ಕೀರ್ತನೆ 36
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆಹೋವ ದೇವರ ಸೇವಕನಾದ ದಾವೀದನ ಕೀರ್ತನೆ.
ನನ್ನ ಹೃದಯದಲ್ಲಿ ದೇವರಿಂದ ಬಂದ ಸಂದೇಶವು
ದುಷ್ಟರ ಪಾಪದ ಬಗ್ಗೆ ಹೀಗಿರುತ್ತದೆ:
ಅವರ ದೃಷ್ಟಿಯಲ್ಲಿ
ದೇವರ ಭಯವೇ ಇಲ್ಲ.
 
ತಮ್ಮ ಪಾಪವನ್ನು ಹಗೆ ಮಾಡದೆ ಅಥವಾ ಪಾಪವನ್ನು ತಾವು ಕಂಡುಕೊಳ್ಳಲಾರದಷ್ಟು
ಅವರು ತಮ್ಮ ದೃಷ್ಟಿಯಲ್ಲಿ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ.
ಅವರ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿರುತ್ತವೆ;
ಬುದ್ಧಿಯಿಂದ ನಡೆಯುವುದನ್ನೂ ಒಳ್ಳೆಯದನ್ನು ಮಾಡುವುದನ್ನೂ ಅವರು ಬಿಟ್ಟಿದ್ದಾರೆ.
ಕುಯುಕ್ತಿಯನ್ನು ತಮ್ಮ ಹಾಸಿಗೆಯ ಮೇಲೆ ಕಲ್ಪಿಸುತ್ತಾರೆ;
ಪಾಪದ ಮಾರ್ಗಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ;
ಅವರು ಕೆಟ್ಟದ್ದಕ್ಕೆ ಅಸಹ್ಯಪಡುವುದಿಲ್ಲ.
 
ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ಆಕಾಶವನ್ನು ಮುಟ್ಟುತ್ತದೆ;
ನಿಮ್ಮ ನಂಬಿಗಸ್ತಿಕೆಯು ಮೇಘಗಳವರೆಗೆ ಮುಟ್ಟಿದೆ.
ನಿಮ್ಮ ನೀತಿಯು ದೊಡ್ಡ ಪರ್ವತಗಳ ಹಾಗಿದೆ;
ನಿಮ್ಮ ನ್ಯಾಯತೀರ್ಪುಗಳು ಮಹಾ ಅಗಾಧವೇ.
ಯೆಹೋವ ದೇವರೇ, ನೀವು ಮನುಷ್ಯರನ್ನೂ ಮೃಗಗಳನ್ನೂ ಸಂರಕ್ಷಿಸುತ್ತೀರಿ.
ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ಎಷ್ಟೋ ಅಮೂಲ್ಯವಾದದ್ದು!
ಮನುಷ್ಯರು ನಿಮ್ಮ ರೆಕ್ಕೆಗಳ ನೆರಳಿನಲ್ಲಿ ಆಶ್ರಯಪಡೆಯುತ್ತಾರೆ.
ನಿಮ್ಮ ಆಲಯದ ಸಮೃದ್ಧಿಯಿಂದ ಅವರು ಸಂತೃಪ್ತಿ ಹೊಂದುವರು;
ನಿಮ್ಮ ಹರ್ಷ ನದಿಯಿಂದ ಅವರಿಗೆ ಕುಡಿಯಲು ಕೊಡುವಿರಿ.
ಏಕೆಂದರೆ ನಿಮ್ಮ ಬಳಿಯಲ್ಲಿ ಜೀವದ ಬುಗ್ಗೆ ಉಂಟು;
ನಿಮ್ಮ ಬೆಳಕಿನಲ್ಲಿ ನಾವು ಬೆಳಕನ್ನು ಕಾಣುವೆವು.
 
10 ನಿಮ್ಮನ್ನು ತಿಳಿದವರಿಗೆ ನಿಮ್ಮ ಪ್ರೀತಿಯು ಮುಂದುವರೆಯಲಿ
ಯಥಾರ್ಥ ಹೃದಯದವರಿಗೆ ನಿಮ್ಮ ನೀತಿಯೂ ನೆಲೆಯಾಗಲಿ.
11 ಗರ್ವಿಷ್ಠರ ಪಾದ ನನಗೆ ವಿರೋಧವಾಗಿ ಬಾರದೇ ಇರಲಿ;
ದುಷ್ಟರ ಕೈ ನನ್ನನ್ನು ತೆಗೆದು ಹಾಕದಿರಲಿ.
12 ಕೇಡು ಮಾಡುವವರು ಬಿದ್ದಿದ್ದಾರೆ.
ಅವರು ಏಳಲಾರದೆ ಕೆಳಗೆ ಬಿದ್ದಿದ್ದಾರೆ.