮಕ್ಕಳು ಆಶೀರ್ವಾದ ಹೊಂದುವರು.
 
ಅರಸನು ತನ್ನ ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವಾಗ,
ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು.
 
“ನನ್ನ ಹೃದಯವನ್ನು ಶುದ್ಧವಾಗಿ ಇಟ್ಟುಕೊಂಡಿದ್ದೇನೆ.
ನಾನು ಶುದ್ಧನೂ ಪಾಪರಹಿತನೂ,” ಎಂದು ಯಾರು ಹೇಳಬಲ್ಲರು?
 
10 ಮೋಸದ ತೂಕಗಳೂ, ಮೋಸದ ಅಳತೆಗಳೂ
ಇವೆರಡೂ ಯೆಹೋವ ದೇವರಿಗೆ ಅಸಹ್ಯ.
 
11 ಚಿಕ್ಕ ಮಕ್ಕಳಾದರೋ ತಮ್ಮ ಕ್ರಿಯೆಗಳಿಂದಲೇ,
ತಾವು ಶುದ್ಧರೋ ಯಥಾರ್ಥರೋ ಎಂಬುದನ್ನು ತೋರ್ಪಡಿಸಿಕೊಳ್ಳುತ್ತಾರೆ.
 
12 ಕೇಳುವ ಕಿವಿ, ನೋಡುವ ಕಣ್ಣು ಇವೆರಡನ್ನು
ಯೆಹೋವ ದೇವರು ಉಂಟುಮಾಡಿದ್ದಾನೆ.
 
13 ನೀವು ನಿದ್ರೆಯನ್ನು ಪ್ರೀತಿಸಿದರೆ, ನೀವು ಬಡತನದಲ್ಲಿ ಕೊನೆಗೊಳ್ಳುತ್ತೀರಿ;
ನಿಮ್ಮ ಕಣ್ಣುಗಳನ್ನು ತೆರೆದರೆ, ಸಾಕಷ್ಟು ಆಹಾರ ಇರುತ್ತದೆ!
 
14 “ಇದು ಒಳ್ಳೆಯದಲ್ಲ ಇದು ಒಳ್ಳೆಯದಲ್ಲ!” ಎಂದು ಕೊಳ್ಳುವವನು ಹೇಳುತ್ತಾನೆ;
ಆದರೆ ಅವನು ಕೊಂಡು ಹೋದ ಮೇಲೆ ಅದನ್ನೇ ಹೊಗಳುತ್ತಾನೆ.
 
15 ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ;
ಆದರೆ ಪರಿಜ್ಞಾನದ ತುಟಿಗಳು ಅಪರೂಪದ ರತ್ನವಾಗಿವೆ.
 
16 ಅಪರಿಚಿತನಿಗೆ ಭದ್ರತೆಯನ್ನು ನೀಡುವವನ ವಸ್ತ್ರವನ್ನು ತೆಗೆದುಕೋ;
ವಿದೇಶಿಯರಿಗೆ ಇದನ್ನು ಮಾಡಿದರೆ ಅದನ್ನು ಒತ್ತೆ ಇಟ್ಟುಕೋ.
 
17 ವಂಚನೆಯಿಂದ ಸಿಕ್ಕಿದ ಆಹಾರವು ರುಚಿ;
ಆದರೆ ಆಮೇಲೆ ಅವನ ಬಾಯಿಯು ಮರಳಿನಿಂದ ತುಂಬುವುದು.
 
18 ಸಲಹೆಯಿಂದ ಯೋಜನೆಗಳು ನೆರವೆರುವವು;
ಜ್ಞಾನಿಯ ಸಲಹೆಯಿಲ್ಲದೆ ಯುದ್ಧಕ್ಕೆ ಹೋಗಬೇಡಿ.
 
19 ಚಾಡಿಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ;
ಆದಕಾರಣ ಹರಟೆ ಹೊಡೆಯುವವನ ಸಹವಾಸ ಮಾಡಬೇಡ.
 
20 ತನ್ನ ತಂದೆಯನ್ನಾಗಲಿ, ತನ್ನ ತಾಯಿಯನ್ನಾಗಲಿ ಶಪಿಸುವವನ
ದೀಪವು ಮಧ್ಯರಾತ್ರಿಯ ಕತ್ತಲೆಯಲ್ಲಿ ಆರಿಹೋಗುವುದು.
 
21 ಪ್ರಾರಂಭದಲ್ಲಿ ತ್ವರೆಯಾಗಿ ಪಡೆದುಕೊಂಡ ಆಸ್ತಿಯೂ
ಅಂತ್ಯದಲ್ಲಿ ಆಶೀರ್ವಾದವಾಗಿರುವುದಿಲ್ಲ.
 
22 ನೀನು, “ಕೇಡಿಗೆ ಮುಯ್ಯಿತೀರಿಸುವೆನು,” ಎಂದು ಹೇಳಬೇಡ;
ಯೆಹೋವ ದೇವರನ್ನು ನಿರೀಕ್ಷಿಸು; ಆಗ ಅವರೇ ನಿಮ್ಮನ್ನು ರಕ್ಷಿಸಿ ಉದ್ಧರಿಸುವನು.
 
23 ವ್ಯತ್ಯಾಸದ ತೂಕಗಳು ಯೆಹೋವ ದೇವರಿಗೆ ಅಸಹ್ಯವಾಗಿವೆ;
ಅಪ್ರಾಮಾಣಿಕ ತಕ್ಕಡಿಗಳು ಅವರನ್ನು ಮೆಚ್ಚಿಸುವುದಿಲ್ಲ.
 
24 ಮನುಷ್ಯನ ಹೆಜ್ಜೆಗಳನ್ನು ಯೆಹೋವ ದೇವರು ನಿರ್ದೇಶಿಸುತ್ತಾರೆ.
ಹಾಗಾದರೆ ಒಬ್ಬ ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಳ್ಳಬಲ್ಲನು?
 
25 ದುಡುಕಿ ಪ್ರತಿಷ್ಠೆಗಾಗಿ ದೇವರಿಗೆ ಹರಕೆ ಮಾಡಿಕೊಂಡು
ಆಮೇಲೆ ವಿಚಾರಿಸುವುದು ಉರುಲಾಗಿದೆ.
 
26 ಜ್ಞಾನಿಯಾದ ಅರಸನು ದುಷ್ಟರನ್ನು ತೂರುವನು;
ಅವರ ಮೇಲೆ ಕಣದ ಚಕ್ರವನ್ನು ಎಳೆಯುವನು.
 
27 ಮನುಷ್ಯನ ಆತ್ಮವು ಯೆಹೋವ ದೇವರ ದೀಪವಾಗಿದೆ.
ಅದು ಅವನ ಅಂತರಂಗವನ್ನು ಶೋಧಿಸುತ್ತದೆ.
 
28 ಪ್ರೀತಿಯೂ ನಂಬಿಗಸ್ತಿಕೆಯೂ ಅರಸನನ್ನು ಕಾಯುತ್ತವೆ;
ಪ್ರೀತಿಯಿಂದಲೇ ಅವನ ಸಿಂಹಾಸನವು ಸ್ಥಿರಗೊಳ್ಳುತ್ತದೆ.
 
29 ಯೌವನಸ್ಥರ ಮಹಿಮೆ ಅವರ ಬಲವೇ;
ಮುದುಕರ ವೈಭವ ನರೆತ ತಲೆಯೇ.
 
30 ಗಾಯಗೊಳಿಸುವ ಏಟುಗಳು ದುಷ್ಟತ್ವವನ್ನು ತೊಳೆಯುತ್ತವೆ;
ಪೆಟ್ಟುಗಳು ಅಂತರಂಗವನ್ನೂ ಶುದ್ಧಿಗೊಳಿಸುತ್ತವೆ.