23
ಏಳನೆಯ ಹೇಳಿಕೆ
ಆಳುವವನ ಸಂಗಡ ನೀನು ಊಟಕ್ಕೆ ಕುಳಿತಿರುವಾಗ,
ನಿನ್ನ ಎದುರಿನಲ್ಲಿ ಏನಿದೆ ಎಂದು ಶ್ರದ್ಧೆಯಿಂದ ಗಮನಿಸು.
ನೀನು ಹೊಟ್ಟೆಬಾಕನಾಗಿದ್ದರೆ,
ನಿನ್ನ ಕುತ್ತಿಗೆಗೆ ಖಡ್ಗವನ್ನು ಇಟ್ಟುಕೋ.
ಅವನ ರುಚಿ ಪದಾರ್ಥಗಳನ್ನು ಅಪೇಕ್ಷಿಸಬೇಡ;
ಏಕೆಂದರೆ ಅದು ಮೋಸದ ಆಹಾರವು.
ಎಂಟನೆಯ ಹೇಳಿಕೆ
ಐಶ್ವರ್ಯವಂತನಾಗುವುದಕ್ಕೆ ಪ್ರಯಾಸಪಡಬೇಡ;
ಅದಕ್ಕಾಗಿ ಸ್ವಬುದ್ಧಿಯನ್ನೇ ಆಶ್ರಯಿಸಬೇಡ.
ಕಣ್ಣು ಮಿಟುಕಿಸುವುದರಲ್ಲಿ ಐಶ್ವರ್ಯ ಕಣ್ಮರೆಯಾಗುತ್ತದೆ.
ಅದು ನಿಸ್ಸಂದೇಹವಾಗಿ ರೆಕ್ಕೆಗಳನ್ನು ಕಟ್ಟಿಕೊಂಡು
ಹದ್ದಿನಂತೆ ಆಕಾಶದ ಕಡೆಗೆ ಹಾರಿಹೋಗುವುದು.
ಒಂಬತ್ತನೆಯ ಹೇಳಿಕೆ
ಜಿಪುಣನ ಆಹಾರವನ್ನು ತಿನ್ನಬೇಡ;
ಅವನ ರುಚಿ ಪದಾರ್ಥಗಳನ್ನು ಆಶಿಸಬೇಡ.
ಏಕೆಂದರೆ, ಅವನು ಎಲ್ಲದಕ್ಕೂ ಬೆಲೆ ಕಟ್ಟುವ
ಯೋಚನೆಯುಳ್ಳವನಂತೆ ಇದ್ದಾನೆ;
ಅವನು, “ತಿನ್ನು, ಕುಡಿ,” ಎಂದು ಹೇಳುತ್ತಾನೆ;
ಆದರೆ ಅವನ ಹೃದಯವು ನಿನ್ನೊಂದಿಗಿಲ್ಲ.
ನೀನು ತಿಂದ ಸ್ವಲ್ಪ ತುತ್ತನ್ನು ಕಕ್ಕಿಬಿಡುವೆ;
ನಿನ್ನ ಸವಿಮಾತುಗಳೆಲ್ಲಾ ವ್ಯರ್ಥವೇ.
ಹತ್ತನೆಯ ಹೇಳಿಕೆ
ಬುದ್ಧಿಹೀನರ ಸಂಗಡ ಮಾತಾಡಬೇಡ;
ಏಕೆಂದರೆ ನಿನ್ನ ಜ್ಞಾನದ ಮಾತುಗಳನ್ನು ಅವರು ತಿರಸ್ಕರಿಸುವನು.
ಹನ್ನೊಂದನೆಯ ಹೇಳಿಕೆ
10 ಪೂರ್ವಕಾಲದ ಮೇರೆಯನ್ನು ತೆಗೆಯಬೇಡ;
ಅನಾಥರ ಹೊಲಗಳನ್ನು ಅತಿಕ್ರಮಿಸಬೇಡ.
11 ಏಕೆಂದರೆ ಅವನ ವಿಮೋಚಕನು ಬಲಶಾಲಿಯಾಗಿದ್ದಾನೆ;
ಅವರ ವ್ಯಾಜ್ಯಕ್ಕಾಗಿ ಆತನು ವಾದಿಸುವನು.
ಹನ್ನೆರಡನೆಯ ಹೇಳಿಕೆ
12 ಶಿಸ್ತಿಗೆ ನಿನ್ನ ಹೃದಯವನ್ನೂ
ತಿಳುವಳಿಕೆಯ ಮಾತುಗಳಿಗೆ ನಿನ್ನ ಕಿವಿಗಳನ್ನೂ ಕೊಡು.
ಹದಿಮೂರನೆಯ ಹೇಳಿಕೆ
13 ಮಕ್ಕಳನ್ನು ಶಿಕ್ಷಿಸಲು ಹಿಂದೆಗೆಯಬೇಡ;
ಬೆತ್ತದಿಂದ ಹೊಡೆದರೆ, ಅವರು ಸಾಯುವುದಿಲ್ಲ.
14 ಅವರನ್ನು ಬೆತ್ತದಿಂದ ಹೊಡೆದು,
ಪಾತಾಳದಿಂದ ಅವರ ಮರಣವನ್ನು ತಪ್ಪಿಸುವೆ.
ಹದಿನಾಲ್ಕನೆಯ ಹೇಳಿಕೆ
15 ಮಗನೇ, ನಿನ್ನ ಹೃದಯವು ಜ್ಞಾನವುಳ್ಳದ್ದಾಗಿದ್ದರೆ,
ನನ್ನ ಹೃದಯವು ಹರ್ಷಿಸುವುದು.
16 ನಿನ್ನ ತುಟಿಗಳು ಯಥಾರ್ಥವಾದವುಗಳನ್ನು ಮಾತಾಡಿದರೆ,
ನನ್ನ ಅಂತರಾತ್ಮವು ಸಂತೋಷಿಸುವುದು.
ಹದಿನೈದನೆಯ ಹೇಳಿಕೆ
17 ಪಾಪಿಗಳನ್ನು ನೋಡಿ ನಿನ್ನ ಹೃದಯವು ಅಸೂಯೆಪಡದಿರಲಿ;
ಆದರೆ ಯೆಹೋವ ದೇವರ ಭಯದಲ್ಲಿರಲು ಯಾವಾಗಲೂ ಆಸಕ್ತನಾಗಿರು.
18 ಖಂಡಿತವಾಗಿಯೂ ನಿನಗೆ ಮುಂದಿನ ನಿರೀಕ್ಷೆಯಿದೆ;
ನಿನ್ನ ನಿರೀಕ್ಷೆಯು ನಿರರ್ಥಕವಾಗದು.
ಹದಿನಾರನೆಯ ಹೇಳಿಕೆ
19 ಮಗನೇ, ಕೇಳಿ ಜ್ಞಾನವಂತನಾಗು;
ನೀತಿ ಮಾರ್ಗದಲ್ಲಿ ನಿನ್ನ ಹೃದಯವನ್ನು ನಡೆಸು.
20 ಅತಿ ಮದ್ಯಪಾನ ಮಾಡುವವರಲ್ಲಿ
ಅತಿ ಮಾಂಸಭಕ್ಷರಲ್ಲಿಯೂ ಸೇರಬೇಡ.
21 ಏಕೆಂದರೆ ಕುಡುಕರೂ ಹೊಟ್ಟೆಬಾಕರೂ ದುರ್ಗತಿಗೆ ಬರುವರು;
ತೂಕಡಿಕೆಯು ಹರಕು ಬಟ್ಟೆಗಳನ್ನು ಹೊದಿಸುವದು.
ಹದಿನೇಳನೆಯ ಹೇಳಿಕೆ
22 ನಿನ್ನನ್ನು ಹೆತ್ತ ತಂದೆಯ ಮಾತಿಗೆ ಕಿವಿಗೊಡು,
ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆ ಮಾಡಬೇಡ.
23 ಸತ್ಯವನ್ನೂ ಜ್ಞಾನವನ್ನೂ ಶಿಕ್ಷಣವನ್ನೂ ವಿವೇಕವನ್ನೂ ಕೊಂಡುಕೋ;
ಆದರೆ ಅವುಗಳನ್ನು ಮಾರಬೇಡ.
24 ನೀತಿವಂತನ ತಂದೆಯು ಬಹಳವಾಗಿ ಸಂತೋಷಪಡುವನು;
ಜ್ಞಾನಿಯಾದ ಮಗುವನ್ನು ಪಡೆದವನಿಗೆ ಅವನಿಂದ ಆನಂದವಾಗುವುದು.
25 ನಿನ್ನ ತಂದೆತಾಯಿಗಳು ಸಂತೋಷಿಸುವರು;
ನಿನ್ನ ಹೆತ್ತ ತಾಯಿ ಆನಂದಿಸುವಳು.
ಹದಿನೆಂಟನೆಯ ಹೇಳಿಕೆ
26 ಮಗನೇ, ನಿನ್ನ ಮನಸ್ಸನ್ನು ನನಗೆ ಕೊಡು;
ನನ್ನ ಮಾರ್ಗಗಳನ್ನು ಅನುಸರಿಸುವಲ್ಲಿ ನಿಮ್ಮ ಕಣ್ಣುಗಳು ಆನಂದಿಸಲಿ.
27 ವೇಶ್ಯೆಯು ಆಳವಾದ ಕುಣಿ;
ವ್ಯಭಿಚಾರಿಣಿಯು ಇಕ್ಕಟ್ಟಾದ ಗುಂಡಿ.
28 ಕಳ್ಳನಂತೆ ಅವಳು ಹೊಂಚು ಹಾಕಿ
ಮನುಷ್ಯರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ.
ಹತ್ತೊಂಬತ್ತನೆಯ ಹೇಳಿಕೆ
29 ಯಾರಿಗೆ ಕಷ್ಟ? ಯಾರಿಗೆ ದುಃಖ?
ಯಾರಿಗೆ ಕಲಹಗಳು? ಯಾರು ಗೊಣಗುಟ್ಟುತ್ತಾರೆ?
ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಯಾರಿಗೆ ಕೆಂಪೇರಿದ ಕಣ್ಣುಗಳು?
30 ಮದ್ಯಪಾನದಲ್ಲಿ ಆಸಕ್ತರಾಗಿ,
ಮಿಶ್ರ ಮದ್ಯಪಾನವನ್ನು ಕುಡಿಯ ಬಯಸುವವರೇ ಅಲ್ಲವೇ!
31 ದ್ರಾಕ್ಷಾರಸವು ಕೆಂಪಾಗಿದ್ದು,
ಪಾತ್ರೆಯಲ್ಲಿ ಥಳಥಳಿಸುತ್ತಾ ಚಲಿಸಿದರೆ,
ಅದನ್ನು ನೋಡಬೇಡ.
32 ಕೊನೆಗೆ ಅದು ಹಾವಿನಂತೆ ಕಚ್ಚುವುದು
ಮತ್ತು ಸರ್ಪದಂತೆ ವಿಷವುಕ್ಕಿಸುವುದು.
33 ನಿಮ್ಮ ಕಣ್ಣುಗಳು ವಿಚಿತ್ರ ದೃಶ್ಯಗಳನ್ನು ನೋಡುತ್ತವೆ.
ನಿಮ್ಮ ಮನಸ್ಸು ಗೊಂದಲಮಯ ವಿಷಯಗಳನ್ನು ಕಲ್ಪಿಸುತ್ತದೆ.
34 ನೀನು ಸಮುದ್ರದ ಮಧ್ಯದಲ್ಲಿ ಮಲಗಿರುವವನಂತೆ
ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇರುವಿ.
35 “ಜನರು ನನ್ನನ್ನು ಹೊಡೆದರೂ
ನನಗೆ ನೋವಾಗಲಿಲ್ಲ;
ನಾನು ಎಚ್ಚರವಾಗುವುದು ಯಾವಾಗ?
ಪುನಃ ನಾನು ಅದನ್ನು ಕುಡಿದೇನು?” ಎಂದುಕೊಳ್ಳುವೆ.