22
ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ;
ಬೆಳ್ಳಿಬಂಗಾರಕ್ಕಿಂತಲೂ ಗೌರವದಿಂದಿರುವುದು ಉತ್ತಮ.
 
ಧನಿಕರು, ಬಡವರು ಇದನ್ನು ಸಾಮಾನ್ಯವಾಗಿ ಹೊಂದಿರುವರು:
ಇವರೆಲ್ಲರನ್ನು ಸೃಷ್ಟಿಸಿದಾತ ಯೆಹೋವ ದೇವರೇ.
 
ಜಾಣನು ಕೇಡನ್ನು ಮುಂದಾಗಿ ಕಂಡು ತಾನು ಅಡಗಿಕೊಳ್ಳುತ್ತಾನೆ;
ಆದರೆ ಮುಗ್ಧನು ಮುಂದೆ ಹೋಗಿ ಶಿಕ್ಷೆಯನ್ನು ಹೊಂದುತ್ತಾನೆ.
 
ಯೆಹೋವ ದೇವರ ಭಯವೂ ದೀನತೆಯೂ ಕೊಡುವ ಪ್ರತಿಫಲ,
ಐಶ್ವರ್ಯವೂ ಮಾನವೂ ಜೀವವೂ ಆಗಿದೆ.
 
ದುಷ್ಟರ ದಾರಿಯಲ್ಲಿ ಮುಳ್ಳುಗಳೂ, ಉರುಲುಗಳೂ ಇವೆ;
ತನ್ನ ಜೀವವನ್ನು ಕಾಪಾಡಿಕೊಳ್ಳುವವನು ಅವುಗಳಿಂದ ದೂರವಾಗಿರುವನು.
 
ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣವನ್ನು ಕೊಡು;
ಆಗ ಮುಪ್ಪಿನಲ್ಲಿಯೂ ಅವನು ಅದರಿಂದ ದೂರ ಹೋಗುವುದಿಲ್ಲ.
 
ಐಶ್ವರ್ಯವಂತನು ಬಡವನ ಮೇಲೆ ಆಳುತ್ತಾನೆ;
ಸಾಲಗಾರನು ಸಾಲಕೊಟ್ಟವನಿಗೆ ಗುಲಾಮನು.
 
ಕೆಟ್ಟತನವನ್ನು ಬಿತ್ತುವವನು ಕೇಡನ್ನು ಕೊಯ್ಯುವನು;
ಅವನ ಕೋಪದ ಬೆತ್ತವು ಮುರಿದು ಹೋಗುವುದು.
 
ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು,
ಏಕೆಂದರೆ ತನಗಿದ್ದ ಆಹಾರದಲ್ಲಿ ಬಡವರಿಗೆ ಕೊಡುತ್ತಾನೆ.
 
10 ಪರಿಹಾಸ್ಯ ಮಾಡುವವನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವುದು;
ವಿವಾದವೂ ನಿಂದೆಯೂ ನಿಂತುಹೋಗುವುವು.
 
11 ಶುದ್ಧ ಹೃದಯವನ್ನು ಪ್ರೀತಿಸಿ, ಕೃಪೆಯಿಂದ ಮಾತನಾಡುವವನಿಗೆ
ಅರಸನು ಸ್ನೇಹಿತನಾಗಿರುವನು.
 
12 ಯೆಹೋವ ದೇವರ ಕಣ್ಣುಗಳು ತಿಳುವಳಿಕೆಯನ್ನು ಕಾಯುತ್ತವೆ;
ಅವರು ದ್ರೋಹಿಯ ಮಾತುಗಳನ್ನು ಕೆಡವಿ ಹಾಕುತ್ತಾರೆ.
 
13 ಸೋಮಾರಿಯು, “ಹೊರಗೆ ಸಿಂಹವಿದೆ!
ಅದು ನನ್ನನ್ನು ಬೀದಿಗಳಲ್ಲಿ ಕೊಂದುಹಾಕುತ್ತದೆ,” ಎಂದು ಹೇಳುತ್ತಾನೆ.
 
14 ವ್ಯಭಿಚಾರಿಣಿಯ ಬಾಯಿ ಆಳವಾದ ಬಾವಿ;
ಯೆಹೋವ ದೇವರಿಗೆ ಸಿಟ್ಟನ್ನು ಎಬ್ಬಿಸುವವನು ಅದರಲ್ಲಿ ಬೀಳುವನು.
 
15 ಮೂರ್ಖತನ ಯುವಕನ ಹೃದಯದಲ್ಲಿ ಬಂಧಿಸಲಾಗಿದೆ;
ಆದರೆ ಶಿಕ್ಷೆಯ ಬೆತ್ತವು ಅದನ್ನು ಅವನಿಂದ ದೂರವಾಗಿ ಓಡಿಸಿಬಿಡುವುದು.
 
16 ತನ್ನ ಸಂಪತ್ತನ್ನು ವೃದ್ಧಿಗೊಳಿಸುವುದಕ್ಕೆ ಬಡವರನ್ನು ಹಿಂಸಿಸುವವನೂ
ಐಶ್ವರ್ಯವಂತರಿಗೆ ದಾನ ಕೊಡುವವನೂ ನಿಶ್ಚಯವಾಗಿ ಕೊರತೆಪಡುವನು.
ಜ್ಞಾನಿಯ ಮೂವತ್ತು ಹೇಳಿಕೆಗಳು
ಮೊದಲನೆಯ ಹೇಳಿಕೆ
17 ಜ್ಞಾನಿಗಳ ಮಾತುಗಳನ್ನು ಕಿವಿಗೊಟ್ಟು ಕೇಳು;
ನನ್ನ ಬೋಧನೆಯನ್ನು ನಿನ್ನ ಹೃದಯವು ಅನ್ವಯಿಸಲಿ.
18 ಏಕೆಂದರೆ ಅವುಗಳನ್ನು ನಿನ್ನ ಹೃದಯದಲ್ಲಿ ಇಟ್ಟು ಕಾಪಾಡು,
ಅವು ನಿನ್ನ ತುಟಿಗಳ ಮೇಲೆ ಸಿದ್ಧವಿದ್ದರೆ ಮೆಚ್ಚುಗೆಯಾಗಿವೆ.
19 ನಿನ್ನ ಭರವಸೆಯು ಯೆಹೋವ ದೇವರಲ್ಲಿ ಇರುವಂತೆ
ಈ ದಿವಸ ನಿನಗೇ ತಿಳಿಯಪಡಿಸಿದ್ದೇನೆ.
20 ನಾನು ನಿಮಗಾಗಿ ಮೂವತ್ತು ಹೇಳಿಕೆಗಳನ್ನು ಬರೆದಿಲ್ಲವೋ?
ಸಲಹೆ ಮತ್ತು ಪರಿಜ್ಞಾನದ ಹೇಳಿಕೆಗಳು,
21 ಪ್ರಾಮಾಣಿಕವಾಗಿರಲು ಮತ್ತು ಸತ್ಯವನ್ನು ಮಾತನಾಡಲು ನಿಮಗೆ ಕಲಿಸುವುದು,
ಆದ್ದರಿಂದ ನೀವು ಸೇವೆ ಸಲ್ಲಿಸುವವರಿಗೆ
ಸತ್ಯವಾದ ವರದಿಗಳನ್ನು ಹಿಂತಿರುಗಿಸುವಂತೆ ನಾನು ನಿಮಗೆ ಬರೆದಿದ್ದೇನೆ.
ಎರಡನೆಯ ಹೇಳಿಕೆ
22 ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆಮಾಡಬೇಡ;
ನ್ಯಾಯಾಲಯದಲ್ಲಿ ದರಿದ್ರರನ್ನು ತುಳಿಯಬೇಡ.
23 ಏಕೆಂದರೆ ಯೆಹೋವ ದೇವರು ಅವರ ವ್ಯಾಜ್ಯವನ್ನು ನಡೆಸಿ,
ಸೂರೆ ಮಾಡಿದವರ ಪ್ರಾಣವನ್ನು ಸೂರೆ ಮಾಡುವರು.
ಮೂರನೆಯ ಹೇಳಿಕೆ
24 ಮುಂಗೊಪಿಯೊಂದಿಗೆ ಸ್ನೇಹ ಬೆಳೆಸಬೇಡ;
ಸುಲಭವಾಗಿ ಕೋಪಗೊಳ್ಳುವವರೊಂದಿಗೆ ಸಹವಾಸ ಮಾಡಬೇಡ;
25 ಹಾಗೆ ಮಾಡಿದರೆ ನೀನು ಅವನ ನಡತೆಗಳನ್ನು ಕಲಿತು,
ನಿನ್ನನ್ನೇ ಉರುಲಿಗೆ ಸಿಕ್ಕಿಸಿಕೊಳ್ಳುವೆ.
ನಾಲ್ಕನೆಯ ಹೇಳಿಕೆ
26 ಬೇರೆಯವರ ಸಾಲವನ್ನು ಖಾತರಿಪಡಿಸಲೂ
ಬೇರೊಬ್ಬರಿಗೆ ಭದ್ರತೆಯನ್ನು ನೀಡಲು ಒಪ್ಪಬೇಡ.
27 ಸಾಲ ತೀರಿಸಲು ನಿನಗೆ ಏನೂ ಇಲ್ಲದೆ ಹೋದರೆ
ನಿನ್ನ ಕೆಳಗಿನ ಹಾಸಿಗೆಯನ್ನು ಅವನು ತೆಗೆದುಕೊಂಡು ಹೋಗುವನಲ್ಲವೇ?
ಐದನೆಯ ಹೇಳಿಕೆ
28 ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ
ಮೇರೆಯನ್ನು ತೆಗೆಯಬೇಡ.
ಆರನೆಯ ಹೇಳಿಕೆ
29 ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿದ್ದೀಯಾ?
ಅವನು ನೀಚರ ಮುಂದೆ ಅಲ್ಲ,
ಅರಸರ ಮುಂದೆಯೇ ಸೇವೆ ಸಲ್ಲಿಸುವನು.